ಬೀದರ್‌ನಲ್ಲಿ ಸಂಗಮೇಶ ದೇವಸ್ಥಾನಕ್ಕೆ ರಸ್ತೆ ನಿರ್ಮಿಸಲು ಸರ್ಕಾರ ಹಾಗೂ ಸ್ಥಳೀಯ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಗುರುನಾಥ್ ವಡ್ಡೆ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಅರ್ಜಿದಾರರ ನಡೆಗೆ ತೀವ್ರ ಅಸಮಧಾನ ವ್ಯಕ್ತಪಡಿಸಿತು.
ಬೆಂಗಳೂರು(ಜ.05): ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡಲಾಗಿರುವ ದೇವಸ್ಥಾನಕ್ಕೆ ರಸ್ತೆ ನಿರ್ಮಿಸಿಕೊಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿ ಸಲ್ಲಿಸಿದ ವ್ಯಕ್ತಿಯನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಬೀದರ್‌ನಲ್ಲಿ ಸಂಗಮೇಶ ದೇವಸ್ಥಾನಕ್ಕೆ ರಸ್ತೆ ನಿರ್ಮಿಸಲು ಸರ್ಕಾರ ಹಾಗೂ ಸ್ಥಳೀಯ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಗುರುನಾಥ್ ವಡ್ಡೆ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಅರ್ಜಿದಾರರ ನಡೆಗೆ ತೀವ್ರ ಅಸಮಧಾನ ವ್ಯಕ್ತಪಡಿಸಿತು.
ಡಿಕೆಶಿಗೆ ಮತ್ತೆ ಸಂಕಷ್ಟ, ರಾಜ್ಯ ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಲೇರಿದ ಸಿಬಿಐ
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದೇವಸ್ಥಾನಕ್ಕೆ ರಸ್ತೆಯ ಸಮಸ್ಯೆಯಾಗಿದೆ. ರಸ್ತೆ ನಿರ್ಮಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದನ್ನು ಆಕ್ಷೇಪಿಸಿದ ನ್ಯಾಯಪೀಠ, ಇಂತಹ ಮನವಿಯನ್ನು ಹೇಗೆ ಪುರಸ್ಕರಿಸಲು ಸಾಧ್ಯವಿದೆ? ದೇವಸ್ಥಾನವನ್ನು ಎಲ್ಲಿ ನಿರ್ಮಿಸಲಾಗಿದೆ? ಎಂದು ಕೇಳಿತು. ಅರ್ಜಿದಾರರ ಪರ ವಕೀಲರು, ಸರ್ಕಾರಿ ಜಾಗದಲ್ಲಿ ಈ ದೇವಸ್ಥಾನವಿದೆ. ಸುತ್ತಲೂ ಖಾಸಗಿಯವರ ಜಮೀನಿದೆ. ಇದರಿಂದ ದೇವಸ್ಥಾನಕ್ಕೆ ರಸ್ತೆ ಇಲ್ಲವಾಗಿದೆ ಎಂದರು.
ಇದರಿಂದ ಕೋಪಗೊಂಡ ಮುಖ್ಯ ನ್ಯಾಯಮೂರ್ತಿಗಳು, ಸರ್ಕಾರದ ಆಸ್ತಿಯಲ್ಲಿ ದೇವಸ್ಥಾನ ನಿರ್ಮಿಸಲಾಗಿದೆಯೇ? ಹೇಗೆ ಸರ್ಕಾರಿ ಭೂಮಿ ದೇವಸ್ಥಾನ ನಿರ್ಮಿಸಲಾಯಿತು? ಆ ದೇವಸ್ಥಾನ ಎಲ್ಲಿದೆ ಎಂದು ನಮಗೆ ತಿಳಿಸಿ. ಕೂಡಲೇ ಅದನ್ನು ತೆರವುಗೊಳಿಸಲು ಹಾಗೂ ಒತ್ತುವರಿದಾರರ ವಿರುದ್ಧ ಕ್ರಮ ಜರುಗಿಸಲು ಸೂಚಿಸಲಾಗುವುದು ಎಂದರು.
ಆಗ ಅರ್ಜಿದಾರರ ಪರ ವಕೀಲರು, ಅದೊಂದು ಹಿಂದೂ ದೇವಾಲಯವಾಗಿದೆ ಎಂದು ವಿವರಿಸಲು ಮುಂದಾದಾಗ ಆಕ್ರೋಶಗೊಂಡ ನ್ಯಾಯಪೀಠ, ನ್ಯಾಯಾಲಯಕ್ಕೆ ಯಾವುದೇ ಧರ್ಮವಿಲ್ಲ. ನ್ಯಾಯಾಲಯವು ಸಂವಿಧಾನ ಪಾಲಿಸುತ್ತಿದ್ದು, ಜಾತ್ಯತೀತವಾಗಿದೆ. ಆ ಭಾವನೆಯನ್ನು ಬಿಡಿ. ಸರ್ಕಾರದ ಭೂಮಿಯಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆಂದು ರಸ್ತೆ ನಿರ್ಮಿಸಿಕೊಡುವ ಮೂಲಕ ನ್ಯಾಯಾಲಯ ಉಡುಗೊರೆ ನೀಡಬೇಕೆ? ಹಾಗೆ ಮಾಡಿದರೆ ನ್ಯಾಯಾಲಯ ಗಂಭೀರ ಪ್ರಮಾದ ಎಸಗಿದಂತಾಗುತ್ತದೆ. ದೇವರ ಅನುಗ್ರಹದಿಂದ ಆ ಕೆಲಸವನ್ನು ನ್ಯಾಯಾಲಯ ಮಾಡುವುದಿಲ್ಲ ಎಂದು ಕಟುವಾಗಿ ಹೇಳಿತು.
ಪ್ಯಾರಾ ಮೆಡಿಕಲ್ ಓದಿ ಕ್ಲಿನಿಕ್ ತೆರೆವಂತಿಲ್ಲ: ಹೈಕೋರ್ಟ್
ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು, ಜೊರಾಸ್ಟ್ರಿಯನ್ ಒಬ್ಬರು ತಮ್ಮ ಮಂದಿರಕ್ಕೆ ರಸ್ತೆ ನಿರ್ಮಿಬೇಕು ಎನ್ನಬಹುದು. ಮತ್ತೊಂದು ದಿನ ಮಸೀದಿ ನಿರ್ಮಿಸಲಾಗಿದ್ದು, ರಸ್ತೆ ನಿರ್ಮಿಸಿಕೊಡಿ ಎಂದು ಮತ್ತೊಬ್ಬರು ಕೇಳಬಹುದು. ಇದು ಹಲವು ಧರ್ಮಗಳ ದೇಶವಾಗಿದ್ದು, ಇಲ್ಲಿ ಹಲವು ಮಂದಿರಗಳಿವೆ. ಹಾಗೆಂದು ಸರ್ಕಾರ ತನ್ನ ಬಜೆಟ್ ಹಣವನ್ನು ಎಲ್ಲ ಮಂದಿರಗಳಿಗೆ ರಸ್ತೆ ನಿರ್ಮಿಸಲು ಬಳಸಬೇಕೆ? ಹೀಗಾದರೆ ಸರ್ಕಾರ ಯಾವ ರೀತಿಯ ಅಭಿವೃದ್ಧಿ ಚಟುವಟಿಕೆ ನಡೆಸಲು ಸಾಧ್ಯ? ಎಂದು ಪ್ರಶ್ನಿಸಿದರು.
ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ದೇವಸ್ಥಾನ ಮಾಡಿರುವುದಕ್ಕೆ ನ್ಯಾಯಾಲಯವು ಕಾನೂನಿನ ಮೊಹರು ಒತ್ತಲು ಅರ್ಜಿದಾರರು ಬಯಸುತ್ತಿದ್ದಾರೆ. ಇದು ಸರ್ಕಾರಿ ಭೂಮಿ ಎಂದು ತೋರಿಸಿದರೆ, ಅದನ್ನು ಅಕ್ರಮವಾಗಿ ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಲಾಗುವುದು ಎಂದು ಸೂಚಿಸಿದ ನ್ಯಾಯಪೀಠ, ಅಂತಿಮವಾಗಿ ಅರ್ಜಿ ಹಿಂಪಡೆಯಲು ಅರ್ಜಿದಾರರಿಗೆ ಅನುಮತಿ ನೀಡಿತು.