ಡಿಕೆಶಿ ವಿರುದ್ಧ ತನಿಖೆ ವಾಪಸ್‌ ಪ್ರಶ್ನಿಸಿ ಹೈಕೋರ್ಟ್‌ಗೆ ಸಿಬಿಐ ಮೊರೆ

By Kannadaprabha News  |  First Published Jan 6, 2024, 4:04 AM IST

ಅರ್ಜಿದಾರರ ಪರ ವಕೀಲರ ಮತ್ತು ಸರ್ಕಾರದ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರ ವಾದವನ್ನು ಒಂದು ಗಂಟೆಗೂ ಅಧಿಕ ಕಾಲ ಆಲಿಸಿದ ನ್ಯಾಯಪೀಠ, ಅರ್ಜಿಗಳನ್ನು ವಿಸ್ತೃತ ಪೀಠದ ವಿಚಾರಣೆಗೆ ಶಿಫಾರಸು ಮಾಡುವುದು ಸೂಕ್ತವೆನಿಸಿದೆ ಎಂದು ನಿರ್ಧರಿಸಿ ಈ ಆದೇಶ ಮಾಡಿ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಲೋಕಾಯುಕ್ತ ಹಾಗೂ ಡಿ.ಕೆ. ಶಿವಕುಮಾರ್‌ ಅವರಿಗೆ ನೋಟಿಸ್‌ ಜಾರಿ ಮಾಡಿತು.


ಬೆಂಗಳೂರು(ಜ.06):  ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆ ನಡೆಸಲು ತನಗೆ ನೀಡಿದ್ದ ಅನುಮತಿಯನ್ನು ಹಿಂಪಡೆದು ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್‌ ಮೆಟ್ಟಿಲೇರಿದೆ. ಶುಕ್ರವಾರ ಸಿಬಿಐ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠವು ಸದರಿ ಪ್ರಕರಣ ವಿಸ್ತೃತ ಪೀಠದ ವಿಚಾರಣೆಗೆ ಸೂಕ್ತ ಎಂದು ಶಿಫಾರಸು ಮಾಡಿದೆ.

ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದು ರಾಜ್ಯ ಸರ್ಕಾರ 2023ರ ನ.28ರಂದು ಹೊರಡಿಸಿದ ಆದೇಶ ಮತ್ತು ಇದೇ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿ 2023ರ ಡಿ.22ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಈ ಹಿಂದೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಲ್ಲಿಸಿದ್ದ ಅರ್ಜಿ ಮತ್ತು ಸಿಬಿಐ ಶುಕ್ರವಾರ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕ ಸದಸ್ಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿದ್ದವು.

Tap to resize

Latest Videos

ಲೋಕಸಭಾ ಚುನಾವಣೆ: ಇಂದು ವರಿಷ್ಠರ ಜೊತೆ ಸಿದ್ದರಾಮಯ್ಯ, ಡಿಕೆಶಿ ರಣತಂತ್ರ ಸಭೆ!

ಅರ್ಜಿದಾರರ ಪರ ವಕೀಲರ ಮತ್ತು ಸರ್ಕಾರದ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರ ವಾದವನ್ನು ಒಂದು ಗಂಟೆಗೂ ಅಧಿಕ ಕಾಲ ಆಲಿಸಿದ ನ್ಯಾಯಪೀಠ, ಅರ್ಜಿಗಳನ್ನು ವಿಸ್ತೃತ ಪೀಠದ ವಿಚಾರಣೆಗೆ ಶಿಫಾರಸು ಮಾಡುವುದು ಸೂಕ್ತವೆನಿಸಿದೆ ಎಂದು ನಿರ್ಧರಿಸಿ ಈ ಆದೇಶ ಮಾಡಿ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಲೋಕಾಯುಕ್ತ ಹಾಗೂ ಡಿ.ಕೆ. ಶಿವಕುಮಾರ್‌ ಅವರಿಗೆ ನೋಟಿಸ್‌ ಜಾರಿ ಮಾಡಿತು.

ರಿಜಿಸ್ಟ್ರಾರ್‌ ಅವರು ಪ್ರಕರಣದ ದಾಖಲೆಗಳನ್ನು ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ಮಂಡಿಸಬೇಕು. ಮುಖ್ಯ ನ್ಯಾಯಮೂರ್ತಿಗಳು ತಮ್ಮ ಆಯ್ಕೆ, ವಿವೇಚನೆ ಆಧಾರದ ಮೇಲೆ ಅರ್ಜಿಗಳ ವಿಚಾರಣೆಗಾಗಿ ಪೀಠವನ್ನು ರಚನೆ ಮಾಡಬಹುದು. ಅವರಿಂದ ರಚಿಸಲ್ಪಟ್ಟ ನ್ಯಾಯಪೀಠ ತುರ್ತಾಗಿ ಅರ್ಜಿಗಳನ್ನು ಪರಿಗಣಿಸಿ ಯುದ್ಧೋಪಾದಿಯಲ್ಲಿ ವಿಚಾರಣೆ ನಡೆಸಿ ನಿರ್ಧರಿಸಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ. ಅಲ್ಲದೆ, ಮುಖ್ಯ ನ್ಯಾಯಮೂರ್ತಿಗಳು ವಿಸ್ತೃತ ಪೀಠ ರಚನೆ ಕುರಿತು ತೀರ್ಮಾನ ಕೈಗೊಳ್ಳುವವರೆಗೂ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂಬ ಅರ್ಜಿದಾರರ ಮನವಿ ಮತ್ತು ಸಿಬಿಐ ಸಹ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂಬ ಅಡ್ವೋಕೇಟ್ ಜನರಲ್ ಮನವಿಯನ್ನು ನ್ಯಾಯಪೀಠ ತನ್ನ ಆದೇಶದಲ್ಲಿ ದಾಖಲಿಸಿತು.

ಇದಕ್ಕೂ ಮುನ್ನ ಎರಡೂ ಅರ್ಜಿಗಳನ್ನು ವಿರೋಧಿಸಿದ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಅರ್ಜಿ ಸಲ್ಲಿಸುವ ಅಧಿಕಾರ ಅರ್ಜಿದಾರರಿಗೆ ಇಲ್ಲ. 2013ರ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಮೂರನೇ ವ್ಯಕ್ತಿಯು ಕ್ರಿಮಿನಲ್ ಪ್ರಕ್ರಿಯೆಗೆ ಚಾಲನೆ ನೀಡುವಂತಿಲ್ಲ ಹಾಗೂ ಆ ಪ್ರಕ್ರಿಯೆಯಲ್ಲಿ ಮೂಗು ತೂರಿಸುವಂತಿಲ್ಲ ಎಂದು ಆಕ್ಷೇಪಿಸಿದರು.

ಯತ್ನಾಳ್ ಪರ ವಕೀಲ ವೆಂಕಟೇಶ್‌ ದಳವಾಯಿ ಮತ್ತು ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್ ಅವರು, ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆ (ಡಿಎಸ್ಪಿಇ) ಸೆಕ್ಷನ್ 6ರ ಅಡಿ ಒಮ್ಮೆ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಅನುಮತಿಸಿದ ಮೇಲೆ ಅದನ್ನು ಹಿಂಪಡೆಯಲಾಗದು. ಅನುಮತಿಯನ್ನು ಯಾವುದೇ ಸಂದರ್ಭದಲ್ಲೂ ಪೂರ್ವಾನ್ವಯವಾಗುವಂತೆ ಹಿಂಪಡೆದು ಆದೇಶ ನೀಡಲಾಗದು. ಸಿಬಿಐ ತನಿಖೆ ಮುಂದುವರಿಯಬೇಕಿರುತ್ತದೆ. ಅದರಂತೆ ಸಿಬಿಐ ತನಿಖೆ ಮುಂದುವರಿಸಿ, ಕಾನೂನಿನ ಪ್ರಕಾರ ಅಂತಿಮ ವರದಿ ಸಲ್ಲಿಸಲು ಅನುಮತಿಸಬೇಕು ಎಂದು ಕೋರಿದರು.

ಲೋಕಸಭೆ ಚುನಾವಣೆ 2024: ಇಂದು ವರಿಷ್ಠರ ಜತೆ ಸಿದ್ದು,ಡಿಕೆಶಿ ರಣತಂತ್ರ ಸಭೆ

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ತಮ್ಮ ವಾದವನ್ನು ಬೆಂಬಲಿಸುವ ಸುಪ್ರೀಂಕೋರ್ಟ್‌ ಹಾಗೂ ಇತರೆ ಹೈಕೋರ್ಟ್‌ಗಳ ಆದೇಶಗಳನ್ನು ಸಲ್ಲಿಸಿದ್ದಾರೆ. ಮತ್ತೊಂದೆಡೆ ರಾಜ್ಯ ಅಡ್ವೋಕೇಟ್‌ ಜನರಲ್‌ ಸಹ ತಮ್ಮ ವಾದವನ್ನು ಬೆಂಬಲಿಸುವ ಸುಪ್ರೀಂಕೋರ್ಟ್‌ ಆದೇಶ ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಹಲವು ಪ್ರಶ್ನೆಗಳು ಉದ್ಭವಿಸಿದ್ದು, ಅವುಗಳಿಗೆ ಏಕಕಾಲಕ್ಕೆ ಉತ್ತರ ದೊರೆತು, ಪ್ರಕರಣ ಇತ್ಯರ್ಥವಾಗಲು ವಿಸ್ತೃತ ಪೀಠಕ್ಕೆ ಅರ್ಜಿಗಳ ವಿಚಾರಣೆ ವಹಿಸುವುದು ಸೂಕ್ತ ಎಂದು ತೀರ್ಮಾನಿಸಿತು.

ಪ್ರಕರಣದ ಹಿನ್ನೆಲೆ:

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಡಿ.ಕೆ.ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿ ಹಿಂದಿನ ಬಿಜೆಪಿ ರಾಜ್ಯ ಸರ್ಕಾರ 2022ರ ಸೆ.25ರಂದು ಆದೇಶಿಸಿತ್ತು. ಅದರ ರದ್ದತಿಗೆ ಕೋರಿ ಶಿವಕುಮಾರ್‌ ಸಲ್ಲಿಸಿದ್ದ ತಕರಾರು ಅರ್ಜಿಯನ್ನು 2023ರ ಏ.20ರಂದು ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಶಿವಕುಮಾರ್‌ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಏಕಸದಸ್ಯ ನ್ಯಾಯಪೀಠದ ಆದೇಶ ಮತ್ತು ಸಿಬಿಐ ತನಿಖೆಗೆ ವಿಭಾಗೀಯ ಪೀಠ ತಡೆ ನೀಡಿತ್ತು. ಈ ಮಧ್ಯೆ ಹಾಲಿ ಕಾಂಗ್ರೆಸ್‌ ಸರ್ಕಾರ, ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು 2023ರ ನ.28ರಂದು ಹಿಂಪಡೆದಿತ್ತು. ಅದಕ್ಕೆ ಆಕ್ಷೇಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

click me!