ಕೆರೆಗಳ ನಾಡು ಕೋಲಾರಕ್ಕೆ ತಮ್ಮ ವಿಶೇಷ ಅನುದಾನದ ಮೂಲಕ ಕೆರೆಗಳ ಅಭಿವೃದ್ದಿಗೆಂದು ಹಣ ಬಿಡುಗಡೆ ಮಾಡಿದ್ದು ಇವತ್ತು ಕಾಮಗಾರಿ ವೀಕ್ಷಣೆಗೆಂದು ಬಂದಾಗ ಅಧಿಕಾರಿಗಳ ವಿರುದ್ದ ಗರಂ ಆದ ಸಚಿವರು, ಅಧಿಕಾರಿಗಳಿಗೆ ಹಾಗೂ ಜನರಿಗೆ ಕೆರೆಗಳ ಪ್ರಾಮುಖ್ಯತೆ ಕುರಿತು ಪಾಠ ಹೇಳಿದರು.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ (ಅ.01): ಅವರು ಕೇಂದ್ರ ಸರ್ಕಾರದ ಬಹಳ ಪ್ರಭಾವಿ ಸಚಿವೆ ಆದರೂ ಸಿಂಪ್ಲಿಸಿಟಿಗೆ ಹೆಸರು. ಕೆರೆಗಳ ನಾಡು ಕೋಲಾರಕ್ಕೆ ತಮ್ಮ ವಿಶೇಷ ಅನುದಾನದ ಮೂಲಕ ಕೆರೆಗಳ ಅಭಿವೃದ್ದಿಗೆಂದು ಹಣ ಬಿಡುಗಡೆ ಮಾಡಿದ್ದು ಇವತ್ತು ಕಾಮಗಾರಿ ವೀಕ್ಷಣೆಗೆಂದು ಬಂದಾಗ ಅಧಿಕಾರಿಗಳ ವಿರುದ್ದ ಗರಂ ಆದ ಸಚಿವರು, ಅಧಿಕಾರಿಗಳಿಗೆ ಹಾಗೂ ಜನರಿಗೆ ಕೆರೆಗಳ ಪ್ರಾಮುಖ್ಯತೆ ಕುರಿತು ಪಾಠ ಹೇಳಿದರು. ಕೆರೆಗಳನ್ನು ಖುದ್ದು ವೀಕ್ಷಣೆ ಮಾಡುತ್ತಿರುವ ದೇಶದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಇನ್ನೊಂದೆಡೆ ಅಧಿಕಾರಿಗಳಿಗೆ ಪುಲ್ ಕ್ಲಾಸ್ ತೆಗೆದುಕೊಂಡು ಅಭಿವೃದ್ದಿ ಕೆಲಸದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿರುವ ಸಚಿವರು, ಇನ್ನೊಂದೆಡೆ ಸಾಮಾನ್ಯ ಜನರಿಗೆ ನಗು ನಗುತ್ತಲೇ ಕೆರೆಯ ಮಹತ್ವವನ್ನು ತಿಳಿ ಹೇಳುತ್ತಿರುವ ಸಚಿವರು ಈ ಎಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರದಲ್ಲಿ.
ಹೌದು! ಶುಕ್ರವಾರ ಕೋಲಾರ ಜಿಲ್ಲೆಗೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಭೇಟಿ ನಿೀಡಿದ್ದರು, ತಮ್ಮ ವಿಶೇಷ ಅನುದಾನದಲ್ಲಿ ಜಿಲ್ಲೆಯ 75 ಕೆರೆಗಳ ಅಭಿವೃದ್ದಿಗಾಗಿ ಹಣ ಬಿಡುಗಡೆ ಮಾಡಿದ್ದು, ಇಂದು ಕಾಮಗಾರಿಗಳ ವೀಕ್ಷಣೆಗೆಂದು ಜಿಲ್ಲೆಗೆ ೇಟಿ ನೀಡಿದ್ದರು. ಬೆಳಿಗ್ಗೆ 10.15ಕ್ಕೆ ಇದ್ದ ಕಾರ್ಯಕ್ರಮಕ್ಕೆ ಸುಮಾರು 45 ನಿಮಿಷ ಮುಂಚಿತವಾಗಿಯೇ ಆಗಮಿಸಿದ್ದ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ಸಂಸದರು ಅದ್ದೂರಿಯಾಗಿ ಸ್ವಾಗತ ಕೋರಿದರು. ನಂತರ ಮೊದಲು ಬಂಗಾರಪೇಟೆ ತಾಲ್ಲೂಕು ಚಿಕ್ಕಅಂಕಂಡಹಳ್ಳಿ ಗ್ರಾಮದ ಕೆರೆಗೆ ಬೇಟಿ ನೀಡಿದ್ರು ಅಲ್ಲಿ ಕೆರೆಗಳ ಅಭಿವೃದ್ದಿ ಕಾಮಗಾರಿಗಳನ್ನು ಕಂಡು ನಿರ್ಮಲಾ ಸೀತಾರಾಮನ್ ಬೇಸರ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕಿನಲ್ಲಿ ಅವ್ಯವಹಾರ, ಕೇಂದ್ರ ವಿತ್ತ ಸಚಿವೆಗೆ ಸಂಸದ ಮುನಿಸ್ವಾಮಿ ದೂರು
ನಂತರ ಅಲ್ಲಿಂದ ಕೆಜಿಎಫ್ ತಾಲ್ಲೂಕು ಪೆದ್ದಪಲ್ಲಿ ಗ್ರಾಮದ ಕೆರೆಗೆ ಬೇಟಿ ನೀಡಿದ ಸಚಿವರು ಕೆರೆಯಲ್ಲಿ ನಡೆಯುತ್ತಿದ್ದ ಕಾಮಗಾರಿಗಳನ್ನು ಕಂಡು ಅಧಿಕಾರಿಗಳ ವಿರುದ್ದ ಪುಲ್ ಗರಂ ಆದರು, ಅಲ್ಲದೆ ಕೆರೆಗಳ ಒಳಗೆ ಮರ ಗಿಡಗಳನ್ನು ಬೆಳೆಸಿರುವ ಬಗ್ಗೆ, ಸರಿಯಾಗಿ ಒತ್ತುವರಿ ತೆರವು ಮಾಡದೆ ಕೆರೆ ಗಡಿ ಗುರುತಿಸದೆ, ಕೆರೆಯ ಒಳಗಿನ ಗಿಡಗಳನ್ನು ಕ್ಲೀನ್ ಮಾಡದೆ ಇದ್ದುದಕ್ಕೆ ಅಧಿಕಾರಿಗಳಿಗೆ ಪುಲ್ ಕ್ಲಾಸ್ ತೆಗೆದುಕೊಂಡರು. ನಂತರ ಪೆದ್ದಪಲ್ಲಿ ಗ್ರಾಮದ ಮಹಿಳೆಯರ ಜೊತೆಗೆ ನಗು ನಗುತ್ತಲೇ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಮಾತನಾಡುತ್ತಾ ಕೆರೆಯ ಮಹತ್ವವನ್ನು ವಿವರಿಸಿದರು. ಇಷ್ಟೆ ಅಲ್ಲದೆ ಅದನ್ನು ಉಳಿಸಿಕೊಳ್ಳುವುದು ಹೇಗೆ ನಮ್ಮ ಜವಾಬ್ದಾರಿ ಏನು ಅನ್ನೋದನ್ನು ವಿವರವಾಗಿ ತಿಳಿಸಿಕೊಟ್ಟರು.
ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋಲಾರ ತಾಲ್ಲೂಕು ಶೆಟ್ಟಿಕೊತ್ತನೂರು ಗ್ರಾಮದ ಕೆರೆ ವೀಕ್ಷಣೆಗೆ ಬಂದರು. ಈ ವೇಳೆ ಕೆರೆಯನ್ನು ವೀಕ್ಷಣೆ ಮಾಡಿದ ಸಚಿವರು ಮತ್ತೆ ಅಲ್ಲಿದ್ದ ಅಧಿಕಾರಿಗಳಿಗೆ ಜನರೆದುರಲ್ಲೇ ಕ್ಲಾಸ್ ತೆಗೆದುಕೊಂಡರು, ಕೆರೆಯಲ್ಲಿ ನೀರು ಇರುವ ಕಾರಣ ನೀರು ಖಾಲಿಯಾದ ಮೇಲೆ ಕ್ಲೀನ್ ಮಾಡುತ್ತೀನಿ ಎಂದ ಜಿಲ್ಲಾಪಂಚಾಯ್ತಿ ಸಿಇಓ ಯುಕೇಶ್ ಅವರಿಗೆ, ಯಾವ ಬಾಷೆಯಲ್ಲಿ ಮಾತನಾಡುತ್ತೀರಿ ಎಂದು ಕೇಳಿ ತಮಿಳು ಎಂದಾಗ ತಮಿಳು ಬಾಷೆಯಲ್ಲೇ ಕ್ಲಾಸ್ ತೆಗೆದುಕೊಂಡು ನೀರಿಳಿಸಿದರು. ಇನ್ನು ಪ್ರತಿ ಹಂತದಲ್ಲೂ ಕಾಮಗಾರಿಗಳನ್ನು ತಾವೇ ಖುದ್ದಾಗಿ ಸವಿವರವಾಗಿ ವೀಕ್ಷಣೆ ಮಾಡಿದ ಸಚಿವರನ್ನು ನೋಡಲು ಬಂದಿದ್ದ ಜನರನ್ನು ವಿನಯವಾಗಿಯೇ ಕೈಮುಗಿದು ಕೆರೆ ವೀಕ್ಷಣೆಗೆ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರು.
ನಂತರ ತಾವೇ ಕೆರೆಯ ಪ್ರತಿ ಮೂಲೆ ಮೂಲೆಗೆ ಹೋಗಿ ಕಾಮಗಾರಿಯ ಗುಣಮಟ್ಟವನ್ನು ವೀಕ್ಷಣೆ ಮಾಡಿ, ನಂತರ ಅಧಿಕಾರಿಗಳಿಗೆ ಏನೇನು ಮಾಡಬೇಕು ಹೇಗೇಗೆ ಮಾಡಬೇಕು ಎಂದು ವಿವರವಾಗಿ ಹೇಳಿದ್ರು ಅದರ ಜೊತೆಗೆ ಅಲ್ಲಿದ್ದ ಗ್ರಾಮಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮದ ಮಹಿಳೆಯರ ಜೊತೆಗೆ ತೆಲುಗು ಭಾಷೆಯಲ್ಲಿ ಮಾತನಾಡುತ್ತಾ ತಿಳಿ ಹೇಳಿದರು. ಜೊತೆಗೆ ಕೆರೆಯ ನೀರನ್ನು ಸಂರಕ್ಷಣೆ ಮಾಡಬೇಕು, ಬೆಟ್ಟದ ಮೇಲೆ ಬೀಳುವ ನೀರನ್ನು ಸರಾಗವಾಗಿ ಕೆರೆಗೆ ಹರಿದು ಬರುವಂತೆ ಕಾಲುವೆಗಳನ್ನು ಮಾಡಬೇಕು ಎಂದು ಮ್ಯಾಪ್ ಹಿಡಿದು ತಿಳಿ ಹೇಳಿದ್ರು. ಜಿಲ್ಲೆಯ ಮೂರು ಕೆರೆಗಳ ವೀಕ್ಷಣೆ ಮಾಡಿದ ನಂತರ ಕೋಲಾರ ನಗರದ ಪ್ರವಾಸಿ ಮಂದಿರಕ್ಕೆ ಬಂದು ಊಟ ಮಾಡಿ ನಂತರ ಹೊರಟರು.
ಕೋಡಿ ಬಿದ್ದ ತಲ್ಲೂರು ಕೆರೆ, ನಟ ಯಶ್ ಗೆ ಧನ್ಯವಾದ ಅರ್ಪಿಸಿದ ಜನತೆ
ಇದೇ ವೇಳೆ ಮಾತನಾಡಿದ ಸಂಸದ ಮುನಿಸ್ವಾಮಿ ಜಿಲ್ಲೆಯ ಕೆರೆಗಳ ಅಭಿವೃದ್ದಿಗೆ ಸುಮಾರು 38 ಕೋಟಿ ರೂಪಾಯಿ ಹಣ ನೀಡಲಾಗುತ್ತಿದ್ದು ಜಿಲ್ಲೆಯ 75 ಕೆರೆಗಳನ್ನು ಸಚಿವರ ಸೂಚನೆಯಂತೆ ಅಭಿವೃದ್ದಿ ಪಡಿಸುತ್ತೇವೆ ಕೋಲಾರ ಜಿಲ್ಲೆಯ ಮೇಲೆ ಅವರಿಗೆ ಇರುವ ವಿಶೇಷ ಕಾಳಜಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ ಎಂದರು. ಜೊತೆಗೆ ಪ್ರಧಾನಕಾರ್ಯದರ್ಶಿ ಅಥಿಕ್ ಅವರು ಕೂಡಾ ಸಚಿವರು ಕೊಟ್ಟಂತೆ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ರು. ಒಟ್ಟಾರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಕೆರೆಗಳ ನಾಡಲ್ಲಿ ಅಂತರ್ಜಲ ಅಭಿವೃದ್ದಿಗಾಗಿ ಕೆರೆಗಳಿಗೆ ಜೀವ ತುಂಬಲು ಯೋಜನೆ ರೂಪಿಸಿದ್ದು, ಆ ಮೂಲಕ ಅವರ ಕನಸಿನಂತೆ ಕೆರೆಗಳ ಅಭಿವೃದ್ದಿಯಾದರೆ ನಿಜಕ್ಕೂ ಜಿಲ್ಲೆಯ ಮಟ್ಟಿಗೆ ನಿರ್ಮಲಾ ಸೀತಾರಾಮನ್ ಅವರ ಕೊಡುಗೆ ದೊಡ್ಡದು ಅಂದ್ರೆ ತಪ್ಪಾಗೋದಿಲ್ಲ.