
ಬೆಂಗಳೂರು (ಜೂ.27): ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ದಾರುಣ ಸಾವಿನ ಪ್ರಕರಣ ರಾಷ್ಟ್ರದ ಗಮನ ಸೆಳೆದಿದೆ. ರಾಜ್ಯ ಸರ್ಕಾರದೊಂದಿಗೆ ಕೇಂದ್ರ ಸರ್ಕಾರಕ್ಕೂ ಹುಲಿ ಸಾವಿನ ಬಿಸಿ ತಟ್ಟಿದೆ. ರಾಜ್ಯ ಸರ್ಕಾರದ ತನಿಖೆ ಜೊತೆ ಕೇಂದ್ರದಿಂದಲೂ ತನಿಖೆ ನಡೆಸಲು ತೀರ್ಮಾನ ಮಾಡಲಾಗಿದೆ. ಇದಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ಕೇಂದ್ರ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಇಬ್ಬರು ಅರಣ್ಯಾಧಿಕಾರಿಗಳ ನೇಮಿಸಿ ಕೇಂದ್ರದಿಂದ SIT ರಚನೆಯಾಗಿದೆ. RO ಹರಿಣಿ, ತಳಿಮೋಯಿ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಲಾಗಿದೆ. 2 ವಾರಗಳ ಒಳಗೆ ವರದಿ ನೀಡುವಂತೆ ಕೇಂದ್ರ ಸರ್ಕಾರ ಡೆಡ್‌ಲೈನ್ ನೀಡಿದ್ದು, ಮಲೆಮಹದೇಶ್ವರ ಅರಣ್ಯಾಧಿಕಾರಿಗಳಿಗೆ ಢವಢವ ಶುರುವಾಗಿದೆ.
ಇನ್ನೊಂದೆಡೆ ಇಡೀ ಘಟನೆನೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಲಾಗುತ್ತಿದೆ. ಪ್ರತ್ಯೇಕ ಚೆಕ್ ಪೋಸ್ಟ್ ತೆರೆಯಲು ಅನಮತಿ ಕೋರಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ. ಒಂದೂವರೆ ತಿಂಗಳ ಹಿಂದೆಯೇ ಈ ಬಗ್ಗೆ ಚಾಮರಾಜನಗರ ಎಸ್‌ಪಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು ಎನ್ನುವುದು ಗೊತ್ತಾಗಿದೆ.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದ ಚಾಮರಾಜನಗರ ಎಸ್‌ಪಿ, ಗೋಪಿನಾಥಮ್ ಮತ್ತು ಪಾಲಾರ್ ಕೂಡುವ ಪ್ರದೇಶದಲ್ಲಿ ಪ್ರತ್ಯೇಕ ಚೆಕ್‌ಪೋಸ್ಟ್ ಗೆ ಮನವಿ ಮಾಡಿದ್ದರು. 15x15 ಅಡಿ ಅಳತೆಯ ಜಾಗದಲ್ಲಿ ಪ್ರತ್ಯೇಕ ಪೊಲೀಸ್ ಚೆಕ್‌ಪೋಸ್ಟ್ ತೆರೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು ಎನ್ನುವುದು ತಿಳಿಸಿದೆ.
ಪೊಲೀಸ್ ಇಲಾಖಾ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪೊಲೀಸ್ ಚೆಕ್ ಪೋಸ್ಟ್ ತೆರೆಯುವ ಅವಶ್ಯಕತೆ ಇದೆ. ಗೋಪಿನಾಥಮ್ ಮತ್ತು ಪಾಲಾರ್ ಕೂಡುವ ಪ್ರದೇಶದಲ್ಲಿ 15x15 ಜಾಗದಲ್ಲಿ ಚೆಕ್‌ಪೋಸ್ಟ್ ತೆರೆಯಲು ಅನುಮತಿ ನೀಡಿ ಎಂದು ಮನವಿ ಮಾಡಿದ್ದರು. ಅದರೊಂದಿಗೆ ಯಾವ ಕಾರಣಕ್ಕಾಗಿ ಚೆಕ್‌ಪೋಸ್ಟ್ ಬೇಕು ಅನ್ನೋದನ್ನೂ ಚಾಮರಾಜನಗರ ಎಸ್‌ಪಿ ವಿವರಿಸಿದ್ದರು.
ಸದರಿ ಚೆಕ್ ಪೋಸ್ಟ್‌ನಲ್ಲಿ ತಮಿಳುನಾಡು ರಾಜ್ಯದ ಸೇಲಂ, ಕೃಷ್ಣಗಿರಿ ಹಾಗೂ ಧರ್ಮಪುರಿ 03 ಜಿಲ್ಲೆಗಳ ಗಡಿಯಾಗಿದೆ. ತಮಿಳುನಾಡಿಗೆ ಹಾದುಹೋಗುವ ವಾಹನಗಳು ಹಾಗೂ ಅನುಮಾನಸ್ಪದ ವ್ಯಕ್ತಿಗಳನ್ನು ತಪಾಸಣೆ ಮಾಡಲು ಸಾಧ್ಯವಾಗುತ್ತಿಲ್ಲ. ಮಲೆ ಮಹದೇಶ್ವರ ಬೆಟ್ಟದಿಂದ ಬರುವ ಹಾಗೂ ಹೊಗೇನಕಲ್ ಕಡೆಗೆ ಹೋಗುವ ವಾಹನಗಳು ಮತ್ತು ಅನುಮಾನಸ್ಪದ ವ್ಯಕ್ತಿಗಳನ್ನು ಪರಿಶೀಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಗೋಪಿನಾಥಮ್ ಹಾಗೂ ಸುತ್ತಮುತ್ತಲ ಗ್ರಾಮದ ಜನರ ಚಲನವಲನಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಪಾಲಾರ್ ಅಕ್ಕಪಕ್ಕ ತಮಿಳುನಾಡಿನ ಗ್ರಾಮಗಳಾದ ಗೋವಿಂದಪಾಡಿ, ಶೆಟ್ಟಿಪಟ್ಟಿ, ಕರಂಗಲೂರು, ಕಾರೆಕಾಡು ಕತ್ತರಿಮಲೈ ಮತ್ತು ಇನ್ನಿತರ ಗ್ರಾಮಗಳಲ್ಲಿ ಕಳ್ಳ ಬೇಟೆಗಾರರಿದ್ದಾರೆ. ಇವರುಗಳ ಮೇಲೆ ನಿಗಾವಹಿಸುವ ಆವಶ್ಯಕತೆ ಇರುತ್ತದೆ. ಪೊಲೀಸ್ ಇಲಾಖೆಗೆ ಸಂಬಂಧಿಸಿದ ಆಯುಧಗಳು ಹಾಗೂ ವೈರ್‌ಲೆಸ್ ಉಪಕರಣಗಳನ್ನು ಸಹ ಅಳವಡಿಸಲಾಗಿದ್ದು ಅವುಗಳನ್ನು ಸುರಕ್ಷಿತವಾಗಿಡುವುದು ಅವಶ್ಯಕವಾಗಿರುತ್ತದೆ ಎಂದು ತಿಳಿಸಿದ್ದರು.
ಅದರೊಂದಿಗೆ ಸದರಿ ಚೆಕ್ ಪೋಸ್ಟ್‌ಗೆ ಅನಿರೀಕ್ಷಿತ ಸಮಯದಲ್ಲಿ ತುರ್ತು ಮಾಹಿತಿಗಳು/ ಸಂದೇಶಗಳು ಬಂದ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದಾಗ ಸಿಬ್ಬಂದಿಗಳು ತಂಗಲು ಅನಾನುಕೂಲವಾಗುತ್ತಿದೆ. ಪೊಲೀಸ್ ಇಲಾಖೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲು ಹಾಗೂ ಇಲಾಖಾ ಕರ್ತವ್ಯಕ್ಕೆ ಅಡಚಣೆಯುಂಟಾಗುತ್ತಿರುತ್ತದೆ. ಹೀಗಾಗಿ ಪ್ರತ್ಯೇಕ ಪೊಲೀಸ್ ಚೆಕ್‌ಪೋಸ್ಟ್ ಬೇಕು ಎಂದು ಚಾಮರಾಜನಗರ ಎಸ್‌ಪಿ ಮನವಿ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ