ಪ್ರತಿ ಹಳ್ಳಿಗೂ ಸ್ಮಶಾನ: ಡಿಸಿಗಳಿಗೆ ಸರ್ಕಾರ ಸೂಚನೆ

By Kannadaprabha NewsFirst Published Mar 11, 2021, 8:29 AM IST
Highlights

ಈ ವರ್ಷ ಸ್ಮಶಾನ ಭೂಮಿ ಒದಗಿಸಲು 10 ಕೋಟಿ ರು.ಗಳನ್ನು ಕರ್ನಾಟಕ ಸರ್ಕಾರ ಒದಗಿಸಿದೆ. ಪ್ರತಿ ಹಳ್ಳಿಗೂ ಸ್ಮಶಾನ ಸೌಲಭ್ಯಕ್ಕೆ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. 

ವಿಧಾನಪರಿಷತ್‌ (ಮಾ.11): ರಾಜ್ಯದಲ್ಲಿ ಪ್ರಸ್ತುತ 7069 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇಲ್ಲದೇ ಜನರು ಶವ ಸಂಸ್ಕಾರ ಮಾಡಲು ತೊಂದರೆ ಎದುರಿಸುತ್ತಿರುವುದರಿಂದ ಈ ವರ್ಷ ಸ್ಮಶಾನ ಭೂಮಿ ಒದಗಿಸಲು 10 ಕೋಟಿ ರು.ಗಳನ್ನು ಒದಗಿಸಿದೆ. ಪ್ರತಿ ಹಳ್ಳಿಗೂ ಸ್ಮಶಾನ ಸೌಲಭ್ಯಕ್ಕೆ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು.

ಬಿಜೆಪಿ ಡಾ. ತಳವಾರ್‌ ಸಾಬಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಒಟ್ಟು ಇರುವ 29,590 ಗ್ರಾಮಗಳ ಪೈಕಿ 21,336 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇಲ್ಲ. ಅನೇಕ ಕಡೆ ಭೂಮಿ ಸಿಗುತ್ತಿಲ್ಲ, ಹೀಗಾಗಿ ಸರ್ಕಾರವೇ 7069 ಗ್ರಾಮಗಳಲ್ಲಿ ಭೂಮಿ ಖರೀದಿಸಿ ನೀಡಲು ಬಜೆಟ್‌ನಲ್ಲಿ 10 ಕೋಟಿ ರು. ಒದಗಿಸಿದೆ ಎಂದರು.

ಉತ್ಖನನದ ವೇಳೆ ಸಿಕ್ತು ಪ್ರಾಣಿಗಳ ಸ್ಮಶಾನ: 2 ಸಾವಿರ ವರ್ಷ ನೆಲದಡಿ ಅಡಗಿತ್ತು ರಹಸ್ಯ! ... R

ರಾಜ್ಯದ ಪ್ರತಿ ಹಳ್ಳಿಯಲ್ಲಿ ಸ್ಮಶಾನ ಭೂಮಿ ಸೌಲಭ್ಯ ಇರುವಂತೆ ಕ್ರಮ ಕೈಗೊಳ್ಳಬೇಕೆಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಜಿಲ್ಲಾಧಿಕಾರಿಗಳೇ ಖುದ್ದಾಗಿ ಆದ್ಯತೆ ಮೇಲೆ ಸ್ಮಶಾನ ಭೂಮಿ ಮಂಜೂರು ಮಾಡಲು ಮುಂದಾಗಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

ಭಂಕೂರು ಗ್ರಾಮಕ್ಕೆ ಸ್ಮಶಾನ ಭೂಮಿ:  ಕಲಬುರಗಿ ಜಿಲ್ಲೆ ಶಹಾಬಾದ್‌ ತಾಲ್ಲೂಕಿನ ಭಂಕೂರು ಗ್ರಾಮದಲ್ಲಿ 22-23 ಎಕರೆ ಸರ್ಕಾರಿ ಭೂಮಿ ಇದ್ದರೂ, ಸವಳು ಮಣ್ಣು ಇರುವುದರಿಂದ ಶವಗಳು ಕೊಳೆಯುವುದಿಲ್ಲ ಎಂಬ ಕಾರಣಕ್ಕಾಗಿ ಸದರಿ ಜಮೀನು ಮಂಜೂರು ಮಾಡಿರುವುದಿಲ್ಲ. ಹೀಗಾಗಿ ಸ.ನಂ 4ರಲ್ಲಿ 4 ಎಕರೆ 33 ಗುಂಟೆ ಜಮೀನನ್ನು ಪಟ್ಟದಾರರು ಸ್ಮಶಾನಕ್ಕಾಗಿ ಭೂಮಿ ನೀಡಲು ಒಪ್ಪಿದ್ದಾರೆ. ನೇರ ಖರೀದಿ ಮಾಡಿ ನೀಡಲಾಗುವುದು ಎಂದು ತಳವಾರ ಸಾಬಣ್ಣ ಅವರ ಮನವಿಗೆ ಸಚಿವರು ಉತ್ತರಿಸಿದರು.

click me!