ರಾಜ್ಯದ ಸಾರಿಗೆ ನೌಕರರಿಗೆ ಇಲ್ಲಿದೆ ಗುಡ್. ರಾಜ್ಯ ಸರ್ಕಾರದಿಂದ ನೌಕರರು ಈ ರೀತಿಯಾದ ಅನುಕೂಲ ಪಡೆಯಬಹುದು. ಏನದು..?
ಬೆಂಗಳೂರು (ಮಾ.11): ಸಾರಿಗೆ ನೌಕರರ ಹೋರಾಟದ ನಿರ್ಧಾರದ ಬೆನ್ನಲ್ಲೇ ರಾಜ್ಯ ಸರ್ಕಾರ ಇನ್ನು ಮುಂದೆ ಪ್ರತಿ ವರ್ಷ ಸಾರಿಗೆ ನೌಕರರ ಅಂತರ್ ನಿಗಮ ವರ್ಗಾವಣೆಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಶಿವರಾತ್ರಿ ಸಂದರ್ಭದಲ್ಲಿ ಸಾರಿಗೆ ನೌಕರರಿಗೆ ಸಿಹಿ ಸುದ್ದಿ ನೀಡಿದೆ.
ಈ ಆದೇಶದ ಅನ್ವಯ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಈಶಾನ್ಯ ಸಾರಿಗೆ ಹಾಗೂ ವಾಯುವ್ಯ ಸಾರಿಗೆ ನಿಗಮಗಳ ದರ್ಜೆ-3ರ ಮೇಲ್ವಿಚಾರಕೇತರ ಮತ್ತು ದರ್ಜೆ-4ರ ನೌಕರರಿಗೆ ಪ್ರತಿ ವರ್ಷ ಏಪ್ರಿಲ್ 1ರಿಂದ ಏಪ್ರಿಲ್ 30ರ ವರೆಗೆ ಅಂತರ್ ನಿಗಮ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ನಾಲ್ಕು ನಿಗಮಗಳ ಪೈಕಿ ಪ್ರತಿ ನಿಗಮದ ಒಟ್ಟು ಸಿಬ್ಬಂದಿಗಳ ಪ್ರಮಾಣದ ಮೇಲೆ ಶೇ.2ರಷ್ಟುಸಿಬ್ಬಂದಿಗೆ ಅಂತರ್ ನಿಗಮ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಸಕ್ತ ಸಾಲಿನಿಂದಲೇ ಈ ಅಂತರ್ ನಿಗಮ ವರ್ಗಾವಣೆ ಆದೇಶ ಜಾರಿಯಾಗಲಿದೆ. ಅಂತರ್ ನಿಗಮ ವರ್ಗಾವಣೆ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿದೆ.
9 ಬೇಡಿಕೆಗಳ ಪೈಕಿ 7 ಈಡೇರಿಕೆ
ಸಾರಿಗೆ ನೌಕರರರು ಸರ್ಕಾರದ ಮುಂದೆ ಇರಿಸಿದ್ದ ಒಂಬತ್ತು ಬೇಡಿಕೆಗಳ ಪೈಕಿ ಏಳು ಬೇಡಿಕೆ ಈಡೇರಿಸಲಾಗಿದೆ. ಉಳಿದ ಎರಡು ಬೇಡಿಕೆ ಪೈಕಿ ನೌಕರರ ತರಬೇತಿ ಅವಧಿ 1 ವರ್ಷಕ್ಕೆ ಇಳಿಸುವ ಸಂಬಂಧ ಕಡತವನ್ನು ಆರ್ಥಿಕ ಇಲಾಖೆಗೆ ಕಳುಹಿಸಲಾಗಿದ್ದು ಶೀಘ್ರ ಅನುಮೋದನೆ ಸಿಗಲಿದೆ. ಇನ್ನು 6ನೇ ವೇತನ ಆಯೋಗದ ಶಿಫಾರಸು ಪರಿಗಣನೆ ಸಂಬಂಧ ಸಮಿತಿ ರಚಿಸಲಾಗಿದೆ.
BIG 3: ನಿರ್ಮಾಣವಾಗಿ ಒಂದೂವರೆ ವರ್ಷ, KSRTC ಚಾಲಕರ ತರಬೇತಿ ಕೇಂದ್ರಕ್ಕೆ ಉದ್ಘಾಟನಾ ಭಾಗ್ಯವಿಲ್ಲ!
ವರದಿ ಕೈಸೇರಿದ ಬಳಿಕ ಪರಿಶೀಲಿಸಿ ಕ್ರಮ ವಹಿಸುವುದಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಈ ಹಿಂದೆ 2016ರಲ್ಲಿ ಸಾರಿಗೆ ನೌಕರರಿಗೆ ಒಂದು ಬಾರಿಗೆ ಮಾತ್ರ ಅಂತರ್ ನಿಗಮ ವರ್ಗಾವಣೆಗೆ ಅವಕಾಶ ನೀಡಲಾಗಿತ್ತು. ಈ ವೇಳೆ ಸುಮಾರು 20 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಮೂರುವರೆ ಸಾವಿರ ನೌಕರರು ಅಂತರ್ ನಿಗಮಗಳಿಗೆ ವರ್ಗಾವಣೆಗೊಂಡಿದ್ದರು. ಬಳಿಕ ಅಂತರ್ ನಿಗಮ ವರ್ಗಾವಣೆ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಉಳಿದ ನೌಕರರು ಅಂತರ್ ನಿಗಮ ವರ್ಗಾವಣೆಗೆ ಆಗ್ರಹಿಸುತ್ತಾ ಬಂದಿದ್ದರು. ಕಳೆದ ಡಿಸೆಂಬರ್‌ನಲ್ಲಿ ನಡೆದ ಸಾರಿಗೆ ನೌಕರರ ಮುಷ್ಕರದ ವೇಳೆ ಅಂತರ್ ನಿಗಮ ವರ್ಗಾವಣೆ ಬೇಡಿಕೆಯೂ ಪ್ರಮುಖವಾಗಿತ್ತು.
ವರ್ಗಾವಣೆ ಪ್ರಕ್ರಿಯೆಗೆ ಸಮಿತಿ ರಚನೆ:
ಈ ಸಮಿತಿಯ ಅಧ್ಯಕ್ಷ ವರ್ಗಾವಣೆ ಪ್ರಾಧಿಕಾರವಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಪ್ರಾಧಿಕಾರವು ನೌಕರರಿಂದ ಅರ್ಜಿ ಸ್ವೀಕರಿಸಲು ಆನ್‌ಲೈನ್ ಪೋರ್ಟಲ್ ತಂತ್ರಾಂಶ ಅಭಿವೃದ್ಧಿಪಡಿಸಲಿದೆ. ಅಂತರ್ ನಿಗಮ ವರ್ಗಾವಣೆಗೆ ಆನ್‌ಲೈನ್ ಮೂಲಕ ಸಲ್ಲಿಕೆಯಾಗುವ ಅರ್ಜಿಗಳನ್ನಷ್ಟೇ ಪರಿಗಣಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.