ನ್ಯಾಯಸಮ್ಮತ ಮೀಸಲಾತಿ ನಮ್ಮ ಉದ್ದೇಶ: ಬೊಮ್ಮಾಯಿ

Kannadaprabha News   | Asianet News
Published : Mar 11, 2021, 08:17 AM IST
ನ್ಯಾಯಸಮ್ಮತ ಮೀಸಲಾತಿ ನಮ್ಮ ಉದ್ದೇಶ: ಬೊಮ್ಮಾಯಿ

ಸಾರಾಂಶ

ರಾಜ್ಯ ಸರ್ಕಾರ ನ್ಯಾಯಸಮ್ಮತವಾದ ಮೀಸಲಾತಿ ಉದ್ದೇಶ ಹೊಂದಿದೆ. ಎಲ್ಲಾ ಸಮುದಾಯಗಳಿಗೂ ಸೂಕ್ತ ಮೀಸಲಾತಿಯೇ ಉದ್ದೇಶ ಎಂದು ಹೇಳಿದರು. 

ವಿಧಾನಸಭೆ (ಮಾ.11):  ಸಮುದಾಯಗಳ ನಡುವೆ ಸಂಘರ್ಷವಾಗದಂತೆ, ನ್ಯಾಯಸಮ್ಮತವಾಗಿ ಮೀಸಲಾತಿ ಕಲ್ಪಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟವಾಗಿ ಹೇಳಿದ್ದಾರೆ.

ಇದಕ್ಕೆ ಪೂರಕವಾಗಿ ಮೀಸಲು ಹೆಚ್ಚಳಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಸಂವಿಧಾನ ಪೀಠವು ಎಲ್ಲಾ ರಾಜ್ಯಗಳ ಅಭಿಪ್ರಾಯ ಕೇಳಿರುವುದು ಶೇ.50ಕ್ಕಿಂತ ಹೆಚ್ಚು ಮೀಸಲಾತಿ ಕಲ್ಪಿಸಲು ದಾರಿದೀಪವಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆ ಕುರಿತ ಪ್ರಸ್ತಾಪಕ್ಕೆ ಉತ್ತರ ನೀಡಿದ ಸಚಿವರು, ‘ಪಂಚಮಸಾಲಿ ಮಾತ್ರವಲ್ಲದೆ ಕುರುಬ, ವಾಲ್ಮೀಕಿ, ಒಕ್ಕಲಿಗೆ ಸಮುದಾಯಗಳು ಸಹ ಮೀಸಲಾತಿಗೆ ಬೇಡಿಕೆ ಸಲ್ಲಿಸಿವೆ. ಎಸ್‌ಸಿ/ಎಸ್‌ಟಿ ವರ್ಗದವರು ಸಹ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡುವಂತೆ ಕೋರಿದ್ದಾರೆ. ಮೀಸಲಾತಿಗೆ ಒತ್ತಾಯಿಸಿರುವ ಹಲವು ಸಮುದಾಯಗಳ ಆಶೋತ್ತರಗಳಿಗೆ ಪೂರಕವಾಗಿ ಕಾನೂನಿನ ಚೌಕಟ್ಟಿನಲ್ಲಿ ಸಂವಿಧಾನಾತ್ಮಕವಾಗಿ ಮೀಸಲಾತಿಯನ್ನು ಕಲ್ಪಿಸಲಾಗುವುದು. ಸಮಗ್ರವಾಗಿ ಅಧ್ಯಯನ ನಡೆಸಲು ಮೂವರು ತಜ್ಞರ ಉನ್ನತ ಮಟ್ಟದ ಸಮಿತಿ ರಚಿಸುವ ತೀರ್ಮಾನ ಮಾಡಲಾಗಿದೆ. ಸಮಿತಿ ವರದಿ ಬಳಿಕ ಮೀಸಲಾತಿ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ಮಿತಿಗೊಳಿಸಬೇಕು ಎಂಬುದನ್ನು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠ ಸ್ಪಷ್ಟವಾಗಿ ತಿಳಿಸಿದೆ. ಆದರೆ, ಮೀಸಲಾತಿ ಪ್ರಮಾಣವು ವಿಶೇಷ ಸಂದರ್ಭದಲ್ಲಿ ಪರಾಮರ್ಶೆ ಮಾಡಲು ಅವಕಾಶವೂ ಇದೆ. ಇದರ ಆಧಾರದ ಮೇಲೆ ಹಲವು ರಾಜ್ಯಗಳು ಮೀಸಲಾತಿ ಪ್ರಮಾಣವನ್ನು ಹೆಚ್ಚು ಮಾಡಿವೆ. ಈ ಕ್ರಮಕ್ಕೆ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಈ ಬಗ್ಗೆಯೂ ರಾಜ್ಯ ಸರ್ಕಾರ ಪರಿಶೀಲನೆ ನಡೆಸಬೇಕಿದೆ. ಎಲ್ಲ ಸಮುದಾಯಗಳಿಗೂ ಯಾವ ರೀತಿ ನ್ಯಾಯ ಕೊಡಬೇಕು ಮತ್ತು ಕಾನೂನಿನ ಸಮಸ್ಯೆ ಎದುರಾಗದಂತೆ ಯಾವ ರೀತಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು ಎಂಬುದರ ಕುರಿತು ಅಧ್ಯಯನ ನಡೆಸಿ ಸರ್ಕಾರಕ್ಕೆ ಸೂಕ್ತ ಶಿಫಾರಸು ಮಾಡಲು ಉನ್ನತ ಮಟ್ಟದ ಸಮಿತಿ ರಚಿಸಲಾಗುತ್ತಿದೆ. ಅಲ್ಲದೇ, ಸುಪ್ರೀಂಕೋರ್ಟ್‌ ಸಂವಿಧಾನ ಪೀಠವು ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಎಲ್ಲಾ ರಾಜ್ಯಗಳ ಅಭಿಪ್ರಾಯವನ್ನು ಕೇಳಿದೆ. ಸರ್ಕಾರವು ಸಮರ್ಪಕವಾಗಿ ತನ್ನ ಅಭಿಪ್ರಾಯವನ್ನು ಸಲ್ಲಿಸಲಿದೆ’ ಎಂದರು.

ಪಂಚಮಸಾಲಿಗೆ ಮೀಸಲಾತಿ: ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ಸ್ವಾಮೀಜಿ

‘ಪಂಚಮಸಾಲಿ ಸಮುದಾಯದವರು ತಮ್ಮನ್ನು ಪ್ರವರ್ಗ 3ಬಿಯಿಂದ ಪ್ರವರ್ಗ 2ಎಗೆ ಸೇರಿಸುವಂತೆ ಹೋರಾಟ ನಡೆಸುತ್ತಿದ್ದಾರೆ. ಪಂಚಮಸಾಲಿ ಸಮುದಾಯವರು ಕೃಷಿ ಅವಲಂಬಿಸಿದವರು. ಇತ್ತೀಚೆಗೆ ಕುಟುಂಬಗಳು ಒಡೆದಂತೆ ಕೃಷಿ ಭೂಮಿ ಕೂಡ ಭಾಗವಾಗಿದೆ. ಹೀಗಾಗಿ ಆರ್ಥಿಕವಾಗಿ ಸಮಾಜ ಹಿಂದುಳಿದಿದೆ ಎಂಬುದು ಸಮುದಾಯದ ವಾದವಾಗಿದೆ. ಸಮುದಾಯ ಹಿಂದುಳಿದಿರುವುದಕ್ಕೆ ಕಾರಣವಾಗಿರುವ ಅಂಶಗಳನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವರಿಕೆ ಮಾಡಿಕೊಡಬೇಕು. ನಂತರ ಆಯೋಗವು ಮಾಡುವ ಶಿಫಾರಸು ಆಧಾರದ ಮೇಲೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಈಗಾಗಲೇ ವಿವಿಧ ಸಮುದಾಯಗಳಿಗೆ ನೀಡಲಾಗಿರುವ ಮೀಸಲಾತಿಗೆ ಧಕ್ಕೆಯಾಗಬಾರದು. ಅದರ ಜತೆಗೆ ಸಮುದಾಯಗಳಿಗೆ ಸಂವಿಧಾನಬದ್ಧವಾಗಿ, ಕಾನೂನು ಪ್ರಕಾರ ಮೀಸಲಾತಿಯನ್ನು ಕಲ್ಪಿಸಬೇಕಾಗಿದೆ. ಇದು ನಿಜಕ್ಕೂ ನಮಗೆ ಸವಾಲು’ ಎಂದು ಬೊಮ್ಮಾಯಿ ತಿಳಿಸಿದರು.

‘2009ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎಗೆ ಸೇರಿಸಿದ್ದರು. ನಂತರ ಬಲಿಜ ಸಮುದಾಯ ಮತ್ತು ಆ ಸಮುದಾಯಕ್ಕೆ ಸಮಾನಾಂತರ ಹೆಸರಿನ ಜಾತಿಗಳನ್ನು ಪ್ರವರ್ಗ-2ಎಗೆ ಸೇರಿಸಲಾಯಿತು. ಆದರೆ, ಯಾವುದೇ ಲಿಂಗಾಯತ ಸಮುದಾಯಗಳನ್ನು 2ಎಗೆ ಸೇರಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮೀಸಲಾತಿಯನ್ನು ಸಾಂವಿಧಾನಿಕವಾಗಿ ನೀಡಬೇಕಾಗುತ್ತದೆ. ಇಂದಿರಾ ಸಹಾನಿ ತೀರ್ಪಿನ ಆಧಾರದಲ್ಲಿ ಮೇಲೆ ಇದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ. ಮೀಸಲಾತಿ ನೀಡುವ ಸಂಬಂಧ ತಡ ಮಾಡುವ ಪ್ರಶ್ನೆಯೇ ಇಲ್ಲ. ಹಿಂದುಳಿದ ವರ್ಗಗಳ ಆಯೋಗ ನೀಡುವ ಶಿಫಾರಸುಗಳ ವರದಿ ಮತ್ತು ಉನ್ನತ ಮಟ್ಟದ ಸಮಿತಿಯ ವರದಿ ಕೈ ಸೇರಿದ ತಕ್ಷಣ ಜಾರಿ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!