
ಬೆಂಗಳೂರು (ಡಿ.20): ಭ್ರಷ್ಟಾಚಾರ ಆರೋಪದ ಸುಳಿಗೆ ಸಿಲುಕಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಮತ್ತೆ ಬಿಸಿ ಮುಟ್ಟಿಸಿದ್ದು, ಸೋಮವಾರ ಅವರ ‘ಶಿಕ್ಷಣ ಸ್ರಾಮಾಜ್ಯ’ದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಶಿವಕುಮಾರ್ ಅವರ ಕುಟುಂಬಕ್ಕೆ ಸೇರಿದ ‘ನ್ಯಾಷನಲ್ ಎಜುಕೇಷನ್ ಫೌಂಡೇಶನ್’ ಹಾಗೂ ಗೋಬ್ಲಲ್ ತಾಂತ್ರಿಕ ಮಹಾವಿದ್ಯಾಲಯದ ಕಾಲೇಜಿನ ಕಚೇರಿಗಳ ಮೇಲೆ ಬೆಳಗ್ಗೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು, ಐದಾರು ತಾಸು ಕಚೇರಿಗಳಲ್ಲಿ ಶೋಧನೆ ನಡೆಸಿ ಕೆಲ ದಾಖಲೆಗಳನ್ನು ವಶಕ್ಕೆ ಪಡೆದು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಒಡೆತನದ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಗೆ ಕಾನೂನು ಬಾಹಿರವಾಗಿ ಲಕ್ಷಾಂತರ ರು. ದೇಣಿಗೆ ನೀಡಿದ ಆರೋಪಕ್ಕೆ ಶಿವಕುಮಾರ್ ತುತ್ತಾಗಿದ್ದಾರೆ. ಈ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಬಿಐ, ಈಗ ಶಿವಕುಮಾರ್ ಅವರ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲೆಗಳನ್ನು ಪರಿಶೀಲಿಸಿದೆ ಎನ್ನಲಾಗಿದೆ. ಈ ಶಿಕ್ಷಣ ಸಂಸ್ಥೆಗೆ ಶಿವಕುಮಾರ್ ಅವರು ಅಧ್ಯಕ್ಷರಾಗಿದ್ದರೆ, ಅವರ ಹಿರಿಯ ಪುತ್ರಿ ಐಶ್ವರ್ಯ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ. ಅಲ್ಲದೆ ಶಿವಕುಮಾರ್ ಅವರ ಪತ್ನಿ ಉಷಾ ಹಾಗೂ ಸಹೋದರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಸೇರಿ ಕುಟುಂಬದವರು ಸದಸ್ಯರಾಗಿದ್ದಾರೆ.
ಬಸ್ ಯಾತ್ರೆ ವಿಚಾರದಲ್ಲಿ ಪಕ್ಷದ ನಿರ್ಧಾರವೇ ಅಂತಿಮ: ಡಿ.ಕೆ.ಶಿವಕುಮಾರ್
ರಾಜರಾಜೇಶ್ವರಿ ನಗರದಲ್ಲಿ ತಮ್ಮ ಶಿಕ್ಷಣ ಸಂಸ್ಥೆಯ ಪ್ರಧಾನ ಕಚೇರಿ ಮಾತ್ರವಲ್ಲದೆ ಗ್ಲೋಬಲ್ ಎಂಜಿನಿಯರಿಂಗ್ ಕಾಲೇಜಿನ ಸವಿಸ್ತಾರವಾದ ಕ್ಯಾಂಪಸ್ ಅನ್ನು ಶಿವಕುಮಾರ್ ಹೊಂದಿದ್ದಾರೆ. ಇದೇ ಪ್ರಕರಣದ ಸಂಬಂಧ ಕೆಲ ತಿಂಗಳ ಹಿಂದೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನಲ್ಲಿರುವ ಶಿವಕುಮಾರ್ ಅವರ ಸೋದರರ ಮನೆಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಅದರ ಮುಂದುವರೆದ ಭಾಗವಾಗಿ ಶಿಕ್ಷಣ ಸಂಸ್ಥೆಯ ಕಚೇರಿಗಳಲ್ಲಿ ಸಿಬಿಐ ಶೋಧನೆ ನಡೆಸಿದೆ ಎಂದು ಮೂಲಗಳು ಹೇಳಿವೆ.
ಸಿಬಿಐ ವಿರುದ್ಧ ಪ್ರತಿಭಟನೆ: ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರ ಒಡೆತನದ ಗ್ಲೋಬಲ್ ಶಿಕ್ಷಣ ಸಂಸ್ಥೆಯ ಮೇಲೆ ಸಿಬಿಐ ದಾಳಿಯನ್ನು ಖಂಡಿಸಿ ಕಾಲೇಜಿನ ಮುಂದೆ ಜಮಾಯಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಶಿವಕುಮಾರ್‌ರವರ ಬೆಂಬಲಿಗರು ಪ್ರತಿಭಟನೆ ನಡೆಸಿದರು. ರಾಜಕೀಯ ದ್ವೇಷದಿಂದ ಶಿವಕುಮಾರ್ ಅವರ ಮೇಲೆ ಕೇಂದ್ರ ಸರ್ಕಾರ ದಾಳಿ ನಡೆಸುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ದಾಳಿ ಏಕೆ?
- ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಲಕ್ಷಾಂತರ ರು. ದೇಣಿಗೆ ನೀಡಿದ ಆರೋಪ
- ಈ ಕುರಿತು ತನಿಖೆ ನಡೆಸುತ್ತಿರುವ ಸಿಬಿಐನಿಂದ ಶಿಕ್ಷಣ ಸಂಸ್ಥೆ ಮೇಲೆ ದಾಳಿ
- ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಲೆ, ಬಿಇ ಕಾಲೇಜಿನಲ್ಲಿ ಶೋಧ
- ಕೆಲ ದಾಖಲೆಗಳನ್ನು ವಶಕ್ಕೆ ಪಡೆದು ತೆರಳಿದ ಸಿಬಿಐ ಅಧಿಕಾರಿಗಳ ತಂಡ
- ಶಿಕ್ಷಣ ಸಂಸ್ಥೆಗೆ ಡಿ.ಕೆ.ಶಿವಕುಮಾರ್ ಅಧ್ಯಕ್ಷ, ಅವರ ಹಿರಿಯ ಪುತ್ರಿ ಐಶ್ವರ‍್ಯ ಕಾರ‍್ಯದರ್ಶಿ
ಡಿ.ಕೆ.ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ
ನಾನು ಯಾರಿಗಾದರೂ ಮೋಸ ಮಾಡಿ ತೊಂದರೆ ಕೊಟ್ಟಿದ್ದರೆ, ತಪ್ಪು ಮಾಡಿದ್ದರೆ ಯಾವ ಶಿಕ್ಷೆ ಬೇಕಾದರೂ ನೀಡಲಿ. ನನ್ನ ಬದುಕು, ವ್ಯವಹಾರ, ಶಿಕ್ಷಣ ಸಂಸ್ಥೆ, ರಾಜಕೀಯ ಬದುಕು ಎಲ್ಲವೂ ಪಾರದರ್ಶಕವಾಗಿದೆ. ನಾನು ಒಂದೂ ಅಕ್ರಮ ನಡೆಸಿಲ್ಲ. ಪದೇ ಪದೇ ದಾಳಿಯಿಂದ ನೋವಾಗಿದೆ.
-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ