ಎಂಇಎಸ್ ನವರು ಟಿಳಕವಾಡಿಯಲ್ಲಿ ಮಹಾಮೇಳಾವ್ ಮಾಡುವ ಬಗ್ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಅದನ್ನು ತಿರಸ್ಕರಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ ಕುಮಾರ ಹೇಳಿದರು.
ಬೆಳಗಾವಿ (ಡಿ.19): ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವ್ಯಾಕ್ಸಿನ್ ಡಿಪೋ ಸುತ್ತಮುತ್ತ 144ಸೆಕ್ಷನ್ ಜಾರಿ ಮಾಡಿದ್ದೇವೆ. ಜೊತೆಗೆ, ಎಂಇಎಸ್ ನವರು ಟಿಳಕವಾಡಿಯಲ್ಲಿ ಮಹಾಮೇಳಾವ್ ಮಾಡುವ ಬಗ್ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಅದನ್ನು ತಿರಸ್ಕರಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ ಕುಮಾರ ಹೇಳಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಮವಾರ ವ್ಯಾಕ್ಸಿನ್ ಡಿಪೋದಲ್ಲಿ ಎಂಇಎಸ್ ಮಹಾಮೇಳಾವ್ ಆಯೋಜನೆಯ ಟೆಂಟ್ ತೆರವುಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. 144 ಸೆಕ್ಸೆನ್ ಜಾರಿಯಲ್ಲಿದ್ದರೂ ಎಂಇಎಸ್ ಮಹಾಮೇಳಾವ್‌ಗೆ ಆಯೋಜನೆ ಮಾಡಿದ್ದರು. ಆದರೆ ಇದಕ್ಕೆ ನಿರ್ಬಂಧ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.
ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ತರ್ಲೆ ಮಾಡೋಕೆ ಬಂದರೆ ಕಠಿಣ ಕ್ರಮ: ಎಡಿಜಿಪಿ ವಾರ್ನಿಂಗ್
ಎಂಇಎಸ್ ನವರು ಟಿಳಕವಾಡಿ ಪೊಲೀಸ್ ಠಾಣೆಗೆ ಮಹಾಮೇಳಾವ್ ನಡೆಸುವ ಬಗ್ಗೆ ಅರ್ಜಿ ಕೊಟ್ಟಿದ್ದರು. ಆ ಅರ್ಜಿಯನ್ನ ತಿರಸ್ಕಾರ ಮಾಡಲಾಗಿದೆ. ಅಲ್ಲದೆ, ಯಾವುದೇ ಸಭೆ ಸಮಾರಂಭ ಮಾಡಲು ಅವಕಾಶ ಇಲ್ಲ. ಸಭೆ ಸಮಾರಂಭ ಮಾಡಿದರೆ ಅವರನ್ನ ವಶಕ್ಕೆ ಪಡೆದುಕೊಳ್ಳುತ್ತೇವೆ. ವೇದಿಕೆ ನಿರ್ಮಿಸಲು ಹೇಳಿದವರ ಬಗ್ಗೆ ವಿಚಾರಣೆ ಮಾಡುತ್ತೇವೆ. ಸಭೆ ಮಾಡದ ಕಾರಣ ಸದ್ಯಕ್ಕೆ ಯಾರ ಮೇಲೆಯೂ ಕೇಸ್ ಹಾಕಲ್ಲ. ಸಭೆ ಮಾಡಲು ಅಕ್ರಮ ಕೂಟ ರಚಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ನಿಷೇಧಾಜ್ಞೆ ನಡುವೆಯೂ ಎಂಇಎಸ್ ಪುಂಡಾಟಿಕೆ: ಎಂಇಎಸ್ ಮಹಾಮೇಳಾವ್‌ಗೆ ಅವಕಾಶ ನೀಡದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನಾ ಮೆರವಣಿಗೆ ಮಾಡಿದ್ದಾರೆ. ಈ ಮೂಲಕ ವ್ಯಾಕ್ಸಿನ್ ಡಿಪೋಗೆ ಆಗಮಿಸುತ್ತಿದ್ದ ಎಂಇಎಸ್ ಪುಂಡರನ್ನು ವಶಕ್ಕೆ ಪಡೆಯಲಾಗಿದೆ. ನಾಡದ್ರೋಹಿ ಘೋಷಣೆ ಕೂಗಿದ 50ಕ್ಕೂ ಅಧಿಕ ಎಂಇಎಸ್ ಪುಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಬೆಳಗಾವಿ ತಾಲೂಕಿನ ಮಂಡೋಳಿ ಗ್ರಾಮದ ಹೆಚ್ಚು ಜನರಿದ್ದಾರೆ. ಮಂಡೋಳಿ ರಸ್ತೆ ಮೂಲಕ ವ್ಯಾಕ್ಸಿನ್ ಡಿಪೋಗೆ ಆಗಮಿಸುತ್ತಿದ್ದರು ಎಂದು ತಿಳಿದುಬಂದಿದೆ.