ರೈತರ ವಿರೋಧದ ನಡುವೆಯೂ ತಮಿಳುನಾಡಿಗೆ ನೀರು ಬಿಡುತ್ತಿರುವ ನಡುವೆಯೇ ಕೃಷ್ಣರಾಜಸಾಗರ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಪರಿಸ್ಥಿತಿ ಅರಿಯಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ನಿಯೋಗ ಶುಕ್ರವಾರ ಕೆಆರ್‌ಎಸ್‌ಗೆ ಭೇಟಿ ನೀಡಲಿದೆ.
ಮಂಡ್ಯ (ಸೆ.8) : ರೈತರ ವಿರೋಧದ ನಡುವೆಯೂ ತಮಿಳುನಾಡಿಗೆ ನೀರು ಬಿಡುತ್ತಿರುವ ನಡುವೆಯೇ ಕೃಷ್ಣರಾಜಸಾಗರ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಪರಿಸ್ಥಿತಿ ಅರಿಯಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ನಿಯೋಗ ಶುಕ್ರವಾರ ಕೆಆರ್‌ಎಸ್‌ಗೆ ಭೇಟಿ ನೀಡಲಿದೆ.
ಮಧ್ಯಾಹ್ನ 2 ಗಂಟೆಗೆ ಕೆಆರ್‌ಎಸ್‌ಗೆ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಅವರೊಂದಿಗೆ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವ ಕೆ.ಗೋಪಾಲಯ್ಯ, ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಸಾಥ್ ನೀಡುವರು ಎಂದು ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಅಶ್ವಥ್‌ನಾರಾಯಣ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಮಿಳುನಾಡಿಗೆ ನೀರು: ಸುಪ್ರೀಂನಿಂದ ಅನ್ನದಾತರಿಗೆ ಅಗ್ನಿ ಪರೀಕ್ಷೆ..!
ನೀರಿನ ಸಂಗ್ರಹಣೆಯ ವಾಸ್ತವ ಪರಿಸ್ಥಿತಿ ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಡುವಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ರೈತರ ಹಿತ ಕಾಪಾಡುವುದನ್ನು ಬಿಟ್ಟು ತಮಿಳುನಾಡಿನ ರೈತರ ಹಿತ ಕಾಪಾಡಲು ಟೊಂಕ ಕಟ್ಟಿನಿಂತಿರುವಂತೆ ಕಾಣುತ್ತಿದೆ ಎಂದು ಕುಟುಕಿದರು.
ತಮಿಳುನಾಡು ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿ ನಿತ್ಯ 24 ಸಾವಿರ ಕ್ಯುಸೆಕ್ ನೀರು ಹರಿಸಬೇಕೆಂದು ಅರ್ಜಿ ಸಲ್ಲಿಸಿದ ತಕ್ಷಣ ಯಾವುದೇ ಆಲೋಚನೆ ಮಾಡದೆ ಸಂಕಷ್ಟದ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಹರಿಸಿದ್ದಾರೆ. ಇದನ್ನು ಪ್ರಶ್ನಿಸಿದರೆ ನ್ಯಾಯಾಲಯದ ಆದೇಶದ ವಿರುದ್ಧ ಹೋಗಲು ತಯಾರಿಲ್ಲ. ಬೇಕಿದ್ದರೆ ರೈತರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿ ಎಂಬ ಉಡಾಫೆ ಮಾತುಗಳನ್ನು ಜಲಸಂಪನ್ಮೂಲ ಸಚಿವರು ಆಡಿದ್ದಾರೆ ಎಂದು ಕಿಡಿಕಾರಿದರು.
ಕಾವೇರಿ ನೀರು ಹಂಚಿಕೆ ವಿಚಾರಣೆ ಸುಪ್ರೀಂ ಮುಂದೂಡಿಕೆ: ರೈತಸಂಘಟನೆಗಳು ಉರುಳುಸೇವೆ, ಚಡ್ಡಿ ಮೆರವಣಿಗೆ
ಈಗಾಗಲೇ ತಮಿಳುನಾಡಿಗೆ ನೀರು ಹರಿಸಲಾಗಿದೆ. ಕಾವೇರಿ ನೀರಾವರಿ ಸಲಹಾ ಸಮಿತಿ ಸೆ.12 ರವರೆಗೆ ನೀರು ಹರಿಸುತ್ತೇವೆ. ನಂತರ ನಿಲ್ಲಿಸಲಾಗುವುದು ಎಂದಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಹರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳ ಮೂಲಕ ಸೂಚನೆ ಕೊಡಬೇಕು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಪತ್ರ ಬರೆದು ಇಲ್ಲಿರುವ ನೀರಿನ ಸಂಕಷ್ಟಸ್ಥಿತಿ ಮನದಟ್ಟು ಮಾಡಿಕೊಡುವ ಜೊತೆಗೆ ತಮಿಳುನಾಡಿನಲ್ಲಿ ಹೆಚ್ಚುವರಿ ಬೆಳೆಗಳನ್ನು ಬೆಳೆಯುತ್ತಿರುವ ಬಗ್ಗೆಯೂ ತಿಳಿಸಿಕೊಡುವಂತೆ ಒತ್ತಾಯಿಸಿದರು.