Asianet Suvarna News Asianet Suvarna News

ತಮಿಳುನಾಡಿಗೆ ನೀರು: ಸುಪ್ರೀಂನಿಂದ ಅನ್ನದಾತರಿಗೆ ಅಗ್ನಿ ಪರೀಕ್ಷೆ..!

ಕಾವೇರಿ ನದಿ ನೀರಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೆ.21 ರವರೆಗೆ ಮುಂದೂಡಿದೆ. ಹಾಗಾಗಿ ಮುಂದಿನ 15 ದಿನ ತಮಿಳುನಾಡಿಗೆ ನೀರು ಹರಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ಹೀಗೆ ನೀರು ಹರಿಸಿದರೆ ಜಲಾಶಯದ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿಯುವ ಭೀತಿ ಈಗಲೇ ಎದುರಾಗಿದೆ.

Supreme Court Adjourned Kaveri Water Hearing grg
Author
First Published Sep 7, 2023, 10:45 PM IST

ಮಂಡ್ಯ ಮಂಜುನಾಥ

ಮಂಡ್ಯ(ಸೆ.07):  ಕಳೆದೊಂದು ತಿಂಗಳಿನಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರಿನಿಂದ ರಾಜ್ಯದ ಕಾವೇರಿ ಕೊಳ್ಳದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಇದರ ನಡುವೆ ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿರುವುದು ಅವರನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದೆ. ತೀರ್ಪು ನಿರೀಕ್ಷೆಯಲ್ಲಿದ್ದ ರೈತರಿಗೆ ವಿಚಾರಣೆ ಮುಂದೂಡಿಕೆ ಬರಸಿಡಿಲು ಬಡಿದಂತಾಗಿದೆ.

ಕಾವೇರಿ ನದಿ ನೀರಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೆ.21 ರವರೆಗೆ ಮುಂದೂಡಿದೆ. ಹಾಗಾಗಿ ಮುಂದಿನ 15 ದಿನ ತಮಿಳುನಾಡಿಗೆ ನೀರು ಹರಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ಹೀಗೆ ನೀರು ಹರಿಸಿದರೆ ಜಲಾಶಯದ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿಯುವ ಭೀತಿ ಈಗಲೇ ಎದುರಾಗಿದೆ.

ಕಾವೇರಿ ನೀರು ಹಂಚಿಕೆ ವಿಚಾರಣೆ ಸುಪ್ರೀಂ ಮುಂದೂಡಿಕೆ: ರೈತಸಂಘಟನೆಗಳು ಉರುಳುಸೇವೆ, ಚಡ್ಡಿ ಮೆರವಣಿಗೆ

ಈ ವರ್ಷ ಕೇರಳದಲ್ಲಿ ಉತ್ತಮ ಮಳೆಯಾಗಲಿಲ್ಲ. ಕಬಿನಿ ಜಲಾಶಯ ಭರ್ತಿಯಾಗಲೂ ಇಲ್ಲ. ಇತ್ತ ಕಾವೇರಿ ಉಗಮ ಸ್ಥಾನ ನಿರೀಕ್ಷಿತ ಪ್ರಮಾಣದ ಮಳೆಯಾಗದೆ ಕೃಷ್ಣರಾಜಸಾಗರ ಜಲಾಶಯವೂ ತುಂಬಲಿಲ್ಲ. ಪ್ರತಿ ವರ್ಷ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ತಮಿಳುನಾಡಿನ ನೀರಿನ ಬೇಡಿಕೆಯನ್ನು ಸಮರ್ಥವಾಗಿ ತುಂಬಿಕೊಡುತ್ತಿದ್ದ ಕಬಿನಿ ಜಲಾಶಯ ಈ ಬಾರಿ ಆ ಸಾಮರ್ಥ್ಯ ಕಳೆದುಕೊಂಡಿದೆ. ಪರಿಣಾಮ ನೀರಿನ ಬೇಡಿಕೆ ಪೂರೈಸಬೇಕಾದ ಹೊಣೆ ಕೆಆರ್‌ಎಸ್ ಜಲಾಶಯದ ಮೇಲೆ ಪೂರ್ಣ ಪ್ರಮಾಣದಲ್ಲಿ ಬಿದ್ದಿರುವುದು ಸಂಕಷ್ಟಕ್ಕೆ ಮೂಲ ಕಾರಣವಾಗಿದೆ.

ಪ್ರಸ್ತುತ ನಿತ್ಯ ಕೆಆರ್‌ಎಸ್ ಜಲಾಶಯದಿಂದ 6 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರನ್ನು ಹರಿಸಲಾಗುತ್ತಿದೆ. ಈಗಾಗಲೇ ಜಲಾಶಯದ ನೀರಿನ ಮಟ್ಟ 98 ಅಡಿಗೆ ಕುಸಿದಿದೆ. ಇದೇ ರೀತಿ 15 ದಿನ ನೀರು ಹರಿದರೆ ಅಣೆಕಟ್ಟೆಯಿಂದ 7 ಟಿಎಂಸಿ ನೀರು ಖಾಲಿಯಾಗುವ ಸಾಧ್ಯತೆಗಳಿವೆ. ಇದರಿಂದ ಮಳೆಗಾಲದಲ್ಲೇ ನೀರಿಗೆ ತೀವ್ರ ಸಂಕಷ್ಟ ಎದುರಾಗುವ ಮುನ್ಸೂಚನೆ ಕಂಡುಬರುತ್ತಿದೆ.

ಆ.4 ರಂದು ಕೃಷ್ಣರಾಜಸಾಗರ ಜಲಾಶಯದಲ್ಲಿ 113.30 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಈಗ 98 ಅಡಿಗೆ ಕುಸಿದಿದೆ. ತಿಂಗಳಲ್ಲೇ 15 ಅಡಿಗಳಷ್ಟು ನೀರು ಕಡಿಮೆಯಾಗಿದೆ. ಮುಂದೆಯೂ ನೀರು ಹರಿಸುವುದನ್ನು ಮುಂದುವರೆಸಿದರೆ ಇನ್ನೂ ಏಳೆಂಟು ಅಡಿಗಳಷ್ಟು ನೀರು ಖಾಲಿಯಾಗುವ ಸಾಧ್ಯತೆಗಳಿವೆ. ಆಗ ಜಲಾಶಯದ ನೀರಿನ ಮಟ್ಟ 90 ಅಡಿಗೆ ಕುಸಿಯುವ ಸಂಭವವಿದೆ.

ಕೇರಳ, ಕೊಡಗು ಸೇರಿದಂತೆ ಕಾವೇರಿ ಕಣಿವೆ ಪ್ರದೇಶದ ಯಾವುದೇ ಭಾಗದಲ್ಲೂ ಮಳೆಯಾಗುತ್ತಿಲ್ಲ. ಒಳಹರಿವು ಕ್ಷೀಣಿಸಿದೆ. ಕೆಆರ್‌ಎಸ್ ಜಲಾಶಯಕ್ಕೆ 2432 ಕ್ಯುಸೆಕ್ ನೀರು ಮಾತ್ರ ಹರಿದುಬರುತ್ತಿದೆ. ಅಣೆಕಟ್ಟೆಯಿಂದ 6344  ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ನೀರನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದು, ತಮಿಳುನಾಡಿಗೆ ಸೀಮಿತವಾಗಿ ನೀರನ್ನು ಹರಿಸಲಾಗುತ್ತಿದೆ.

ಅರೆ ಖುಷ್ಕಿ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಕರೆ ಕೊಟ್ಟಿದ್ದ ಸರ್ಕಾರಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಆ ಬೆಳೆಗಳಿಗೂ ನೀರು ಹರಿಸಲಾಗದಷ್ಟು ದುಸ್ಥಿತಿಯಲ್ಲಿದೆ. ಕುಡಿಯುವ ನೀರಿಗೆ ಸಾಕಾಗುವಷ್ಟು ನೀರನ್ನು ಉಳಿಸಿಕೊಳ್ಳುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಮತ್ತೆ ಸುಪ್ರೀಂ ಕೋರ್ಟ್‌ನಿಂದ ನೀರು ಹರಿಸುವ ಆದೇಶ ಹೊರಬಿದ್ದರೆ ಜಲಾಶಯವೇ ಖಾಲಿಯಾಗುವ ಅಪಾಯವೂ ಎಲ್ಲರ ಮುಂದಿದೆ.

2016ರ ಸಂಕಷ್ಟ ಪರಿಸ್ಥಿತಿ

2016ರ ಸೆಪ್ಟೆಂಬರ್ 4 ರಂದು ಕರ್ನಾಟಕದ ಕಾವೇರಿ ಜಲಾಶಯಗಳಿಂದ ನೀರು ಹರಿಸುವಂತೆ ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಸೆ.6ರಿಂದ 10 ದಿನಗಳವರೆಗೆ ನಿತ್ಯ ೧೫ ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚಿಸಿತ್ತು. ಆ ಸಮಯದಲ್ಲಿ ಜಲಾಶಯದ ನೀರಿನ ಮಟ್ಟ 97.45 ಅಡಿ ಇತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ ಮಧ್ಯಂತರ ಅರ್ಜಿ ತಿರಸ್ಕರಿಸಿದ್ದ ನ್ಯಾಯಾಲಯ ಸೆ.12ರಂದು ನಿತ್ಯ 12 ಸಾವಿರ ಕ್ಯುಸೆಕ್ ನೀರನ್ನು ಸೆ.20ರವರೆಗೆ ಬಿಡಲು ಆದೇಶಿಸಿತ್ತು. ಈ ವರ್ಷ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಲು ಅನುಸರಿಸುತ್ತಿರುವ ವಿಳಂಬ ಧೋರಣೆ ರೈತರ ತಾಳ್ಮೆಯನ್ನು ಪರೀಕ್ಷಿಸುತ್ತಿರುವಂತಿದೆ.

ಮುಂದಿನ ನಡೆ ಬಗ್ಗೆ ಶೀಘ್ರ ನಿರ್ಧಾರ: ಚಲುವರಾಯಸ್ವಾಮಿ

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಚಾರಣೆ ಮೂಂದೂಡಿರುವ ಹಿನ್ನೆಲೆ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ಸಂಕಷ್ಟ ಪರಿಸ್ಥಿತಿಯಲ್ಲಿರುವ ರೈತರ ಹಿತ ಕಾಪಾಡುವುದು ಹಾಗೂ ಮುಂದಿನ ಕಾನೂನಾತ್ಮಕ ನಡೆಗಳ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳುವುದಾಗಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಕಾವೇರಿ ನೀರು ಹೋರಾಟ: ಬೆಂಗಳೂರು, ಮೈಸೂರು ಜನರು ನೀರಿಲ್ಲದೇ ಪೇಪರ್‌ ಬಳಸುವ ಸ್ಥಿತಿ ಬರುತ್ತದೆ

ಇಂದು ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ಪರ ಆದೇಶ ಬರುವ ಆಶಾ ಭಾವನೆ ಇತ್ತು. ಆದರೆ, ನ್ಯಾಯಾಲಯ ವಿಚಾರಣೆಯನ್ನು ಸೆ.21 ಕ್ಕೆ ಮುಂದೂಡಿದ್ದು ಅಲ್ಲಿಯವರೆಗೂ ತಮಿಳುನಾಡಿಗೆ ನೀರು ಹರಿಸುವುದು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರು ಪ್ರಾಧಿಕಾರದ ಮುಂದೆ ರಾಜ್ಯದ ಸಂಕಷ್ಟ ಪರಿಸ್ಥಿತಿ ವಿವರಿಸುವ ಪ್ರಯತ್ನವನ್ನು ಮತ್ತೆ ನಮ್ಮ ರಾಜ್ಯದ ಪರ ವಕೀಲರ ಮೂಲಕ ಮುಂದುವರೆಸುವುದಾಗಿ ಸುದ್ದಿಗಾರರಿಗೆ ತಿಳಿಸಿದರು.

ಕೆಆರ್‌ಎಸ್ ಅಣೆಕಟ್ಟೆನಲ್ಲಿ ಸದ್ಯ ಸಂಗ್ರಹವಾಗಿರುವ ನೀರು ಕುಡಿಯೋದಕ್ಕೆ ಮಾತ್ರ ಲಭ್ಯವಾಗುವಷ್ಟಿದೆ. ರೈತರ ಬೆಳೆಗಳಿಗೂ ನೀರು ಬಿಡದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗದ ಪರಿಸ್ಥಿತಿಗೆ ರಾಜ್ಯ ತಲುಪಿದೆ. ಈ ಬಗ್ಗೆ ಪ್ರಾಧಿಕಾರದ ಗಮನ ಸೆಳೆಯಲು ಪ್ರಯತ್ನಿಸುವುದಾಗಿ ಹೇಳಿದರು.

Follow Us:
Download App:
  • android
  • ios