Latest Videos

ಹೊರಟ್ಟಿ ವಿರುದ್ಧದ ಜಾತಿ ನಿಂದನೆ ಕೇಸ್‌ ತನಿಖೆ ವರದಿ ಹೈಕೋರ್ಟ್‌ಗೆ

By Govindaraj SFirst Published Jun 28, 2022, 5:00 AM IST
Highlights

ವಿಧಾನ ಪರಿಷತ್‌ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ದಾಖಲಾಗಿರುವ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ಸೋಮವಾರ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ.

ಬೆಂಗಳೂರು (ಜೂ.28): ವಿಧಾನ ಪರಿಷತ್‌ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ದಾಖಲಾಗಿರುವ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ಸೋಮವಾರ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ. ಪ್ರಕರಣದ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಬಸವರಾಜ ಹೊರಟ್ಟಿ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರಿದ್ದ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರಿ ವಕೀಲರು ಹಾಜರಾಗಿ, ಧಾರವಾಡ ಗ್ರಾಮೀಣಾ ಠಾಣಾ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ತನಿಖಾ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. 

ಈ ವರದಿ ದಾಖಲಿಸಿಕೊಂಡು ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದ ನ್ಯಾಯಪೀಠ, ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧದ ವಿಚಾರಣೆ/ತನಿಖೆಗೆ ನೀಡಲಾಗಿರುವ ಮಧ್ಯಂತರ ತಡೆಯಾಜ್ಞೆಯನ್ನು ಮುಂದುವರಿಸಿತು. ಪರಿಶಿಷ್ಟಪಂಗಡದ ವಾಲ್ಮೀಕಿ ಜನಾಂಗಕ್ಕೆ ಸೇರಿದ ಮೋಹನ್‌ ಚಂಬಪ್ಪ ಗುಂಡಿಸಲ್ಮಾನಿ 2022ರ ಜ.25ರಂದು ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ನಾನು ಮುಗದಾ ಗ್ರಾಮದ ಸರ್ವೋದಯ ಶಿಕ್ಷಣ ಸಂಸ್ಥೆ ಪ್ರೌಢ ಶಾಲೆಗೆ ಹೋಗಿದ್ದೆ. ಸರ್ವೋದಯ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದಂತೆ ಬಸವರಾಜ ಹೊರಟ್ಟಿಅವರು ಯಾವುದೇ ಅಧಿಕಾರ ಹೊಂದಿಲ್ಲ. 

ಪ್ರಧಾನಿ ಆಗಾಗ ಬೆಂಗ್ಳೂರಿಗೆ ಬಂದರೆ ಅಭಿವೃದ್ಧಿ: ಹೈಕೋರ್ಟ್‌ ಜಡ್ಜ್‌

ಆದ ಕಾರಣ ಸಂಸ್ಥೆಯಲ್ಲಿ ಅಳವಡಿಸಿರುವ ಅವರ ನಾಮಫಲಕ ತೆಗೆಯಬೇಕು ಎಂಬುದಾಗಿ ಶಾಲಾ ಸಿಬ್ಬಂದಿಗೆ ವಿನಂತಿಸಿಕೊಂಡಿದ್ದೆ. ಈ ವೇಳೆ ಮೊದಲ ನಾಲ್ಕು ಆರೋಪಿಗಳಾದ ವೆಂಕಟೇಶ ಲಕ್ಸಾಣಿ, ಚೈತ್ರ ಮೇಟಿ, ನಿರ್ಮಲಾ ಚವ್ಹಾಣ ಮತ್ತು ದೊಡ್ಡಪ್ಪ ಕೆಂಗಪ್ಪ ಅವರು ಸಿಟ್ಟಾಗಿ, ಬಸವರಾಜ ಹೊರಟ್ಟಿ ಅವರ ಪ್ರಚೋದನೆ ಮೇರೆಗೆ ನನ್ನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದಿಸಿದರು. ಕೊಠಡಿಯಲ್ಲಿ ಅಕ್ರಮವಾಗಿ ಕೂಡಿಹಾಕಿ, ನನ್ನ ಕಾರು ಮೇಲೆ ಕಲ್ಲು ತೂರಿ ಹಾನಿಗೊಳಿಸಿದರು ಎಂದು ಆರೋಪಿಸಿದ್ದರು. 

ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಶುದ್ಧಹಸ್ತರು, ಪ್ರಾಮಾಣಿಕರಾಗಿರಬೇಕು: ಹೈಕೋರ್ಟ್

ಇದರಿಂದ ಬಸವರಾಜ ಹೊರಟ್ಟಿ ಹಾಗೂ ಇತರೆ ನಾಲ್ವರ ವಿರುದ್ಧ ಹಲ್ಲೆ, ಉದ್ದೇಶಪೂರ್ವಕ ಅವಮಾನ, ಜೀವ ಬೆದರಿಕೆ, ಅಕ್ರಮವಾಗಿ ಕೂಡಿಹಾಕಿದ ಮತ್ತು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌಜನ್ಯ ತಡೆ) ಕಾಯ್ದೆಯಡಿ ಜಾತಿ ನಿಂದನೆ ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಿಸಿದ್ದರು. ಅದನ್ನು ರದ್ದುಪಡಿಸುವಂತೆ ಕೋರಿ ಪ್ರಕರಣದ ಐದನೇ ಆರೋಪಿಯಾದ ಹೊರಟ್ಟಿಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು 2022ರ ಜ.31ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಬಸವರಾಜ ಹೊರಟ್ಟಿ ಅವರು ಘಟನೆ ನಡೆದ ಸ್ಥಳದಲ್ಲಿ ಇರಲಿಲ್ಲ. ಎಫ್‌ಐಆರ್‌ನಲ್ಲೂ ಅವರ ವಿರುದ್ಧ ಗಂಭೀರ ಆರೋಪಗಳಿಲ್ಲ ಎಂದು ತಿಳಿಸಿ ಅವರ ವಿರುದ್ಧದ ವಿಚಾರಣೆ/ತನಿಖೆಗೆ ಸೀಮಿತವಾಗಿ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿತ್ತು.

click me!