ಅನ್ನಭಾಗ್ಯ ಯೋಜನೆ ಹಣಕ್ಕಾಗಿ ಬ್ಯಾಂಕ್‌ ಖಾತೆ ತೆರೆಯಲು ಶಿಬಿರ ಆಯೋಜನೆ

By Sathish Kumar KH  |  First Published Jul 15, 2023, 8:33 PM IST

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರಿಗೆ ಬ್ಯಾಂಕ್‌ ಖಾತೆ ತೆರೆಯಲು ಇಂಡಿಯನ್‌ ಪೋಸ್ಟಲ್ ಪೇಮೆಂಟ್‌ ಬ್ಯಾಂಕ್‌ನಿಂದ ಶಿಬಿರ ಆಯೋಜನೆ ಮಾಡಲಾಗುತ್ತಿದೆ.


ಉಡುಪಿ (ಜು.15): ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಎಲ್ಲ ಪಡಿತರ ಕುಟುಂಬಗಳಿಗೆ ತಲಾ 5 ಕೆ.ಜಿ. ಅಕ್ಕಿ ಹಾಗೂ ಉಳಿದ 5 ಕೆಜಿ. ಅಕ್ಕಿಯ ಬದಲಾಗಿ 170 ರೂ. ಹಣವನ್ನು ಬ್ಯಾಂಕ್‌ ಖಾತೆಗೆ ಸರ್ಕಾರವೇ ನೇರವಾಗಿ ವರ್ಗಾವಣೆ ಮಾಡುತ್ತಿದೆ. ಎಲ್ಲ ಪಡಿತರ ಚೀಟಿದಾರರು ಬ್ಯಾಂಕ್‌ ಖಾತೆ ಹೊಂದುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತದಿಂದ ಬ್ಯಾಂಕ್‌ ಖಾತೆ ತೆರೆಯಲು ಶಿಬಿರ ಆಯೋಜನೆ ಮಾಡಲಾಗಿದೆ. 

ರಾಜ್ಯ ಸರ್ಕಾರದ ಆದೇಶದಂತೆ ಅಂತ್ಯೋದಯ(ನಾಲ್ಕು ಅಥವಾ ನಾಲ್ಕಕ್ಕಿಂತ  ಹೆಚ್ಚು ಸದಸ್ಯರು) ಹಾಗೂ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿ 5 ಕೆ.ಜಿ ಆಹಾರಧಾನ್ಯವನ್ನು ಸೇರಿಸಿ ಪ್ರತಿ ತಿಂಗಳು ಪ್ರತಿ ಫಲಾನುಭವಿಗೆ ತಲಾ 10 ಕೆಜಿ ಆಹಾರಧಾನ್ಯ ಉಚಿತವಾಗಿ ವಿತರಿಸಲು ಸರ್ಕಾರ ನಿರ್ಧರಿಸಿದೆ.  ಈ ಬಗ್ಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಬಿಡ್‌ದಾರರು ಆಹಾರಧಾನ್ಯವನ್ನು ಸರಬರಾಜು ಮಾಡುವವರೆಗೆ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿಗೆ ರೂ.34/-ರಂತೆ ಪಡಿತರ ಚೀಟಿದಾರರ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ಹಣವನ್ನು ವರ್ಗಾಯಿಸಬೇಕಾಗಿರುತ್ತದೆ. 

Tap to resize

Latest Videos

undefined

5 ಕೆ.ಜಿ. ಅಕ್ಕಿ ಬದಲು 170 ರು. ನಗದು, ಹಣಭಾಗ್ಯಕ್ಕೆ ಇಂದಿನಿಂದ ಚಾಲನೆ

ಪಡಿತರ ಚೀಟಿಯಲ್ಲಿ ಕಡ್ಡಾಯವಾಗಿ ಕುಟುಂಬದ ಮುಖ್ಯಸ್ಥರು ನಮೂದಾಗಿರಬೇಕು. ಕುಟುಂಬದ ಮುಖ್ಯಸ್ಥರು ನಿಧನ ಹೊಂದಿದ್ದಲ್ಲಿ, ಸಂಬಂಧಪಟ್ಟ  ತಾಲೂಕಿನ ಆಹಾರ ಶಾಖೆಗೆ ಭೇಟಿ ನೀಡಿ,  ಆಹಾರ ನಿರೀಕ್ಷಕರಿಗೆ ಈ  ಬಗ್ಗೆ ಮಾಹಿತಿ ನೀಡಿ, ಮೃತರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದು ಹಾಕಿ, ಇ-ಕೆವೈಸಿ  ಮೂಲಕ ಕುಟುಂಬದ ಮುಖ್ಯಸ್ಥರನ್ನು ನಮೂದು ಮಾಡಿಕೊಳ್ಳಬೇಕು. ಒಂದಕ್ಕಿಂತ ಹೆಚ್ಚು ಕುಟುಂಬದ ಮುಖ್ಯಸ್ಥರು ನಮೂದಾಗಿದ್ದಲ್ಲಿ ಅಂತಹವರಿಗೆ ನಗದು ವರ್ಗಾವಣೆಗೆ ಅವಕಾಶವಿರುವುದಿಲ್ಲ.

  • ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್  ವತಿಯಿಂದ ತಾಲೂಕುವಾರು ಶಿಬಿರ ಆಯೋಜನೆ: 
  • ಉಡುಪಿ ತಾಲೂಕಿನಲ್ಲಿ ಜುಲೈ 14 ರಂದು ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಕಚೇರಿ, ಜು. 18 ರಂದು ಉದ್ಯಾವರ ಗ್ರಾಮ ಪಂಚಾಯತ್ ಕಚೇರಿ, ಜು. 19 ರಂದು ಉಡುಪಿ ತಾಲೂಕು ಕಚೇರಿಯ ಆಹಾರ ಶಾಖೆ, ಜು. 20 ರಂದು ಕಲ್ಯಾಣಪುರ ಗ್ರಾಮ ಪಂಚಾಯತ್ ಕಚೇರಿ ಹಾಗೂ ಮಲ್ಪೆ ಅಂಚೆ ಕಚೇರಿಯಲ್ಲಿ ಶಿಬಿರ ಆಯೋಜಿಸಲಾಗುವುದು. 
  • ಕಾಪು ತಾಲೂಕಿಗೆ ಸಂಬಂಧಿಸಿದಂತೆ ಜು. 15 ರಂದು ಕಾಪು ಅಂಚೆ ಕಚೇರಿ, ಜು. 17 ರಂದು ಕಟಪಾಡಿ ಗ್ರಾಮ ಪಂಚಾಯತ್, ಜು. 20 ರಂದು ಶಿರ್ವ ಅಂಚೆ ಕಚೇರಿ ಹಾಗೂ ಪಡುಬಿದ್ರೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಶಿಬಿರ ಆಯೋಜಿಸಲಾಗುವುದು. 
  • ಬ್ರಹ್ಮಾವರ ತಾಲೂಕಿನಲ್ಲಿ ಜು. 14 ರಂದು ಮಂದಾರ್ತಿ ಅಂಚೆ ಕಚೇರಿ, ಜು. 17 ರಂದು ಬ್ರಹ್ಮಾವರ ಅಂಚೆ ಕಚೇರಿ ಹಾಗೂ ಜು. 18 ರಂದು ಕೋಟಾ ಅಂಚೆ ಕಚೇರಿಯಲ್ಲಿ ಶಿಬಿರ ನಡೆಯಲಿದೆ.
  • ಕುಂದಾಪುರ ತಾಲೂಕಿನಲ್ಲಿ ಜು. 15 ರಂದು ಸಿದ್ಧಾಪುರ ಗ್ರಾಮ ಪಂಚಾಯತ್, ಜು. 19 ರಂದು ಹಾಲಾಡಿ ಗ್ರಾಮ ಪಂಚಾಯತ್ ಕಚೇರಿ ಹಾಗೂ ಜು. 20 ರಂದು ವಂಡ್ಸೆ ಅಂಚೆ ಕಚೇರಿಯಲ್ಲಿ ಶಿಬಿರ ನಡೆಯಲಿದೆ.
  • ಬೈಂದೂರು ತಾಲೂಕಿನಲ್ಲಿ ಜು. 15 ರಂದು ಹಳ್ಳಿಹೊಳೆ ಗ್ರಾಮ ಪಂಚಾಯತ್, ಜು. 17 ರಂದು ಬೈಂದೂರು ತಾಲೂಕು ಕಚೇರಿ ಆಹಾರ ಶಾಖೆ, ಜು. 20 ರಂದು ಕೊಲ್ಲೂರು ಗ್ರಾಮ ಪಂಚಾಯತ್ ಕಚೇರಿ ಹಾಗೂ ಮರವಂತೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಶಿಬಿರ ಏರ್ಪಡಿಸಲಾಗುವುದು.   
  • ಕಾರ್ಕಳ ತಾಲೂಕಿನಲ್ಲಿ ಜು. 17 ರಂದು ಕಾರ್ಕಳ ತಾಲೂಕು ಕಚೇರಿ, ನಲ್ಲೂರು ಗ್ರಾಮ ಪಂಚಾಯತ್ ಹಾಗೂ ಬೆಳ್ಮಣ್ ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಜು. 18 ರಂದು ಅಜೆಕಾರು ನಾಡ ಕಚೇರಿ, ಮಾಳ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಹಾಗೂ ಈದು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಶಿಬಿರ ನಡೆಯಲಿದೆ.

ನೀಟ್‌ ಪಾಸಾದವರು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಜು.21 ಕೊನೆ ದಿನ: ಇಂದೇ ಅರ್ಜಿ ಸಲ್ಲಿಸಿ

ಹೆಬ್ರಿ ತಾಲೂಕಿನಲ್ಲಿ ಜು. 15 ರಂದು ಹೆಬ್ರಿ ತಾಲೂಕು ಕಚೇರಿ, ಬೆಳ್ವೆ ಅಂಚೆ ಕಚೇರಿ ಹಾಗೂ ಮುದ್ರಾಡಿ ಅಂಚೆ ಕಚೇರಿಗಳಲ್ಲಿ ಶಿಬಿರ ಏರ್ಪಡಿಸಲಾಗುವುದು. 
ಹೆಚ್ಚಿನ  ಮಾಹಿತಿಗಾಗಿ  ಸಂಬಂಧಪಟ್ಟ  ತಾಲೂಕು ಆಹಾರ  ಶಾಖೆಯನ್ನು ಸಂಪರ್ಕಿಸುವಂತೆ ಹಾಗೂ ಸಾರ್ವಜನಿಕರು ಈ ಯೋಜನೆಯ  ಪ್ರಯೋಜನ  ಪಡೆದುಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!