ಅಪಘಾತದಲ್ಲಿ ಸಾವನ್ನಪ್ಪಿದ ಕೆಎಸ್‌ಆರ್‌ಟಿಸಿ ಚಾಲನಾ ಸಿಬ್ಬಂದಿಯ ಅವಲಂಬಿತ ಕುಟುಂಬರಿಗೆ ಸಚಿವ ರಾಮಲಿಂಗಾರೆಡ್ಡಿ 1 ಕೋಟಿ ರೂ. ವಿಮಾ ಪರಿಹಾರದ ಚೆಕ್ ವಿತರಿಸಿದರು.
ಬೆಂಗಳೂರು (ಜು.15): ಅಪಘಾತದಲ್ಲಿ ಮೃತಪಟ್ಟ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಚಾಲನಾ ಸಿಬ್ಬಂದಿಗಳಾದ ಜಿ.ವಿ.ಚಲಪತಿ ಹಾಗೂ ಪಿ.ಎನ್. ನಾಗರಾಜು ಅವರ ಕುಟುಂಬದ ಅವಲಂಬಿತರಿಗೆ ಶನಿವಾರ ಕೆ.ಎಸ್.ಆರ್.ಟಿ.ಸಿ ಕೇಂದ್ರ ಕಛೇರಿಯಲ್ಲಿ ತಲಾ ರೂ.1 ಕೋಟಿ ಅಪಘಾತ ಪರಿಹಾರ ಚೆಕ್ ವಿತರಣೆಯನ್ನು ಮಾಡಲಾಯಿತು.
ಕೆ.ಎಸ್.ಆರ್.ಟಿ.ಸಿ ಯು ದೇಶದಲ್ಲಿಯೇ ಪ್ರಪ್ರಥಮವಾಗಿ ಕಾರ್ಮಿಕ ಕಲ್ಯಾಣದ ವಿನೂತನ ಯೋಜನೆ ಅಡಿಯಲ್ಲಿ ತನ್ನ ಸಿಬ್ಬಂದಿಗಳಿಗೆ ರೂ.1 ಕೋಟಿ ಮೊತ್ತದ ಅಪಘಾತ ವಿಮೆಯನ್ನು ( On duty & Off Duty ಅಪಘಾತ) ಜಾರಿಗೊಳಿಸಿದೆ. ಈ ಯೋಜನೆಯಲ್ಲಿ, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ವತಿಯಿಂದ ಪ್ರೀಮಿಯಂ ರಹಿತ ರೂ 50 ಲಕ್ಷಗಳ ವಿಮೆ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ರವರಿಂದ ವಾರ್ಷಿಕ ರೂ.885/- ಪ್ರೀಮಿಯಂ (ನೌಕರರಿಂದ) ಪಾವತಿಯ ಮೇರೆಗೆ ರೂ.50 ಲಕ್ಷಗಳ ವಿಮೆಯು ಒಳಗೊಂಡಿರುತ್ತದೆ.
ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆಯಿತ್ತ ಸಾರಿಗೆ ಸಚಿವ: ಮೃತಪಟ್ಟ ಚಾಲನಾ ಸಿಬ್ಬಂದಿಗಳನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ, ಅವರ ಕುಟುಂಬಗಳ ಸುಭದ್ರತೆಗಾಗಿ ನಿಗಮವು ಜಾರಿಗೊಳಿಸಿರುವ ಈ ಅಪಘಾತ ಪರಿಹಾರ ವಿಮಾ ಯೋಜನೆಯು ಬಹಳ ಉತ್ತಮವಾಗಿದ್ದು, ಈ ಯೋಜನೆಯನ್ನು ಸದ್ಯದಲ್ಲಿಯೇ ಇತರೆ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಜಾರಿಗೊಳಿಸಲು ಕೂಡಲೇ ಕ್ರಮ ಜರುಗಿಸಲು ಸೂಚಿಸಲಾಗುವುದು. ಕುಟುಂಬದವರು ಹಣವನ್ನು ಬ್ಯಾಂಕಿನಲ್ಲಿ ಸ್ಥಿರ ಠೇವಣಿಯನ್ನು ಇಟ್ಟು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ತಮ್ಮ ಮುಂದಿನ ಜೀವನಕ್ಕಾಗಿ ಕಾಪಾಡಿಕೊಳ್ಳಬೇಕು. ಅನುಕಂಪ ಆಧಾರದ ಮೇಲಿನ ಕೆಲಸಕ್ಕೆ ಅರ್ಜಿ ಸಲ್ಲಿಸಲು ತಿಳಿಸಿದರು. ನಿಗಮದ ಸಿಬ್ಬಂದಿಗಳ ಹಾಗೂ ಕುಟುಂಬದವರ ಹಿತಾಸಕ್ತಿ ಕಾಪಾಡಲು ನಾವು ನಿಮ್ಮೊಡನೆ ಸದಾ ಇರುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.
14 ವರ್ಷಸೇವೆ ಸಲ್ಲಿಸಿದ್ದ ಚಾಲಕ ನಾಗರಾಜು: ಪಿ.ಎನ್. ನಾಗರಾಜು (52) ವರ್ಷ, ಚಾಲಕ-ಕಂ-ನಿರ್ವಾಹಕರು, ಬಿಲ್ಲೆ ಸಂಖ್ಯೆ. 1173, ಘಟಕ-2, ಹಾಸನ ವಿಭಾಗ ರವರು ನಿಗಮದಲ್ಲಿ 17 ವರ್ಷಗಳ ಸೇವೆ ಸಲ್ಲಿಸಿರುತ್ತಾರೆ. ಫೆಬ್ರವರಿ 1ರಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕಾರು ಡಿಕ್ಕಿಮಾಡಿದ ಪರಿಣಾಮ ಅಪಘಾತದಲ್ಲಿ ಮರಣ ಹೊಂದಿರುತ್ತಾರೆ. ಇವರು ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುತ್ತಾರೆ. ವಿಮಾ ಪರಿಹಾರ ರೂ.1 ಕೋಟಿ ಹೊರತುಪಡಿಸಿ, ನಿಗಮದ ವತಿಯಿಂದ ರೂ.21.94 ಲಕ್ಷ ಪರಿಹಾರಕ್ಕೆ ಅರ್ಹರಿದ್ದು, ಈ ಪೈಕಿ ರೂ.16.19 ಲಕ್ಷ ಪರಿಹಾರ ಈಗಾಗಲೇ ವಿತರಿಸಲಾಗಿದೆ. ಬಾಕಿ ಮೊತ್ತ ರೂ. 5.75 ಲಕ್ಷ ಮೃತರ ಅವಲಂಬಿತರು ಸೂಕ್ತ ದಾಖಲಾತಿ ಸಲ್ಲಿಸಿದೊಡನೆ ಭವಿಷ್ಯ ನಿಧಿ ಇಲಾಖೆಯಿಂದ ಶೀಘ್ರದಲ್ಲಿಯೇ ಪಾವತಿಯಾಗಲಿದೆ.
11 ವರ್ಷ ಸೇವೆ ಸಲ್ಲಿಸಿದ್ದ ಜಿ.ವಿ. ಚಲಪತಿ: ದೊಡ್ಡ ಮೊತ್ತದ ವಿಮೆ ಯೋಜನೆಯ ಜಾರಿಯ ನಂತರದಲ್ಲಿ ಕೆ.ಎಸ್.ಆರ್.ಟಿ.ಸಿ. ಯ ಚಾಲನಾ ಸಿಬ್ಬಂದಿ ಜಿ.ವಿ.ಚಲಪತಿ (41) ಚಾಲಕ-ಕಂ-ನಿರ್ವಾಹಕರು, ಬಿಲ್ಲೆ ಸಂಖ್ಯೆ 7275, ಘಟಕ-6, ಬೆಂಗಳೂರು ಕೇಂದ್ರೀಯ ವಿಭಾಗರವರು ನಿಗಮದಲ್ಲಿ 11 ವರ್ಷಗಳ ಸೇವೆ ಸಲ್ಲಿಸಿರುತ್ತಾರೆ. ಆದರೆ, ಜನವರಿ 20ರಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಫಘಾತ ಸಂಭವಿಸಿ ಮೃತಪಟ್ಟಿರುತ್ತಾರೆ. ಇವರು ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುತ್ತಾರೆ. ವಿಮಾ ಪರಿಹಾರ ರೂ.1 ಕೋಟಿ ಹೊರತುಪಡಿಸಿ, ನಿಗಮದ ವತಿಯಿಂದ ರೂ.17.21 ಲಕ್ಷ ಪರಿಹಾರಕ್ಕೆ ಅರ್ಹರಿದ್ದು, ಈ ಪೈಕಿ ರೂ.12.71 ಲಕ್ಷ ಪರಿಹಾರ ಈಗಾಗಲೇ ವಿತರಿಸಲಾಗಿದೆ. ಬಾಕಿ ಮೊತ್ತ ರೂ. 4.50 ಲಕ್ಷವನ್ನು ಮೃತ ಅವಲಂಬಿತರು ಸೂಕ್ತ ದಾಖಲಾತಿ ಸಲ್ಲಿಸಿದೊಡನೆ ಭವಿಷ್ಯ ನಿಧಿ ಇಲಾಖೆಯಿಂದ ಶೀಘ್ರದಲ್ಲಿ ಪಾವತಿಯಾಗಲಿದೆ.
ಪಕ್ಕದ್ಮನೆ ಹುಡುಗನಿಂದ ಲವ್, ಸೆಕ್ಸ್ ಔರ್ ದೋಖಾ..: ಮೋಸ ಹೋದ ಹುಡುಗಿಯಿಂದ ದೂರು
ಈ ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ಎಂಡಿ ವಿ. ಅನ್ಬುಕುಮಾರ್, ಎಸ್ ಬಿ.ಐ ಬ್ಯಾಂಕಿನ ವ್ಯವಸ್ಥಾಪಕ ಹೆಚ್.ವಿ. ಅನಂತ ಸುಬ್ಬರಾವ್, ಇತರೆ ಅಧಿಕಾರಿಗಳಾದ ಬಿ. ಜಯದೇವರಾಜೇ ಅರಸು, ಜಿ.ಎಸ್. ಮಹದೇವಯ್ಯ, ಹೆಚ್.ಡಿ. ರೇವಪ್ಪ, ಎಸ್. ನಾಗರಾಜ, ವೆಂಕಟರಮಣಪ್ಪ ಮತ್ತು ನಿಗಮದ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿದ್ದರು.