ಬಜೆಟ್ ನಿರಾಶಾದಾಯಕ, ಮಧ್ಯಮ ವರ್ಗಕ್ಕೆ ಕಣ್ಣೊರೆಸುವ ತಂತ್ರ: ಎಂಬಿ ಪಾಟೀಲ

Published : Feb 01, 2025, 05:37 PM IST
ಬಜೆಟ್ ನಿರಾಶಾದಾಯಕ, ಮಧ್ಯಮ ವರ್ಗಕ್ಕೆ ಕಣ್ಣೊರೆಸುವ ತಂತ್ರ: ಎಂಬಿ ಪಾಟೀಲ

ಸಾರಾಂಶ

ಕೇಂದ್ರ ಸರ್ಕಾರದ ಬಜೆಟ್ ಮಧ್ಯಮ ವರ್ಗದ ತೆರಿಗೆದಾರರಿಗೆ ಕಣ್ಣೊರೆಸುವ ತಂತ್ರವಾಗಿದ್ದು, ಜಿಡಿಪಿ ಬೆಳವಣಿಗೆಗೆ ಯಾವುದೇ ಕ್ರಮಗಳಿಲ್ಲ ಎಂದು ಎಂ.ಬಿ. ಪಾಟೀಲ ಟೀಕಿಸಿದ್ದಾರೆ. ಬಂಡವಾಳ ವೆಚ್ಚದಲ್ಲಿ ಹೆಚ್ಚಳವಿಲ್ಲದಿರುವುದು ಮತ್ತು ಕರ್ನಾಟಕಕ್ಕೆ ನಿರ್ದಿಷ್ಟ ಉಪಕ್ರಮಗಳ ಕೊರತೆಯನ್ನು ಅವರು ಟೀಕಿಸಿದ್ದಾರೆ.

ಬೆಂಗಳೂರು (ಫೆ.01): ಕೇಂದ್ರ ಸರಕಾರದ ಬಜೆಟ್ ತೀರಾ ನಿರಾಶಾದಾಯಕವಾಗಿದೆ. ಮಧ್ಯಮ ವರ್ಗದ ಆದಾಯ ತೆರಿಗೆದಾರರಿಗೆ ಭಾರೀ ಲಾಭ ತಂದುಕೊಡುವಂತೆ ಕಣ್ಣೊರೆಸುವ ತಂತ್ರಗಳನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಜಿಡಿಪಿ ಬೆಳವಣಿಗೆ ಹೆಚ್ಚಿಸುವಂತಹ ಯಾವ ಅಂಶವೂ ಬಜೆಟ್ಟಿನಲ್ಲಿ ಇಲ್ಲದಿರುವುದು ಕಳವಳಕಾರಿ ಅಂಶವಾಗಿದೆ. ಬಂಡವಾಳ ವೆಚ್ಚದಲ್ಲಿ ಗಣನೀಯ ಏರಿಕೆ ಮಾಡದೆ ಇರುವುದು ಚಿಂತಿಸುವಂತಹ ವಿಷಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.

ಕೇಂದ್ರ ಸರಕಾರವು ಶನಿವಾರ ಮಂಡಿಸಿದ ಬಜೆಟ್ ಬಗ್ಗೆ ಮಾತನಾಡಿರುವ ಅವರು, 'ಮುಖ್ಯವಾಗಿ ಮಧ್ಯಮ ವರ್ಗದ ಆದಾಯ ತೆರಿಗೆದಾರರಿಗೆ ನಿರಾಳತೆ ತಂದುಕೊಡುತ್ತಿರುವಂತೆ ಈ ಬಜೆಟ್ ಭಾಸವಾಗುತ್ತಿದೆ. ಆದರೆ, ವಾಸ್ತವದಲ್ಲಿ ಹಾಗಿಲ್ಲ. 12 ಲಕ್ಷ ರೂಪಾಯಿ ವರೆಗೆ ತೆರಿಗೆ ವಿನಾಯಿತಿ ಅಂದಿದ್ದಾರೆ. ಆದರೆ ಅದಕ್ಕಿಂತ ಒಂದು ರೂಪಾಯಿ ಹೆಚ್ಚಿನ ಆದಾಯ ಬಂದರೂ ಈ ವಿನಾಯಿತಿ ಸಿಗುವುದಿಲ್ಲ. ಬದಲಿಗೆ ಶೇ.20ಕ್ಕೂ ಹೆಚ್ಚು ತೆರಿಗೆ ವಿಧಿಸುತ್ತಾರೆ. ಇದರ ಬದಲು ತೆರಿಗೆದಾರರಿಗೆ ನೇರವಾಗಿ ಮತ್ತು ಸುಲಭವಾಗಿ ಪ್ರಯೋಜನ ಸಿಗುವಂತೆ ನೋಡಿಕೊಳ್ಳಬೇಕಾಗಿತ್ತು. ಸಮಾಜದ ಈ ನಿರೀಕ್ಷೆಗೆ ಸ್ಪಂದಿಸಲು ನರೇಂದ್ರ ಮೋದಿ ಸರಕಾರ ವಿಫಲವಾಗಿದೆ. ಇದರ ಬಿಸಿ ಮುಂದಿನ ದಿನಗಳಲ್ಲಿ ಜನರಿಗೆ ಗೊತ್ತಾಗಲಿದೆ' ಎಂದಿದ್ದಾರೆ.

ಬಂಡವಾಳ ವೆಚ್ಚವನ್ನು ಬಹುಮಟ್ಟಿಗೆ ಯಥಾಸ್ಥಿತಿಯಲ್ಲೇ ಉಳಿಸಿಕೊಂಡಿರುವುದು ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಇದರಿಂದ ಅಭಿವೃದ್ಧಿಯ ವೇಗ ಕುಂಠಿತವಾಗುತ್ತದೆ. ನೆರೆಯ ಚೀನಾ ಒಡ್ಡುತ್ತಿರುವ ಸ್ಪರ್ಧೆಯನ್ನು ಎದುರಿಸಬೇಕೆಂದರೆ ನಮ್ಮಲ್ಲಿ ಬಂಡವಾಳ ವೆಚ್ಚವನ್ನು ಹೆಚ್ಚಿಸುವ ಕ್ರಮ ಬೇಕಾಗಿತ್ತು. ಆದರೆ ಬಜೆಟ್ಟಿನಲ್ಲಿ ಆ ಪ್ರಸ್ತಾಪವೇ ಇಲ್ಲದಿರುವುದು ದುರದೃಷ್ಟಕರ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಬಿಹಾರಗೆ ಬಜೆಟ್‌ನಲ್ಲಿ ಬಂಪರ್: ಇಂಟರ್‌ನೆಟ್‌ನಲ್ಲಿ ನಿರ್ಮಲಕ್ಕ, ನಿತೀಶ್‌ ಮೀಮ್ಸ್‌ ವೈರಲ್

ಕೈಗಾರಿಕಾ ಬೆಳವಣಿಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ಅವಶ್ಯಕತೆ ಇತ್ತು. ಅದರಲ್ಲೂ ದೇಶದ ಐಟಿ, ಬಿಟಿ, ಸ್ಟಾರ್ಟಪ್ ರಾಜಧಾನಿಯಾಗಿರುವ ಕರ್ನಾಟಕಕ್ಕೆ ಮೋದಿ ಸರಕಾರ ನಿರ್ದಿಷ್ಟವಾಗಿ ಯಾವ ಉಪಯುಕ್ತ ಉಪಕ್ರಮವನ್ನೂ ಘೋಷಿಸಿಲ್ಲ. ದೇಶದ ಒಟ್ಟಾರೆ ರಫ್ತು ವಹಿವಾಟಿನಲ್ಲಿ ರಾಜ್ಯದ ಪಾಲು ಅಧಿಕವಾಗಿದೆ. ಆದ್ದರಿಂದ ನಮಗೆ ಏನನ್ನಾದರೂ ಹೆಚ್ಚಿನದನ್ನು ಕೊಡಬೇಕಿತ್ತು. ಬಿಹಾರದಂತಹ ರಾಜ್ಯಕ್ಕೆ ಚುನಾವಣೆ ಮೇಲೆ ಕಣ್ಣಿಟ್ಟುಕೊಂಡು ಯೋಜನೆ ಘೋಷಿಸುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಬಜೆಟ್‌ನಿಂದ ಯಾವುದೇ ಲಾಭ ಇಲ್ಲ, ಸಾಲಗಾರರನ್ನಾಗಿ ಮಾಡಿದೆ: ರಾಮಲಿಂಗ ರೆಡ್ಡಿ

ದೇಶವನ್ನು 5 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆಯನ್ನಾಗಿ ಮಾಡಲು ಚಾರಿತ್ರಿಕ ಕ್ರಮಗಳ ಅನಿವಾರ್ಯತೆ ಇದೆ. ಅದಕ್ಕೆ ಬೇಕಾದ ಧೈರ್ಯವನ್ನು ಪ್ರದರ್ಶಿಸುವಲ್ಲಿ ಈ ಬಜೆಟ್ ಸೋತಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಈ ಬಾರಿಯಾದರೂ ಉತ್ತರ ಕರ್ನಾಟಕಕ್ಕೆ ಅಖಿಲ ಭಾರತ ವೈದ್ಯಕೀಯ ಸಂಸ್ಥೆ  (ಏಮ್ಸ್) ಮಂಜೂರು ಮಾಡುತ್ತಾರೆ ಎನ್ನುವ ನಿರೀಕ್ಷೆ ಕೂಡ ಹುಸಿಯಾಗಿದೆ. ಒಟ್ಟಿನಲ್ಲಿ ಇದು ಜನವಿರೋಧಿ ಬಜೆಟ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು  ಪಾಟೀಲ ಟೀಕಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌