ನಟ ಪ್ರಕಾಶ್ ರಾಜ್ ಅವರು ಪ್ರಶಾಂತ್ ಸಂಬರಗಿ ವಿರುದ್ಧ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೃತಕ ಚಿತ್ರ ಹರಿಬಿಟ್ಟು ಅಪಪ್ರಚಾರ ಮಾಡಿದ್ದಕ್ಕೆ ಪ್ರತಿಕ್ರಿಯಿಸಿ, ಈ ಹಿಂದೆಯೂ ಸಂಬರಗಿ ಯುವತಿಯರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು (ಫೆ.1): ನನಗೆ ಈ ಸಂಬರಗಿ ಯಾರೂ ಅಂತಾನೇ ಗೊತ್ತಿಲ್ಲ. ಈ ಹಿಂದೆ ಅವನು ಯುವತಿಯರಿಗೆ ತೊಂದರೆ ಕೊಟ್ಟಿದ್ದ. ಈ ಮನುಷ್ಯನಿಗೆ ಒಂದು ಪಾಠ ಕಲಿಸಬೇಕಿದೆ ಎಂದು ಪ್ರಶಾಂತ್ ಸಂಬರಗಿ ವಿರುದ್ಧ ನಟ ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ.
ಕೃತಕ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಅಪಪ್ರಚಾರ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, ಇದೇ ಮೊದಲಲ್ಲ, ಹಿಂದೆ ತಪ್ಪು ಪ್ರಚಾರ ಮಾಡಿ ನಟಿಯರಿಗೆ ತೊಂದರೆ ಕೊಟ್ಟಿದ್ದಾನೆ. ಅನುಮತಿ ಇಲ್ಲದೆ ಯಾರ ಫೋಟೊಗಳನ್ನ ಬಳಸಬಾರದು. ಇದೊಂದು ಅಕ್ಷಮ್ಯ ಅಪರಾಧ. ನ್ಯಾಯದ ಬಗ್ಗೆ ಗಂಭೀರವಾಗಿ ಯೋಚನೆ ಮಾಡುತ್ತಿದ್ದೇನೆ. ಈ ಮನುಷ್ಯನಿಗೆ ಪಾಠ ಕಲಿಸಬೇಕಿದೆ ಎಂದು ಹರಿಹಾಯ್ದರು.
ಕುಂಭಮೇಳ ಪುಣ್ಯ ಸ್ನಾನ ಮಾಡುವುದರಲ್ಲಿ ತಪ್ಪೇನಿದೆ? ಅದು ಅವರ ನಂಬಿಕೆ. ನನಗೆ ದೇವರ ಮೇಲೆ ನಂಬಿಕೆ ಇಲ್ಲ. ನನಗೆ ಮನುಷ್ಯರ ಮೇಲೆ ನಂಬಿಕೆಯಿದೆ. ದೇವರಿಲ್ಲದೆ ಬದುಕಬಹುದು ಆದರೆ ಮನುಷ್ಯರಿಲ್ಲದೆ ಬದುಕಲು ಸಾಧ್ಯವಿಲ್ಲ. ಹಾಗಾಂತ ಅವರ ನಂಬಿಕೆಯನ್ನ ನಾನು ಪ್ರಶ್ನೆ ಮಾಡಲ್ಲ. ಅದನ್ನ ರಾಜಕಾರಣಕ್ಕೆ ಬಳಕೆ ಮಾಡುವುದು ತಪ್ಪು ಎಂದರು.
ಇದನ್ನೂ ಓದಿ: ಪ್ರಕಾಶ್ ರೈ AI ಫೋಟೋ ವಿವಾದ: ಪ್ರಶಾಂತ್ ಸಂಬರ್ಗಿ ವಿರುದ್ಧ FIR, ಲೀಗಲ್ ಆಗಿ ಫೇಸ್ ಮಾಡ್ತೇನೆ ಎಂದ ಸಂಬರ್ಗಿ
ಕಾಂಗ್ರೆಸ್ ಟೀಕೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್, ಅವರವರ ಭಾವಕ್ಕೆ ಅವರವರ ಬಕುತ್ತಿಗೆ ಹೇಳುತ್ತಾ ಹೋಗಲಿ. ನಾನು ಯಾರ ಬಗ್ಗೆಯೂ ಮಾತನಾಡಲ್ಲ.ನಾನು ಯಾವ ನಂಬಿಕೆಯ ಬಗ್ಗೆ ಟೀಕೆ ಮಾಡಲ್ಲ. ನನ್ನ ಹೆಂಡತಿ ಮಗಳು ದೇವಸ್ಥಾನಕ್ಕೆ ಹೋಗಿ ಹೋಮ ಮಾಡುತ್ತಾರೆ. ಆದರೆ ಇಬ್ಬರೂ ಸಾಮರಸ್ಯದಿಂದ ಇದ್ದೇವೆ. ಮೂಡ ನಂಬಿಕೆಯನ್ನ ಮಾತ್ರ ಪ್ರಶ್ನೆ ಮಾಡುತ್ತೇನೆ. ನಾನು ಕ್ರಿಶ್ಚಿಯನ್ ಧರ್ಮಕ್ಕಿಂತ ದೊಡ್ಡ ಮಾಫಿಯಾ ಇನ್ನೊಂದು ಇಲ್ಲ ಎಂದು ಹೇಳಿದ್ದೇನೆ. ಹಾಗೆಯೇ ಮುಸ್ಲಿಮರಲ್ಲಿ ದೊಡ್ಡ ಟೆರೆರಿಸ್ಟ್ ಗಳು ಇದ್ದಾರೆ ಎಂದೂ ಹೇಳಿದ್ದೇನೆ. ಆದರೆ ಅದು ಹೈಲೆಟ್ ಆಗಲ್ಲ. ನಾನು ಯಾವತ್ತಾದರೂ ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ದೀನಾ? ಇವರು ಧರ್ಮ ಧರ್ಮದ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದೇ ಇವರ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.