ಪ್ರತಿಷ್ಠಿತ ಕರ್ನಾಟಕ ವಿವಿಯಲ್ಲಿ ಮಾಟ-ಮಂತ್ರದ ಆಟ!

By Kannadaprabha News  |  First Published Dec 2, 2023, 6:24 AM IST

ಇಲ್ಲಿಯ ಪ್ರತಿಷ್ಠಿತ ವಿದ್ಯಾಕೇಂದ್ರವಾಗಿರುವ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೆಲವರಿಗೆ ಅಜ್ಞಾನದ ಹುಚ್ಚು ಹಿಡಿದಿದೆ. ಅಲ್ಲಿಯ ಪ್ರಾಚೀನ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದಲ್ಲಿ ಮಾಟ-ಮಂತ್ರ ಮಾಡಿ ವಿಶ್ವವಿದ್ಯಾಲಯವನ್ನು ಬೆಚ್ಚಿ ಬೀಳಿಸಿದ್ದಾರೆ.


ಧಾರವಾಡ (ಡಿ.2):  ಇಲ್ಲಿಯ ಪ್ರತಿಷ್ಠಿತ ವಿದ್ಯಾಕೇಂದ್ರವಾಗಿರುವ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೆಲವರಿಗೆ ಅಜ್ಞಾನದ ಹುಚ್ಚು ಹಿಡಿದಿದೆ. ಅಲ್ಲಿಯ ಪ್ರಾಚೀನ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದಲ್ಲಿ ಮಾಟ-ಮಂತ್ರ ಮಾಡಿ ವಿಶ್ವವಿದ್ಯಾಲಯವನ್ನು ಬೆಚ್ಚಿ ಬೀಳಿಸಿದ್ದಾರೆ.

ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರಮಾ ಗುಂಡೂರಾವ್‌ ಅವರಿಗೆ ನೀಡಲಾದ ಕೊಠಡಿಯ ಟೇಬಲ್‌ ಮೇಲೆ ಕಪ್ಪು ಬಣ್ಣದ ಮಾಟದ ಗೊಂಬೆ, ಮೂರು ಲಿಂಬೆ ಹಣ್ಣುಗಳು ಹಾಗೂ ಅರಿಷಿನವನ್ನು ಕಿಟಕಿ ಮೂಲಕ ಎಸೆಯಲಾಗಿದೆ. ಮಾಟದ ಗೊಂಬೆ, ಒಂದು ಲಿಂಬೆಹಣ್ಣು, ಅರಿಷಿನ ಟೇಬಲ್‌ ಮೇಲಿದ್ದರೆ, ಇನ್ನೆರೆಡು ಲಿಂಬೆಹಣ್ಣುಗಳು ನೆಲಕ್ಕೆ ಬಿದ್ದಿವೆ. ತಮ್ಮ ಕೊಠಡಿಗೆ ಕೀಲಿ ಹಾಕಿಕೊಂಡು ರಜೆ ಮೇಲೆ ತೆರಳಿ ಶುಕ್ರವಾರ ವಿಭಾಗಕ್ಕೆ ಮರಳಿದಾಗ ಡಾ. ರಮಾ ಅವರಿಗೆ ಇದನ್ನು ಕಂಡು ಅಚ್ಚರಿಯಾಗಿದೆ.

Latest Videos

undefined

3 ತಿಂಗಳ ವಿವಿಧ ದಿನಗಳಂದು18 ರೈಲುಗಳ ಸಂಚಾರ ರದ್ದು ರದ್ದಾದ ರೈಲುಗಳ ಪಟ್ಟಿ ಇಲ್ಲದೆ!

ಘಟನೆಯನ್ನು ವೀಕ್ಷಿಸಿದಾಗ ಎರಡ್ಮೂರು ದಿನಗಳ ಹಿಂದೆಯೇ ಈ ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿದೆ. ಟೇಬಲ್‌ ಮೇಲೆ ಎಸೆಯಲಾಗಿದ್ದ ಮಾಟದ ಗೊಂಬೆ, ಲಿಂಬೆ ಹಣ್ಣು ನೋಡಿ ಗಾಬರಿ ಮತ್ತು ಭಯದಿಂದ ಹೊರ ನಡೆದ ಡಾ. ರಮಾ ಅವರು ಈ ಕುರಿತು ಕುಲಪತಿಗಳಿಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಸಹಾಯಕ ಆಯುಕ್ತರು ಬಂದು ಪರಿಶೀಲನೆ ಸಹ ನಡೆಸಿದ್ದಾರೆ.

ಯಾರ ಕೃತ್ಯ?

ಕಳೆದ ಹಲವು ತಿಂಗಳುಗಳಿಂದ ನನ್ನ ಪತ್ನಿ ಡಾ. ರಮಾ ಅವರ ಮೇಲೆ ಮಾನಸಿಕ ಹಿಂಸೆ ನಡೆಯುತ್ತಿದೆ. ವಿಭಾಗದ ಪ್ರಾಧ್ಯಾಪಕರೊಬ್ಬರ ಅಳಿಯ ಇದೇ ವಿಭಾಗದಲ್ಲಿ ಉಪನ್ಯಾಸಕರಾಗಿದ್ದಾರೆ. ಡಾ. ರಮಾ ಅವರಿದ್ದ ಕೊಠಡಿ ಬಿಟ್ಟು ಕೊಡುವ ವಿಷಯವಾಗಿ ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಪತ್ನಿ ಮೇಲೆ ವಿಭಾಗದ ಮುಖ್ಯಸ್ಥರು ಹಾಗೂ ಅವರ ಅಳಿಯ ಇಬ್ಬರೂ ಹಲ್ಲೆಗೆ ಮುಂದಾಗಿದ್ದರು. ವಿಭಾಗದ ವಿದ್ಯಾರ್ಥಿಗಳೇ ಅದಕ್ಕೆ ಸಾಕ್ಷಿಯಾಗಿದ್ದಾರೆ. ನಿರಂತರವಾಗಿ ಪತ್ನಿ ಮೇಲೆ ಕಿರುಕುಳ ನಡೆಯುತ್ತಿದ್ದು, ಮುಂದುವರಿದ ಭಾಗವಾಗಿ ಇದೀಗ ಕೊಠಡಿ ಖಾಲಿ ಮಾಡಲು ಮಾಟ ಸಹ ಅವರೇ ಮಾಡಿಸುವ ಸಂಶಯವಿದೆ. ಈ ಕುರಿತು ಕುಲಪತಿಗಳಿಗೆ ದೂರು ಸಲ್ಲಿಸಲಾಗಿದ್ದು ಶನಿವಾರ ಪೊಲೀಸ್‌ ಇಲಾಖೆಗೂ ದೂರು ಸಲ್ಲಿಸಲಾಗುವುದು. ತಪ್ಪಿತಸ್ಥರ ಮೇಲೆ ಕ್ರಮವಾಗಬೇಕು ಎಂದು ಡಾ. ರಮಾ ಅವರ ಪತಿ ಡಾ. ಎಸ್‌.ಕೆ. ಮೇಲಕಾರ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು. 

ಲೇಔಟ್‌ಗೆ ಬಿಟ್ಟುಕೊಟ್ಟ ಜಾಗದ ಮೇಲೆ ಮಾಲೀಕರಿಗೆ ಹಕ್ಕಿಲ್ಲ: ಹೈಕೋರ್ಟ್‌

ವಿಶ್ವವಿದ್ಯಾಲಯದಲ್ಲಿ ಮಾಟ-ಮಂತ್ರ ಮಾಡಿಸಿರುವುದು ನಮಗೂ ಬೇಸರ ಮೂಡಿಸಿದೆ. ಯಾರು ಈ ಕೃತ್ಯ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಈ ಕುರಿತು ಡಾ. ರಮಾ ಅವರು ದೂರು ನೀಡಿದ್ದು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಕರ್ನಾಟಕ ವಿವಿ ಕುಲಪತಿ ಪ್ರೊ.ಕೆ.ಬಿ. ಗುಡಸಿ ಪ್ರತಿಕ್ರಿಯಿಸಿದರು.

click me!