ಬಿಸಿಲೂರು ಕಲಬುರಗಿಯಲ್ಲಿ ಇದೇ 30ರಂದು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಮಟ್ಟದ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕಾಗಿ ಕಲಬುರಗಿಯಲ್ಲಿ ಭರ್ಜರಿ ಸಿದ್ದತೆ ಭರದಿಂದ ಸಾಗಿದೆ.
ಕಲಬುರಗಿ (ಅ.28): ಬಿಸಿಲೂರು ಕಲಬುರಗಿಯಲ್ಲಿ ಇದೇ 30ರಂದು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಮಟ್ಟದ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕಾಗಿ ಕಲಬುರಗಿಯಲ್ಲಿ ಭರ್ಜರಿ ಸಿದ್ದತೆ ಭರದಿಂದ ಸಾಗಿದೆ. ಕಲಬುರಗಿ ನಗರದ ಹೊರವಲಯದ ನಾಗನಹಳ್ಳಿ ಬಳಿ ಬಿಜೆಪಿ ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶ ಏರ್ಪಡಿಸಲಾಗಿದೆ. ಎರಡೂವರೆ ಲಕ್ಷ ಜನರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. 5 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಅವರು ತಿಳಿಸಿದ್ದಾರೆ.
ಕಲ್ಬುರ್ಗಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಮಾವೇಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು 3 ಸಾವಿರ ಕಾರ್ಯಕರ್ತರ ತಂಡವನ್ನು ನಿಯೋಜಿಸಲಾಗಿದೆ. 224 ವಿಧಾನಸಭಾ ಕ್ಷೇತ್ರಗಳ, 200ಕ್ಕೂ ಹೆಚ್ಚು ಜಾತಿಗಳ, ಒಬಿಸಿ ಸಮುದಾಯದ 5 ಲಕ್ಷಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 4 ಸಾವಿರ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. 20 ಸಾವಿರ ನಾಲ್ಕು ಚಕ್ರದ ವಾಹನಗಳ ವ್ಯವಸ್ಥೆ ಮಾಡಿದ್ದೇವೆ. ಸಾಕಷ್ಟು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯ ಬೇರೆ ಬೇರೆ ಕಡೆಯ 50 ಕಲ್ಯಾಣಮಂಟಪಗಳಲ್ಲಿ ಊಟ, ವಸತಿ, ಸ್ನಾನಕ್ಕೆ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದರು. ಜೇವರ್ಗಿ, ರಾಯಚೂರು ಸೇರಿ ಹತ್ತಿರದ ಪ್ರದೇಶಗಳಲ್ಲೂ ಅಗತ್ಯ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು.
ಕಲಬುರಗಿ: ಶಕ್ತಿ ದೇವತೆ ಭಾಗ್ಯವಂತಿ ತಾಣ ಘತ್ತರಗಿಯಲ್ಲಿ ಸರ್ಕಾರಿ ಶಾಲೆಗಿಲ್ಲ ಜಾಗ..!
ಒಂದು ಸಾವಿರಕ್ಕೂ ಹೆಚ್ಚು ಜನ ಹಿಂದುಳಿದ ವರ್ಗಗಳ ನಾಯಕರು ಈಗಾಗಲೇ ಕಲ್ಬುರ್ಗಿಗೆ ಬಂದಿದ್ದು, ಅವರಿಗಾಗಿ ವಿವಿಧ ಹೋಟೆಲ್‍ಗಳಲ್ಲಿ ಒಂದು ಸಾವಿರ ಕೊಠಡಿ ವ್ಯವಸ್ಥೆ ಮಾಡಿದ್ದಾಗಿ ವಿವರಿಸಿದರು. 8 ತಂಡಗಳು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ 1 ಸಾವಿರಕ್ಕೂ ಹೆಚ್ಚು ಸಭೆ ನಡೆಸಿ ಸಮಾವೇಶದ ಯಶಸ್ಸಿಗೆ ಶ್ರಮಿಸಿದೆ ಎಂದರು. 1 ಲಕ್ಷ ಬಿಜೆಪಿ ಧ್ವಜದೊಂದಿಗೆ ನಗರಾಲಂಕಾರ ನಡೆದಿದೆ. ಕಲ್ಬುರ್ಗಿ ವಿಭಾಗದಿಂದ 2.5 ಲಕ್ಷ ಜನರು ಭಾಗವಹಿಸುತ್ತಾರೆ; ರಾಜ್ಯದ ಇತರ ಭಾಗಗಳಿಂದ 2.5 ಲಕ್ಷಕ್ಕೂ ಹೆಚ್ಚು ಜನರು ಬರಲಿದ್ದಾರೆ . ಒಟ್ಟು 5 ಲಕ್ಷಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆ ಇದೆ ಎಂದರು.
ಅ.30ರಂದು ಬೆಳಿಗ್ಗೆ 10 ಗಂಟೆಗೆ ಶುರುವಾಗುವ ಸಮಾವೇಶದಲ್ಲಿ, ಬಿಜೆಪಿಯ ಓಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಡಾ. ಲಕ್ಷ್ಮಣ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಓಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು, ಕೇಂದ್ರ ಹಾಗೂ ರಾಜ್ಯದ ಸಚಿವರುಗಳು, ಶಾಸಕರು, ಸಂಸದರು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ಅವರು ಮಾಹಿತಿ ನೀಡಿದರು.
ಬಿಜೆಪಿ ಜನ ಸಂಕಲ್ಪ ಯಾತ್ರೆ ನವೆಂಬರ್ 6ಕ್ಕೆ ಮುಂದೂಡಿಕೆ: ಶಾಸಕ ತೇಲ್ಕೂರ
ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು ಅವರು ಮಾತನಾಡಿ, ರಾಜ್ಯದ ಎಲ್ಲ 38 ಸಂಘಟನಾತ್ಮಕ ಜಿಲ್ಲೆಗಳು, ಎಲ್ಲ ಮಂಡಲಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಓಬಿಸಿ ಸಮುದಾಯಕ್ಕೆ ಕೊಟ್ಟ ಕೊಡುಗೆ ಅನನ್ಯ ಎಂದು ಬಣ್ಣಿಸಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ಶಾಸಕ ಶಶಿಲ್ ನಮೋಶಿ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆಯನ್ನು ಗಮನಿಸಿ ಜನರು ಬಿಜೆಪಿಯತ್ತ ಆಕರ್ಷಿತರಾಗುತ್ತಿದ್ದಾರೆ. ಈ ಸಮಾವೇಶ ರಾಜ್ಯದಲ್ಲಿಯೇ ಐತಿಹಾಸಿಕ ಸಮಾವೇಶವಾಗಲಿದೆ ಎಂದರು. ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಅವಿನಾಶ್ ಜಾಧವ್, ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.