ಆಯೋಗದ ವರದಿಗೂ ಮುನ್ನವೇ ಜಿಪಂ, ತಾಪಂ ಮೀಸಲು

Published : Oct 28, 2022, 08:14 AM IST
ಆಯೋಗದ ವರದಿಗೂ ಮುನ್ನವೇ ಜಿಪಂ, ತಾಪಂ ಮೀಸಲು

ಸಾರಾಂಶ

ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ಮೀಸಲಾತಿ ನಿಗದಿಗೊಳಿಸಿ ಕರಡು ನಿಯಮ ಪ್ರಕಟ

ಬೆಂಗಳೂರು(ಅ.28):  ರಾಜ್ಯದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಂಖ್ಯೆಯನ್ನು ನಿಗದಿಗೊಳಿಸುವ ಹಾಗೂ ಕ್ಷೇತ್ರಗಳ ಗಡಿ ಗುರುತಿಸುವ ಸಂಬಂಧ ರಚಿಸಿರುವ ‘ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ’ ತನ್ನ ವರದಿ ನೀಡುವ ಮುನ್ನವೇ ರಾಜ್ಯದ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರ ಕರಡು ನಿಯಮ ರಚಿಸಿದೆ. ರಾಜ್ಯದ 31 ಜಿಲ್ಲಾ ಪಂಚಾಯಿತಿ ಹಾಗೂ 238 ತಾಲ್ಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳಲ್ಲಿ ಶೇಕಡಾ 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ಪರಿಶಿಷ್ಟಪಂಗಡಗಳಿಗೆ ಮೀಸಲಿಟ್ಟಜಿಲ್ಲಾ ಪಂಚಾಯಿತಿ/ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು (ರಾಜ್ಯದ ಒಟ್ಟು ಜನಸಂಖ್ಯೆಯ) ಪ್ರಮಾಣಕ್ಕೆ ಅನುಸಾರವಾಗಿ ಯಾವ ಜಿಲ್ಲೆಯಲ್ಲಿ ಪರಿಶಿಷ್ಟಪಂಗಡಗಳ ಜನಸಂಖ್ಯೆಯ ಶೇಕಡ ಪ್ರಮಾಣ ಅತ್ಯಂತ ಹೆಚ್ಚು ಇರುವುದೋ ಅಂತಹ ಜಿಲ್ಲಾ ಪಂಚಾಯಿತಿ/ ತಾಲ್ಲೂಕು ಪಂಚಾಯಿತಿಗಳಿಗೆ ಹಂಚಿಕೆ ಮಾಡಬೇಕು. ಪರಿಶಿಷ್ಟಪಂಗಡಗಳಿಗೆ ಸೇರಿದ ಸದಸ್ಯರಿಗಾಗಿ ಅಷ್ಟೇ ಸಂಖ್ಯೆಯ ಉಪಾಧ್ಯಕ್ಷ ಹುದ್ದೆಗಳನ್ನು ಜಿಲ್ಲಾ ಪಂಚಾಯಿತಿ/ ತಾಲ್ಲೂಕು ಪಂಚಾಯಿತಿಗಳಿಗೆ ಹಂಚಿಕೆ ಮಾಡುವಾಗ ಅದೇ ವಿಧಾನ ಅನುಸರಿಸಬೇಕು. ಈ ನಿಯಮಗಳು ಪ್ರಾರಂಭವಾದ ದಿನಾಂಕದಿಂದ ಮೀಸಲಾತಿಯ ಆವರ್ತನೆ (ರೋಟೇಷನ್‌) ಪ್ರಾರಂಭವಾಗುತ್ತದೆ. ಇನ್ನು ಮುಂದಿನ ಅವಧಿಯ ಮೀಸಲಾತಿಯನ್ನು ಆವರ್ತನೆಗೊಳಿಸುವಾಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿಯು ಹಂಚಿಕೆಯಾಗಿರುವಂತಹ ಪಂಚಾಯಿತಿಗಳನ್ನು ಹೊರತುಪಡಿಸತಕ್ಕದ್ದು ಎಂದು ಕರಡು ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.

ಯಾದಗಿರಿ: ಮೂರು ವರ್ಷದಿಂದ ಗ್ರಾಪಂಗಳಿಗಿಲ್ಲ ಗಾಂಧಿ ಗ್ರಾಮ ಪುರಸ್ಕಾರ

ಪರಿಶಿಷ್ಟಜಾತಿಗೆ ನಿಯಮ:

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ನಿಯಮದ ಪ್ರಕಾರ ನಿರ್ದಿಷ್ಟಪಡಿಸಿರುವ ರೀತಿಯಲ್ಲಿಯೇ ಪರಿಶಿಷ್ಟಜಾತಿಗಳ ಸದಸ್ಯರಿಗೆ ಹಂಚಿಕೆ ಮಾಡಬೇಕು. ಆದರೆ ಎರಡು ಹುದ್ದೆಗಳನ್ನು ಕೇವಲ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳಿಗೆ ಹಂಚಿಕೆ ಮಾಡಬಾರದು, ಆದರೆ ಅಧ್ಯಕ್ಷ ಅಥವಾ ಉಪಾಧ್ಯಕ್ಷರ ಹುದ್ದೆಯನ್ನು ನಿಕಟಪೂರ್ವ ಅವಧಿಯಲ್ಲಿ ಪರಿಶಿಷ್ಟಜಾತಿಗೆ ಮೀಸಲಿರಿಸಿದ್ದಲ್ಲಿ ಸದರಿ ಹುದ್ದೆಯನ್ನು ಮುಂದಿನ ಅವಧಿಗೆ ಪರಿಶಿಷ್ಟಪಂಗಡಗಳಿಗೆ ಮೀಸಲಿರಿಸಬಾರದು. ಅದೇ ರೀತಿ ಪರಿಶಿಷ್ಟಪಂಗಡಗಳಿಗೆ ಮೀಸಲು ಇರಿಸಿದ್ದಲ್ಲಿ ಪರಿಶಿಷ್ಟಜಾತಿಗಳಿಗೆ ಮೀಸಲು ಇಡಬಾರದು ಎಂದು ವಿವರಿಸಲಾಗಿದೆ.

ಹಿಂದುಳಿದ ವರ್ಗಕ್ಕೆ ನಿಯಮ:

ಹಿಂದುಳಿದ ವರ್ಗಗಳಿಗಾಗಿ ಮೀಸಲಿಟ್ಟಿರುವ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳನ್ನು ಮತ್ತು ಮೀಸಲಿಡದ ಪ್ರವರ್ಗಕ್ಕೆ ನಿಗದಿ ಮಾಡಿರುವ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳನ್ನು ಸೂಕ್ತ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಹಂಚಿಕೆ ಮಾಡಬೇಕು.

ಮಹಿಳಾ ಮೀಸಲಾತಿ ನಿಯಮ:

ಮಹಿಳೆಯರಿಗೆ ಮೀಸಲಿರಿಸಿದ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳನ್ನು ಸೂಕ್ತ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಹಂಚಿಕೆ ಮಾಡಬೇಕು. ವಿಶೇಷವಾಗಿ ಯಾವುದೇ ಜಿಲ್ಲಾ ಪಂಚಾಯಿತಿ/ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳನ್ನು (ಸಾಧ್ಯವಾದಷ್ಟುಮಟ್ಟಿಗೆ) ಮಹಿಳೆಯರಿಗೆ ಮೀಸಲಿಡಬೇಕು. ಒಂದು ನಿರ್ದಿಷ್ಟವರ್ಗಕ್ಕೆ ಮೀಸಲಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳನ್ನು ಅದೇ ವರ್ಗಕ್ಕೆ ಹಂಚಿಕೆ ಮಾಡಬಾರದು, ಆದರೆ ಕಾಯ್ದಿರಿಸದೇ ಇರುವ ಪ್ರವರ್ಗದ ಹುದ್ದೆಯನ್ನು ಮತ್ತೆ ಮುಂದುವರಿಸಲು ಯಾವುದೇ ನಿರ್ಬಂಧವಿರುವುದಿಲ್ಲ. ಆದರೆ ಮಹಿಳೆಯರಿಗೆ ಮೀಸಲಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳನ್ನು ಮುಂದಿನ ಅವಧಿಯಲ್ಲಿ ಸಾಧ್ಯವಾದಷ್ಟುಮಟ್ಟಿಗೆ ಮಹಿಳೆಯರಿಗೆ ಹಂಚಿಕೆ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಕರಡು ವಿಧೇಯಕದಲ್ಲಿ ತಿಳಿಸಿದೆ.

ZP Elections: ಸದಸ್ಯರ ಹೆಚ್ಚಿಸಲು ಅಸ್ತು: ಜಿಪಂ ಎಲೆಕ್ಷನ್‌ ವಿಳಂಬ?

ಕರಡು ವಿಧೇಯಕದ ಕುರಿತು 15 ದಿನದೊಳಗೆ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು ಈ ವಿಳಾಸಕ್ಕೆ ಸಲ್ಲಿಸಬಹುದು.

ಜಿ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ
ಕ್ರ. ಸಂಖ್ಯೆ ಪ್ರವರ್ಗ ಅಧ್ಯಕ್ಷರು ಉಪಾಧ್ಯಕ್ಷರು
ಒಟ್ಟು ಮಹಿಳೆಯರು ಒಟ್ಟು ಮಹಿಳೆಯರು

1 ಪರಿಶಿಷ್ಟಪಂಗಡ 3 2 3 2
2ಪರಿಶಿಷ್ಟಪಂಗಡ 6 3 6 3
3 ಹಿಂದುಳಿದ ವರ್ಗ, ಪ್ರವರ್ಗ ಎ 5 2 5 2
4 ಹಿಂದುಳಿದ ವರ್ಗ ಪ್ರವರ್ಗ ಬಿ 1 1 1 1
5 ಮೀಸಲಿಡದ ಸಾಮಾನ್ಯ ವರ್ಗ 16 8 16 8
ಒಟ್ಟು 31 16 31 16

ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ
ಕ್ರ. ಸಂಖ್ಯೆ ಪ್ರವರ್ಗ ಅಧ್ಯಕ್ಷರು ಉಪಾಧ್ಯಕ್ಷರು
ಒಟ್ಟು ಮಹಿಳೆಯರು ಒಟ್ಟು ಮಹಿಳೆಯರು
1 ಪರಿಶಿಷ್ಟಪಂಗಡ 22 11 22 11
2 ಪರಿಶಿಷ್ಟಜಾತಿ 49 25 49 25
3 ಹಿಂದುಳಿದ ವರ್ಗ ಪ್ರವರ್ಗ ಎ 38 19 38 19
4 ಹಿಂದುಳಿದ ವರ್ಗ ಪ್ರವರ್ಗ ಬಿ 09 04 09 04
5 ಮೀಸಲಿಡದ ಸಾಮಾನ್ಯ ವರ್ಗ 120 60 120 60
ಒಟ್ಟು ತಾ.ಪಂ. 238 119 238 119
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಕ್ಕೆಜೋಳ ಖರೀದಿಯ ಮಿತಿ 50 ಕ್ವಿಂಟಲ್‌ಗೇರಿಕೆ
ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!