ಸಿದ್ದುಗೆ ಸಿಎಂ ಕುರ್ಚಿಯಲ್ಲಿ ಒಂದು ಕ್ಷಣವೂ ಕೂರುವ ನೈತಿಕತೆ ಇಲ್ಲ: ಸಿ.ಟಿ.ರವಿ

By Kannadaprabha NewsFirst Published Jul 14, 2024, 4:30 AM IST
Highlights

ಮುಡಾ ಹಗರಣವನ್ನು ಬೇರೆ ಯಾರಾದರೂ ಮಾಡಿದ್ದರೆ ಸಿದ್ದರಾಮಯ್ಯ ಇದೇ ರೀತಿ ಸಮರ್ಥನೆ ಮಾಡಿಕೊಳ್ಳುತ್ತಿದ್ದರಾ? ಎಲ್ಲರನ್ನೂ ಭ್ರಷ್ಟರೆಂದು ಹೇಳುತ್ತಿದ್ದ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಒಂದು ಕ್ಷಣ ಸಹ ಕೂಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ 

ದಾವಣಗೆರೆ(ಜು.14): ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದ ಬಗ್ಗೆ ಇಡಿ (ಜಾರಿ ನಿರ್ದೇಶನಾಲಯ), ಎಸ್‌ಐಟಿ ತಂಡಗಳು ತನಿಖೆ ಕೈಗೊಂಡಿವೆ. ಉಪ್ಪು ತಿಂದವನು ನೀರು ಕುಡಿಯಲೇಬೇಕೆಂದು ಸಿದ್ದರಾಮಯ್ಯ ಹೇಳುತ್ತಾರೆ. ಹೀಗಾಗಿ, ನಿಗಮದ ಹಗರಣದಲ್ಲಿ ಭಾಗಿಯಾದವರಿಂದ ಹಣ ವಸೂಲು ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ ಎಂದು ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ. 

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಹಗರಣವನ್ನು ಬೇರೆ ಯಾರಾದರೂ ಮಾಡಿದ್ದರೆ ಸಿದ್ದರಾಮಯ್ಯ ಇದೇ ರೀತಿ ಸಮರ್ಥನೆ ಮಾಡಿಕೊಳ್ಳುತ್ತಿದ್ದರಾ? ಎಲ್ಲರನ್ನೂ ಭ್ರಷ್ಟರೆಂದು ಹೇಳುತ್ತಿದ್ದ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಒಂದು ಕ್ಷಣ ಸಹ ಕೂಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ಅದೇ ದಲಿತರಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ಸರ್ಕಾರದಲ್ಲಿ ಇನ್ನೂ ಯಾವ್ಯಾವ ಇಲಾಖೆಗಳಲ್ಲಿ ಹಗರಣ ಆಗಿದೆಯೋ ಗೊತ್ತಿಲ್ಲ ಎಂದರು.

Latest Videos

ಬೆನ್ನು ಬೆನ್ನಿಗೆ ಎರಡು ಕಂಟಕ.. ! ಅವಳಿ ಕಂಟಕದ ಸುಳಿಯಲ್ಲಿ ಸಿಲುಕಿದರಾ ಸಿಎಂ ಸಿದ್ದರಾಮಯ್ಯ?

ರಾಜ್ಯದ ಖಜಾನೆಗೆ ಕನ್ನ ಹಾಕುವ ಹೆಗ್ಗಣಗಳೇ ತುಂಬಿವೆ. ಪರಿಸ್ಥಿತಿ ಹೀಗಿರುವಾಗ ರಾಜ್ಯದ ಖಜಾನೆಯಾದರೂ ಎಲ್ಲಿ ಉಳಿಯುತ್ತದೆ ಎಂದು ಅವರು ಪ್ರಶ್ನಿಸಿದರು. ಸಿದ್ದರಾಮಯ್ಯನವರ ಆಪ್ತರ ನಕಲಿ ಖಾತೆಗಳಿಗೆ ವಾಲ್ಮೀಕಿ ನಿಗಮದ ಹಣ ಜಮಾ ಆಗಿದೆ. ಇನ್ನು, ಮುಡಾದಲ್ಲಿ ಪಿಂಚಣಿ ಹಣ, ಜೀವಮಾನವಿಡಿ ದುಡಿದು ಕೂಡಿಟ್ಟ ಹಣ ಸೇರಿಸಿ, ನಿವೇಶನಕ್ಕೆ ಅರ್ಜಿ ಹಾಕಿದವರಿಗೆ ನಿವೇಶನ ಇಲ್ಲ, ಸಿದ್ದರಾಮಯ್ಯನವರ ಮನೆಯವರ ಹೆಸರಿಗೆ 14 ಸೈಟ್ ಇವೆ. ಹೀಗಾಗಿ, ಮುಡಾ ಸೇರಿದಂತೆ ಎಲ್ಲಾ ಪಾಲಿಕೆಯಲ್ಲೂ ನಿವೇಶನ ಹಂಚಿಕೆ ಸಂಬಂಧ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೇ ಅಭಿವೃದ್ಧಿಗೆ ಹಣ ಇಲ್ಲ. ಎಲ್ಲವನ್ನೂ ಗ್ಯಾರಂಟಿ ಯೋಜನೆಗಳಿಗೆ ಹಾಕಲಾಗಿದೆ ಎಂದಿದ್ದಾರೆ. ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಗ್ಯಾರಂಟಿಯಾಗಿ ಹೇಳಿದ್ದೀರಿ. ಅದಕ್ಕೆ ನೀವು ಅಭಿವೃದ್ಧಿ ಮಾಡುವ ಸ್ಥಾನದಲ್ಲಿ ಕುಳಿತಿದ್ದೀರಿ. ನಮ್ಮನ್ನು ಪ್ರಶ್ನಿಸುವ ಸ್ಥಾನದಲ್ಲಿ ಜನರು ಕೂಡಿಸಿದ್ದಾರೆ. ಅದಕ್ಕಾಗಿ ನೀವು ಜನರ ಕೆಲಸ ಮಾಡಿ, ಜನರ ಪರವಾಗಿ ಪ್ರಶ್ನಿಸುವ ಕೆಲಸವನ್ನು ನಾವು ಮಾಡುತ್ತೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸಬಾರದು. ಜನರಿಗೆ ತೆರಿಗೆ ಹೆಚ್ಚಿಸಬಾರದು. ಅಭಿವೃದ್ಧಿ ಕಾರ್ಯವನ್ನೂ ಮಾಡಬೇಕು ಎಂದು ಅವರು ತಾಕೀತು ಮಾಡಿದರು.

click me!