* ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ತೆರೆ
* 10 ದಿನಗಳ ಕಾಲ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನ
* ಕೊನೆಯಲ್ಲಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಬಸನಗೌಡ ಪಾಟೀಲ್ ಯತ್ನಾಳ್
ಬೆಳಗಾವಿ, (ಡಿ.24): ಇಲ್ಲಿನ ಸುವರ್ಣ ಸೌಧದಲ್ಲಿ(Suvarna Soudha) ಕಳೆದ 10 ದಿನಗಳ ಕಾಲ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನಕ್ಕೆ (Belagavi Session) ಇಂದು(ಶುಕ್ರವಾರ) ತೆರೆ ಬಿದ್ದಿದೆ.
ಪ್ರತಿಭಟನೆ, ಧರಣಿ, ವಾಗ್ವಾದ, ಆರೋಪ, ಪ್ರತ್ಯಾರೋಪ ಎಂದಿನಂತೆ ಈ ಅಧಿವೇಶನ ದಲ್ಲೂ ಪ್ರತಿಧ್ವನಿಸಿದವು. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳು, ಅತಿವೃಷ್ಟಿ ಹಾನಿ, ನಾಡಧ್ವಜಕ್ಕೆ ಬೆಂಕಿ ಇಟ್ಟ ಪ್ರಕರಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಪ್ರತಿಮೆಗೆ ಮಾಡಿದ ಅಪಮಾನ ಮೊದಲಾದ ವಿಚಾರಗಳು ಪ್ರಮುಖವಾಗಿ ಪ್ರತಿಧ್ವನಿಸಿದವು.
undefined
Belagavi Session: ಬೆಳಗಾವಿ ಅಧಿವೇಶನ ತೆರೆ, ಮುಂದಿನ ಅಧಿವೇಶನದ ಬಗ್ಗೆ ತಿಳಿಸಿದ ಬೊಮ್ಮಾಯಿ
ಇನ್ನು ಈ ಅಧಿವೇಶನದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal, ಸುವರ್ಣಸೌಧದಲ್ಲಿ ಚರ್ಚೆ ಮಾಡುವುದಿದ್ದರೆ ಮಾತ್ರ ಅಧಿವೇಶನ ಕರೆಯಿರಿ. ಜಾತ್ರೆ ಮಾಡಲು ಈ ರೀತಿ ಅಧಿವೇಶನ ಕರೆಯಬೇಡಿ. ತುಂಬಾ ನೋವಿನಿಂದ ಅಧಿವೇಶನ ಮುಗಿಸಿಕೊಂಡು ಹೋಗುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಸುವರ್ಣಸೌಧ ಕೇವಲ 10-15 ದಿನಗಳ ಅಧಿವೇಶನಕ್ಕೆ ಸೀಮಿತವಾಗಿದೆ. ಇಲ್ಲಿ ಇಲಾಖೆಗಳು ಬರಬೇಕು. ಸುವರ್ಣ ಸೌಧದ ಪ್ರಯೋಜನ ಪಡೆಯುವಂತಾಗಬೇಕು. ಸದನ ಜಾತ್ರೆ ಆಗಬಾರದು ಎಂದರು.
ಕೊನೆಯ ದಿನ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ಸ್ಪೀಕರ್ ಅವಕಾಶ ನೀಡಿದರೂ, ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಧರಣಿ ಮಾಡಿದರು. ಕಾಂಗ್ರೆಸ್ ನವರು ಉತ್ತರ ಕರ್ನಾಟಕದ ಬಗೆಗಿನ ಚರ್ಚೆಗೆ ಸಹಕಾರ ನೀಡಲಿಲ್ಲ. ಕೊನೆಯ ಎರಡು ದಿನ ಉತ್ತರ ಕರ್ನಾಟಕ ಚರ್ಚೆ ಇಟ್ಟುಕೊಂಡಿದ್ದೆ ತಪ್ಪು. ಆರಂಭದ ದಿನಗಳಲ್ಲಿ ಆದ್ಯತೆ ಮೇರೆಗೆ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಾಗಿತ್ತು. ಕಳಕಳಿ ಇದ್ದಿದ್ದರೆ ಮೊದಲೇ ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕಿತ್ತು. ಸಿಎಂ ಬೊಮ್ಮಾಯಿ ಅವರು ಮೊದಲ ಐದು ದಿನಗಳು ಈ ಭಾಗದ ಸಮಸ್ಯೆಗಳ ಚರ್ಚೆಗೆ ಮೀಸಲಿಡಿ ಎಂದು ಹೇಳಬೇಕಿತ್ತು ಎಂದು ಯತ್ನಾಳ್ ಹೇಳಿದರು.
ಇದೇ ರೀತಿ ಆದರೆ ಸುವರ್ಣ ಸೌಧವು ಗೋಲ್ ಗುಂಬಜ್ ರೀತಿ ಒಂದು ಪ್ರವಾಸಿ ತಾಣವಾಗಲಿದೆ ಅಷ್ಟೇ. ಮುಂದಿನ ದಿನಗಳಲ್ಲಿ ಇಲ್ಲಿ ಅಧಿವೇಶನ ನಡೆಸುವುದಾದರೆ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ಮೊದಲ ಆದ್ಯತೆ ನೀಡಬೇಕು. ಇಲ್ಲವಾದರೆ ನಾವು ಅಧಿವೇಶನ ನಡೆಸಲು ಬಿಡುವುದಿಲ್ಲ. ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಅಧಿವೇಶನದ ಬಗ್ಗೆ ಬೊಮ್ಮಾಯಿ ಹೇಳಿದ್ದಿಷ್ಟು
ಸುವರ್ಣಸೌಧದಲ್ಲಿ ಅಧಿವೇಶನ ನಡೆಸಬೇಕೆಂಬುದು ಜನರ ಆಸೆ ಆಗಿತ್ತು. ಅಧಿವೇಶನದಲ್ಲಿ ಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗಿದೆ. ಕಂದಾಯ ಸಚಿವರು ಸಮರ್ಥವಾಗಿ ಉತ್ತರಗಳನ್ನು ನೀಡಿದ್ದಾರೆ. ಮಳೆ ಹಾನಿ, ಬೆಳೆ ಹಾನಿ ಪರಿಹಾರದ ಬಗ್ಗೆ ಉತ್ತರ ನೀಡಿದ್ದಾರೆ. ಸಕಾಲದಲ್ಲಿ ರೈತರಿಗೆ ನೆರವಾಗಿದ್ದ ಸರ್ಕಾರ ಅಂದರೆ ಅದು ಬಿಜೆಪಿ ಸರ್ಕಾರ. ರೈತರ ಕಷ್ಟಕ್ಕೆ ಸ್ಪಂದಿಸಿ, ಪರಿಹಾರ ನೀಡಿದ್ದೇವೆ. ರೈತರಿಗೆ ಕೊಡಬೇಕಿದ್ದ ಪರಿಹಾರದ ಮೊತ್ತವನ್ನೂ ಹೆಚ್ಚಿಸಿದ್ದೇವೆ. ಕನ್ನಡದ ಅಸ್ಮಿತೆ ಎತ್ತಿಹಿಡಿಯುವ ಕೆಲಸ ಮಾಡಿದ್ದೇವೆ ಎಂದು ವಿವರಿಸಿದರು,
ಕನ್ನಡದ ನೆಲ, ಜಲದ ವಿಚಾರವಾಗಿ ನಾವೆಲ್ಲ ಒಂದಾಗಿದ್ದೇವೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಅಧಿವೇಶನದಲ್ಲಿ ಉತ್ತರ ಸಿಕ್ಕಿದೆ. ಉತ್ತರ ಕರ್ನಾಟಕದ ಅವಶ್ಯತೆಗಳಿಗೆ ಸರ್ಕಾರ ಸ್ಪಂದಿಸಲಿದೆ. ಅಲ್ಲಿನ ಅಗತ್ಯಗಳನ್ನು ಪೂರ್ಣಗೊಳಿಸಲು ಮಾಡಬೇಕಿರುವ ಎಲ್ಲ ಕೆಲಸಗಳನ್ನೂ ಮಾಡುತ್ತದೆ. ವಿರೋಧ ಪಕ್ಷಗಳಿಗೆ ಉತ್ತರ ಕರ್ನಾಟಕದ ಬಗ್ಗೆ ಪ್ರೀತಿ ಇಲ್ಲ. ಹಲವು ಯೋಜನೆಗಳಿಗೆ ನಾವು ಅನುಮೋದನೆ ಕೊಟ್ಟಿದ್ದೇವೆ. ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ದ್ವಿಮುಖ ನೀತಿ ಗೊತ್ತಾಗಿದೆ. ಅಧಿಕಾರದಲ್ಲಿದ್ದಾಗ ಒಂದು ರೀತಿಯಲ್ಲಿರುವ ಅವರ ಧೋರಣೆಯು ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಮತ್ತೊಂದು ರೀತಿಯಾಗುತ್ತದೆ ಎಂದು ಹೇಳಿದರು.