ಮಣಿಕಂಠ ರಾಠೋಡ್‌ ಬಂಧನ: ಪೊಲೀಸ್, ಕಾಂಗ್ರೆಸ್ ಚೆಳಕ: ಹಳ್ಳ ಹಿಡಿಯುತ್ತಿರುವ ತನಿಖೆಗಳು

Published : Jul 21, 2024, 10:17 AM ISTUpdated : Jul 22, 2024, 10:39 AM IST
ಮಣಿಕಂಠ ರಾಠೋಡ್‌ ಬಂಧನ: ಪೊಲೀಸ್, ಕಾಂಗ್ರೆಸ್ ಚೆಳಕ: ಹಳ್ಳ ಹಿಡಿಯುತ್ತಿರುವ ತನಿಖೆಗಳು

ಸಾರಾಂಶ

ಸುಮಾರು 6088.97 ಕ್ವಿಂಟಲ್‌, ಅಂದರೆ 50 ಕೆಜಿ ತೂಕದ 12,154 ಚೀಲಗಳುಳ್ಳ 2 ಕೋಟಿ 66 ಲಕ್ಷ 33 ಸಾವಿರದ 900 ರುಪಾಯಿಗಳಷ್ಟು ಮೌಲ್ಯದ ಅನ್ನಭಾಗ್ಯ ಅಕ್ಕಿ ದಾಸ್ತಾನು ಸರ್ಕಾರಿ ಗೋದಾಮಿನಿಂದ ಲೆಕ್ಕ ಸಿಗದೆ ನಾಪತ್ತೆಯಾಗಿತ್ತು. 

ಆನಂದ ಸೌದಿ/ಮಲ್ಲಯ್ಯ ಪೋಲಂಪಲ್ಲಿ

ಯಾದಗಿರಿ/ಶಹಾಪುರ: ಕಳೆದ ನ. 25 ರಂದು, ಶಹಾಪುರದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ಸರ್ಕಾರಿ ಗೋದಾಮಿನಿಂದ ನಾಪತ್ತೆಯಾದ, ಅಂದಾಜು ₹2 ಕೋಟಿ ಮೌಲ್ಯದ ಅನ್ನಭಾಗ್ಯ ಪಡಿತರ ಅಕ್ಕಿ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಪೊಲೀಸರು ಗುರುಮಠಕಲ್‌ನ ಮಣಿಕಂಠ ರಾಠೋಡ್‌ನನ್ನು ಕಲಬುರಗಿಯಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಬಂಧಿಸಿದ್ದಾರೆ. 

ಸುಮಾರು 6088.97 ಕ್ವಿಂಟಲ್‌, ಅಂದರೆ 50 ಕೆಜಿ ತೂಕದ 12,154 ಚೀಲಗಳುಳ್ಳ 2 ಕೋಟಿ 66 ಲಕ್ಷ 33 ಸಾವಿರದ 900 ರುಪಾಯಿಗಳಷ್ಟು ಮೌಲ್ಯದ ಅನ್ನಭಾಗ್ಯ ಅಕ್ಕಿ ದಾಸ್ತಾನು ಸರ್ಕಾರಿ ಗೋದಾಮಿನಿಂದ ಲೆಕ್ಕ ಸಿಗದೆ ನಾಪತ್ತೆಯಾಗಿತ್ತು. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ನ.25, 2023 ರಂದು ದೂರು ದಾಖಲಾಗಿತ್ತು. (ಸಂಖ್ಯೆ: 247/2023) ಈ ಅಕ್ಕಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಕಂಠ ಬಂಧಿಸಲಾಗಿದೆ ಅನ್ನೋದು ಖಾಕಿಪಡೆಯ ಪ್ರತಿಕ್ರಿಯೆ. ಈ ಹಿಂದೆಯೂ ಕೂಡ, ಗುರುಮಠಕಲ್‌ ಸೇರಿದಂತೆ ವಿವಿಧೆಡೆ ನಡೆದಿದ್ದ ಅಕ್ಕಿ ಅಕ್ರಮ ಪ್ರಕರಣಗಳಲ್ಲಿ ಮಣಿಕಂಠ ವಿರುದ್ಧ ದೂರುಗಳು ದಾಖಲಾಗಿದ್ದವು. ವಿಚಾರಣೆಗೆಂದು ಜು.20ರಿಂದ ಮತ್ತೇ ಮೂರು ದಿನಗಳ ಶಹಾಪುರ ಪೊಲೀಸರ ವಶಕ್ಕೆ ನೀಡಲಾಗಿದೆ.

ಮಂತ್ರಾಲಯಕ್ಕೆ ಹೋಗುವೆ, ರಾಯರ ಆಶೀರ್ವಾದ ಪಡೆಯುತ್ತೇನೆ: ಸಿದ್ದರಾಮಯ್ಯ

"ಪ್ರಭಾವಿ"ಮಲ್ಲಿಕ್‌ಗೆ ಕಾಣದ ಕೈಗಳ ರಕ್ಷಣೆ?: ಆದರೆ, ಶಹಾಪುರದ ಈ ಪ್ರಕರಣದಲ್ಲಿ ಮಣಿಕಂಠನ ಹೆಸರಿಸಿ, ಅಕ್ಕಿ ಅಕ್ರಮದ ರೂವಾರಿ ಚಾಮನಾಳದ ಮಲ್ಲಿಕ್‌ ಎಂಬಾತನನ್ನು ಪಾರು ಮಾಡಲು ಪೊಲೀಸರು ಹೂಡಿರುವ ತಂತ್ರಗಾರಿಕೆ ಇದಾಗಿದೆ. ಪ್ರಭಾವಿಗಳು ಹಾಗೂ ಪೊಲೀಸ್‌ ವಲಯದ ಖಾಸಾಪಡೆಯಲ್ಲಿರುವ ಚಾಮನಾಳದ ಮಲ್ಲಿಕ್‌ ಸಿಕ್ಕಿಬಿದ್ದರೆ, ಮತ್ತೆಲ್ಲಿ ತಮ್ಮ ಬಣ್ಣ ಬಯಲಾಗಬಹುದು ಎಂಬ ಕಾರಣಕ್ಕೆ ಮಣಿಕಂಠನ ಹೆಸರಿಸಿ, ಅಕ್ಕಿ ಅಕ್ರಮಕ್ಕೆ ತೇಪೆ ಹಚ್ಚುವ ಯತ್ನ ನಡೆದಿದೆ ಎಂಬ ಮಾತುಗಳು ಪ್ರತಿಧ್ವನಿಸುತ್ತಿವೆ. ಚುನಾವಣೆಗಳಲ್ಲಿ ಬಂಡವಾಳ ಹೂಡುವ, ಆಯಕಟ್ಟಿನ ಜಾಗೆಗಳಿಗೆ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ವಿವಿಧ ಸರ್ಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವಷ್ಟು ಪ್ರಭಾವ ಹೊಂದಿರುವ ಮಲ್ಲಿಕ್‌ನನ್ನು ಬಂಧಿಸುವುದಿರಲಿ, ವಿಚಾರಣೆಗೂ ಸಾಧ್ಯವಿಲ್ಲ ಎನ್ನದಿರುವಾಗ ಬೇರೊಬ್ಬರನ್ನು ಇಲ್ಲಿ ಸಿಲುಕಿಸಲು ಇದು ಹೂಡಿದ ತಂತ್ರಗಾರಿಕೆ ಎನ್ನಲಾಗಿದೆ. 

ಶಹಾಪುರ ಅಕ್ಕಿ ಪ್ರಕರಣದಲ್ಲಿ ಕೆಲವರನ್ನು ಪೊಲೀಸರು ಬಂಧಿಸಿದರೆ, ಕೆಲವರ ಅಮಾನತುಗೊಳಿಸಿ ಜಿಲ್ಲಾಡಳಿತ ಆದೇಶಿಸಿತ್ತು. ಇನ್ನೂ ಕೆಲವರನ್ನು ವಿನಾಕಾರಣ ವಿಚಾರಣೆ ನಡೆಸಿ, ಅವರಿಂದ ಹಣ ಹಾಗೂ ಅಕ್ಕಿ ದಾಸ್ತಾನು ಸಂಗ್ರಹಿಸಿ, ಕಳ್ಳತನ ದಾಸ್ತಾನಿಗೆ ಸರಿ ಹೊಂದುವಂತೆ ಮಾಡುವ ಯತ್ನಗಳು ನಡೆದಿವೆ, ಇಲ್ಲಿ ಮೂಲ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗುತ್ತಿಲ್ಲ ಎಂಬ ಗಂಭೀರ ಆರೋಪಗಳು ಆಗಲೂ ಕೇಳಿಬಂದಿದ್ದವು. 2 ಜೂನ್ 2023 ರಿಂದ 23 ನವೆಂಬರ್ 2023 ರವರೆಗಿನ, ಸುಮಾರು ಐದಾರು ತಿಂಗಳ ಅವಧಿಯಲ್ಲಿ 6 ಸಾವಿರ ಕ್ವಿಂಟಲ್‌ಗೂ ಹೆಚ್ಚು ಅಕ್ಕಿ ದಾಸ್ತಾನು ನಾಪತ್ತೆಯಾಗಿರುವ ಬಗ್ಗೆ "ಗೊತ್ತೇ ಇರಲಿಲ್ಲ" ಅನ್ನೋ ಸಂಬಂಧಿತ ಇಲಾಖೆಯ ಅಧಿಕಾರಿಗಳ ಉತ್ತರ ವ್ಯವಸ್ಥೆಯನ್ನು ಅಣಕಿಸುವಂತಿತ್ತು.

ಖರ್ಗೆ ಮೆಚ್ಚಿಸಲು ಮಣಿಕಂಠಾಸ್ತ್ರ: ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಚಿತ್ತಾಪೂರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಣಿಕಂಠ ರಾಠೋಡ್‌ ಸೋಲುಂಡಿದ್ದ. ತೀವ್ರ ವಾಗ್ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಮಣಿಕಂಠನ ಮಟ್ಟ ಹಾಕಿದರೆ ಖರ್ಗೆ ಕುಟುಂಬ ಖುಷಿಯಾಗಬಹುದೇನೋ ಎಂಬ ಕಾರಣ, ಜೊತೆಗೆ ಖರ್ಗೆ ನೆಪದಲ್ಲಿ ಈ ಮೂಲಕ ಮಲ್ಲಿಕ್‌ನನ್ನು ಪಾರು ಮಾಡಿ ತಮ್ಮ ತಮ್ಮ ಅಕ್ರಮಗಳನ್ನೂ ಬಯಲಾಗದಂತೆ ನೋಡಿಕೊಳ್ಳಲು ಮಣಿಕಂಠಾಸ್ತ್ರ ಅಧಿಕಾರಿಗಳ ಕೊನೆಯ ಬತ್ತಳಿಕೆ ಎಂಬ ಮಾತುಗಳು ಖಾಕಿಪಡೆಯಲ್ಲೇ ಪಿಸುಗುಡುತ್ತಿವೆ.

ಏನಿದು ಅನ್ನಭಾಗ್ಯ ಅಕ್ಕಿ ಅಕ್ರಮ?: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ "ಅನ್ನಭಾಗ್ಯ" ಯೋಜನೆಯ ಪಡಿತರ ಅಕ್ಕಿ ಯಾದಗಿರಿ ಜಿಲ್ಲೆಯಲ್ಲಿ ಕಾಳಸಂತೆಕೋರರ ಪಾಲಾಗುತ್ತಿದೆ. ಪಡಿತರ ಅಕ್ಕಿಯನ್ನು ಕಳ್ಳತನದಿಂದ ಪಡೆದು, ಪಾಲಿಶ್ ಮಾಡಿದ ನಂತರ ಬೇರೆ ಬೇರೆ ಬ್ರ‍್ಯಾಂಡ್ ಹೆಸರಲ್ಲಿ ಪ್ಯಾಕಿಂಗ್ ಮಾಡಿ, ತೆಲಂಗಾಣ ಹಾಗೂ ಮಹಾರಾಷ್ಟ್ರ, ಗುಜರಾತ್‌ ಸೇರಿದಂತೆ ಅನ್ಯ ರಾಜ್ಯಗಳಲ್ಲಿ ದುಬಾರಿ ಬೆಲೆಯಲ್ಲಿ ಮಾರಾಟ ಮಾಡುವ ದಂಧೆ ನಡೆಯುತ್ತದೆ. ಈ ಹಿಂದೆ, ಅನೇಕ ಬಾರಿ ಇಂತಹ ಪ್ರಕರಣಗಳು ನಡೆದಿವೆಯಾದರೂ, ಬೆರಳಣಿಕೆಯಷ್ಟು ಪ್ರಕರಣಗಳು ದಾಖಲಾಗಿದ್ದರೆ, ಇನ್ನೂ ಬಹುತೇಕ ಪ್ರಕರಣಗಳು ತೆರೆಮರೆಯಲ್ಲಿಯೇ ಸಂಧಾನ ಕಂಡಿವೆ. ತನಿಖೆ ಕೇವಲ ನೆಪಮಾತ್ರಕ್ಕೆ ಎನ್ನುವಂತಿರುತ್ತದೆ. ರಾಜಕೀಯ ಪ್ರಭಾವ ಹಾಗೂ ಅಕ್ಕಿ ಅಕ್ರಮದ ಆರೋಪಿ ಜತೆ ಪೊಲೀಸ್ ಹಾಗೂ ಹಿರಿಯ ಅಧಿಕಾರಿಗಳ ನಡುವಿನ ಸ್ನೇಹ ಮೂಲ ಆರೋಪಿ ಪತ್ತೆಗೆ ಹಿಂದೇಟು ಹಾಕಿದಂತಿದೆ.

ಹಳ್ಳ ಹಿಡಿಯುತ್ತಿರುವ ತನಿಖೆಗಳು: ಜಿಲ್ಲೆಯ ಶಹಾಪುರದಲ್ಲಷ್ಟೇ ಅಲ್ಲ, ಕಳೆದ ವರ್ಷ ಫೆಬ್ರವರಿಯಲ್ಲಿ ಸುರಪುರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಗೋದಾಮಿನಿಂದ 81 ಲಕ್ಷ ರು.ಗಳ ಮೌಲ್ಯದ 2363 ಕ್ವಿಂಟಲ್‌ ಪಡಿತರ ಅಕ್ಕಿ ನಾಪತ್ತೆ ಪ್ರಕರಣದ ಬಗ್ಗೆಯೂ ದೂರು ದಾಖಲಾಗಿತ್ತು. ಇಲ್ಲೂ ಸಹ ತನಿಖೆ ಹಳ್ಳ ಅಷ್ಟಕ್ಕಷ್ಟೇ. ಈ ಹಿಂದೆ, ಅನೇಕ ಬಾರಿ ಇಂತಹ ಪ್ರಕರಣಗಳು ನಡೆದಿವೆಯಾದರೂ, ಬೆರಳಣಿಕೆಯಷ್ಟು ಪ್ರಕರಣಗಳು ದಾಖಲಾಗಿದ್ದರೆ, ಇನ್ನೂ ಬಹುತೇಕ ಪ್ರಕರಣಗಳು ತೆರೆಮರೆಯಲ್ಲಿಯೇ ಸಂಧಾನ ಕಂಡಿವೆ. ತನಿಖೆ ಕೇವಲ ನೆಪಮಾತ್ರಕ್ಕೆ ಎನ್ನುವಂತಿರುತ್ತದೆ. 

ರಾಜಕೀಯ ಪ್ರಭಾವ ಹಾಗೂ ಅಕ್ಕಿ ಅಕ್ರಮದ ಆರೋಪಿ ಜತೆ ಪೊಲೀಸ್ ಹಾಗೂ ಹಿರಿಯ ಅಧಿಕಾರಿಗಳ ನಡುವಿನ ಸ್ನೇಹ ಮೂಲ ಆರೋಪಿ ಪತ್ತೆಗೆ ಹಿಂದೇಟು ಹಾಕಿದಂತಿದೆ. ಅಕ್ಕಿ ಅಕ್ರಮದ ಆರೋಪಿಗಳಿಗೆ ಖಾಕಿ ಪಡೆಯ ಕೆಲವರು ಸಲಾಮು ಹೊಡೆಯುತ್ತಿರುತ್ತಾರೆ, ಹಾಗಿದ್ದಾಗ ದಂಧೆಕೋರರ ಬಂಧನ ಅದ್ಹೇಗೆ ಸಾಧ್ಯ ಎನ್ನುವ ರೈತ ಸಂಘದ ಚೆನ್ನಪ್ಪ ಆನೆಗೊಂದಿ, ಡಿವೈಎಸ್ಪಿಯೊಬ್ಬರು ಅಕ್ಕಿ ಪ್ರಕರಣದ ಆರೋಪಿಗೆ ಹೂಹಾರ ಹಾಕಿ ಸನ್ಮಾನಿಸಿದ್ದು, ಶಹಾಪುರದ ಅಕ್ಕಿ ಅಕ್ರಮ ಪ್ರಕರಣದ ದೂರುದಾರ ಹಾಗೂ ಹಾಲಿ ಆಹಾರ ಇಲಾಖೆಯ ಉಪನಿರ್ದೇಶಕ ಭೀಮರಾಯ ವಿರುದ್ಧ ಗಂಭೀರ ಆರೋಪಗಳಿದ್ದರೂ ಅಂತಹವರೇ ಇಂತಹ ಪ್ರಕರಣಗಳ ವಿಚಾರಣೆ ನಡೆಸುತ್ತಿರುವಾಗ ಅಕ್ರಮಕ್ಕೆ ಹೇಗೆ ಅಂತ್ಯ ಹಾಡುವುದು ಅಂತಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ಹಾಗೂ ಗುರುಮಠಕಲ್ ಭಾಗದಿಂದ ಸಾಗಾಟವಾಗುವ ಪಡಿತರ ಆಹಾರಧಾನ್ಯಗಳ ಅಕ್ರಮ ಕೇವಲ ಅಲ್ಲಷ್ಟೇ ಅಲ್ಲ, ಕಲಬುರಗಿ ಜಿಲ್ಲೆ ಜೇರ‍್ಗಿ ಹಾಗೂ ಬೀದರ್ ಜಿಲ್ಲೆ ಬಸವಕಲ್ಯಾಣದ ಮೂಲಕ ಮಹಾರಾಷ್ಟ್ರಕ್ಕೆ ಸಾಗಿಸುವ ವೇಳೆ ಸಿಕ್ಕಿಬಿದ್ದು, ಪ್ರಕರಣಗಳು ಠಾಣೆಯಲ್ಲಿ ದಾಖಲಾಗಿವೆ. ಅವೆಲ್ಲ ಏನಾದವು? ಇದರ ಮೂಲ ಯಾರು? ಎಂಬ ಪತ್ತೆ ಆಗದೆ, ಕೇವಲ ಡ್ರೈವರ್ ಹಾಗೂ ಕ್ಲೀನರ್‌ಗಳ ಮೇಲೆ ದೂರು ದಾಖಲಿಸಿಕೊಳ್ಳಲಾಗುತ್ತವೆ. ಯಾದಗಿರಿ ಜಿಲ್ಲೆಯಲ್ಲಿ ನಡೆದ ಇಂತಹ ಪ್ರಕರಣಗಳು ಅನೇಕ ವರ್ಷಗಳಿಂದ ತನಿಖಾ ಹಂತದಲ್ಲಿವೆ. ಶಹಾಪುರದಲ್ಲಿ ಈ 6 ಸಾವಿರ ಕ್ವಿಂಟಲ್‌ ಅಕ್ಕಿ ದಾಸ್ತಾನು ನಾಪತ್ತೆಯಾಗಿರುವ ಪ್ರಕರಣಕ್ಕಿಂತಲೂ ಮುಂಚೆಯೇ, ಅಂದರೆ 29 ಮೇ 2023 ರಂದು ಇದೇ ಸರ್ಕಾರಿ ಗೋದಾಮಿನ ಎದುರು ನಿಲ್ಲಿಸಿದ್ದ ಲಾರಿಯಲ್ಲಿದ್ದ 50 ಕೆಜಿ ತೂಕದ 450 ಚೀಲಗಳ ಪಡಿತರ ಅಕ್ಕಿ ದಾಸ್ತಾನು ಲಾರಿ ಸಮೇತ ಕಳುವಾಗಿತ್ತು.

ಆಲಮಟ್ಟಿ ಡ್ಯಾಂಗೆ ಅಪಾರ ಪ್ರಮಾಣದ ಒಳ ಹರಿವು: ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹ ಭೀತಿ!

ಅದೇ ರೀತಿ, ಸುರಪುರ ತಾಲೂಕು ಕೆಂಭಾವಿ ಸಮೀಪ 510 ಚೀಲಗಳ ಪಡಿತರ ಅಕ್ಕಿಯಿದ್ದ ಲಾರಿ ಪತ್ತೆಯಾಗಿತ್ತು. ದೂರೂ ದಾಖಲಾಗಿತ್ತು. (ಕ್ರೈಂ ನಂ. 0200/2023) ಮುಂದೇನಾಯ್ತು ಗೊತ್ತಿಲ್ಲ. ಶಹಾಪುರ ಸಮೀಪ ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ಸಾಕ್ಷಿ ಸಮೇತ ಹಿಡಿದ ಕೊಟ್ಟರಾದರೂ, ಅದು ಅಕ್ಕಿಯಲ್ಲ, ಜೋಳ –ತೊಗರಿ ಹೀಗಾಗಿ ಬಿಟ್ಟಿದ್ದೇವೆ ಎಂದು ಮರುದಿನ ಅಧಿಕಾರಿಗಳ ಹೇಳಿಕೆ ಅನುಮಾನ ಮೂಡಿಸಿತ್ತು. ಅಕ್ಕಿ ಅಕ್ರಮದ ಪ್ರಕರಣದ ತನಿಖೆಯನ್ನು ಕಳಂಕಿತರಿಗೆ ವಹಿಸುವ ಬದಲು ಸರ್ಕಾರ ಉನ್ನತ ಮಟ್ಟದ ಅಥವಾ ಸಿಐಡಿ ತನಿಖೆಗೆ ಆದೇಶಿಸಿ, ಬಡವರ ಹೊಟ್ಟೆಗೆ ಅನ್ನಭಾಗ್ಯ ಸರಳವಾಗಿ ಸಿಗುವಂತೆ ಮಾಡಿದರೆ ಸತ್ಯಾಸತ್ಯತೆ ಹೊರಬೀಳಲಿದೆ ಅನ್ನೋದು ನಾಗರಿಕರ ಅಭಿಪ್ರಾಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!