ವಾಲ್ಮೀಕಿ ನಿಗಮ ಗದ್ದಲ ತಾರಕಕ್ಕೆ: ಸಿಬಿಐ ತನಿಖೆ, ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು

By Kannadaprabha NewsFirst Published May 31, 2024, 7:30 AM IST
Highlights

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದಲ್ಲಿ ಪರಿಶಿಷ್ಟ ಕಲ್ಯಾಣ ಸಚಿವರ ತಲೆದಂಡಕ್ಕೆ ಪಟ್ಟು ಹಿಡಿದಿರುವ ಬಿಜೆಪಿ ಮುಖಂಡರು, ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಜೂ.6ರ ಗಡುವು ನೀಡಿದ್ದಾರೆ. ಒಂದು ವೇಳೆ ರಾಜೀನಾಮೆ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ಬೆಂಗಳೂರು(ಮೇ.31):  ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯು ಸಚಿವರ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ತೀವ್ರ ರಾಜಕೀಯ ಕೆಸರೆರಚಾಟ ಹಾಗೂ ಸಂಘರ್ಷಕ್ಕೆ ಕಾರಣವಾಗಿದೆ. ಅದರ ಬೆನ್ನಲ್ಲೇ ಪ್ರಕರಣದ ಸಿಐಡಿ ತನಿಖೆ ಚುರುಕುಗೊಂಡಿದೆ. ಡಿಸಿಎಂ ಡಿ.ಕೆ.ಶಿವಕುಮಾರ್‌ಅವರು ಸಚಿವ ನಾಗೇಂದ್ರ ಅವರಿಂದ ವಿವರಣೆ ಕೇಳುವುದಾಗಿ ಹೇಳಿದ್ದಾರೆ. ನಾಗೇಂದ್ರ ರಾಜೀನಾಮೆ ಬಗ್ಗೆ ಸದ್ಯ ಸಿಎಂ ನಿರ್ಧರಿಸಲ್ಲ ಎನ್ನಲಾಗಿದೆ.

ಸಿಬಿಐ ತನಿಖೆ, ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು

Latest Videos

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದಲ್ಲಿ ಪರಿಶಿಷ್ಟ ಕಲ್ಯಾಣ ಸಚಿವರ ತಲೆದಂಡಕ್ಕೆ ಪಟ್ಟು ಹಿಡಿದಿರುವ ಬಿಜೆಪಿ ಮುಖಂಡರು, ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಜೂ.6ರ ಗಡುವು ನೀಡಿದ್ದಾರೆ. ಒಂದು ವೇಳೆ ರಾಜೀನಾಮೆ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಎಚ್ಚರಿ ಕೆಯನ್ನೂ ಕೊಟ್ಟಿದ್ದಾರೆ.

ನಿಗಮದ ಹಣ ವಾಪಸ್‌ ಕೇಳಿದ್ದ ಅಧಿಕಾರಿ ಪತ್ರ ಬಹಿರಂಗ! ಅಧಿಕಾರಿ ಆತ್ಮಹತ್ಯೆಗೂ ಮುನ್ನವೇ ಹಗರಣ ಗೊತ್ತಿತ್ತು?

ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಗುರುವಾರ ಮುತ್ತಿಗೆ ಹಾಕಲೂ ಯತ್ನಿಸಿರುವ ಬಿಜೆಪಿ ಕಾಠ್ಯಕರ್ತರು, ಮುಖಂಡರು ಪ್ರಕರಣದ ತನಿಖೆಯನ್ನು ಒಪ್ಪಿಸುವಂತೆ ಆಗ್ರಹಿಸಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕ ಅಶೋಕ್, ಮಾಜಿ ಸಿಎಂ ಬೊಮ್ಮಾಯಿ, ಮುಖಂಡ ರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಮತ್ತಿತರರು ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನು ಎಟಿಎಂನಂತೆ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ. 

ಚುನಾವಣೆ ವೇಳೆ ವರ್ಗಾವಣೆ: 

ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದಕ್ಕೆ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣವೇ ಉತ್ತಮ ಉದಾಹರಣೆ. ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರವಾಗಿದೆ. ಸುಮಾರು 25 ಕೋಟಿ ಹಣವನ್ನು ಪಕ್ಕದ ರಾಜ್ಯಕ್ಕೆ ವರ್ಗಾವಣೆ ಮಾಡಲಾಗಿದೆ. ಇದಕ್ಕಾಗಿ ಹೊಸ ಅಕೌಂಟ್ ತೆರೆಯಲಾಗಿದೆ. ಕಾಂಗ್ರೆಸ್ ಸರ್ಕಾರ ಚುನಾವಣೆಗಾಗಿ ಕರ್ನಾಟಕವನ್ನು ಎಟಿಎಂ ರೀತಿ ಬಳಸುತ್ತಿದೆ. ಚುನಾವಣೆ ಸಂದರ್ಭದಲ್ಲಿ ಖಾತೆ ತೆರೆದು ಹೊರರಾಜ್ಯಕ್ಕೆ ಹಣ ಹೋಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕು, ಸರ್ಕಾರ ಭಂಡತನ ಬಿಟ್ಟು ಚಂದ್ರಶೇಖರನ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. 

ಬೀದಿಗಿಳಿತೇವೆ: 

ಇದೇ ವೇಳೆ ಸಚಿವ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ದಲಿತರ ಹಣ ನುಂಗಿದ ಕಾಂಗ್ರೆಸ್ ಎಂಬ ಬ್ಯಾನರ್‌ನಡಿ ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿರುವ ಪ್ರತಿಪಕ್ಷ ನಾಯಕ ಆ‌ರ್.ಅಶೋಕ್, ರಾಮನ ಹೆಸರು ಕಂಡರೆ ಆಗದ ಕಾಂಗ್ರೆಸ್‌ಗೆ ಈಗ ಅಧಿಕಾರಿಗಳಿಗೂ ಗ್ಯಾರಂಟಿ ಇಲ್ಲ ಎಂದು ಕಿಡಿಕಾರಿದ್ದಾರೆ.

ಅಧಿಕಾರಿ ಬರೆದಿರುವ ಡೆತ್‌ನೋಟಿನಲ್ಲಿ ಸಚಿವರ ಮೌಖಿಕ ಸೂಚನೆ ಎಂದು ಉಲ್ಲೇಖಿಸಿರುವ ಮೇಲೆ ಇನ್ನೇನು ಸಾಕ್ಷಿ. ಬೇಕು? ಇಷ್ಟು ದೊಡ್ಡ ಹಗರಣ ದೊಡ್ಡವರ ಬಲ ಇಲ್ಲದೆ ನಡೆಯಲು ಸಾಧ್ಯವೇ? ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್, ಬ್ಯಾಂಕ್ ಅಧಿಕಾರಿ ಸ್ಮಿತಾ ಹೆಸರನ್ನೂ ಉಲ್ಲೇಖಿಸಿದ್ದಾರೆ. ಇದರ ಜೊತೆ ಎನ್.ನಾಗರಾಜ್ ಹೆಸರೂ ಪ್ರಸ್ತಾಪಿಸಲಾಗಿದೆ.ಹಾಗಿದ್ದರೆಎನ್.ನಾಗರಾಜ್ ಯಾರು? ಇವರಿಗೆ ಸಚಿವರಿಗೂ ಏನು ಸಂಬಂಧ? ಇಲ್ಲಿ ಒಂದು ಸಿಂಡಿಕೇಟ್ ರೂಪದಲ್ಲಿ ಹಗರಣ ನಡೆದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಪೌರುಷ ಎಲ್ಲಿ ಹೋಯ್ತು?:

ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಈ ರೀತಿಯ ಘಟನೆಗಳು ಆದಾಗ ಹಿಂದಿನ ಸರ್ಕಾರಗಳು ಹೇಗೆ ನಡೆದುಕೊಂಡಿವೆಯೋ ಅದೇ O3 ನಡೆದುಕೊಳ್ಳಬೇಕು. ಸಚಿವ ನಾಗೇಂದ್ರ ರಾಜೀನಾಮೆ ಪಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಆಗ್ರಹಿಸಿದ್ದಾರೆ.

ಈ ಹಿಂದೆ ಗುತ್ತಿಗೆದಾರ ಸಾವಿನ ವಿಚಾರದಲ್ಲಿ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರದ್ದು ತಪ್ಪಿರಲಿಲ್ಲ. ಆದರೂ ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಈಶ್ವರಪ್ಪ ವಿಚಾರದಲ್ಲಿ ಆಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ತೋರಿಸಿದ ರೋಷಾವೇಷ ಈಗ ಏಕೆ ಕಾಣುತ್ತಿಲ್ಲ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಚಂದ್ರಶೇಖರನ್ ಆತ್ಮಹತ್ಯೆಗೆ ಸಂಬಂಧಿಸಿ ಸಚಿವ ನಾಗೇಂದ್ರ ರಾಜಿನಾಮೆ ನೀಡುವುದಷ್ಟೇ ಅಲ್ಲ, ಅವರ ಬಂಧನವೂ ಆಗಬೇಕು ಎಂದು ಪಟ್ಟುಹಿಡಿದಿರುವ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ್, ಪ್ರಕರಣದ ನೈತಿಕ ಹೊಣೆ ಹೊತ್ತು ಹಣಕಾಸು ಖಾತೆಯ ಜವಾಬ್ದಾರಿ ಹೊತ್ತಿರುವ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ

ಸಚಿವ ನಾಗೇಂದ್ರ ಬೆಂಬಲಕ್ಕೆ ನಿಂತ ಡಿಕೆಶಿ, ಪರಂ, ಎಂಬಿಪಾ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗ ಮದ ಅಧೀಕ್ಷಕ ಚಂದ್ರಶೇ ಖರನ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಪರಿಶಿಷ್ಟ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಪ್ರತಿಭಟನೆ, ಆಗ್ರಹ ತೀವ್ರಗೊಳಿಸಿರುವ ನಡುವೆಯೇ ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಸಚಿವರು ನಾಗೇಂದ್ರ ಅವರ ಬೆನ್ನಿಗೆ ನಿಂತಿದ್ದಾರೆ. 

ಈ ಸಂಬಂಧ ಗುರುವಾರ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾ ಡಿರುವ ಡಿ.ಕೆ.ಶಿವಕುಮಾ‌ರ್, ಗೃಹ ಸಚಿವ ಡಾ.ಜಿ. ಪರ ಮೇಶ್ವರ್, ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಸಮಾಜ ಕಲ್ಯಾಣ ಸಚಿವ ಎಚ್ .ಸಿ.ಮಹದೇವಪ್ಪ ಮತ್ತಿತರ ಸಚಿವರು, 'ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಿದ ಪ್ರಕರಣಕ್ಕೂ ಈಗಿನ ಸಚಿವ ನಾಗೇಂದ್ರ ಅವರ ಇಲಾಖೆಯ ಪ್ರಕರಣಕ್ಕೂ ವ್ಯತ್ಯಾಸವಿದೆ. ಅಂದು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಡೆತ್‌ ನೋಟ್‌ನಲ್ಲಿ ನೇರವಾಗಿ ಈಶ್ವರಪ್ಪ ಅವರ ಹೆಸರಿತ್ತು. ಹಾಗಾಗಿ ನಾವು ರಾಜೀನಾಮೆ ಕೇಳಿದೆವು. ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದ ಡೆತ್‌ನೋಡ್‌ನಲ್ಲಿ ಸಚಿವ ನಾಗೇಂದ್ರ ಅವರ ಹೆಸರಿಲ್ಲ. ಅಧಿಕಾರಿಗಳ ಹೆಸರಿದೆ. ಅವರ ವಿರುದ್ದ ಕ್ರಮ ಆಗಿದೆ. ಹಾಗಂತ ಅಷ್ಯಕ್ಕೆ ಮುಗಿದಿಲ್ಲ. ಸಿಐಡಿ ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರಬರುವವರೆಗೆ ಸಚಿವರ ರಾಜೀನಾಮೆ ಪ್ರಶ್ನೆ ಬರುವುದಿಲ್ಲ' ಎಂದು ಸಮರ್ಥಿಸಿಕೊಂಡಿದ್ದಾರೆ.

ಡಿ.ಕೆ.ಶಿವಕುಮಾರ್ ಮಾತನಾಡಿ, ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ತಕ್ಷಣ ಎಫ್ ಐಆರ್ ಆಗಿದೆ. ಡೆತನೋಟ್‌ನಲ್ಲಿ ಹೆಸರಿರುವ ಅಧಿಕಾರಿಗಳ ತಲೆದಂಡವಾಗಿದೆ. ಅವರ ತಲೆದಂಡದಿಂದ ಎಲ್ಲವೂ ಸರಿ ಹೋಗಲ್ಲ. ತನಿಖೆ ನಡೆದು ಸತ್ಯಾಂಶ ಹೊರಬರಬೇಕಿದೆ. ಇದರ ನಡುವೆ ಬಿಜೆಪಿಯವರು ಸಚಿವ ನಾಗೇಂದ್ರ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಪ್ರತಿಪಕ್ಷದವರು ರಾಜೀನಾಮೆ ಕೇಳುವುದು ಸಹಜ. ಆದರೆ, ಡೆತ್‌ ನೋಟ್‌ನಲ್ಲಿ ಸಚಿವರು ಹೇಳಿದರು ಅಂತ ಇದೆಯೇ ಹೊರತು ಸಚಿವ ನಾಗೇಂದ್ರ ಹೇಳಿದರು ಅಂತ ಇಲ್ಲ ಎಂದರು.

ರಾಜೀನಾಮೆಗೆ ಪುರಾವೆ ಬೇಕಲ್ಲ: ಡಾ.ಜಿ.ಪರಮೇಶ್ವರ್ ಮಾತನಾಡಿ, ತಮ್ಮ ಸರ್ಕಾರದಲ್ಲಿ ಈಶ್ವರಪ್ಪ ರಾಜೀನಾಮೆ ಕೊಟ್ಟರು ಅಂತ ಬಿಜೆಪಿಯವರು ಈಗ ಸಚಿವ ನಾಗೇಂದ್ರ ಅವರ ರಾಜೀನಾಮೆ ಕೇಳುವುದು ಸರಿಯಲ್ಲ. ಆ ಪ್ರಕರಣಕ್ಕೂ ಇದಕ್ಕೂ ವ್ಯತ್ಯಾಸವಿದೆ. ರಾಜೀನಾಮೆ ಪಡೆಯಲು ಪುರಾವೆಗಳು ಬೇಕಲ್ಲ. ನಾನು ಡೆತ್ ನೋಟ್ ನೋಡಿಲ್ಲ. ತನಿಖಾಧಿಕಾರಿಗಳು ಅದರ ಪರಿಶೀಲನೆ ಮಾಡುತ್ತಾರೆ. ಡೆತ್ ನೋಟ್ ಪರಿಶೀಲನೆ ಆಗುವವರೆಗೆ ಏನೂ ಹೇಳೋಕಾಗಲ್ಲ. ಡೆತ್ ನೋಟ್ ಸತ್ಯಾಸತ್ಯತೆ ಪರಿಶೀಲಿಸಿ ಮುಂದಕ್ಕೆ ಹೋಗುತ್ತೇವೆ. ತನಿಖೆಯಲ್ಲಿ ಸತ್ಯಾಂಶ ಹೊರಬರಲಿದೆ. ಅಲ್ಲಿಯವರೆಗೆ ಕಾಯಬೇಕಲ್ವಾ ಎಂದರು.

ವಾಲ್ಮೀಕಿ ನಿಗಮ ಅಧಿಕಾರಿ ಆತ್ಮಹತ್ಯೆ, ತಾರ್ಕಿಕ ಅಂತ್ಯದವರೆಗೂ ಕೈ ಬಿಡಲ್ಲ: ಬಿ.ವೈ.ವಿಜಯೇಂದ್ರ ಸ್ಪಷ್ಟನೆ

ಮಹದೇವಪ ಮಾತನಾಡಿ, ಚಂದ್ರಶೇಖರನ್ ಒಳ್ಳೆಯ ಅಧಿಕಾರಿ. ಅವರ ಆತ್ಮಹತ್ಯೆ ಖೇದ ತಂದಿದೆ. ಡೆತ್‌ ನೋಟಲ್ಲಿ ಕೆಲ ಆರೋಪಗಳಿರುವ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ ಆಯಾಮದಲ್ಲೂ ತನಿಖೆ ನಡೆಸುತ್ತಿದೆ. ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ. ಬಿಜೆಪಿಯವರು ಸಹಜವಾಗಿಯೇ ಸಚಿವರ ರಾಜೀನಾಮೆ ಕೇಳುತ್ತಾರೆ. ಅವರು ಪ್ರಕರಣವನ್ನು ರಾಜಕಾರಣಗೊಳಿಸಿದ ತಕ್ಷಣ ಸತ್ಯಾಸತ್ಯತೆ ಹೊರಗಡೆ ಬರದೆ ಯಾವ ತೀರ್ಮಾನ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಸಚಿವರ ಗಮನಕ್ಕೆ ಬಾರದೆ ಹಣ ವರ್ಗಾವಣೆ: 

ಸಚಿವ ಎಂ.ಬಿ.ಪಾಟೀಲ್ ಮಾತನಾಡಿ. ಕೆಲವು ಸಲ ಸಚಿವರ ಗಮನಕ್ಕೆ ಬಾರದೆ ಹಣ ವರ್ಗಾವಣೆ ಆಗುತ್ತೆ. ನನ್ನ ಇಲಾಖೆಯಲ್ಲೂ ಕೆಲವು ವ್ಯತ್ಯಾಸಗಳಾಗಿತ್ತು. ಇದನ್ನು ನೋಡಿ ನನಗೂ ಅಚ್ಚರಿಯಾಗಿತ್ತು. ಕೆಲ ಅಧಿಕಾರಿಗಳನ್ನು ಅಮಾನತು ಮಾಡಿದ್ದೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಚಿವ ನಾಗೇಂದ್ರ ರಾಜೀನಾಮೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

click me!