ನಿಗಮದ ಹಣ ವಾಪಸ್‌ ಕೇಳಿದ್ದ ಅಧಿಕಾರಿ ಪತ್ರ ಬಹಿರಂಗ! ಅಧಿಕಾರಿ ಆತ್ಮಹತ್ಯೆಗೂ ಮುನ್ನವೇ ಹಗರಣ ಗೊತ್ತಿತ್ತು?

By Kannadaprabha NewsFirst Published May 31, 2024, 6:38 AM IST
Highlights

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾಗಿದ್ದು, ಅದನ್ನು ನಿಗಮದ ಬ್ಯಾಂಕ್‌ ಖಾತೆಗೆ ವಾಪಸು ಹಾಕುವಂತೆ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಅವರು ಎಂ.ಜಿ. ರಸ್ತೆಯ ಯೂನಿಯನ್‌ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರಿಗೆ ಬರೆದಿದ್ದರು ಎನ್ನಲಾದ ಪತ್ರ ಇದೀಗ ಬಹಿರಂಗಗೊಂಡಿದೆ.

ಬೆಂಗಳೂರು (ಮೇ.31) : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾಗಿದ್ದು, ಅದನ್ನು ನಿಗಮದ ಬ್ಯಾಂಕ್‌ ಖಾತೆಗೆ ವಾಪಸು ಹಾಕುವಂತೆ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಅವರು ಎಂ.ಜಿ. ರಸ್ತೆಯ ಯೂನಿಯನ್‌ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರಿಗೆ ಬರೆದಿದ್ದರು ಎನ್ನಲಾದ ಪತ್ರ ಇದೀಗ ಬಹಿರಂಗಗೊಂಡಿದೆ.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ(Maharishi Valmiki Scheduled Tribes Development Corporation)ದಲ್ಲಿ ಲೆಕ್ಕ ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರನ್‌ ಆತ್ಮಹತ್ಯೆChandrashekharan suicide) ಯಿಂದ ಬಹಿರಂಗಗೊಂಡಿರುವ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಚಂದ್ರಶೇಖರನ್‌ ಡೆತ್‌ನೋಟ್‌ನಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೂ ಸೇರಿದಂತೆ ಇನ್ನಿತರ ಅಧಿಕಾರಿಗಳ ಹೆಸರು ಬರೆಯಲಾಗಿದೆ. ಅದರ ಜತೆಗೆ ಸಚಿವರ ಮೌಖಿಕ ಆದೇಶ ಎಂದು ಉಲ್ಲೇಖಿಸುವ ಮೂಲಕ ಪ್ರಕರಣ ಗಂಭೀರವಾಗುವಂತೆ ಮಾಡಲಾಗಿದೆ.

Latest Videos

ನನ್ನ ಮೇಲೆ ಆರೋಪ ಬಂದಾಗ ರಾಜೀನಾಮೆಗೆ ನೀಡಿದ್ದೆ; ಸಚಿವ ನಾಗೇಂದ್ರ ರಾಜೀನಾಮೆ ನೀಡಲಿ: ಈಶ್ವರಪ್ಪ

ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮಕ್ಕೆ ಸೇರಿದ 88 ಕೋಟಿ ರು.ಗೂ ಹೆಚ್ಚಿನ ಹಣವನ್ನು ಹೈದರಾಬಾದ್‌ ಮೂಲದ ಖಾಸಗಿ ಸಂಸ್ಥೆಗಳ ಖಾತೆಗೆ ವರ್ಗಾಯಿಸಿರುವುದು ಬೆಳಕಿಗೆ ಬಂದಿದೆ. ಅದರ ಜತೆಗೆ ಸದ್ಯ ಅಮಾನತುಗೊಂಡಿರುವ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ ಅವರು ಹಣ ಅಕ್ರಮ ವರ್ಗಾವಣೆ ಕುರಿತು ಮೇ 23ರಂದು ಪತ್ರ ಬರೆದು ಎಂ.ಜಿ. ರಸ್ತೆ ಯೂನಿಯನ್‌ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದರು ಎಂದು ಹೇಳಲಾಗುತ್ತಿದೆ.

ಬಹಿರಂಗಗೊಂಡಿರುವ ಪತ್ರದಲ್ಲೇನಿದೆ?:

ಜೆ.ಜಿ. ಪದ್ಮನಾಭ (JG Padmanabha)ಅವರು ಬರೆದಿದ್ದರೆನ್ನಲಾದ ಪತ್ರದಲ್ಲಿ, ಮಾ. 4ರಿಂದ ಮೇ 21ರವರೆಗೆ ಆರ್‌ಟಿಜಿಎಸ್‌(RTGS) ಮೂಲಕ ನಿಗಮದ ಬೇರೆ ಖಾತೆಗಳು ಹಾಗೂ ರಾಜ್ಯ ಹುಜೂರ್‌ ಖಜಾನೆ 2ರ ಮೂಲಕ ನಿಗಮದ ಖಾತೆಗೆ ಒಟ್ಟು 187.33 ಕೋಟಿ ರು. ಹಣವನ್ನು ವರ್ಗಾಯಿಸಲಾಗಿದೆ. ಅದಾದ ನಂತರ ನಮ್ಮ ಖಾತೆಗೆ ಸಂಬಂಧಿಸಿದ ಪಾಸ್‌ಬುಕ್‌, ಚೆಕ್‌ಬುಕ್‌ಗಳನ್ನು ಬ್ಯಾಂಕ್‌ನಿಂದ ನೀಡಿರಲಿಲ್ಲ. ಈ ಕುರಿತು ಪ್ರಶ್ನಿಸಿದಾಗ ಹಿಂದೆಯೇ ಪಾಸ್‌ಬುಕ್‌, ಚೆಕ್‌ಬುಕ್‌ಗಳನ್ನು ನಿಗಮದ ವಿಳಾಸಕ್ಕೆ ಕಳುಹಿಸಲಾಗಿದೆ ಎಂದು ಉತ್ತರಿಸಲಾಗಿದೆ. ಆದರೆ, ನಿಗಮದಲ್ಲಿ ಪರಿಶೀಲಿಸಿದಾಗ ಯಾವುದೇ ಪಾಸ್‌ಬುಕ್‌ ಮತ್ತು ಚೆಕ್‌ಬುಕ್‌ ಹಾಗೂ ಬ್ಯಾಂಕ್‌ ಖಾತೆಯ ವಹಿವಾಟಿನ ಸ್ಟೇಟ್‌ಮೆಂಟ್ ಬಂದಿರಲಿಲ್ಲ.

ಅದಾದ ನಂತರ ಮತ್ತೊಮ್ಮೆ ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸಿದಾಗ, ನಿಗಮದ ಖಾತೆಯಿಂದ ವಿವಿಧ ಖಾತೆಗಳಿಗೆ 87 ಕೋಟಿ ರು.ಗಳು ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಅಲ್ಲದೆ, ಹೀಗೆ ವರ್ಗಾವಣೆ ಮಾಡಲು ಬಳಸಿದ ನಿಗಮದ ಆರ್‌ಟಿಜಿಎಸ್‌ ಮನವಿಯ ಪತ್ರದಲ್ಲಿ ನನ್ನ ಮತ್ತು ನಿಗಮದ ಲೆಕ್ಕಾಧಿಕಾರಿಯ ಸಹಿ ನಕಲಿಯಾಗಿದೆ. ಅಲ್ಲದೆ, ನಿಗಮದ ಲೆಟರ್‌ಹೆಡ್‌, ಸೀಲ್‌ಗಳೂ ನಕಲಿಯಾಗಿದ್ದು, ಅದನ್ನು ಪರಿಶೀಲಿಸುವ ಬದಲು ಹಣ ವರ್ಗಾವಣೆ ಮಾಡಿದ್ದೀರಿ. ಹೀಗೆ ಹಣ ವರ್ಗಾವಣೆಗೂ ಮುನ್ನ ನಿಗಮದ ಗಮನಕ್ಕೂ ತಂದಿಲ್ಲ. ಹೀಗಾಗಿ ಇದು ಬ್ಯಾಂಕ್‌ ಕಡೆಯಿಂದಲೇ ತಪ್ಪಾಗಿದ್ದು, ಕೂಡಲೇ ನಿಗಮದ ಖಾತೆಗೆ ಹಣ ವರ್ಗಾವಣೆ ಮಾಡುವಂತೆ ಸೂಚಿಸಿದ ಕುರಿತು ಪತ್ರದಲ್ಲಿ ಉಲ್ಲೇಖವಾಗಿದೆ.

ಪೂರ್ಣ ಪ್ರಮಾಣದಲ್ಲಿ ಹಣ ವರ್ಗಾವಣೆಯಾಗಿಲ್ಲ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಖಾತೆಯಲ್ಲಿದ್ದ ಹಣ ಅಕ್ರಮ ವರ್ಗಾವಣೆ ಕುರಿತು ಯೂನಿಯನ್‌ ಬ್ಯಾಂಕ್‌ ಗಮನಕ್ಕೆ ತಂದ ಕೂಡಲೇ 5 ಕೋಟಿ ರು.ಗಳನ್ನು ನಿಗಮದ ಖಾತೆಗೆ ವರ್ಗಾಯಿಸಲಾಗಿದೆ. ಅದನ್ನು ಹೊರತುಪಡಿಸಿ ಅಕ್ರಮವಾಗಿ ವರ್ಗಾವಣೆಯಾಗಿರುವ ಹಣ ಪೂರ್ಣಪ್ರಮಾಣದಲ್ಲಿ ನಿಗಮದ ಖಾತೆಗೆ ವರ್ಗಾವಣೆಯಾಗಿಲ್ಲ. ಅಲ್ಲದೆ, ಈವರೆಗೆ ಎಷ್ಟು ಹಣ ವರ್ಗಾವಣೆಯಾಗಿದೆ ಎಂಬ ಬಗ್ಗೆ ನಿಗಮದ ಅಧಿಕಾರಿಗಳಿಗೂ ಮಾಹಿತಿಯಿಲ್ಲ.

 

ವಾಲ್ಮೀಕಿ ನಿಗಮ ಅಧಿಕಾರಿ ಆತ್ಮಹತ್ಯೆ, ತಾರ್ಕಿಕ ಅಂತ್ಯದವರೆಗೂ ಕೈ ಬಿಡಲ್ಲ: ಬಿ.ವೈ.ವಿಜಯೇಂದ್ರ ಸ್ಪಷ್ಟನೆ

ಫಲಾನುಭವಿಗಳಿಗೆ ಹಣ ವಿಳಂಬ?

ಸ್ವ-ಉದ್ಯೋಗ, ಭೂ ಒಡೆತನ ಯೋಜನೆ ಸೇರಿದಂತೆ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಕೈಗೊಳ್ಳಲಾಗಿರುವ ಯೋಜನೆಗಳ ಫಲಾನುಭವಿಗಳಿಗೆ ಜೂನ್‌ 14ರಿಂದ ಸಹಾಯಧನ ವಿತರಣೆಯಾಗಬೇಕಿತ್ತು. ಆದರೆ, ಸದ್ಯ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಿಂದಾಗಿ ಫಲಾನುಭವಿಗಳ ಗುರುತು ಮತ್ತು ಸಹಾಯಧನ ವಿತರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ಜತೆಗೆ ನೀತಿ ಸಂಹಿತೆ ಮುಕ್ತಾಯದ ನಂತರ ಚಾಲನೆ ನೀಡಬೇಕಿದ್ದ, ಯೋಜನೆಗಳೂ ವಿಳಂಬವಾಗುವ ಸಾಧ್ಯತೆಗಳಿವೆ.

click me!