ಬಿಕ್ಲು ಶಿವ ಹತ್ಯೆ ಪ್ರಕರಣ, ಬೈರತಿಗೆ ಮತ್ತಷ್ಟು ಬಿಗಿಯಾದ ಕಾನೂನು, ಮತ್ತೊಮ್ಮೆ ನಿರೀಕ್ಷಣಾ ಜಾಮೀನು ವಜಾ

Published : Dec 23, 2025, 06:18 PM IST
 Byrathi Basavaraj

ಸಾರಾಂಶ

ಭಾರತೀನಗರದ ರೌಡಿ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಶಾಸಕ ಬೈರತಿ ಬಸವರಾಜು ಅವರಿಗೆ ಮತ್ತೆ ಹಿನ್ನಡೆಯಾಗಿದೆ. ನಿರೀಕ್ಷಣಾ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.  

ಬೆಂಗಳೂರು: ಭಾರತೀನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಆರೋಪಿ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಬೈರತಿ ಬಸವರಾಜು ಅವರಿಗೆ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ. ಇದರ ನಡುವೆ ಶಾಸಕರಿಗೆ ಮತ್ತೊಮ್ಮೆ ಶಾಕ್ ಆಗಿದೆ. ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಮತ್ತೆ ವಜಾಗೊಂಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಸಂಬಂಧ ಅದೇಶ ಹೊರಡಿಸಿದೆ. ಬೆಳಗಾವಿ ಅಧಿವೇಶನದಲ್ಲಿ ಮೊದಲ ವಾರ ಕಾಣಿಸಿಕೊಂಡಿದ್ದ ಬೈರತಿ ಬಸವರಾಜು ಅವರು ನಂತರ ಕಣ್ಮರೆಯಾಗಿದ್ದಾರೆ. ಕೊಲೆ ಪ್ರಕರಣದಲ್ಲಿ ಮಾಜಿ ಸಚಿವರಿಗಾಗಿ ಪುಣೆ, ಗೋವಾ ಹಾಗೂ ತಮಿಳುನಾಡಿನಲ್ಲೂ ಸಿಐಡಿ ತಂಡಗಳು ಹುಡುಕಾಟ ನಡೆಸುತ್ತಲೇ ಇದೆ.

ಎಸ್‌ಪಿಪಿ ವಾದವೇನು?

15/7, ರಂದು ಒಂದೇ ಲೋಕೇಷನ್ ನಲ್ಲಿ ಎ1ಜಗ್ಗ ಮತ್ತು ಬೈರತಿ ಒಂದೇ ಜಾಗದಲ್ಲಿ ಇದ್ರು, ಕಾಲ್ ಲಿಸ್ಟ್ ಕೂಡ ಇದೆ, ಜೊತೆಗೆ 20 ಜನರೊಂದಿಗೆ ಮಾತಾಡಿದ್ದಾರೆ. ಬೈರತಿ ಬಸವರಾಜ್ ಪಾತ್ರದ ಬಗ್ಗೆ ಸಾಕಷ್ಟು ಸಾಕ್ಷಿಗಳಿವೆ. ಎ20 ಅಜಿತ್ ಪರ್ಸನಲ್‌ ಸೆಕ್ರೆಟರಿ ಅವರ ಮೊಬೈಲ್ ನಿಂದ ಮಾತಾಡಿದ್ದಾರೆ. 8.10ಕ್ಕೆ ಸ್ಥಳಕ್ಕೆ ಬಂದು ನಂತರ ಏರ್ಪೋರ್ಟ್ ಗೆ ಹೋಗಿದ್ದಾರೆ. ಹೀಗಾಗಿ ಆರೋಪಿಗೆ ಯಾವುದೇ ಕಾನೂನು ರಕ್ಷಣೆ ನೀಡಬಾರದು. ಈ ಹತ್ಯೆ ಪ್ರಕರಣದಲ್ಲಿ ಎಲ್ಲಾ ಆರೋಪಿಗಳು ಒಳಸಂಚು ನಡೆಸಿದ್ದಾರೆ. ಕೇವಲ ಒಂದು ಪೋಟೋ ಆಧರಿಸಿ ತನಿಖೆ ನಡೆದಿಲ್ಲ. ಸಾಕಷ್ಟು ಅಂಶಗಳನ್ನ ಆಧರಿಸಿ ತನಿಖೆ ನಡೆದಿದೆ. ಕಸ್ಟೋಡಿಯಲ್ ಇಂಟ್ರಾಗೇಷನ್ ಅಗತ್ಯ ಇದೆ ಹೀಗಾಗಿ ನಿರೀಕ್ಷಣಾ ಜಾಮೀನು ನೀಡದಂತೆ ಎಸ್ಪಿಪಿ ಅಶೋಕ್ ನಾಯ್ಕ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಬೈರತಿ ಪರ ವಕೀಲರ ವಾದವೇನು?

2.05.2025ರಂದು ಬೈರತಿ ಬಸವರಾಜ್ ಬರ್ತ್ ಡೇ ಇತ್ತು. ಬರ್ತ್ಡೇ ಹಿನ್ನಲೆ‌ ಕುಂಬಮೇಳಕ್ಕೆ ಬೈರತಿ ಹೋಗಿದ್ದಾರೆ.ಆ ಸಮಯದಲ್ಲಿ ಎ1ಜಗದೀಶ್ ಕೂಡ ಹೋಗಿದ್ದಾರೆ. ಕುಂಬಮೇಳಕ್ಕೆ ಹೋಗಿ ಬಂದ ನಂತರ ಜಗ್ಗ ಹಾಗೂ ಬೈರತಿ ಬಸವರಾಜ್ ನಡುವೆ ಯಾವುದೇ ಸಂಪರ್ಕ ಇಲ್ಲ. 5ತಿಂಗಳು 10ದಿನಗಳ ತನಿಖೆ ನಡೆದಿದ್ರೂ, ಇವರೆಗೂ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಸ್ಟ್ರಾಂಗ್ ಎವಿಢನ್ಸ್ ಇಲ್ಲ, ಆದ್ರೂ ಕಸ್ಟೋಡಿಯಲ್ ಇಂಟ್ರಾಗೇಷನ್ ಅಗತ್ಯ ಅಂತ ಸಿಐಡಿ ಹೇಳ್ತಾ ಇರೋದು ಸರಿಯಲ್ಲ ಇತರೆ ಆರೋಪಿಗಳ ಮೇಲೆ ಇರುವ ಸಾಕ್ಷಿ ಆಧರಿಸಿ ಬಂಧನ ಸರಿಯಲ್ಲ ಎಂದು ಬೈರತಿ ಬಸವರಾಜ್ ಪರ ಸಂದೇಶ್ ಚೌಟ ವಾದ ಮಂಡಿಸಿದರು.

ಪ್ರಕರಣ ಸಂಬಂಧ ಕಳೆದ ಸೋಮವಾರ ಜನಪ್ರತಿ ನಿಧಿಗಳ ವಿಶೇಷ ನ್ಯಾಯಾಲಯಕ್ಕೆ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) 4236 ಪುಟಗಳ ಆರೋಪಪಟ್ಟಿ ಸಲ್ಲಿಸಿತ್ತು. ಬಿಕ್ಲು ಶಿವ ಹತ್ಯೆಗೆ ಭೂ ವಿವಾದ ಮಾತ್ರವಲ್ಲದೆ ಜಗ್ಗನಿಗೆ ತನ್ನನ್ನು ಬಿಕ್ಲು ಶಿವ ಹತ್ಯೆ ಮಾಡುವ ಭೀತಿಯೂ ಪ್ರಮುಖ ಕಾರಣವಾಗಿತ್ತು. ಅಲ್ಲದೆ, ಈ ಹತ್ಯೆಗೆ ಕೋಲಾರ ಜಿಲ್ಲೆ ಮಾಲೂರಿನ ಹುಡುಗರನ್ನು ಸುಪಾರಿ ಹಂತಕರಾಗಿ ಜಗ್ಗ ಬಳಸಿಕೊಂಡಿದ್ದ ಎಂದು ಆರೋಪ ಪಟ್ಟಿಯಲ್ಲಿ ಸಿಐಡಿ ಉಲ್ಲೇಖಿಸಿದೆ ಎಂಬುದು ಸದ್ಯದ ಮಾಹಿತಿ.

ಘಟನೆ ಹಿನ್ನೆಲೆ

ಜಗ್ಗ ಸೇರಿ 18 ಆರೋಪಿಗಳ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು. ಇದರಲ್ಲಿ ಶಾಸಕ ಬೈರತಿ ಬಸವರಾಜು ಅವರನ್ನು ನಾಪತ್ತೆ ಆರೋಪಿ ಎಂದು ಉಲ್ಲೇಖಿಸಿದೆ. ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿ ಕಿತ್ತಗನೂರಿನಲ್ಲಿ ಸರ್ವೆ ನಂ.212ರ ಭೂ ವ್ಯಾಜ್ಯದ ಹಿನ್ನೆಲೆಯಲ್ಲಿ ಜಗ್ಗ ಹಾಗೂ ಬಿಕ್ಲು ಶಿವನ ಮಧ್ಯೆ ವಿವಾದ ನಡೆದಿತ್ತು. ಇದೇ ವಿಷಯವಾಗಿ ಪರಸ್ಪರ ಗಲಾಟೆ ಮಾಡಿಕೊಂಡಿದ್ದರು. ಈ ಕಾರಣದಿಂದಲೇ ಜು.15 ರಂದು ರಾತ್ರಿ ಹಲಸೂರು ಕೆರೆ ಸಮೀಪ ಇರುವ ತನ್ನ ಮನೆ ಮುಂದೆ ನಿಂತಿದ್ದ ಶಿವನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲ್ಲಲಾಗಿತ್ತು. ಇದಕ್ಕೂ ಮೊದಲು ಒಂದು ಬಾರಿ ಬಿಕ್ಲು ಶಿವನ ಹತ್ಯೆಗೆ ಪ್ಲಾನ್ ಮಾಡಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.

ಮೃತನ ತಾಯಿ ನೀಡಿದ ದೂರಿನ ಮೇರೆಗೆ ಭಾರತಿನಗರ ಠಾಣೆಯಲ್ಲಿ ಶಾಸಕ ಬೈರತಿ ಬಸವರಾಜು ಹಾಗೂ ಅವರ ಆಪ್ತ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗ ಸೇರಿ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣ ಸಂಬಂಧ ಪೂರ್ವ ವಿಭಾಗದ ಪೊಲೀಸರು 16 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣದ ತನಿಖೆ ನಡೆಸುವಂತೆ ಸರ್ಕಾರ ಸಿಐಡಿ ವಹಿಸಿತ್ತು. ಬಿಕ್ಲು ಹತ್ಯೆ ಬಳಿಕ ಬಂಧನ ಭೀತಿಯಿಂದ ದುಬೈಗೆ ಹಾರಿದ್ದ ಜಗ್ಗ ಮರಳಿ ಬೆಂಗಳೂರಿಗೆ ಬಂದಿದ್ದ, ತಕ್ಷಣ ಸಿಐಡಿ ಆತನನ್ನು ಬಂಧಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಉದ್ಯಮಿ ನಿಗೂಢ ಸಾವು, ಆಂಧ್ರದ ಮಾಜಿ ಸಂಸದನ ಪುತ್ರ, ಪುತ್ರಿ ಸೇರಿ ಮೂವರನ್ನು ಬಂಧಿಸಿದ ಸಿಬಿಐ
ವೀಕ್ ಡೇಸಲ್ಲಿ ಫ್ರೊಫೆಸರ್, ವೀಕೆಂಡ್‌ನಲ್ಲಿ ಖತರ್ನಾಕ್ ಕಳ್ಳಿ! ಮದುವೆ ಮನೆಗಳಲ್ಲಿ ಕನ್ನ ಹಾಕುತ್ತಿದ್ದ ಶಿಕ್ಷಕಿ!