
ಬೆಂಗಳೂರು (ಡಿ.23): ವಾರಪೂರ್ತಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಪ್ರಾಧ್ಯಾಪಕಿ, ವಾರಾಂತ್ಯದಲ್ಲಿ ಮದುವೆ ಮನೆಗಳಿಗೆ ನುಗ್ಗಿ ಚಿನ್ನಾಭರಣ ದೋಚುತ್ತಿದ್ದ ವಿಚಿತ್ರ ಪ್ರಕರಣವೊಂದನ್ನು ಬಸವನಗುಡಿ ಪೊಲೀಸರು ಭೇದಿಸಿದ್ದಾರೆ. ಬಂಧಿತ ಆರೋಪಿತೆಯನ್ನು ಕೆ.ಆರ್. ಪುರಂ ನಿವಾಸಿ, ಮೂಲತಃ ಶಿವಮೊಗ್ಗದ ರೇವತಿ ಎಂದು ಗುರುತಿಸಲಾಗಿದೆ.
ರೇವತಿ ಬೆಳ್ಳಂದೂರು ಬಳಿಯ ಪ್ರತಿಷ್ಠಿತ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ವೃತ್ತಿ ಮಾಡುತ್ತಿದ್ದಳು. ಸೋಮವಾರದಿಂದ ಶನಿವಾರದವರೆಗೆ ವೃತ್ತಿಯಲ್ಲಿ ನಿರತಳಾಗುತ್ತಿದ್ದ ಈಕೆ, ಭಾನುವಾರ ಬಂತೆಂದರೆ ಸಾಕು 'ಕಳ್ಳಿಯ' ಅವತಾರವೆತ್ತುತ್ತಿದ್ದಳು. ಸುಂದರವಾಗಿ ಸೀರೆ ಉಟ್ಟು, ಬೆಲೆಬಾಳುವ ಆಭರಣಗಳನ್ನು ಧರಿಸಿ ಮದುವೆ ಮಂಟಪಗಳಿಗೆ ಸಂಬಂಧಿಕರಂತೆ ಎಂಟ್ರಿ ಕೊಡುತ್ತಿದ್ದಳು.
ಯಾರಿಗೂ ಅನುಮಾನ ಬಾರದಂತೆ ಮದುವೆ ಮನೆಯವರ ಜೊತೆ ಆತ್ಮೀಯವಾಗಿ ಮಾತನಾಡಿಸಿ, ಅವರ ನಂಬಿಕೆ ಗಳಿಸುತ್ತಿದ್ದಳು. ಎಲ್ಲರೂ ಸಂಭ್ರಮದಲ್ಲಿ ಮೈಮರೆತಾಗ ಅಥವಾ ಫೋಟೋ ಶೂಟ್‌ನಲ್ಲಿ ಬ್ಯುಸಿಯಾಗಿದ್ದಾಗ ಅವರ ಬ್ಯಾಗ್ ಅಥವಾ ಆಭರಣಗಳನ್ನು ಎಗರಿಸಿ, ನಂತರ ರಾಜಾರೋಷವಾಗಿ ಮದುವೆ ಊಟ ಮುಗಿಸಿಕೊಂಡು ಅಲ್ಲಿಂದ ಎಸ್ಕೇಪ್ ಆಗುತ್ತಿದ್ದಳು.
ಕಳೆದ ನವೆಂಬರ್ 25 ರಂದು ಬಸವನಗುಡಿಯ ದ್ವಾರಕನಾಥ್ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಯೊಂದರಲ್ಲಿ ರೇವತಿ ಕೈಚಳಕ ತೋರಿದ್ದಳು. ಈ ಸಂಬಂಧ ದಾಖಲಾದ ದೂರಿನ ಬೆನ್ನತ್ತಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈಕೆಯ ಸುಳಿವು ಸಿಕ್ಕಿದೆ. ತನಿಖೆಯ ವೇಳೆ ಈಕೆ ಕೇವಲ ಬಸವನಗುಡಿ ಮಾತ್ರವಲ್ಲದೆ, ನಗರದ ವಿವಿಧ ಭಾಗಗಳ ಕಲ್ಯಾಣ ಮಂಟಪಗಳಲ್ಲಿ ಇದೇ ರೀತಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಸದ್ಯ ಬಂಧಿತಳಿಂದ ಪೊಲೀಸರು ಸುಮಾರು 32 ಲಕ್ಷ ರೂಪಾಯಿ ಮೌಲ್ಯದ 262 ಗ್ರಾಂ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಈಕೆ ಮೂರು ಪ್ರಮುಖ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ. ವಿದ್ಯಾವಂತೆ ಹಾಗೂ ಜವಾಬ್ದಾರಿಯುತ ವೃತ್ತಿಯಲ್ಲಿದ್ದ ಮಹಿಳೆಯೊಬ್ಬಳು ಇಂತಹ ಕೃತ್ಯಕ್ಕೆ ಇಳಿದಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ