
- ಇಂದಿರಾ ನಾಡಿಗ್
‘ಬ್ರಿಟಿಷರು ಭಾರತ ಬಿಟ್ಟು ತೊಲಗುವವರೆಗೂ ನನ್ನ ವಿಚಾರಗಳು ಅವರನ್ನು ಅನಿಷ್ಠದಂತೆ ಬೆಂಬಿಡದೆ ಕಾಡುತ್ತವೆ. ನನ್ನನ್ನು ನೇಣಿಗೇರಿಸಿದ ನಂತರ ನನ್ನ ವಿಚಾರಗಳು ಸುವಾಸನೆಯಂತೆ ಸುಂದರ ಭಾರತದ ವಾತಾವರಣದಲ್ಲಿ ಪಸರಿಸಿ ಯುವ ಜನತೆಯನ್ನು ಪ್ರೇರೇಪಿಸಿ, ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ವಿನಾಶದ ಅಂಚಿಗೆ ತಳ್ಳುತ್ತವೆ. ನನ್ನನ್ನು ಬ್ರಿಟಿಷ್ ಸರ್ಕಾರ ನೇಣಿಗೇರಿಸುತ್ತಿರುವ ಈ ಕ್ಷಣ ನನ್ನ ಪ್ರೀತಿಯ ರಾಷ್ಟ್ರಕ್ಕೆ ನಾನು ಸಲ್ಲಿಸಿದ ಸೇವೆಗೆ ನೀಡುವ ಅತ್ಯುನ್ನತ ಬಹುಮಾನ ಎಂದು ಕಾತರದಿಂದ ಸಂಭ್ರಮದಿಂದ ಎದುರು ನೋಡುತ್ತಿದ್ದೇನೆ.’
ಯುವಕರ ಮೆಚ್ಚಿನ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್; ಸಿನಿಮಾದವ್ರಿಗೂ ಸಖತ್ ಫೇವರಿಟ್
ಇದು 23 ವರ್ಷದ ಕ್ರಾಂತಿಕಾರಿ ತರುಣ ಭಗತ್ ಸಿಂಗ್ ಆಡಿದ ಮಾತು.
ಭಗತ್ ಸಿಂಗ್ ಎಂಬ ವೀರ ಭಾರತಾಂಬೆಯ ಪುತ್ರ ಜೀವನೋತ್ಸಾಹದ ಹೊಸ್ತಿಲಲ್ಲಿರುವಾಗಲೇ ಕ್ರೂರಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಗಲ್ಲುಶಿಕ್ಷೆ ಅನುಭವಿಸಿದ ಅಪ್ರತಿಮ ಕ್ರಾಂತಿಕಾರಿ. ಭಗತ್ ಸಿಂಗ್‌ರ ತಾಯಿ ವಿದ್ಯಾವತಿ ಮಗನ ಬಲಿದಾನದ ಹೊತ್ತಿನಲ್ಲೂ ‘ನಿನ್ನ ನಿಲುವನ್ನು ಯಾವತ್ತೂ ಬದಲಿಸಬೇಡ, ‘ಇನ್‌ಕ್ವಿಲಾಬ್ ಜಿಂದಾಬಾದ್’ ಘೋಷಣೆಯನ್ನು ಉಸಿರಿರುವ ತನಕ ಕೂಗುತ್ತಿರು. ನಿನ್ನ ಸಾವನ್ನು ಪ್ರಪಂಚ ಯಾವತ್ತೂ ಮರೆಯಲಾರದು, ಯಾವ ತಾಯಿಗೂ ಲಭಿಸದ ಹೆಮ್ಮೆ ನನಗೆ ಲಭಿಸಿದೆ’ ಎಂದು ಮಗನಿಗೆ ಹೇಳಿದ್ದಳಂತೆ. ಭಗತ್ ಸಿಂಗ್ ಎಂತಹ ಧೀಮಂತ ದೇಶ ಪ್ರೇಮಿಯೋ, ಅವರ ತಾಯಿ ಕೂಡ ದೇಶದ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದ, ಮಗನ ಕ್ರಾಂತಿಕಾರಕ ಚಟುವಟಿಕೆಗಳಿಗೆ ಬೆಂಬಲಿಸಿದ ರಾಷ್ಟ್ರ ನಿಷ್ಠೆಯ ಹೋರಾಟಗಾರ್ತಿ.
ಚಿಕ್ಕಪ್ಪನಿಂದ ಪ್ರೇರಣೆ
ಭಗತ್ ಸಿಂಗ್ ಅವರ ಹೋರಾಟದ ಬದುಕಿಗೆ ಪ್ರೇರಣೆಯಾದವರು ಚಿಕ್ಕಪ್ಪ ಅಜಿತ್ ಸಿಂಗ್. ಸದಾ ರೈತ ಚಳವಳಿಗಳಲ್ಲಿ ಭಾಗಿಯಾಗುವುದು, ಉಗ್ರ ಭಾಷಣಗಳನ್ನು ಮಾಡುವುದು, ಬೆನ್ನಟ್ಟಿಬರುವ ಬ್ರಿಟಿಷರಿಗೆ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುವುದು ಇಂತಹ ಕ್ರಾಂತಿಕಾರಕ ಚಟುವಟಿಕೆಗಳು ಭಗತ್ ಸಿಂಗ್‌ರನ್ನು ಕ್ರಾಂತಿಕಾರಿಯನ್ನಾಗಿಸುವಲ್ಲಿ ಯಶಸ್ವಿಯಾಗಿದ್ದವು.
1907ರ ಸೆಪ್ಟೆಂಬರ್ 28ರಂದು ಪಂಜಾಬಿನ ಜರನ್‌ವಾಲಾ ತಾಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ ಕಿಷನ್ ಸಿಂಗ್ ಮತ್ತು ವಿದ್ಯಾವತಿ ದಂಪತಿಗೆ ಹುಟ್ಟಿದ ಎರಡನೇ ಮಗನೇ ಈ ದೇಶದ ಸ್ವಾತಂತ್ರ್ಯ ಹೋರಾಟದ ಸುವರ್ಣ ಪುಟಗಳಲ್ಲಿ ಹೆಸರನ್ನು ಅಚ್ಚಳಿಯದಂತೆ ಉಳಿಸಿಹೋದ ಭಗತ್ ಸಿಂಗ್. ಬ್ರಿಟಿಷ್ ಸರ್ಕಾರ 1915ರಲ್ಲಿ ಕರ್ತಾರ್ ಸಿಂಗ್ ಎಂಬ ಉಗ್ರ ಸ್ವಾತಂತ್ರ್ಯ ಹೋರಾಟಗಾರನನ್ನು ಲಾಹೋರ್ ಪಿತೂರಿ ಪ್ರಕರಣದಲ್ಲಿ ಆರೋಪಿಯನ್ನಾಗಿಸಿ ಅವರ 20ನೇ ವಯಸ್ಸಿನಲ್ಲೇ ನೇಣಿಗೇರಿಸಿದ್ದ ಸಮಯದಲ್ಲಿ ಕೊನೆ ಕ್ಷಣದಲ್ಲಿ ಕರ್ತಾರ್ ಸಿಂಗ್ ಆಡಿದ ‘ನನಗೆ ಬೇಕಾಗಿರುವುದು ಒಂದೇ. ಅದು ಸ್ವಾತಂತ್ರ್ಯ. ಅದೇ ನನ್ನ ಕನಸು, ರಾಷ್ಟ್ರ ವಿಮೋಚನೆಯೇ ನನ್ನ ಗುರಿ. ರಾಷ್ಟ್ರ, ಧರ್ಮ ಜನಾಂಗದ ಮೇಲೆ ನಾನು ದ್ವೇಷ ಸಾಧಿಸುತ್ತಿಲ್ಲ’ ಎಂಬ ಮಾತುಗಳಿಂದ ಪ್ರೇರಿತರಾದ ಭಗತ್ ಸಿಂಗ್ ಮುಂದೆ ಸಾವಿಗೇ ಸವಾಲು ಹಾಕುವ ಮಟ್ಟಕ್ಕೆ ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಂಡರು.
ಯುವಕ ಭಗತ್‌ಗೆ ಮನೆಯಲ್ಲಿ ಮದುವೆ ಮಾಡುವ ಯೋಚನೆಯಲ್ಲಿದ್ದರೆ, ವಿದ್ಯಾರ್ಥಿ ಜೀವನದಲ್ಲೇ ಅಸಹಕಾರ ಚಳವಳಿಗಳಲ್ಲಿ, ಬ್ರಿಟಿಷರ ನಿಷೇಧಕ್ಕೆ ಒಳಪಟ್ಟರಾಷ್ಟ್ರೀಯ ನಾಟಕ ಕೂಟಗಳಲ್ಲಿ ಭಾಗವಹಿಸುತ್ತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆಸಕ್ತಿ ತಳೆದ ಭಗತ್, ಮದುವೆ ವಿಷಯ ಪ್ರಸ್ತಾಪವಾದ ಕೂಡಲೇ ಮನೆಯನ್ನೇ ತೊರೆದು ಕಾನ್ಪುರಕ್ಕೆ ಬರುತ್ತಾರೆ. ಅಲ್ಲಿ ಅವರಿಗೆ ಭೇಟಿಯಾದವರೇ ದೇಶ ಕಂಡ ಇನ್ನೊಬ್ಬ ಅಪ್ಪಟ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್. ಜೊತೆಗೆ ಇನ್ನಿತರ ಹೋರಾಟಗಾರರಾದ ಬಿ.ಕೆ.ದತ್, ಜೆ.ಸಿ. ಚಟರ್ಜಿ ಮುಂತಾದ ಕ್ರಾಂತಿಕಾರಿಗಳ ಸಂಪರ್ಕ ದೊರೆಯಿತು. ಸ್ವಾತಂತ್ರ್ಯ ಹೋರಾಟಕ್ಕೆ ಭದ್ರ ಬುನಾದಿ ಹಾಕಲು ಹಿಂದೂಸ್ತಾನ್ ಗಣತಂತ್ರವಾದಿ ಸಂಘಟನೆಯ ಚಟುವಟಿಕೆಗಳೊಂದಿಗೆ ಬೆರೆಯಲು ಅವಕಾಶವಾಯಿತು.
ಬ್ರಿಟಿಷರ ವಿರುದ್ಧ ಹೋರಾಟ
ಸ್ನೇಹಿತರ ಜೊತೆ ಸೇರಿ ಬ್ರಿಟಿಷರ ವಿರುದ್ಧ ಹೋರಾಟ ರೂಪಿಸಿದ ಭಗತ್ ಸಿಂಗ್, 1924ರಲ್ಲಿ ಅಸೆಂಬ್ಲಿಗೆ ಬಾಂಬ್ ಎಸೆಯುವ ಯೋಜನೆ ಕೈಗೊಂಡರು. ಅಸೆಂಬ್ಲಿ ನಡೆಯುತ್ತಿದ್ದಾಗ ಭಗತ್ ಸಿಂಗ್ ಮತ್ತು ಬಿ.ಕೆ.ದತ್ ಬಾಂಬ್ ಎಸೆದು, ಇನ್‌ಕ್ವಿಲಾಬ್ ಜಿಂದಾಬಾದ್, ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಧಿಕ್ಕಾರ ಎಂದು ಕೂಗಿ ಕರಪತ್ರ ಎಸೆದರು. ನಂತರ ಪೊಲೀಸರು ಇವರನ್ನು ಬಂಧಿಸಿದರು. ಇವರ ವಿರುದ್ಧ ಸ್ಯಾಂಡರ್ಸ್ ಹತ್ಯೆ, ಲಾಹೋರ್ ಪಿತೂರಿಗಳಂತಹ ಮೊಕದ್ದಮೆಗಳನ್ನು ಕೂಡ ದಾಖಲಿಸಿ ಗಲ್ಲುಶಿಕ್ಷೆ ವಿಧಿಸಿದರು.
ಇನ್ನೇನು ನೇಣಿನ ಕುಣಿಕೆ ಬೀಳುತ್ತದೆ ಎನ್ನುವ ಹೊತ್ತಿನಲ್ಲೂ ಇಬ್ಬರೂ ಒಬ್ಬರಿಗೊಬ್ಬರು ತಮಾಷೆ ಮಾಡಿಕೊಂಡು ಬ್ರಿಟಿಷ್ ಸರ್ಕಾರವನ್ನು ಅಣಕಿಸುತ್ತಿದ್ದರು. ‘ರಾಷ್ಟಾ್ರಭಿಮಾನಕ್ಕಾಗಿ ಸಿಗುವ ಅತ್ಯುನ್ನತ ಬಹುಮಾನ ಅಂದರೆ ಇದೇ ನೇಣು ಶಿಕ್ಷೆ. ಅದು ನನಗೆ ಸಿಗುತ್ತಿರುವುದು ಹೆಮ್ಮೆಯ ವಿಷಯ’ ಎಂದು ಭಗತ್ ಸಿಂಗ್ ಹೇಳಿದ್ದರು.
ಮಾಚ್‌ರ್ 23, 1931ರಂದು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಮೂವರು ಒಂದೇ ಬಾರಿಗೆ ರಾಷ್ಟ್ರ ಸೇವೆಗೆ ತಮ್ಮ ಬಲಿದಾನ ಮಾಡಿದರು. ಸಟ್ಲೆಜ್ ನದಿ ತೀರದಲ್ಲಿ ಬ್ರಿಟಿಷರು ಈ ಕ್ರಾಂತಿಕಾರಿಗಳ ದೇಹವನ್ನು ರಹಸ್ಯವಾಗಿ ಸುಟ್ಟರು.
India@75: ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಶಹೀದ್ ಭಗತ್ ಸಿಂಗ್ ಜೀವನಗಾಥೆ
ಭಗತ್ ಸಿಂಗ್‌ರಂತಹ ಕ್ರಾಂತಿಕಾರಿಗಳು ಹಚ್ಚಿದ ಸ್ವಾತಂತ್ರ್ಯದ ಕಿಚ್ಚು ಮುಂದೆ ಭುಗಿಲೆದ್ದು ಬ್ರಿಟಿಷರಿಗೆ ದುಸ್ವಪ್ನವಾಯಿತು. ‘ದೇಶಕ್ಕಾಗಿ ಕೆಲಸ ಮಾಡುವಾಗ ವೈಯಕ್ತಿಕ ಕೆಲಸಗಳನ್ನು ದೂರವಿಡಿ. ನಿಮ್ಮ ಸುಖದ ಕನಸನ್ನು ಭಗ್ನಗೊಳಿಸಿ. ಆಗ ಜಯಶಾಲಿಯಾಗುತ್ತೀರಿ’ ಎಂದು ಯುವಕರನ್ನುದ್ದೇಶಿಸಿ ಭಗತ್ ಸಿಂಗ್ ಆಡಿದ ಮಾತು ಬ್ರಿಟಿಷರನ್ನು ಬೇರು ಸಹಿತ ಕಿತ್ತು ಬಿಸಾಡುವಲ್ಲಿ ಪ್ರೇರಣೆಯಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ