ಬೆಂಗಳೂರು-ನೆಲಮಂಗಲ ಸಂಪರ್ಕಿಸುವ ಪೀಣ್ಯ ಫ್ಲೈಓವರ್ 4 ದಿನಗಳ ಕಾಲ ಬಂದ್: ಇಲ್ಲಿದೆ ಪರ್ಯಾಯ ಮಾರ್ಗಗಳ ಪಟ್ಟಿ!

Published : Apr 10, 2026, 09:27 PM IST
Peenya Flyover

ಸಾರಾಂಶ

ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್‌ನಲ್ಲಿ 'ಲೋಡ್ ಟೆಸ್ಟಿಂಗ್' ಹಿನ್ನೆಲೆಯಲ್ಲಿ ಏಪ್ರಿಲ್ 13 ರಿಂದ 17 ರವರೆಗೆ ಸಂಚಾರ  ಸ್ಥಗಿತಗೊಳಿಸಲಾಗಿದೆ. ಈ ಅವಧಿಯಲ್ಲಿ, ನೆಲಮಂಗಲ ಮತ್ತು ಬೆಂಗಳೂರು ನಗರದ ನಡುವೆ ಸಂಚರಿಸುವ ವಾಹನ ಸವಾರರಿಗೆ ಸಂಚಾರಿ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.

ಬೆಂಗಳೂರು (ಏ.10): ಬೆಂಗಳೂರಿನಿಂದ ನೆಲಮಂಗಲ (Bengaluru to Nelamangala) ಸೇರಿದಂತೆ ಉತ್ತರ ಕರ್ನಾಟಕದ 22 ಜಿಲ್ಲೆಗಳನ್ನು ಸಂಪರ್ಕಿಸಲು ಅನುಕೂಲಕರವಾಗಿರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಪೀಣ್ಯ ಎಲಿವೇಟೆಡ್ ಫ್ಲೈಓವರ್ (ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಕೇಬಲ್‌ಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಇದೀಗ ಅಂತಿಮ ಹಂತದ 'ಲೋಡ್ ಟೆಸ್ಟಿಂಗ್' (Load Testing) ಪ್ರಕ್ರಿಯೆ ನಡೆಯಲಿರುವ ಹಿನ್ನೆಲೆಯಲ್ಲಿ ಒಟ್ಟು 4 ದಿನಗಳ ಕಾಲ ಫ್ಲೈಓವರ್ ಸಂಚಾರವನ್ನು (Peenya flyover Closed) ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಸಂಚಾರ ಬಂದ್ ಆಗುವ ಸಮಯ:

ಏಪ್ರಿಲ್ 13ರ ಶನಿವಾರ ಬೆಳಿಗ್ಗೆ 5 ಗಂಟೆಯಿಂದ ಆರಂಭಗೊಂಡು ಏಪ್ರಿಲ್ 17ರ ಬುಧವಾರ ಬೆಳಿಗ್ಗೆ 11 ಗಂಟೆಯವರೆಗೆ ಈ ಫ್ಲೈಓವರ್ ಸಾರ್ವಜನಿಕ ಸಂಚಾರಕ್ಕೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ಸಂಚಾರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಭಾರೀ ವಾಹನಗಳು ಸೇರಿದಂತೆ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗಗಳ ವಿವರ:

ಪೀಣ್ಯ ಮೇಲ್ಸೇತುವೆ ಬಂದ್ ಆಗಿರುವ ಕಾರಣ, ಪೀಣ್ಯ ಸಂಚಾರಿ ಪೊಲೀಸರು ವಾಹನ ಸವಾರರಿಗಾಗಿ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ:

1. ನೆಲಮಂಗಲದಿಂದ ಬೆಂಗಳೂರು ನಗರದ ಕಡೆಗೆ ಬರುವವರಿಗೆ:

ನೆಲಮಂಗಲದಿಂದ ಬರುವ ವಾಹನಗಳು ಕನ್ನಮೆಟಲ್ ವಿಡಿಯಾ ಹತ್ತಿರ ಫ್ಲೈ ಓವರ್ ಏರುವಂತಿಲ್ಲ. ಬದಲಾಗಿ ಫ್ಲೈ ಓವರ್ ಕೆಳಭಾಗದ ಎನ್.ಹೆಚ್-4 ರಸ್ತೆ ಮತ್ತು ಸರ್ವಿಸ್ ರಸ್ತೆ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್ ಆರ್ ಎಸ್ ಜಂಕ್ಷನ್ ಮಾರ್ಗವಾಗಿ ಗೊರಗುಂಟೆಪಾಳ್ಯ ತಲುಪಬಹುದು.

2. ಬೆಂಗಳೂರಿನಿಂದ (ಸಿಎಂಟಿಐ) ನೆಲಮಂಗಲದ ಕಡೆಗೆ ಹೋಗುವವರಿಗೆ:

ನಗರದಿಂದ ಹೊರಹೋಗುವ ವಾಹನಗಳು ಫ್ಲೈ ಓವರ್ ಕೆಳಭಾಗದ ಎನ್.ಹೆಚ್.-4 ರಸ್ತೆ ಮತ್ತು ಸರ್ವಿಸ್ ರಸ್ತೆಯನ್ನು ಬಳಸಬೇಕು. ಎಸ್.ಆರ್.ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ದಾಟಿ ಪಾರ್ಲೆ ಜಿ ಟೋಲ್ ಮೂಲಕ ನೆಲಮಂಗಲದ ಕಡೆಗೆ ಸಾಗಬಹುದು.

ಸಾರ್ವಜನಿಕರಲ್ಲಿ ಪೊಲೀಸರ ಮನವಿ:

ಮೇಲ್ಸೇತುವೆಯ ಸುರಕ್ಷತೆಯ ದೃಷ್ಟಿಯಿಂದ ಈ ಲೋಡ್ ಟೆಸ್ಟಿಂಗ್ ಅತ್ಯಂತ ಅಗತ್ಯವಾಗಿದೆ. ಹೀಗಾಗಿ ಸಾರ್ವಜನಿಕರು ಮತ್ತು ವಾಹನ ಸವಾರರು ಸಂಚಾರಿ ಪೊಲೀಸರೊಂದಿಗೆ ಸಹಕರಿಸಬೇಕು. ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುವ ಸಂಭವವಿರುವುದರಿಂದ, ಹೆಚ್ಚಿನ ಸಮಯವನ್ನು ಕೈಯಲ್ಲಿರಿಸಿಕೊಂಡು ಪ್ರಯಾಣ ಬೆಳೆಸುವಂತೆ ಪೀಣ್ಯ ಸಂಚಾರಿ ಪೊಲೀಸರು ವಿನಂತಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಡಿಜಿಪಿಗೆ ಹೆಚ್‌ಡಿಕೆ ಬೆದರಿಕೆ ಪ್ರಕರಣ, ಮಧ್ಯಸ್ಥಿಕೆಗೆ ಸುಪ್ರೀಂ ನಿವೃತ್ತ ನ್ಯಾ.ಓಕಾ ಹೆಸರು ಹೇಳಿದ ಹೈಕೋರ್ಟ್
10 ವರ್ಷದಿಂದ ಅಂಗಲಾಚಿದ್ರೂ ಪೊಲೀಸರ ಗೋಳು ಕೇಳ್ತಿಲ್ಲ ಸರ್ಕಾರ! ಖಾಕಿಗೆ ಬೇಡಿ ಹಾಕಿತಾ ಸರ್ಕಾರ? ಇವರ ಹಿತ ಕಾಯೋರ್ಯಾರು?