
ಬೆಂಗಳೂರು: ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ಮತ್ತು ಅವರ ಕುಟುಂಬಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಮಧ್ಯಸ್ಥಿಕೆದಾರರನ್ನಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್.ಓಕಾ ಅವರ ಹೆಸರನ್ನು ಹೈಕೋರ್ಟ್ ಪ್ರಸ್ತಾಪಿಸಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಅರ್ ರದ್ದುಪಡಿಸಬೇಕು ಎಂದು ಕೋರಿ ಕುಮಾರಸ್ವಾಮಿ, ಇತರರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿ, ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ವಿಚಾರಣೆಗೆ ಕುಮಾರಸ್ವಾಮಿ ಮತ್ತು ಚಂದ್ರಶೇಖರ್ ಅವರ ಪರ ವಕೀಲರು ಹಾಜರಾಗಿದ್ದರು.
ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣವನ್ನು ರಾಜೀ ಸಂಧಾನ ಮೂಲಕ ಇತ್ಯರ್ಥ ಮಾಡಲು ಸುಪ್ರೀಂಕೋರ್ಟ್ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್.ಓಕಾ ಅವರನ್ನು ಮಧ್ಯಸ್ಥಿಕೆದಾರರನ್ನಾಗಿ ನೇಮಕ ಮಾಡಲು ಉದ್ದೇಶಿಸಲಾಗಿದೆ. ಉಭಯ ಪಕ್ಷಗಾರರಿಗೆ ಒಪ್ಪಿಗೆಯಾದರೆ ತಿಳಿಸಿ, ನ್ಯಾ.ಓಕಾ ಅವರನ್ನು ಮಧ್ಯಸ್ಥಿಕೆದಾರರನ್ನು ನೇಮಕ ಮಾಡಲಾಗುವುದು. ಒಂದೊಮ್ಮೆ ಬೇರೊಬ್ಬರನ್ನು ನೇಮಿಸಲು ನೀವು (ಎಚ್‌ಡಿಕೆ ಹಾಗೂ ಚಂದ್ರಶೇಖರ್) ಬಯಸಿದರೆ, ಅವರ ಹೆಸರು ಸೂಚಿಸಿ ಎಂದು ಹೇಳಿತು. ಅದರೆ, ಸಂಜೆ ಕಲಾಪದ ಮುಗಿಯುವ ವೇಳೆಗೆ ಕುಮಾರಸ್ವಾಮಿ ಹಾಗೂ ಚಂದ್ರಶೇಖರ ಪರ ವಕೀಲರು ಯಾರ ಹೆಸರೂ ಸೂಚಿಸದ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.
ದಿನದ ಕಲಾಪದ ಕೊನೆಯಲ್ಲಿ ಅರ್ಜಿ ವಿಚಾರಣೆಯನ್ನು ಮತ್ತೆ ತೆಗೆದುಕೊಳ್ಳಲಾಗುತ್ತದೆ. ಒಮ್ಮೆ ಬೇರೊಬ್ಬರ ಹೆಸರು ಸೂಚಿಸಿದರೆ ಅವರನ್ನೇ ಮಧ್ಯಸ್ಥಿಕೆದಾರರನ್ನಾಗಿ ನೇಮಕ ಮಾಡಲಾಗುವುದು. ಯಾರ ಹೆಸರೂ ಸೂಚಿಸದೆ ನ್ಯಾ.ಓಕಾ ಅವರ ಹೆಸರಿಗೆ ಒಪ್ಪಿಗೆ ಸೂಚಿಸಿದರೆ, ಅವರನ್ನೇ ಮಧ್ಯಸ್ಥಿಕೆದಾರನ್ನಾಗಿ ನೇಮಿಸಲಾಗುವುದು ಎಂದು ಕುಮಾರಸ್ವಾಮಿ ಹಾಗೂ ಚಂದ್ರಶೇಖರ ಪರ ವಕೀಲರಿಗೆ ತಿಳಿಸಿದ ಪೀಠ ವಿಚಾರಣೆ ಮುಂದೂಡಿತು.
ಕೇಂದ್ರ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಚಂದ್ರಶೇಖರ್, ಸಂಜಯನಗರ ಪೊಲೀಸ್ ಠಾಣೆಯಲ್ಲಿ 2024ರಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಭಾರತೀಯ ನ್ಯಾಯ ಸಂಹಿತಾ–2023ರ (ಬಿಎನ್‌ಎಸ್) ಸೆಕ್ಷನ್ 224 (ಸರ್ಕಾರಿ ನೌಕರರಿಗೆ ಅವರ ಅಧಿಕೃತ ಕರ್ತವ್ಯಗಳ ಮೇಲೆ ಪ್ರಭಾವ ಬೀರಲು ಬೆದರಿಕೆ ಹಾಕಿದ) ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ. ಅದನ್ನು ರದ್ದುಪಡಿಸುವಂತೆ ಕೋರಿ ಕುಮಾರಸ್ವಾಮಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ