
ಬೆಂಗಳೂರು ನಗರಕ್ಕೆ ಭದ್ರತೆ ಒದಗಿಸುವ ಪೊಲೀಸರೇ ಇಂದು ನೆಮ್ಮದಿ ಕಳೆದುಕೊಂಡಿರುವ ಸ್ಥಿತಿ ಎದುರಾಗಿದೆ. ನಗರವನ್ನು ಕಾಪಾಡುವ ಖಾಕಿ ಪಡೆ ಕಳೆದ 10ವರ್ಷಗಳಿಂದ ತಮ್ಮದೇ ಸಮಸ್ಯೆಗಳ ನಡುವೆ ಸಂಕಷ್ಟದ ಜೀವನ ನಡೆಸುತ್ತಿರುವುದು ಆತಂಕಕಾರಿ ಸಂಗತಿ. ವಿಶೇಷವಾಗಿ 2016ರಲ್ಲಿ ನೇಮಕಗೊಂಡ ನೂರಾರು ಪೊಲೀಸ್ ಕಾನ್‌ಸ್ಟೆಬಲ್‌ಗಳು, ಅಂತರ ಜಿಲ್ಲಾ ವರ್ಗಾವಣೆಯ ನಿರೀಕ್ಷೆಯಲ್ಲಿ ಒಂದು ದಶಕ ಕಳೆದರೂ ಸರ್ಕಾರದ ಗಮನ ಸೆಳೆಯಲು ವಿಫಲವಾಗಿದ್ದಾರೆ.
2016ರಲ್ಲಿ ನೇಮಕಗೊಂಡ ಕಾನ್‌ಸ್ಟೆಬಲ್‌ಗಳಿಗೆ ಮೊದಲಿಗೆ 2.5 ವರ್ಷಗಳ ಬಳಿಕ ವರ್ಗಾವಣೆ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ನಂತರ ಅದನ್ನು 5 ವರ್ಷಗಳಿಗೆ ವಿಸ್ತರಿಸಲಾಯಿತು. ಬಳಿಕ 7 ವರ್ಷಗಳಾದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈಗ 10 ವರ್ಷಗಳಾದರೂ ವರ್ಗಾವಣೆ ವಿಚಾರದಲ್ಲಿ ಸರ್ಕಾರದಿಂದ ಸ್ಪಷ್ಟ ನಿರ್ಧಾರ ಹೊರಬಂದಿಲ್ಲ. ಸಿಬ್ಬಂದಿ ಕೊರತೆ ನೆಪವೊಡ್ಡಿ ವರ್ಗಾವಣೆ ಪ್ರಕ್ರಿಯೆಯನ್ನು ಮುಂದೂಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ತಮ್ಮ ಸ್ವಂತ ಜಿಲ್ಲೆಗೆ ವರ್ಗಾವಣೆ ಆಗಬೇಕೆಂಬ ಆಸೆಯಿಂದ ಹಲವಾರು ಪೊಲೀಸರು ಬಡ್ತಿ ಅವಕಾಶವನ್ನೇ ತ್ಯಜಿಸಿದ್ದಾರೆ. ಆದರೆ ಇತ್ತ ಬಡ್ತಿಯೂ ಸಿಗದೇ, ಅತ್ತ ವರ್ಗಾವಣೆಯೂ ಆಗದೇ ಅವರು ಅತಂತ್ರ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ಪದೇಪದೇ ಗೃಹ ಸಚಿವರು ಮತ್ತು ಡಿಜಿ-ಐಜಿಪಿ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಪೊಲೀಸರು ನೇರವಾಗಿ ಗೃಹ ಸಚಿವರು ಅಥವಾ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲು ಅವಕಾಶವಿಲ್ಲ ಎಂಬ ಆದೇಶವೂ ಅವರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಕೂಡ ಅವಕಾಶವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಕ್ಕೆ ಮನವಿ ಸಲ್ಲಿಸುವುದಕ್ಕೂ ನಿರ್ಬಂಧಗಳಿರುವುದರಿಂದ, ಕಾನ್‌ಸ್ಟೆಬಲ್‌ಗಳಿಗೆ ಮೌನವೇ ಏಕೈಕ ಆಯ್ಕೆ ಎಂಬತಾಗಿದೆ.
ಈ ಸಮಸ್ಯೆಯ ತೀವ್ರತೆ ಪೊಲೀಸರ ಕುಟುಂಬಗಳಲ್ಲೂ ಗೋಚರಿಸುತ್ತಿದೆ. ದೂರದ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದು ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಮನೆಗೆ ಹೋಗುವುದು ದೊಡ್ಡ ಸವಾಲಾಗಿದೆ. ಉದಾಹರಣೆಗೆ, ಯಾದಗಿರಿ ಜಿಲ್ಲೆಯ ಕಾನ್‌ಸ್ಟೆಬಲ್ ಒಬ್ಬರು ಸುಮಾರು 700 ಕಿ.ಮೀ ದೂರದಲ್ಲಿರುವ ತಮ್ಮ ಊರಿಗೆ ತೆರಳಲು ಎರಡು ದಿನಗಳ ಕಾಲ ಪ್ರಯಾಣಿಸಬೇಕಾಗಿದೆ. ಈ ನಡುವೆ ಅವರ ತಾಯಿ-ತಂದೆಯರು ವೃದ್ಧಾಪ್ಯದಿಂದ ಬಳಲುತ್ತಿದ್ದು, ಅವರ ಆರೈಕೆಗಾಗಿ ಯಾರೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಕಲಬುರಗಿ ಜಿಲ್ಲೆಯ ಮತ್ತೊಬ್ಬ ಕಾನ್‌ಸ್ಟೆಬಲ್ 10 ವರ್ಷಗಳಿಂದ ಬೆಂಗಳೂರಿನ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ 70 ವರ್ಷ ದಾಟಿದ ಪೋಷಕರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಮಗನನ್ನು ತಮ್ಮ ಬಳಿ ಇರಿಸಿಕೊಳ್ಳಬೇಕೆಂಬ ಆಶಯದಲ್ಲಿದ್ದಾರೆ. ಆದರೆ ವರ್ಗಾವಣೆ ಆಗದ ಕಾರಣ ಕುಟುಂಬಗಳು ಭಾರೀ ಸಂಕಷ್ಟ ಅನುಭವಿಸುತ್ತಿವೆ.
371ಜೆ ನಿಯಮದಡಿ ನೇಮಕಗೊಂಡಿದ್ದರೂ, ಈ ಕಾನ್‌ಸ್ಟೆಬಲ್‌ಗಳಿಗೆ ತಮ್ಮ ಜಿಲ್ಲೆಗಳಿಗೆ ವರ್ಗಾವಣೆಯಾಗುವಲ್ಲಿ ಯಾವುದೇ ಸಡಿಲಿಕೆ ದೊರೆಯುತ್ತಿಲ್ಲ. ಪೋಷಕರ ಆರೋಗ್ಯ ಸಮಸ್ಯೆ, ಕುಟುಂಬದ ಜವಾಬ್ದಾರಿಗಳು ಇವೆಲ್ಲವೂ ಪೊಲೀಸರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿದೆ.
ವರ್ಗಾವಣೆಯಿಲ್ಲದೇ ದೀರ್ಘಕಾಲ ಕಾಯುತ್ತಿರುವ ಕೆಲ ಪೊಲೀಸ್ ಕಾನ್‌ಸ್ಟೆಬಲ್‌ಗಳು ತೀವ್ರ ನಿರಾಶೆಯಿಂದ ರಾಜ್ಯಪಾಲರಿಗೆ ‘ದಯಾಮರಣ’ ಕೋರಿ ಪತ್ರ ಬರೆದಿರುವುದು ಈಗ ಚರ್ಚೆ ಹುಟ್ಟುಹಾಕಿದೆ. 2016ರ ನೇಮಕಾತಿಯಲ್ಲಿ ಆಯ್ಕೆಯಾದ ನೂರಾರು ಸಿಬ್ಬಂದಿ ಈಗಾಗಲೇ 2000ಕ್ಕೂ ಹೆಚ್ಚು ಮನವಿಗಳನ್ನು ಸಲ್ಲಿಸಿದ್ದರೂ, ಸಮಸ್ಯೆಗೆ ಪರಿಹಾರ ಈವರೆಗೆ ದೊರೆತಿಲ್ಲ.
ಇತ್ತೀಚೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು, “ವರ್ಗಾವಣೆ ನಿಯಮದ ಪ್ರಕಾರ ಒಬ್ಬ ಸಿಬ್ಬಂದಿ ಕನಿಷ್ಠ 7 ವರ್ಷ ಒಂದು ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ಬಳಿಕವೇ ಅಂತರ ಜಿಲ್ಲಾ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ” ಎಂದು ಹೇಳಿಕೆ ನೀಡಿದ್ದಾರೆ. ಆದರೆ ಈಗಾಗಲೇ 10 ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಸಹ ಅವಕಾಶ ಸಿಗದಿರುವುದು ಪ್ರಶ್ನಾರ್ಹವಾಗಿದೆ.
ನಗರದ ಭದ್ರತೆಗಾಗಿ ಹಗಲು-ರಾತ್ರಿ ದುಡಿಯುವ ಪೊಲೀಸರ ಸಮಸ್ಯೆಯನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸುವ ಅಗತ್ಯವಿದೆ. ಕುಟುಂಬದಿಂದ ದೂರವಿದ್ದು ಸೇವೆ ಸಲ್ಲಿಸುವ ಇವರ ನೋವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ತಕ್ಷಣದ ಕ್ರಮದ ಅಗತ್ಯತೆಯನ್ನು ತೋರಿಸುತ್ತಿದೆ. ಸರ್ಕಾರ ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಂಡರೆ ಮಾತ್ರ, ಪೊಲೀಸರಿಗೂ ನೆಮ್ಮದಿ ಸಿಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ