ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಕಾರಿಗೆ ಗುದ್ದಿದ ಐರಾವತ ಬಸ್; ಅಂತ್ಯಕ್ರಿಯೆಗೆ ಹೊರಟ ನಾಲ್ವರು ದುರ್ಮರಣ

ಮಂಡ್ಯ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಎಕ್ಸಿಟ್ ಆಗುವಾಗ ಕಾರಿಗೆ ಹಿಂಬದಿಯಿಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.


ಮಂಡ್ಯ (ಏ.03): ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಗುರುವಾರ ಬೆಳಗ್ಗೆ ಮಂಡ್ಯ ಬಳಿಯಲ್ಲಿ ಭಾರೀ ಅಪಘಾತ ಸಂಭವಿಸಿದೆ. ಎಕ್ಸ್‌ಪ್ರೆಸ್‌ವೇ ನಿಂದ ಎಕ್ಸಿಟ್ ಆಗುತ್ತಿದ್ದ ಕಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಐರಾವತ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಈ ಘಟನೆ ಮಂಡ್ಯ ತಾಲ್ಲೂಕು ತೂಬಿನಕೆರೆ ಎಕ್ಸಿಟ್ ಬಳಿ ಹಾದು ಹೋಗಿರುವ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸಂಭವಿಸಿದೆ. ಕಾರಿನ ಚಾಲಕ ಎಕ್ಸ್‌ಪ್ರೆಸ್‌ ವೇನಿಂದ ಎಕ್ಸಿಟ್ ಆಗುವಾಗ ಗೊಂದಲಕ್ಕೀಡಾಗಿದ್ದಾರೆ. ಆಗ ಎಕ್ಸಿಟ್ ಆಗುವಾಗ ಕಾರನ್ನು ನಿಧಾನ ಮಾಡಿದ್ದಾರೆ. ಆದರೆ, ಈ ವೇಳೆ ಹಿಂದೆ ವೇಗವಾಗಿ ಬರುತ್ತಿದ್ದ ಐರಾವತ ಬಸ್ ಚಾಲಕ ಕಾರು ಎಕ್ಸಿಟ್ ಆಗುತ್ತಿದೆ ಎಂದು ನಿಧಾನ ಮಾಡದೇ ವೇಗವಾಗಿಯೇ ಹೋಗುತ್ತಿದ್ದಾರೆ. ಆದರೆ, ಕಾರಿನ ಚಾಲಕ ರಿವರ್ಸ್ ಮೂಲಕ ಹೆದ್ದಾರಿಗೆ ಬರುವಾಗ ಹಿಂಬದಿಗೆ ಬಂದು ಐರಾವತ ಬಸ್ ಗುದ್ದಿದೆ.

Latest Videos

ಹಿಂಬದಿಯಿಂದ ಬಸ್ ಗುದ್ದಿದ ರಭಸಕ್ಕೆ ಕಾರು ಎಕ್ಸಿಟ್ ಮಾರ್ಗದಲ್ಲಿ ಇರಿಸಲಾಗಿದ್ದ ಡಿವೈಡರ್‌ಗೆ ಡಿಕ್ಕಿಯಾಗಿ ಸಂಪೂರ್ಣವಾಗಿ ನಜ್ಜು ಗುಜ್ಜಾಗಿದೆ. ಕಾರಿನಲ್ಲಿದ್ದ ಇಬ್ಬರು ಪುರುಷರು ಹಾಗೂ ಮಹಿಳೆಯರು ಕೂಡ ಅಪ್ಪಚ್ಚಿಯಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಹೆದ್ದಾರಿಯಲ್ಲಿ ನಡೆದ ಈ ಘಟನೆಯಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ನಂತರ, ಕಾರಿನಲ್ಲಿದ್ದವರ ಮಾಹಿತಿ ಕಲೆ ಹಾಕುವುದಕ್ಕೂ ಯಾರೊಬ್ಬರೂ ಬದುಕಿರಲಿಲ್ಲ. ಇನ್ನು ಕಾರಿನಲ್ಲಿ ಏನಾದರೂ ದಾಖಲೆಗಳು ಸಿಗುತ್ತವೆಯೇ ಎಂದು ಹುಡುಕುವುದಕ್ಕೂ ಕಾರು ಸಂಪೂರ್ಣ ಜಖಂ ಆಗಿದ್ದರಿಂದ ಮೃತ ದೇಹ ಹೊರ ತೆಗೆಯುವುದೇ ಕಷ್ಟವಾಗಿದ್ದು, ದಾಖಲೆಗಳ ಹುಡುಕಾಟಕ್ಕೆ ಅವಕಾಶ ಇರಲಿಲ್ಲ. ನಂತರ ಜೆಸಿಬಿಯಿಂದ ಜಖಂ ಆಗಿದ್ದ ಕಾರನ್ನು ಎಳೆದು, ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಆಗ ದಾಖಲೆ ಪರಿಶೀಲಿಸಿದಾಗ ಮೃತರ ಗುರುತು ಪತ್ತೆ ಮಾಡಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು ಹಸಿರ ಕಾನನದಲ್ಲಿ ರಕ್ತದೋಕುಳಿ! ಮೂರು ಕೊಲೆ, ಒಂದು ಆತ್ಮಹತ್ಯೆಗೆ ಕಾರಣವಾದ ಹೆಂಡತಿ!

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ‌ನಲ್ಲಿ ಮೃತಪಟ್ಟವರು ಬೆಂಗಳೂರು ನಗರದ ಜೆಪಿನಗರ ಮೂಲದವರಾಗಿದ್ದಾರೆ. ಬೆಂಗಳೂರಿನಿಂದ ಪಿರಿಯಾಪಟ್ಟಣಕ್ಕೆ ಹೋಗುವಾಗ ದುರ್ಘಟನೆ ಸಂಭವಿಸಿದೆ. ನಾಲ್ವರೂ ಒಂದೇ ಕುಟುಂಬದವರಾಗಿದ್ದಾರೆ. ಮೃತರನ್ನು ಸತ್ಯಾನಂದ ರಾಜೇ ಆರಸ್ (51), ಇವರ ಪತ್ನಿ ನಿಶ್ಚಿತಾ (45), ಸಂಬಂಧಿಕರಾದ ಚಂದ್ರು(62) ಹಾಗೂ ಇವರ ಪತ್ನಿ ಸುವೇದಿನಿ ರಾಣಿ (50) ಎಂದು ಗುರುತಿಸಲಾಗಿದೆ. ಇವರೆಲ್ಲರೂ KA 09 MG 4263 ನಂಬರ್ ಕಾರಿನಲ್ಲಿ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದ. ಆದರೆ, ಎಕ್ಸಿಟ್ ಆಗುವ ವೇಳೆ KA 57 F 1721 ನಂಬರ್‌ನ ಐರಾವತ ಬಸ್ ಡಿಕ್ಕಿ ಹೊಡೆದಿದೆ. ಇನ್ನು ಅಪಘಾತ ಸ್ಥಳಕ್ಕೆ ಐಜಿಪಿ ಬೋರಲಿಂಗಯ್ಯ ಹಾಗೂ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಪರಿಶೀಲನೆ ಮಾಡಿದ್ದಾರೆ. 

ಇಲ್ಲಿ ಸತ್ಯಾನಂದ ರಾಜೇ ಅರಸ್ ಅವರ ಸೋದರಮಾವ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಅವರ ಅಂತ್ಯ ಸಂಸ್ಕಾರಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಪಿರಿಯಾಪಟ್ಟಣ ತಾಲೂಕಿನ ಸಿಗೂರು ಗ್ರಾಮಕ್ಕೆ ಹೋಗುವಾಗ ದೊಡ್ಡಪ್ಪನ ಮಗ ಚಂದ್ರರಾಜೇ ಅರಸ್ ಅವರನ್ನೂ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವರ ಇಬ್ಬರು ಪತ್ನಿಯರು ಕೂಡ ಜೊತೆಗೆ ಹೋಗುತ್ತಿದ್ದರು. ಚಂದ್ರರಾಜೇ ಅರಸ್ ಕಾರು ಚಾಲನೆ ಮಾಡುತ್ತಿದ್ದರು. ತೂಬಿನಕೆರೆ ಎಕ್ಸಿಟ್ ಪಾಯಿಂಟ್‌ನಲ್ಲಿ ಎಕ್ಸಿಟ್ ಆಗಲು ಕಾರು ಸ್ಲೋ ಮಾಡಿದ ವೇಳೆ ಹಿಂಬದಿಯಿಂದ ಬಸ್ ಡಿಕ್ಕಿ‌. ಇದೀಗ ಮೃತದೇಹಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸತ್ಯಾನಂದರಾಜೇ ಅರಸ್ ಅವರು ಎಲೆಕ್ಟ್ರಿಕ್ ಕಂಟ್ರ್ಯಾಕ್ಟರ್ ಆಗಿದ್ದರು. ಇನ್ನು ಚಂದ್ರರಾಜೇ ಅರಸ್ ನಿವೃತ್ತ ಜೆಇ ಆಗಿದ್ದರು.

ಇದನ್ನೂ ಓದಿ: ಮೆಟ್ರೋ ಪ್ರಯಾಣದಲ್ಲಿ ನಿಯಮ ಉಲ್ಲಂಘಿಸಿದ 27 ಸಾವಿರ ಪ್ರಯಾಣಿಕರು! ಇವರ ಕಥೆ ಏನಾಯ್ತು?

click me!