ಬೆಂಗಳೂರಿನ ಲಾಲ್‌ಬಾಗ್ ಉದ್ಯಾನವು ಮಳೆನೀರು ಕೊಯ್ಲು ಗುಂಡಿಗಳಿಂದ ಹಚ್ಚ ಹಸಿರಿನಿಂದ ಕೂಡಿದೆ. 240ಕ್ಕೂ ಹೆಚ್ಚು ಇಂಗು ಗುಂಡಿಗಳು ಅಂತರ್ಜಲ ಮಟ್ಟವನ್ನು ಹೆಚ್ಚಿಸಿವೆ, ಬೇಸಿಗೆಯಲ್ಲೂ ಉದ್ಯಾನವನ್ನು ಕಂಗೊಳಿಸುವಂತೆ ಮಾಡಿವೆ.
ಬೆಂಗಳೂರು : ಸುಡುವ ಬಿಸಿಲಿಗೆ ಕೆರೆ, ಕಟ್ಟೆಗಳ ಬರಿದಾಗುತ್ತಿರುವುದರ ನಡುವೆ ಲಾಲ್‌ಬಾಗ್ ‘ಬಟಾನಿಕಲ್ ಗಾರ್ಡನ್’ ಹಚ್ಚ ಹಸರಿನಿಂದ ನಳನಳಿಸುತ್ತಿದೆ. ಇದಕ್ಕೆ ಉದ್ಯಾನದಲ್ಲಿರುವ 240ಕ್ಕೂ ಹೆಚ್ಚು ಮಳೆನೀರು ಕೊಯ್ಲು ಗುಂಡಿಗಳು (ಇಂಗು ಗುಂಡಿಗಳು) ಪ್ರಮುಖ ಕಾರಣ.
ಉದ್ಯಾನದ ಇಳಿಜಾರು ಪ್ರದೇಶದಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗದಂತೆ ನಿರ್ಮಿಸಲಾಗಿರುವ ಈ ಇಂಗು ಗುಂಡಿಗಳು ಲಾಲ್‌ಬಾಗ್ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಜಾಸ್ತಿಯಾಗುವಂತೆ ಮಾಡಿದ್ದು ಲಾಲ್‌ಬಾಗ್ ನಿತ್ಯಹರಿದ್ವರ್ಣದಿಂದ ಕಂಗೊಳಿಸುತ್ತಿದೆ.
ಇದನ್ನೂ ಓದಿ: ಲಾಲ್‌ಬಾಗ್‌ನಲ್ಲಿ ನೀರಿಗಾಗಿ ಪರದಾಟ ಶುರು: 5 ಲಕ್ಷ ಲೀಟರ್ ನೀರಿನ ಕೊರತೆ
25 ಲಕ್ಷ ಲೀಟರ್ ನೀರು ಸಂಗ್ರಹ:
ಪ್ರತಿ ಇಂಗು ಗುಂಡಿಗಳಲ್ಲೂ ಕನಿಷ್ಠ 10 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯವಿದ್ದು, 250 ಗುಂಡಿಗಳಿಂದ ಅಂದಾಜು 25 ಲಕ್ಷ ಲೀಟರ್ ನೀರು ಶೇಖರಗೊಳ್ಳುತ್ತದೆ. ಜತೆಗೆ ಲಾಲ್‌ಬಾಗ್ ಸೇರಿದಂತೆ ಸುತ್ತ ಅಂತರ್ಜಲ ಮಟ್ಟ 80ರಿಂದ 90 ಅಡಿ ಆಳದಲ್ಲಿ ಇರುತ್ತಿತ್ತು. ಈಗ ಕೇವಲ 45ರಿಂದ 50 ಅಡಿಗಳಿಗೆ ನೀರು ಲಭ್ಯವಾಗುತ್ತಿದೆ. ಇದರಿಂದ ವರ್ಷ ಪೂರ್ತಿ ಲಾಲ್‌ಬಾಗ್ ಹಸಿರಿನಿಂದ ಕಂಗೊಳಿಸಲು ಸಾಧ್ಯವಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್.
ಎಸ್‌ಟಿಪಿಯಿಂದ ನಿತ್ಯ 1.5 ಎಂಎಲ್‌ಡಿ ನೀರು:
ಲಾಲ್‌ಬಾಗ್‌ನಲ್ಲಿರುವ ಎಸ್‌ಟಿಪಿ ಘಟಕದಿಂದ ನಿತ್ಯ 1.5 ಎಂಎಲ್‌ಡಿ (15 ಲಕ್ಷ ಲೀಟರ್) ನೀರು ಲಭ್ಯವಾಗುತ್ತಿದೆ. ಈ ನೀರನ್ನು 160 ಎಕರೆಗೆ 1900 ಸ್ಪ್ರಿಂಕ್ಲರ್‌ಗಳ ಮೂಲಕ ದಿನವೂ ನೀರು ಪೂರೈಸಲಾಗುತ್ತದೆ. 6 ಕೊಳವೆಬಾವಿಗಳಿಂದ ಕಚೇರಿಗಳು, ಹೂಕುಂಡಗಳು ಸೇರಿದಂತೆ ಇತರ ಸಸ್ಯಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಬೇಸಿಗೆಯಲ್ಲೂ ನೀರು ನಿರ್ವಹಣೆಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ. ಮೇ ತಿಂಗಳ ಅಂತ್ಯದವರೆಗೂ ಮಳೆ ಬರದಿದ್ದರೂ ನಿಭಾಯಿಸಬಹುದು ಎನ್ನುತ್ತಾರೆ ಉದ್ಯಾನದ ಅಧಿಕಾರಿಗಳು.
ತೋಟಗಾರಿಕೆ ಇಲಾಖೆ ಯುನೈಟೆಡ್ ವೇ ಆಫ್ ಬೆಂಗಳೂರು ಮತ್ತು ಬಾಷ್ ಕಂಪನಿಗಳ ಸೇರಿದಂತೆ ಇತರ ಪ್ರಾಯೋಜಕತ್ವದ ಅಡಿ ಹಲವು ಇಂಗು ಗುಂಡಿಗಳನ್ನು ನಿರ್ಮಿಸಿದೆ. ಈ ಗುಂಡಿಗಳಿಂದ ಅಂತರ್ಜಲ ಹೆಚ್ಚಿದ್ದು, ಬೇಸಿಗೆಯಲ್ಲೂ ಉದ್ಯಾನದ ನೀರು ನಿರ್ವಹಣೆಗೆ ಸಹಕಾರಿಯಾಗಿದೆ.
- ಡಾ.ಎಂ.ಜಗದೀಶ್, ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ