Road Patholes: ಹೊಸ ವರ್ಷಕ್ಕೆ Bengaluru city ಗುಂಡಿ ಮುಕ್ತ!

Published : Dec 20, 2022, 07:54 AM IST
Road Patholes: ಹೊಸ ವರ್ಷಕ್ಕೆ Bengaluru city ಗುಂಡಿ ಮುಕ್ತ!

ಸಾರಾಂಶ

ಹೊಸ ವರ್ಷಕ್ಕೆ ಬೆಂಗಳೂರಿನ ಮುಖ್ಯರಸ್ತೆ ಹಾಗೂ ವಲಯವಾರು ರಸ್ತೆಗಳ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಿ ‘ರಸ್ತೆ ಗುಂಡಿ ಮುಕ್ತ’ ಎಂದು ಘೋಷಣೆಗೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಡಿ.20) : ಹೊಸ ವರ್ಷಕ್ಕೆ ಬೆಂಗಳೂರಿನ ಮುಖ್ಯರಸ್ತೆ ಹಾಗೂ ವಲಯವಾರು ರಸ್ತೆಗಳ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಿ ‘ರಸ್ತೆ ಗುಂಡಿ ಮುಕ್ತ’ ಎಂದು ಘೋಷಣೆಗೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.

ಪ್ರಸಕ್ತ ವರ್ಷ ಮೇ ತಿಂಗಳಿನಿಂದ ನವೆಂಬರ್‌ವರೆಗೆ ನಗರದ ರಸ್ತೆಗಳಲ್ಲಿ 32 ಸಾವಿರ ಗುಂಡಿಗಳು ಸೃಷ್ಟಿಯಾಗಿ ನವೆಂಬರ್‌ ಅಂತ್ಯದ ವೇಳೆಗೆ ಎಲ್ಲ ಗುಂಡಿಗಳನ್ನು ಮುಚ್ಚಲಾಗಿತ್ತು. ಕೆಲವು ಕಡೆಗಳಲ್ಲಿ ಇಡೀ ರಸ್ತೆಯನ್ನೇ ಮರು ಡಾಂಬರೀಕರಣ ಮಾಡಲಾಗಿತ್ತು. ಆದರೀಗ ದುರಸ್ತಿ ಮಾಡಿದ ಕಡೆಗಳಲ್ಲಿ ಮತ್ತೆ ಗುಂಡಿಗಳು ಸೃಷ್ಟಿಯಾಗಿವೆ. ಈ ಎಲ್ಲ ಗುಂಡಿಗಳನ್ನು ಮುಚ್ಚಿ ಹೊಸ ವರ್ಷಕ್ಕೆ ಮುಖ್ಯ ರಸ್ತೆ ವಾರು ಹಾಗೂ ವಲಯ ವಾರು ‘ರಸ್ತೆ ಗುಂಡಿ ಮುಕ್ತ’ ಎಂದು ಘೋಷಣೆ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.

Road pathole: ರಸ್ತೆ ಗುಂಡಿ ಬಗ್ಗೆ ದೂರು ಬಂದರೆ ಕೇಸ್‌ ಹಾಕಿ: ಹೈಕೋರ್ಟ್

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಲಯಗಳಿದ್ದು, 13,900 ಕಿ.ಮೀ ಉದ್ದದ 85,656 ಸಂಖ್ಯೆಯ ವಾರ್ಡ್‌ ರಸ್ತೆಗಳಿವೆ. ಇದಲ್ಲದೇ 1,242 ಕಿ.ಮೀ ಉದ್ದದ ಆರ್ಟಿರಿಯಲ್‌/ಸಬ್‌ ಆರ್ಟಿರಿಯಲ್‌ ರಸ್ತೆ (ಮುಖ್ಯ ರಸ್ತೆಗಳು) ಹಾಗೂ 192 ಕಿ.ಮೀ ಉದ್ದದ ಹೈಡೆನ್ಸಿಟಿ ಕಾರಿಡಾರ್‌ ಇದೆ.

ರಸ್ತೆ ಮತ್ತು ಮೂಲಸೌಕರ್ಯ ವಿಭಾಗದಿಂದ ನಿರ್ವಹಣೆ ಮಾಡುವ ಆರ್ಟಿರಿಯಲ್‌/ಸಬ್‌ ಆರ್ಟಿರಿಯಲ್‌ ರಸ್ತೆ ಹಾಗೂ ಹೈಡೆನ್ಸಿಟಿ ಕಾರಿಡಾರನ್ನು ಯಾವುದೇ ಕಾರಣ ಹೇಳದೇ ವಿಳಂಬ ಧೋರಣೆ ಅನುಸರಿಸದೇ ಹೊಸ ವರ್ಷದ ಮೊದಲ ದಿನವೇ ರಸ್ತೆ ಗುಂಡಿ ಮುಕ್ತ ಎಂದು ಘೋಷಣೆ ಮಾಡಬೇಕು. ಇನ್ನು ವಾರ್ಡ್‌ 13,900 ಕಿ.ಮೀ ಉದ್ದದ ವಾರ್ಡ್‌ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಅಗತ್ಯವಿರುವ ಎಲ್ಲ ಸಂಪನ್ಮೂಲ ಮತ್ತು ಸೌಲಭ್ಯ ಕಲ್ಪಿಸಲಾಗಿದೆ. ಗುಂಡಿ ಮುಚ್ಚುವುದಕ್ಕೂ ಗುತ್ತಿಗೆದಾರರನ್ನು ನಿಯೋಜಿಸಲಾಗಿದೆ. ಗುಂಡಿ ಮುಚ್ಚುವ ಕೆಲಸ ಮಾಡಿ ವಲಯ ವಾರು ರಸ್ತೆ ಗುಂಡಿ ಮುಕ್ತ ಎಂದು ಘೋಷಣೆ ಮಾಡಿಕೊಳ್ಳಬೇಕು ಎಂದು ಮುಖ್ಯ ಆಯುಕ್ತರು ನಿರ್ದೇಶಿಸಿದ್ದಾರೆ.

ಜ.1ರಿಂದ ಫಿಕ್ಸ್‌ ಮೈ ಸ್ಟ್ರೀಟ್‌ ಆ್ಯಪ್‌ನಲ್ಲೇ ದೂರು ನೀಡಿ

ರಸ್ತೆ ಗುಂಡಿ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕರಿಸುವುದಕ್ಕೆ ಸಿದ್ಧಪಡಿಸಲಾಗಿರುವ ಫಿಕ್ಸ್‌ ಮೈಸ್ಟ್ರೀಟ್‌ ಆ್ಯಪನ್ನು ಜನವರಿ 1ರಂದು ಬಿಡುಗಡೆ ಮಾಡುವುದಕ್ಕೆ ತೀರ್ಮಾನಿಸಲಾಗಿದೆ. ಜನವರಿ 1ರಿಂದ ಸಾರ್ವಜನಿಕರು ತಮ್ಮ ರಸ್ತೆಗಳಲ್ಲಿ ಒಂದು ವೇಳೆ ರಸ್ತೆ ಗುಂಡಿ ಕಂಡು ಬಂದರೆ ಈ ಆ್ಯಪ್‌ ಮೂಲಕ ಫೋಟೋ ತೆಗೆದು ಬಿಬಿಎಂಪಿಗೆ ನೇರವಾಗಿ ಕಳುಹಿಸಬಹುದು. ದೂರು ಆಧರಿಸಿ ಬಿಬಿಎಂಪಿ ಅಧಿಕಾರಿಗಳು ಗುಂಡಿ ಮುಚ್ಚುವ ಕೆಲಸ ಮಾಡಿ ತದ ನಂತರ ದೂರುದಾರರಿಗೆ ಮಾಹಿತಿ ನೀಡಲಿದ್ದಾರೆ.

ಅಧಿಕಾರಿಗಳಿಗೆ ಗಡುವು

ನಗರದ ಎಲ್ಲ ರಸ್ತೆಗಳನ್ನು ಗುಂಡಿ ಮುಕ್ತ ಮಾಡಿ ಘೋಷಿಸುವುದಕ್ಕೆ ಜ.1ರವರೆಗೆ ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ಆದ್ಯತೆ ಮೇರೆ ಮುಖ್ಯ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಿ ಘೋಷಿಸುವುದಕ್ಕೆ ನಿರ್ದೇಶಿಸಲಾಗಿದೆ.

-ತುಷಾರ್‌ ಗಿರಿನಾಥ್‌, ಮುಖ್ಯ ಆಯುಕ್ತ, ಬಿಬಿಎಂಪಿ

ಅಧಿಕಾರಿ ಸಂಬಳಕ್ಕೆ ಕತ್ತರಿ!

ಬೆಸ್ಕಾಂ, ಜಲಮಂಡಳಿ, ಸಾರ್ವಜನಿಕರು, ಖಾಸಗಿ ಸಂಸ್ಥೆ ಹಾಗೂ ವ್ಯಕ್ತಿಗಳು ರಸ್ತೆ ಕತ್ತರಿಸಿ ವ್ಯವಸ್ಥಿತವಾಗಿ ರಸ್ತೆ ದುರಸ್ತಿ ಮಾಡಿಲ್ಲ ಎಂದರೆ ಮೇಲ್ವಿಚಾರಣೆ ಜವಾಬ್ದಾರಿ ಹೊಂದಿರುವ ಬಿಬಿಎಂಪಿ ಅಧಿಕಾರಿಯ ಸಂಬಳದಿಂದ ದುರಸ್ತಿ ಮಾಡಿಸಲಾಗುವುದು. ವಾರ್ಡ್‌ನಲ್ಲಿ ಯಾವ ಏಜೆಂನ್ಸಿ ಯಾವ ರಸ್ತೆ ಅಗೆದಿದೆ ಎಂಬ ಸಂಪೂರ್ಣ ಮಾಹಿತಿ ಬಿಬಿಎಂಪಿಯ ವಾರ್ಡ್‌ ಅಧಿಕಾರಿಗೆ ಇರಲಿದೆ. ಏಜೆನ್ಸಿ ಅವರಿಂದ ಸರಿಯಾಗಿ ರಸ್ತೆ ದುರಸ್ತಿ ಮಾಡಿಸುವುದು ಅಧಿಕಾರಿಯ ಜವಾಬ್ದಾರಿ. ಒಂದು ವೇಳೆ ಸರಿಯಾಗಿ ದುರಸ್ತಿ ಮಾಡಿಸಿಲ್ಲ ಎಂದರೆ ಅವರ ಸಂಬಳ ಕತ್ತರಿಸಿ ಆ ಹಣದಲ್ಲಿ ರಸ್ತೆ ಗುಂಡಿ ಮುಚ್ಚುವುದಕ್ಕೆ ಬಳಕೆ ಮಾಡಲಾಗುವುದು ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಎಚ್ಚರಿಕೆ ನೀಡಿದ್ದಾರೆ.

Bengaluru Pathole: ರಾ.ರಾ ಎನ್ನುವ ನಗರದ ರಕ್ಕಸ ರಸ್ತೆ ಗುಂಡಿಗಳು!

.12 ಕೋಟಿ ವೆಚ್ಚ

ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ವರ್ಷ ರಸ್ತೆ ಗುಂಡಿ ಮುಚ್ಚುವುದಕ್ಕೆ ಸುಮಾರು .12 ಕೋಟಿ ವೆಚ್ಚ ಮಾಡಲಾಗಿದೆ. ಈವರೆಗೆ 24 ಸಾವಿರ ರಸ್ತೆ ಗುಂಡಿ ಮುಚ್ಚಲಾಗಿದೆ. ಇನ್ನೂ 6ರಿಂದ 7 ಸಾವಿರ ರಸ್ತೆ ಗುಂಡಿ ಮುಚ್ಚುವುದು ಬಾಕಿ ಇದೆ. ಈವರೆಗೆ ರಸ್ತೆ ಗುಂಡಿ ಮುಚ್ಚಿರುವುದಕ್ಕೆ ಸಂಬಂಧಿಸಿದಂತೆ .6.50 ಕೋಟಿ ಗುತ್ತಿಗೆದಾರಿಗೆ ಹಣ ಬಿಡುಗಡೆ ಆಗಿದೆ. ಇನ್ನೂ ಸುಮಾರು .6 ಕೋಟಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವುದು ಬಾಕಿ ಇದೆ ಎಂದು ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈ ವರ್ತನೆ ಸರಿಯಲ್ಲ, ಹೈಕೋರ್ಟ್ ಪರಿಗಣಿಸುವ ಮೊದಲು ಕ್ಷಮೆ ಮುಖ್ಯ, ಪ್ರಜ್ವಲ್ ರೇವಣ್ಣ ಅರ್ಜಿಗೆ ಸುಪ್ರೀಂ ಕೆಂಡ!
ಡಿ.ಕೆ.ಶಿವಕುಮಾರ್ 30 ದಿನಗಳ ಮೌನ ತಪ್ಪಿಸ್ಸಿಗೆ ಒಲಿಯುತ್ತಾ ಪಟ್ಟಾಭಿಷೇಕ; ಜನವರಿ 9ಕ್ಕೆ ಮುಹೂರ್ತ!