ಜ.14ರ ಮಕರ ಸಂಕ್ರಾಂತಿಯಿಂದ ವಿದ್ಯುತ್ ಚಾಲಿತ ಮಗ್ಗದ ಕೆಲಸಗಾರರಿಗೂ ಸಹ ನೇಕಾರ ಸಮ್ಮಾನ ಯೋಜನೆಯಡಿ ವಾರ್ಷಿಕ ಐದು ಸಾವಿರ ರು. ಸಹಾಯಧನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುವರ್ಣಸೌಧ (ಡಿ.20): ಜ.14ರ ಮಕರ ಸಂಕ್ರಾಂತಿಯಿಂದ ವಿದ್ಯುತ್ ಚಾಲಿತ ಮಗ್ಗದ ಕೆಲಸಗಾರರಿಗೂ ಸಹ ನೇಕಾರ ಸಮ್ಮಾನ ಯೋಜನೆಯಡಿ ವಾರ್ಷಿಕ ಐದು ಸಾವಿರ ರು. ಸಹಾಯಧನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಂಗಳವಾರ ಸುವರ್ಣಸೌಧದಲ್ಲಿ ನೇಕಾರರು ಸೇರಿದಂತೆ ಸಮುದಾಯದ ಮುಖಂಡರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ನೇಕಾರ ಸಮ್ಮಾನ್ ಯೋಜನೆಯನ್ನು ವಿದ್ಯುತ್ ಕೈಮಗ್ಗದಲ್ಲಿ ಕೆಲಸ ಮಾಡುವ ನೇಕಾರರಿಗೂ ವಿಸ್ತರಿಸಲಾಗಿದೆ. ಜ.14ರಂದು ನೇಕಾರರಿಗೆ ಸಂಕ್ರಾಂತಿ ಹಬ್ಬದ ಕಾಣಿಕೆಯಾಗಿ ನೀಡಲಾಗುವುದು ಎಂದರು.
ರೈತರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ ವಿದ್ಯಾನಿಧಿ ಯೋಜನೆಯ ವ್ಯಾಪ್ತಿಗೆ ನೇಕಾರ ಮಕ್ಕಳನ್ನು ಸಹ ತರಲಾಗಿದೆ. ಜನವರಿ ಮೊದಲ ವಾರದಲ್ಲಿ ವಿದ್ಯಾನಿಧಿ ಸ್ಕಾಲರ್‌ಶಿಪ್ ನೀಡಲಾಗುವುದು. ಆರ್ಥಿಕ ನೆರವುಗಳನ್ನು ನಿಗದಿತ ಅವಧಿಯೊಳಗೆ ಪೂರೈಸಲಾಗುವುದು. ನಮ್ಮ ಸರ್ಕಾರ ನೇಕಾರರಿಗೆ ಸ್ಪಂದಿಸಿದಂತೆ ಬೇರೆ ಯಾವ ಸರ್ಕಾರವೂ ಮಾಡಿಲ್ಲ. ನೇಕಾರರ ಕಷ್ಟದ ಅರಿವು ಸರ್ಕಾರಕ್ಕಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಆದರ್ಶಗಳೇ ಆಡಳಿತಕ್ಕೆ ಪ್ರೇರಣೆ: ಸಿಎಂ ಬೊಮ್ಮಾಯಿ
ನೇಕಾರರ ಉತ್ಪನ್ನಗಳು ಶಿಕ್ಷಣ ಇಲಾಖೆಯ ವಿದ್ಯಾವಿಕಾಸ ಯೋಜನೆಯಡಿಯಲ್ಲಿ ಖರೀದಿಸಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ನೀಡಲಾಗುವ ಸಮವಸ್ತ್ರಗಳ ತಯಾರಿಕೆಗೆ ಶೀಘ್ರದಲ್ಲಿಯೇ ಆದೇಶ ನೀಡಲಾಗುವುದು. ಸರ್ಕಾರ ನೇಕಾರ ನಿಗಮಗಳ ಉತ್ಪಾದನಾ ಸಾಮರ್ಥ್ಯದ ಅನುಗುಣವಾಗಿ ಸಮವಸ್ತ್ರ ಪೂರೈಕೆ ಪ್ರಮಾಣ ನಿಗದಿಪಡಿಸಿ, ಉಳಿದ ಪ್ರಮಾಣಕ್ಕೆ ಟೆಂಡರ್ ಕರೆಯಲಾಗುವುದು. ವಿವಿಧ ಇಲಾಖೆಗಳ ಸಮವಸ್ತ್ರದ ಅಗತ್ಯತೆಯ ಶೇ.25 ರಷ್ಟನ್ನು ಕೈಮಗ್ಗ ನಿಗಮದ ಮೂಲಕ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೇಡಿಕೆಯಂತೆ ನೇಕಾರರಿಗೆ 2 ಲಕ್ಷ ರು.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ. ನೇಕಾರರಿಗೆ ತಮಿಳುನಾಡಿನ ಮಾದರಿಯಲ್ಲಿ ಉಚಿತ ವಿದ್ಯುತ್ ಕೊಡಲು ಯೋಜಿಸಲಾಗಿದೆ. ವೃತ್ತಿಪರ ನೇಕಾರ ಕೆಲಸಗಾರರಿಗೆ ಶೇ.50ರಷ್ಟುಸಬ್ಸಿಡಿ ದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತದೆ. ನೇಕಾರಿಕೆಯನ್ನು ಗುರುತಿಸಿ ಅನುಕೂಲತೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ರಹವಾಸಿ ಪ್ರಮಾಣ ಪತ್ರ ಕೊಡಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶಿಸಿ ಅನುಷ್ಠಾನ ಮಾಡಲಾಗುವುದು. ನೇಕಾರರಿಗೆ ಅನುಕೂಲತೆ ಮಾಡಿಕೊಡುವ ನಿಟ್ಟಿನಲ್ಲಿ ಮನೆಯಲ್ಲಿನ ಕೈಮಗ್ಗಗಳನ್ನು ಗುಡಿ ಕೈಗಾರಿಕೆ ಎಂದು ಪರಿಗಣಿಸಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಮಾಣ ಪತ್ರದಿಂದ ವಿನಾಯಿತಿ ಕೊಡಿಸಲಾಗುವುದು ಎಂದು ನುಡಿದರು.
ಅಶೋಕ್ ವಾಸ್ತವ್ಯದ ಹಳ್ಳಿಗಳಿಗೆ 1 ಕೋಟಿ: ಸಿಎಂ ಬೊಮ್ಮಾಯಿ ಘೋಷಣೆ
ಇಳಕಲ್ ಸೀರೆ ಅಂತಾರಾಷ್ಟ್ರೀಯ ಬ್ರ್ಯಾಂಡಿಂಗ್: ಇಳಕಲ್ ಸೀರೆ ಸೇರಿದಂತೆ ನೇಕಾರರ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಬ್ರ್ಯಾಂಡಿಂಗ್ ದೊರೆತಾಗ ಉತ್ಪಾದನೆ ಹಾಗೂ ಆರ್ಥಿಕತೆ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಜವಳಿ ನೀತಿಯಲ್ಲಿ ಸಾಕಷ್ಟು ಬದಲಾವಣೆ ತರಲಾಗುವುದು. ಅತಿಹೆಚ್ಚು ಜವಳಿ ರಫ್ತು ಮಾಡುವ ರಾಜ್ಯ ಕರ್ನಾಟಕವಾಗಿದೆ. ಇಳಕಲ್ ಸೀರೆ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಈ ಸೀರೆಗಳು ರಾಷ್ಟ್ರಮಟ್ಟಕ್ಕೆ ಬ್ರ್ಯಾಂಡಿಂಗ್ ಆಗಬೇಕು. ಅದಕ್ಕಾಗಿ ಅಮೆಜಾನ್‌ನಂತಹ ಆನ್‌ಲೈನ್ ವೇದಿಕೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದರು.