
ಬೆಂಗಳೂರು (ಸೆ.11): ಅಕ್ಕನ ಊರಿನಿಂದ ವಾಪಸ್ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಚಾಲಕನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ಕುಟುಂಬಸ್ಥರು ಆರೋಪಿಯನ್ನು ಹಿಡಿದು ಥಳಿಸಿದ ನಂತರ ಹೈಗ್ರೌಂಡ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಯ ವಿವರಗಳು:
ಬ್ಯಾಡರಹಳ್ಳಿಯ ನಿವಾಸಿಯಾಗಿರುವ ಅಪ್ರಾಪ್ತ ಬಾಲಕಿ ಹೈದರಾಬಾದ್‌ನಲ್ಲಿರುವ ತನ್ನ ಸಹೋದರಿಯ ಮನೆಗೆ ಹೋಗಿದ್ದಳು. ಟ್ರಾನ್ಸ್ ಇಂಡಿಯಾ ಎಂಬ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಳು. ರಾತ್ರಿ ವೇಳೆ, ಚಾಲಕ ಮತ್ತು ನಿರ್ವಾಹಕ ಯುವತಿಯಿಂದ ಮೊಬೈಲ್ ಕಸಿದುಕೊಂಡಿದ್ದಾರೆ. ಮೊಬೈಲ್ ವಾಪಸ್ ನೀಡಬೇಕಿದ್ದರೆ 'ಕಿಸ್ ಕೊಡು' ಎಂದು ಪೀಡಿಸಿದ್ದಾರೆ. ಇದರಿಂದ ಆತಂಕಗೊಂಡ ಬಾಲಕಿ ಹೇಗೋ ಅವರ ಕೈಯಿಂದ ತಪ್ಪಿಸಿಕೊಂಡು ತನ್ನ ಮೊಬೈಲ್ ವಾಪಸ್ ಪಡೆದಿದ್ದಾಳೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋದ ಬಸ್ಸಿನ ಹೆಚ್ಚುವರಿ ಚಾಲಕನಾದ ಮೊಹಮ್ಮದ್ ಆರೀಫ್ (22) ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಆರೋಪಿಯಿಂದ ಕಿರುಕುಳಕ್ಕೆ ಒಳಗಾದ ಬಾಲಕಿ ತನಗೆ ಮೊಬೈಲ್ ವಾಪಸ್ ಸಿಕ್ಕ ತಕ್ಷಣವೇ ತನ್ನ ತಾಯಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದಾಳೆ. ಜಾಗೃತಳಾದ ತಾಯಿ, ಬಾಲಕಿಯ ಲೈವ್ ಲೊಕೇಷನ್ ಪಡೆದುಕೊಂಡು ತಮ್ಮ ಸಹೋದರನ ಜೊತೆ ಬೆಂಗಳೂರು ನಗರದ ಚಾಲುಕ್ಯ ಸರ್ಕಲ್ ಬಳಿ ಕಾಯುತ್ತಿದ್ದರು. ಬಸ್ ಚಾಲುಕ್ಯ ಸರ್ಕಲ್ ತಲುಪುತ್ತಿದ್ದಂತೆ ಬೆಳಿಗ್ಗೆ 10:30ರ ಸುಮಾರಿಗೆ ತಾಯಿ ಮತ್ತು ಸಹೋದರ ಬಸ್ ಅಡ್ಡಹಾಕಿ ನಿಲ್ಲಿಸಿದ್ದಾರೆ.
ಬಸ್‌ನಲ್ಲಿದ್ದ ಆರೋಪಿ ಮೊಹಮ್ಮದ್ ಆರೀಫ್ ಅನ್ನು ಕೆಳಗಿಳಿಸಿ ವಿವಸ್ತ್ರಗೊಳಿಸಿ ಥಳಿಸಿದ್ದಾರೆ. ಸಾರ್ವಜನಿಕರ ಸಮ್ಮುಖದಲ್ಲೇ ಈ ಘಟನೆ ನಡೆದಿದ್ದು, ನಂತರ ಆರೋಪಿಯನ್ನು ಹೈಗ್ರೌಂಡ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿಯ ತಾಯಿ ನೀಡಿದ ದೂರಿನನ್ವಯ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ