ರಂಗಭೂಮಿ ಬಗ್ಗೆ ಮಕ್ಕಳು, ಯುವಕರಲ್ಲಿ ಆಸಕ್ತಿ ಮೂಡಿಸಿ: ಹಿರಿಯ ನಟಿ ಗಿರಿಜಾ ಲೋಕೇಶ್

Published : Sep 11, 2025, 09:57 PM IST
Girija Lokesh

ಸಾರಾಂಶ

ಪ್ರಸ್ತುತದ ರಂಗಭೂಮಿ ಬಗ್ಗೆ ಮಕ್ಕಳು, ಯುವಕರಿಗೆ ಶಾಲಾ- ಕಾಲೇಜಿನಲ್ಲಿ ಅಭ್ಯಾಸ ಮಾಡಿಸುವ ಮೂಲಕ ಅವರಲ್ಲಿ ಆಸಕ್ತಿ ಮೂಡಿಸಬೇಕಿದೆ ಎಂದು ಹಿರಿಯ ನಟಿ ಗಿರಿಜಾ ಲೋಕೇಶ್ ಹೇಳಿದರು.

ಮಳವಳ್ಳಿ (ಸೆ.11): ಪ್ರಸ್ತುತದ ರಂಗಭೂಮಿ ಬಗ್ಗೆ ಮಕ್ಕಳು, ಯುವಕರಿಗೆ ಶಾಲಾ- ಕಾಲೇಜಿನಲ್ಲಿ ಅಭ್ಯಾಸ ಮಾಡಿಸುವ ಮೂಲಕ ಅವರಲ್ಲಿ ಆಸಕ್ತಿ ಮೂಡಿಸಬೇಕಿದೆ ಎಂದು ಹಿರಿಯ ನಟಿ ಗಿರಿಜಾ ಲೋಕೇಶ್ ಹೇಳಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಯೂನಿವರ್ಸಲ್ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ರಂಗ ಬಂಡಿ ಮಳವಳ್ಳಿ ಆಯೋಜಿಸಿದ್ದ ಮಳವಳ್ಳಿ ಸುಂದರಮ್ಮ ಸ್ಮರಣಾರ್ಥ 7 ದಿನಗಳ ನಾಟಕೋತ್ಸವದಲ್ಲಿ ರಂಗ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ನಾಡಿನ ಉನ್ನತ ಸಂಸ್ಕೃತಿ, ಕಲೆ, ಪರಂಪರೆ ಉಳಿಸಿ, ಬೆಳೆಸುವ ಗುರುತರ ಜವಾಬ್ದಾರಿ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರ ಮೇಲಿದೆ. ಯುವಸಮೂಹ ರಂಗಭೂಮಿಯ ಉನ್ನತ ಪರಂಪರೆ, ಇತಿಹಾಸ ಹಾಗೂ ಜನಪದ ಕಲೆಗಳ ಬಗ್ಗೆ ಅರಿವು ಪಡೆದು ರಂಗಭೂಮಿ ಬೆಳವಣಿಗೆಗೆ ಮುಂದಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ನಟ ಮಂಡ್ಯ ರಮೇಶ್ ಮಾತನಾಡಿ, ಈ ನಾಡಿನಲ್ಲಿ ರಂಗಭೂಮಿ ಕಲೆಗೆ ತನ್ನದೇ ಆದ ಇತಿಹಾಸವಿದೆ. ಇದರಲ್ಲಿನ ನೈಜಕಲೆ ಜನರ ಬದುಕಿನ ನೈಜಚಿತ್ರಣವನ್ನು ಅನಾವರಣಗೊಳಿಸುತ್ತದೆ. ರಂಗಭೂಮಿ ಬೆಳೆದರೆ ಸಮಾಜಮುಖಿ ಚಿಂತನೆಯೂ ಜನರಲ್ಲಿ ಮೂಡಿ ಸಮಾಜದಲ್ಲಿ ಸೌಹಾರ್ದತೆ ಬೆಳೆಯುತ್ತದೆ.

ಜನರಲ್ಲಿ ಸಮಾಜಮುಖಿ ಚಿಂತನೆ ಬೆಳೆಯಲಿದೆ

ರಂಗಭೂಮಿಯಿಂದಾಗಿ ನಾಡಿನ ಉನ್ನತ ಸಂಸ್ಕೃತಿ, ಕಲೆ, ಪರಂಪರೆ ಉಳಿಸಿ ಬೆಳೆಸುವುರೊಂದಿಗೆ ಜನರಲ್ಲಿ ಸಮಾಜಮುಖಿ ಚಿಂತನೆ ಬೆಳೆಯಲಿದೆ ಎಂದು ಅಭಿಪ್ರಾಯಪಟ್ಟರು. ಮಳವಳ್ಳಿಯಲ್ಲಿ ಶತಮಾನಗಳ ಹಿಂದೆಯೇ ಸ್ತ್ರೀ ಪಾತ್ರಗಳನ್ನು ಪುರುಷರು ಮಾಡುತ್ತಿದ್ದ ಕಾಲಘಟ್ಟದಲ್ಲಿ ಯಾವುದೇ ಅಂಜಿಕೆ ಇಲ್ಲದೆ ಸ್ಪುರದ್ರೂಪಿಯಾದ ಮಳವಳ್ಳಿ ಸುಂದರಮ್ಮ ಅವರು ಬಾಲ ನಟಿಯಾಗಿ ಹಲವು ಪಾತ್ರಗಳಲ್ಲಿ ಅಭಿನಯಿಸಿ, ನಾಡಿನಲ್ಲಿ ರಂಗಭೂಮಿ ಕಲೆಗೆ ಹೊಸ ಚೈತನ್ಯವನ್ನು ಮೂಡಿಸಿದರು ಎಂದರು. ಅದೇ ದಾರಿಯಲ್ಲಿ ನಡೆದು ಬಂದ ಹಿರಿಯ ನಟಿ ಗಿರಿಜಾ ಲೋಕೇಶ್ ಅವರ ಕುಟುಂಬ ರಂಗಭೂಮಿಯ ಉಳಿವಿಗಾಗಿ ಮತ್ತು ಸಿನಿಮಾ ರಂಗದ ಬೆಳವಣಿಗೆಗಾಗಿ ದುಡಿಯುತ್ತಿದೆ. ಇಂಥ ತಾಯಿ ಹೃದಯವುಳ್ಳ ನಟಿಗೆ ರಂಗ ಪ್ರಶಸ್ತಿ ದೊರೆತಿರುವುದು ಬಹಳ ಸಂತಸ ತಂದಿದೆ ಎಂದು ಶ್ಲಾಘಿಸಿದರು.

ಸೂರ್ಯ- ಚಂದ್ರ ಇರುವವರೆಗೂ, ತಾಯಿ ಎಲ್ಲಿಯವರೆಗೂ ಮಗುವಿನ ಪೋಷಣೆ ಮಾಡುತ್ತಾಳೋ ಅಲ್ಲಿಯವರೆಗೂ ರಂಗಭೂಮಿಗೆ ಸಾವಿಲ್ಲ. ಒಳ್ಳೆಯ ನಾಟಕದ ಜೊತೆಗೆ ಪ್ರಚಾರದ ಅವಶ್ಯಕತೆಯೂ ಇದೆ. ಉನ್ನತ ವ್ಯಾಸಂಗದ ವಿದ್ಯಾರ್ಥಿಗಳು ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡುವವರೂ ಸಹ ನಾಟಕದಲ್ಲಿ ಅಭಿನಯಿಸಿದ್ದಾರೆ ಎಂದರು. ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್, ಕೆಂಪೇಗೌಡರು ಅನೇಕ ಮಹನೀಯರು ಯಾವುದೇ ಜಾತಿಗೆ ಸೀಮಿತರಾಗದೇ ಸಮಾಜದ ಏಳಿಗೆ ಶ್ರಮಿಸಿದ್ದರು ಎನ್ನುವುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕಿದೆ ಎಂದು ಹೇಳಿದರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮಾತನಾಡಿ, 7 ದಿನಗಳ ನಾಟಕೋತ್ಸವವು ಯುವಜನತೆಯಲ್ಲಿ ರಂಗಭೂಮಿ ಕಲೆಯ ಬಗ್ಗೆ ಜಾಗೃತಿ ಮೂಡಿಸಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಯೂನಿವರ್ಸಲ್ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಟಿ.ಎಂ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ನಾಟಕೋತ್ಸವದ ಬಗ್ಗೆ ವಿಶ್ವಮಾನವ ವಿಚಾರ ವೇದಿಕೆ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ್.ಜಿ.ಕಪ್ಪಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಸಿ.ಚೌಡಯ್ಯ, ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ.ಮಂಜುನಾಥ್, ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್, ಕಾಲಘಟ್ಟ ಚಿತ್ರ ನಿರ್ಮಾಪಕ ಚಿಕ್ಕೇಗೌಡ, ರಂಗ ಬಂಡಿ ಅಧ್ಯಕ್ಷ ಮಧು ಮಳವಳ್ಳಿ, ಉಮಾಶ್ರೀಮಧು ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಕಾರದೊಂದಿಗೆ ಮಂಡ್ಯ ರಮೇಶ್ ನಿರ್ದೇಶನದ ಜಾತಿ ವ್ಯವಸ್ಥೆ ವಿರುದ್ಧದ ಸ್ಥಾವರವು ಜಂಗಮ ನಾಟಕ ಪ್ರದರ್ಶನ ನೆರೆದಿದ್ದ ಸಾವಿರಾರು ರಂಗಪ್ರಿಯರ ಮನ ಗೆದ್ದಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್