
ಬೆಂಗಳೂರು (ಸೆ.11): ಕಳ್ಳತನ ಪ್ರಕರಣಗಳ ತನಿಖೆ ವೇಳೆ ಕಳ್ಳರಿಂದ ವಶಪಡಿಸಿಕೊಂಡಿದ್ದ ಚಿನ್ನವನ್ನು ಕದ್ದ ಆರೋಪದ ಮೇಲೆ ಸೂರ್ಯನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಂಜೀವ್ ಕುಮಾರ್ ಮಹಾಜನ್ ಮತ್ತು ಅವರ ಕ್ರೈಂ ಸಿಬ್ಬಂದಿ ವಿರುದ್ಧ ಕೇಂದ್ರ ವಲಯ ಐಜಿಪಿ ಲಾಬೂರಾಮ್ ಅವರಿಗೆ ದೂರು ನೀಡಲಾಗಿದೆ. ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ವೆಂಕಟಾಚಲಪತಿ ಈ ಗಂಭೀರ ಆರೋಪವನ್ನು ಮಾಡಿದ್ದಾರೆ.
ಕಳೆದ ಐದು-ಆರು ತಿಂಗಳುಗಳಲ್ಲಿ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲ ಕೃತ್ಯಗಳನ್ನು ಒಂದೇ ತಂಡ ಎಸಗಿದೆ ಎಂದು ತಿಳಿದುಬಂದಿತ್ತು. ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಸಂಜೀವ್ ಮಹಾಜನ್ ಮತ್ತು ತಂಡ, ಪ್ರಕರಣಕ್ಕೆ ಸಂಬಂಧಿಸಿದ ಮಾರ್ವಾಡಿಗಳನ್ನು ವಶಕ್ಕೆ ಪಡೆದು ಖಾಸಗಿ ಲಾಡ್ಜ್‌ವೊಂದರಲ್ಲಿ ಕೂಡಿಹಾಕಿ ಚಿನ್ನವನ್ನು ರಿಕವರಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಕಳ್ಳರಿಂದ ವಶಪಡಿಸಿಕೊಂಡಿದ್ದ ಚಿನ್ನದ ಪ್ರಮಾಣ ಮತ್ತು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಚಿನ್ನದ ಪ್ರಮಾಣದಲ್ಲಿ ದೊಡ್ಡ ವ್ಯತ್ಯಾಸವಿರುವ ಬಗ್ಗೆ ದೂರುದಾರರು ಆರೋಪಿಸಿದ್ದಾರೆ. ಸುಮಾರು 2 ಕೆ.ಜಿ.ಯಷ್ಟು ಚಿನ್ನಾಭರಣಗಳನ್ನು ರಿಕವರಿ ಮಾಡಲಾಗಿದ್ದರೂ, ದಾಖಲೆಗಳಲ್ಲಿ ಕೇವಲ 250 ಗ್ರಾಂ ಚಿನ್ನ ಮಾತ್ರ ತೋರಿಸಲಾಗಿದೆ. ಉಳಿದ ಚಿನ್ನವನ್ನು ಇನ್‌ಸ್ಪೆಕ್ಟರ್ ಮತ್ತು ಕ್ರೈಂ ಸಿಬ್ಬಂದಿ ಪರಸ್ಪರ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಕಳ್ಳತನದ ಮಾಲು ಪಡೆದಿದ್ದ ಆರೋಪಿಗಳಿಂದ ಲಂಚದ ರೂಪದಲ್ಲಿ ಹಣವನ್ನೂ ಪಡೆದಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಘಟನೆಯಿಂದಾಗಿ ಕಳ್ಳತನದಿಂದ ತಮಗೆ ನಷ್ಟವಾದ ಚಿನ್ನಾಭರಣಗಳನ್ನು ಪಡೆಯಬೇಕಿದ್ದ ಸಂತ್ರಸ್ತರಿಗೆ ಮತ್ತೆ ಅನ್ಯಾಯವಾಗಿದೆ ಎಂದು ದೂರುದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವೆಂಕಟಾಚಲಪತಿ ದೂರಿನಲ್ಲಿ ಮನವಿ ಮಾಡಿದ್ದಾರೆ. ದೂರಿನ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ವಲಯ ಐಜಿಪಿ ಲಾಬೂರಾಮ್, ಈ ಪ್ರಕರಣವನ್ನು ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್ ಅವರಿಗೆ ವರ್ಗಾಯಿಸಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಸದ್ಯ ಪೊಲೀಸರು ಈ ಗಂಭೀರ ಆರೋಪದ ಕುರಿತು ತನಿಖೆ ಮುಂದುವರಿಸಿದ್ದಾರೆ. ತನಿಖೆಯ ನಂತರ ಸತ್ಯಾಂಶ ಬೆಳಕಿಗೆ ಬರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ