ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿಗೆ ಮೋದಿ ಚಾಲನೆ; ಕರ್ನಾಟಕದ 11 ವಂದೇ ಭಾರತ್ ರೈಲುಗಳ ವಿವರ ಇಲ್ಲಿವೆ!

Published : Aug 10, 2025, 11:47 AM IST
Narendra Modi at Vande Bharat Train

ಸಾರಾಂಶ

ಪ್ರಧಾನಿ ಮೋದಿ ಅವರು ಬೆಂಗಳೂರು ಮತ್ತು ಬೆಳಗಾವಿ ನಡುವಿನ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ ಸಂಚರಿಸುವ ವಂದೇ ಭಾರತ್ ರೈಲುಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಈ ಹೊಸ ರೈಲು ಸೇವೆಯು ರಾಜ್ಯದ ಜನರಿಗೆ ಹೆಚ್ಚಿನ ಸಂಪರ್ಕವನ್ನು ಒದಗಿಸುತ್ತದೆ.

ಬೆಂಗಳೂರು (ಆ.10): ಬೆಂಗಳೂರು ಮತ್ತು ಬೆಳಗಾವಿ ನಡುವೆ ಸಂಚರಿಸಲಿರುವ ಈ ಹೊಸ ರೈಲಿಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಇದರೊಂದಿಗೆ ರಾಜ್ಯದಲ್ಲಿ ಸಂಚರಿಸುವ ವಂದೇ ಭಾರತ್ ರೈಲುಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಈ ಮೂಲಕ ಕರ್ನಾಟಕದ ಜನರಿಗೆ ಮತ್ತೊಂದು ಬಹುನಿರೀಕ್ಷಿತ ವಂದೇ ಭಾರತ್ ರೈಲು ಸೇವೆ ಇಂದು ಆರಂಭವಾಗಿದೆ.

ಕಳೆದ 3 ವರ್ಷಗಳಿಂದ ದೇಶದ ವಿವಿಧ ಭಾಗಗಳಲ್ಲಿ ವಂದೇ ಭಾರತ್ ರೈಲುಗಳ ಸೇವೆ ವಿಸ್ತರಿಸಲಾಗುತ್ತಿದ್ದು, 2022ರ ನವೆಂಬರ್‌ನಲ್ಲಿ ಮೈಸೂರು-ಚೆನ್ನೈ ಮಾರ್ಗದಲ್ಲಿ ಕರ್ನಾಟಕದ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಾಗಿತ್ತು. ಈಗ, ಈ 11 ರೈಲುಗಳ ಪೈಕಿ 2 ರೈಲುಗಳು ರಾಜ್ಯದೊಳಗೇ ಸಂಚರಿಸಿದರೆ, ಉಳಿದ 9 ರೈಲುಗಳು ಕರ್ನಾಟಕ ಮತ್ತು ನೆರೆ ರಾಜ್ಯಗಳ ನಡುವೆ ಸಂಚಾರ ನಡೆಸುತ್ತಿವೆ. ಯಾವ ವಂದೇ ಭಾರತ್ ರೈಲುಗಳು ಎಲ್ಲಿಗೆ ಸಂಪರ್ಕ ಕಲ್ಪಿಸಲಿವೆ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕದಲ್ಲಿ ಸಂಚರಿಸುತ್ತಿರುವ ವಂದೇ ಭಾರತ್ ರೈಲುಗಳ ಪಟ್ಟಿ:

  1. ಎಂಜಿಆರ್ ಚೆನ್ನೈ ಸೆಂಟ್ರಲ್ - ಮೈಸೂರು (ನಿಲುಗಡೆ- ಕಟ್ಪಾಡಿ, ಬೆಂಗಳೂರು)
  2. ಮೈಸೂರು - ಎಂಜಿಆರ್ ಚೆನ್ನೈ ಸೆಂಟ್ರಲ್ (ನಿಲುಗಡೆ- ಮಂಡ್ಯ, ಬೆಂಗಳೂರು, ಕೆಆರ್‌ ಪುರಂ, ಕಟ್ಪಾಡಿ)
  3. ಕಲಬುರಗಿ - ಎಸ್‌ಎಂವಿಟಿ ಬೆಂಗಳೂರು (ನಿಲುಗಡೆ- ಯಾದಗಿರಿ, ಮಂತ್ರಾಲಯ, ರಾಯಚೂರು,ಗುಂತಕಲ್‌, ಅನಂತಪುರ, ಯಲಹಂಕ )
  4. ಕೆಎಸ್‌ಆರ್ ಬೆಂಗಳೂರು - ಧಾರವಾಡ (ನಿಲುಗಡೆ- ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ)
  5. ಮಂಗಳೂರು ಸೆಂಟ್ರಲ್ - ತಿರುವನಂತಪುರ (ನಿಲುಗಡೆ- ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ತಿರೂರು, ಶೋರನೂರು, ತಿಶೂರ್, ಎರ್ನಾಕುಲಂ, ಆಲಪೇಯ್, ಕೊಲ್ಲಂ)
  6. ಬೆಂಗಳೂರು ಕಂಟೋನ್ಮೆಂಟ್ - ಕೊಯಮತ್ತೂರು (ನಿಲುಗಡೆ- ಧರ್ಮಾಪುರಿ, ಸೇಲಂ, ಇರೋಡ್‌, ತಿರುಪ್ಪೂರ್)
  7. ಮಂಗಳೂರು ಸೆಂಟ್ರಲ್ - ಮಡಗಾಂವ್ (ನಿಲುಗಡೆ- ಉಡುಪಿ, ಕಾರವಾರ)
  8. ಬೆಂಗಳೂರು ಯಶವಂತಪುರ - ಕಾಚೇಗುಡ ಹೈದರಾಬಾದ್ (ನಿಲುಗಡೆ- ಧರ್ಮಾವರಂ, ಅನಂತಪುರ, ಕರ್ನೂಲ್‌, ಮೆಹಬೂಬ್‌ನಗರ)
  9. ಬೆಂಗಳೂರು ಕಂಟೋನ್ಮೆಂಟ್ - ಮಧುರೈ (ನಿಲುಗಡೆ- ದಿಂಡಗಲ್‌, ತಿರುಚಿ, ಕರೂರು, ನಾಮಕಲ್, ಸೇಲಂ, ಕೆಆರ್‌ ಪುರಂ)
  10. ಹುಬ್ಬಳ್ಳಿ - ಪುಣೆ (ನಿಲುಗಡೆ- ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರಾ)
  11. ಬೆಂಗಳೂರು - ಬೆಳಗಾವಿ ಇಂದು ಮೋದಿ ಚಾಲನೆ (ನಿಲುಗಡೆ- ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ)

ಹೊಸದಾಗಿ ಆರಂಭವಾದ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ವಿವರ:

  • ರೈಲು ಸಂಖ್ಯೆ: 26751/26752
  • ನಿಲ್ದಾಣಗಳು: ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ.
  • ಸಂಚಾರ ದೂರ: 606 ಕಿ.ಮೀ.
  • ಆರಂಭದ ದಿನಾಂಕ: 2025ರ ಆಗಸ್ಟ್ 10.

ವಂದೇ ಭಾರತ್ ರೈಲುಗಳ ಸಂಖ್ಯೆ 73ಕ್ಕೆ ಏರಿಕೆ:

ನಮ್ಮ ದೇಶದಲ್ಲಿ ಮೊದಲ ಬಾರಿಗೆ 2019ರಲ್ಲಿ ದೆಹಲಿ-ವಾರಣಾಸಿ ನಡುವೆ ಮೊದಲ ವಂದೇ ಭಾರತ್ ರೈಲು ಸೇವೆ ಆರಂಭವಾಗಿತ್ತು. ಬೇಡಿಕೆಗೆ ಅನುಗುಣವಾಗಿ ರೈಲುಗಳ ಸಂಖ್ಯೆ ಹೆಚ್ಚಿಸಲಾಗಿದ್ದು, ಪ್ರಧಾನಿ ಮೋದಿ ಅವರು ಭಾನುವಾರ ಬೆಂಗಳೂರು-ಬೆಳಗಾವಿ ಸೇರಿದಂತೆ ಒಟ್ಟು 3 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಈ ಮೂಲಕ ದೇಶಾದ್ಯಂತ ಸಂಚರಿಸುವ ವಂದೇ ಭಾರತ್ ರೈಲುಗಳ ಸಂಖ್ಯೆ 73ಕ್ಕೆ ತಲುಪಿದೆ.

ಭವಿಷ್ಯದಲ್ಲಿ ರಾಜ್ಯದಲ್ಲಿ ಇನ್ನಷ್ಟು ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳ ಸೇವೆ ಆರಂಭಿಸುವ ಸಾಧ್ಯತೆಗಳಿವೆ. ಬೆಂಗಳೂರು-ಮಂಗಳೂರು, ಬೆಂಗಳೂರು-ತಿರುವನಂತಪುರಂ, ಶಿವಮೊಗ್ಗ-ಬೆಂಗಳೂರು, ಮೈಸೂರು-ತಿರುಪತಿ, ಹುಬ್ಬಳ್ಳಿ-ತಿರುಪತಿ ಮತ್ತು ಬೆಂಗಳೂರು-ವಿಜಯಪುರ ಮುಂತಾದ ಮಾರ್ಗಗಳಲ್ಲಿ ಈ ರೈಲು ಸೇವೆಗೆ ಹೆಚ್ಚಿನ ಬೇಡಿಕೆಯಿದೆ.

ಮೂರು ವಂದೇ ಭಾರತ್ ರೈಲುಗಳಗಳ ವಿವರ

ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್:

ಈ ರೈಲು ಕೇವಲ 8.5 ಗಂಟೆಗಳಲ್ಲಿ 611 ಕಿ.ಮೀ ದೂರವನ್ನು ಕ್ರಮಿಸಲಿದ್ದು, ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣದ ಸಮಯವನ್ನು ಸುಮಾರು 1.20 ಗಂಟೆಗಳಷ್ಟು ಮತ್ತು ಪ್ರಸ್ತುತ ಸೇವೆಗಳಿಗೆ ಹೋಲಿಸಿದರೆ ಹಿಂದಿರುಗುವ ಪ್ರಯಾಣದಲ್ಲಿ 1.40 ಗಂಟೆಗಳಷ್ಟು ಕಡಿಮೆ ಮಾಡುತ್ತದೆ. ಈ ರೈಲು ಬೆಳಿಗ್ಗೆ 5.20 ಕ್ಕೆ ಬೆಳಗಾವಿಯಿಂದ ಹೊರಟು ಮಧ್ಯಾಹ್ನ 1.50 ಕ್ಕೆ ಬೆಂಗಳೂರನ್ನು ತಲುಪುತ್ತದೆ. ಹಿಂದಿರುಗುವ ದಿಕ್ಕಿನಲ್ಲಿ, ಇದು ಮಧ್ಯಾಹ್ನ 2.20 ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 10.40 ಕ್ಕೆ ಬೆಳಗಾವಿಗೆ ಆಗಮಿಸುತ್ತದೆ.

ಅಜ್ನಿ (ನಾಗ್ಪುರ)-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್:

ಈ ರೈಲು 881 ಕಿ.ಮೀ ಕ್ರಮಿಸುವ ಅತ್ಯಂತ ದೀರ್ಘಾವಧಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದ್ದು, ಈ ಮಾರ್ಗದಲ್ಲಿ ಸರಾಸರಿ 73 ಕಿ.ಮೀ ವೇಗದಲ್ಲಿ ಚಲಿಸುವ ಅತ್ಯಂತ ವೇಗದ ರೈಲು ಇದಾಗಿದೆ. ಇದು ವಾರ್ಧಾ, ಅಕೋಲಾ, ಶೇಗಾಂವ್, ಭೂಸಾವಲ್, ಜಲಗಾಂವ್, ಮನ್ಮಾಡ್ ಮತ್ತು ಅಹ್ಮದ್‌ನಗರ ಸೇರಿದಂತೆ 10 ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಈ ರೈಲು ಕಾರ್ಯನಿರ್ವಹಿಸಲಿದ್ದು, ಬೆಳಿಗ್ಗೆ 9.50 ಕ್ಕೆ ಅಜ್ನಿಯಿಂದ ಹೊರಟು ರಾತ್ರಿ 9.50 ಕ್ಕೆ ಪುಣೆ ತಲುಪಲಿದೆ. ಹಿಂದಿರುಗುವ ಪ್ರಯಾಣದಲ್ಲಿ, ಬೆಳಿಗ್ಗೆ 6.25 ಕ್ಕೆ ಪುಣೆಯಿಂದ ಹೊರಟು ಸಂಜೆ 6.25 ಕ್ಕೆ ಅಜ್ನಿ ತಲುಪಲಿದೆ.

ಅಮೃತಸರ-ಶ್ರೀ ಮಾತಾ ವೈಷ್ಣೋ ದೇವಿ ಕತ್ರ ವಂದೇ ಭಾರತ್ ಎಕ್ಸ್‌ಪ್ರೆಸ್:

ಈ ರೈಲು ಅಮೃತಸರ ಮತ್ತು ಜಮ್ಮುವಿನ ಯಾತ್ರಾ ಸ್ಥಳವಾದ ಕತ್ರಾ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ. ಸೋಮವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಈ ರೈಲು ಬೆಳಿಗ್ಗೆ 6.40 ಕ್ಕೆ ಕತ್ರಾದಿಂದ ಹೊರಟು ಮಧ್ಯಾಹ್ನ 12.20 ಕ್ಕೆ ಅಮೃತಸರ ತಲುಪಲಿದೆ. ಹಿಂದಿರುಗುವ ಪ್ರಯಾಣದಲ್ಲಿ, ಅದು ಅಮೃತಸರದಿಂದ ಮಧ್ಯಾಹ್ನ 4.25 ಕ್ಕೆ ಹೊರಟು ರಾತ್ರಿ 10 ಗಂಟೆಗೆ ಕತ್ರಾ ತಲುಪಲಿದೆ, ಜಮ್ಮು, ಪಠಾಣ್‌ಕೋಟ್ ಕ್ಯಾಂಟ್, ಜಲಂಧರ್ ಸಿಟಿ ಮತ್ತು ವ್ಯಾಸ್‌ನಲ್ಲಿ ನಿಲುಗಡೆ ಇರುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌