ಹೊಸ ಸಾಫ್ಟ್‌ವೇರ್‌ನಲ್ಲಿ ಸಮಸ್ಯೆ: ರಾಜ್ಯಾದ್ಯಂತ ಅಂಚೆ ಕಚೇರಿಗಳಲ್ಲಿ ಸ್ಪೀಡ್‌ಪೋಸ್ಟ್‌ ಸೇವೆ 2 ದಿನದಿಂದ ಸ್ಥಗಿತ

Published : Aug 10, 2025, 09:42 AM ISTUpdated : Aug 11, 2025, 05:23 AM IST
Indian Post

ಸಾರಾಂಶ

ಅಂಚೆ ಇಲಾಖೆ ಅಭಿವೃದ್ಧಿಪಡಿಸಿದ ಐಟಿ- 2.0 ಹೊಸ ಸಾಫ್ಟ್‌ವೇರ್‌ನ್ನು ಜೂನ್‌ ಕೊನೆ ವಾರದಲ್ಲಿ ಕರ್ನಾಟಕ ಅಂಚೆ ವೃತ್ತದಲ್ಲಿ ಪ್ರಾಯೋಗಿಕವಾಗಿ ಬಳಕೆಗೆ ಕೇಂದ್ರ ಕಚೇರಿ ಅವಕಾಶ ಕಲ್ಪಿಸಿತ್ತು.

ಮಂಗಳೂರು (ಆ.10): ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಅಂಚೆ ಕಚೇರಿಗಳಲ್ಲಿ ಕಳೆದ ಎರಡು ದಿನಗಳಿಂದ ಸ್ಪೀಡ್‌ ಪೋಸ್ಟ್‌ ಸೇವೆ ಸ್ಥಗಿತಗೊಂಡಿದೆ. ಹೊಸ ಸಾಫ್ಟ್‌ವೇರ್‌ ಅಳವಡಿಕೆ ಬಳಿಕ ಈ ಸಮಸ್ಯೆ ತಲೆದೋರಿದ್ದು, ತುರ್ತು ಸ್ಪೀಡ್‌ಪೋಸ್ಟ್ ಸೌಲಭ್ಯ ಸಿಗದೆ ಗ್ರಾಹಕರು ತೊಂದರೆಗೆ ಒಳಗಾಗಿದ್ದಾರೆ. ಅಂಚೆ ಇಲಾಖೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಇನ್ಫೋಸಿಸ್‌ ಸಾಫ್ಟ್‌ವೇರ್‌ನ್ನು ಅಂಚೆ ಸೇವೆಗೆ ಬಳಸಿಕೊಳ್ಳಲಾಗುತ್ತಿತ್ತು. ಈ ಸಾಫ್ಟ್‌ವೇರ್‌ನಲ್ಲಿ ದೋಷ ತಲೆದೋರಿದಾಗ ಕಂಪನಿ ಮೊರೆ ಹೋಗಬೇಕಿತ್ತು.

ಶನಿವಾರ ಮತ್ತು ಭಾನುವಾರ ಐಟಿ ಕಂಪನಿಗಳಿಗೆ ರಜಾ ದಿನವಾಗಿರುವುದರಿಂದ ಈ ದಿನಗಳಲ್ಲಿ ಸಾಫ್ಟ್‌ವೇರ್‌ ಸಮಸ್ಯೆ ಕಾಣಿಸಿದರೆ ಸರಿಪಡಿಸಲು ತಿಣುಕಾಡಬೇಕಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯೇ ಸ್ವತಃ ತನ್ನದೇ ಸಾಫ್ಟ್‌ವೇರ್‌ನ್ನು ಅಭಿವೃದ್ಧಿಪಡಿಸಿತು. ಅಂಚೆ ಇಲಾಖೆ ಅಭಿವೃದ್ಧಿಪಡಿಸಿದ ಐಟಿ- 2.0 ಹೊಸ ಸಾಫ್ಟ್‌ವೇರ್‌ನ್ನು ಜೂನ್‌ ಕೊನೆ ವಾರದಲ್ಲಿ ಕರ್ನಾಟಕ ಅಂಚೆ ವೃತ್ತದಲ್ಲಿ ಪ್ರಾಯೋಗಿಕವಾಗಿ ಬಳಕೆಗೆ ಕೇಂದ್ರ ಕಚೇರಿ ಅವಕಾಶ ಕಲ್ಪಿಸಿತ್ತು. ಅದರಂತೆ ಜೂ.21ರಿಂದ ನಾಲ್ಕು ದಿನಗಳ ಕಾಲ ಹೊಸ ಸಾಫ್ಟ್‌ವೇರ್‌ ಅಳವಡಿಕೆ ಕಾರಣ ಅಂಚೆ ಕಚೇರಿ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಆ ಬಳಿಕ ಎಲ್ಲವೂ ಸರಿಹೋಗಿತ್ತು.

2 ದಿನಗಳಿಂದ ಕೈಕೊಟ್ಟ ಸಾಫ್ಟ್‌ವೇರ್‌: ಅಂಚೆ ಇಲಾಖೆಯ ಐಟಿ-2.0 ಹೊಸ ಸಾಫ್ಟ್‌ವೇರ್ ಕಳೆದ ಎರಡು ದಿನಗಳಿಂದ ಕೈಕೊಟ್ಟಿದೆ. ಶುಕ್ರವಾರದಿಂದ ಏಕಾಏಕಿ ಸಾಫ್ಟ್‌ವೇರ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿದ್ದು, ಶನಿವಾರವೂ ಈ ಸಮಸ್ಯೆ ಬಗೆಹರಿದಿಲ್ಲ. ಇದರಿಂದಾಗಿ ಎರಡು ದಿನವೂ ರಾಜ್ಯಾದ್ಯಂತ ಸ್ಪೀಡ್‌ ಪೋಸ್ಟ್‌ ಸೇವೆ ಸಾಧ್ಯವಾಗಿಲ್ಲ. ಅಂಚೆ ಕಚೇರಿಯಲ್ಲಿ ಸ್ಪೀಡ್‌ ಪೋಸ್ಟ್‌ ಲಕೋಟೆ ಸ್ವೀಕರಿಸಬೇಕಾದರೆ ಡಿಜಿಟಲ್‌ ಅರ್ಜಿ ಭರ್ತಿಗೊಳಿಸಿ ಅದಕ್ಕೆ ವಿಳಾಸದ ಸ್ಟಿಕ್ಕರ್‌ ಅಂಟಿಸಬೇಕು.

ಆದರೆ ಅಂಚೆ ಇಲಾಖೆಯ ಕಂಪ್ಯೂಟರ್‌ನಲ್ಲಿ ಅರ್ಜಿ ಹಾಗೂ ಸ್ಟಿಕ್ಕರ್‌ ಕಾಣಿಸುತ್ತಿಲ್ಲ. ಇದರಿಂದಾಗಿ ಪರ್ಯಾಯ ವಿಧಾನ ಇಲ್ಲದೆ ರಾಜ್ಯವ್ಯಾಪಿ ಸ್ಪೀಡ್‌ ಪೋಸ್ಟ್‌ ಸೇವೆ ಸ್ಥಗಿತಗೊಳ್ಳುವಂತಾಗಿದೆ. ಈ ಹಿಂದೆ ಕೈಬರಹ ಮೂಲಕ ಸ್ವೀಕೃತಿ ಆಗುತ್ತಿತ್ತು. ಈಗ ಡಿಜಿಟಲ್‌ ಮೂಲಕ ಸ್ವೀಕೃತಿ ನಡೆಸಲಾಗುತ್ತದೆ. ಪ್ರಸ್ತುತ ಅಂಚೆ ಇಲಾಖೆಯ ಸ್ಪೀಡ್‌ ಪೋಸ್ಟ್‌ ಸ್ಥಗಿತಗೊಂಡ ಕಾರಣ ಗ್ರಾಹಕರು ದುಬಾರಿ ದರ ತೆತ್ತು ಕೊರಿಯರ್‌ನ್ನು ಆಶ್ರಯಿಸಬೇಕಾಗಿದೆ.

ನನಗೆ ಆಗಾಗ ಔಷಧದ ಪಾರ್ಸೆಲ್‌ ಕಳುಹಿಸುವುದು ಇರುತ್ತದೆ. ಈಗ ಎರಡು ದಿನಗಳಿಂದ ವೆಬ್‌ಸೈಟ್‌ ಸಮಸ್ಯೆಯಿಂದ ಸ್ವೀಡ್‌ಪೋಸ್ಟ್‌ ಸಾಧ್ಯವಾಗುತ್ತಿಲ್ಲ. ಇದರಿಂದ ನಾನು ದುಬಾರಿ ಹಣ ತೆತ್ತು ಖಾಸಗಿ ಕೊರಿಯರ್‌ನ್ನು ಅವಲಂಬಿಸಬೇಕಾಗಿದೆ.
-ಡಾ.ಅರುಣ್‌ ಪ್ರಸಾದ್‌, ಮುಡಿಪು

ಅಂಚೆ ಇಲಾಖೆಯದ್ದೇ ಹೊಸ ಸಾಫ್ಟ್‌ವೇರ್‌ ಅಳವಡಿಸಲಾಗಿದೆ. ಹೀಗಾಗಿ ಕೆಲವೊಂದು ತಾಂತ್ರಿಕ ತೊಂದರೆಗಳು ಕಾಣಿಸಿದೆ. ಇದರಿಂದಾಗಿ ಗ್ರಾಹಕರಿಗೆ ತೊಂದರೆಯಾಗಿದೆ. ಸೋಮವಾರ ಈ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ.
-ಅಧಿಕಾರಿ, ಅಂಚೆ ಇಲಾಖೆ, ಮಂಗಳೂರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌