
ರಾಯಚೂರು (ಆ.10): ಮಂತ್ರಾಲಯದ ಶ್ರೀರಾಘವೇಂದ್ರ ಮಠದಲ್ಲಿ ಹಮ್ಮಿಕೊಂಡಿರುವ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ಆರಾಧನೆಯ ಸಪ್ತರಾತ್ರೋತ್ಸವದ ಎರಡನೇ ದಿನ ತಿರುಮಲ-ತಿರುಪತಿ ದೇವಸ್ಥಾನ (ಟಿಟಿಡಿ)ದಿಂದ ತಂದಿದ್ದ ಶೇಷವಸ್ತ್ರ ಆಗಮನ, ಇದೇ ಮೊದಲ ಬಾರಿಗೆ ಹೊಸದಾಗಿ ನಿರ್ಮಿಸಿರುವ ಲೋಕಾರ್ಪಣೆಗೊಂಡ ಪುಷ್ಕರಣಿಯಲ್ಲಿ ಉತ್ಸವ ರಾಯರ ತೆಪೋತ್ಸವ ಶನಿವಾರ ಅದ್ಧೂರಿಯಾಗಿ ನಡೆಯಿತು.
ಬೆಳಗ್ಗೆ ಶ್ರೀಮಠದ ಮಧ್ವ ಕಾರಿಡಾರ್ ಆರಂಭದಲ್ಲಿ ಶೇಷವಸ್ತ್ರ ಸಮೇತರಾಗಿ ಆಗಮಿಸಿದ್ದ ಟಿಟಿಡಿ ಅಧಿಕಾರಿ, ಪಂಡಿತರನ್ನು ಮಠದಿಂದ ಬರಮಾಡಿಕೊಳ್ಳಲಾಯಿತು. ಪೀಠಾಧಿಪತಿ ಡಾ। ಸುಬುಧೇಂದ್ರ ತೀರ್ಥರು ಶ್ರೀನಿವಾಸ ದೇವರ ಶೇಷವಸ್ತ್ರಗಳನ್ನು ತಮ್ಮ ತಲೆಯ ಮೇಲೆ ಇರಿಸಿಕೊಂಡು ಪ್ರಕಾರದಲ್ಲಿ ಪ್ರದಕ್ಷಿಣೆ ಹಾಕಿದರು. ಶೇಷವಸ್ತ್ರವನ್ನು ಸೋಮವಾರ ನಡೆಯಲಿರುವ ಮಧ್ಯಾರಾಧನೆಯಂದು ರಾಯರ ಸಮರ್ಪಿಸಲಾಗುತ್ತದೆ. ಸಪ್ತರಾತ್ರೋತ್ಸವದ 2ನೇ ದಿನವಾದ ಶನಿವಾರ ಸಂಜೆ ಉತ್ಸವ ರಾಯರಿಗೆ ತೆಪ್ಪೋತ್ಸವ ಇದೇ ಮೊದಲ ಸಲ ನಡೆಯಿತು. ಭಕ್ತರೊಬ್ಬರು ನಿರ್ಮಿಸಿಕೊಟ್ಟ ಪುಷ್ಕರಣೆಯಲ್ಲಿ ಈ ತೆಪ್ಪೋತ್ಸವ ಅದ್ದೂರಿಯಾಗಿ ನಡೆಯಿತು.
ನೂತನ ಪುಷ್ಕರಣಿ ಹಾಗೂ ಕವೀಂದ್ರ ತೀರ್ಥರು ಹಾಗೂ ವಾಗೀಶ್ ತೀರ್ಥರ ಹೆಸರಿನಲ್ಲಿ ನಿರ್ಮಿಸಿದ ವಸತಿ ಭವನಗಳನ್ನು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಉದ್ಘಾಟಿಸಿದರು. ಪುಷ್ಕರಣಿಯಲ್ಲಿ ನೀರು ಸಂಗ್ರಹಗೊಂಡ ನಂತರ ಸ್ವಾಮಿಗಳು ಈಜಾಡಿ ಗಮನ ಸೆಳೆದಿದ್ದರು. ಆ ವಿಡಿಯೋ ಈಗ ವೈರಲ್ ಗೊಂಡಿದೆ.
ತೆಪ್ಪೋತ್ಸವ: ಸುಕ್ಷೇತ್ರ ಮಂತ್ರಾಲಯದ ಮಠದಲ್ಲಿ ರಾಯರ 354ನೇ ಆರಾಧನಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ ಶ್ರೀಮಠದಲ್ಲಿ ಉತ್ಸವ ಮೆರವಣಿಗೆ ಮುಖಾಂತರ ಪುಷ್ಕರಣಿ ಬಳಿಗೆ ತೆರಳಿ ಉತ್ಸವ ರಾಯರಿಗೆ ತೆಪೋತ್ಸವ, ದೀಪೋತ್ಸವಗಳನ್ನು ನೆರವೇರಿಸಲಾಯಿತು. ನಂತರ ಶ್ರೀಮಠದ ಪ್ರಕಾರದಲ್ಲಿ ಶಾಖೋತ್ಸವ ಹಾಗೂ ಸ್ವಸ್ತಿವಾಚನ, ಮತ್ತು ರಥೋತ್ಸವವನ್ನು ಶ್ರೀಗಳು ನೆರವೇರಿಸಿಕೊಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ