
ಬೆಂಗಳೂರು (ಫೆ.27): ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್ ಮೇಲೆ ಹಲ್ಲೆ ಮಾಡಿದ ಪ್ರಕರಣ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ವಿವಾದಕ್ಕೆ ಕಾರಣವಾಗಿದೆ. ಇದರ ನಡುವೆ ಬೆಳಗಾವಿ ಸಂಬಂಧ ಹೋರಾಟಕ್ಕೆ ಸೋಶಿಯಲ್ ಮೀಡಿಯಾದ ಮೂಲಕ ಬೆಂಬಲ ಕೋರಿದ್ದ ಕನ್ನಡ ಪರ ಹೋರಾಟಗಾರನ ಮೈಬಣ್ಣವನ್ನೇ ಉತ್ತರ ಕರ್ನಾಟಕ ಮೂಲದ ಕಂಟೆಂಟ್ ಕ್ರಿಯೇಟರ್ ಲೇವಡಿ ಮಾಡಿದ ಘಟನೆ ಆಕ್ರೋಶಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ 3.37 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿರುವ ಪವನ್ ಕೃಷ್ಣ ಕುಲಕರ್ಣಿ ಉಡಾಳ್ ಪಾವ್ಯಾ ಹೆಸರಲ್ಲಿ ತಮ್ಮ ಕಂಟೆಂಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ನನ್ ಮಿನಿ ರೇಡಿಯೋ ಇನ್ಸ್‌ಟಾಗ್ರಾಮ್ ಪೇಜ್ ಹೊಂದಿರುವ ಹರೀಶ್ ನಡುವಿನ ಗೊಂದಲ ಈಗ ಬೇರೆಯದೇ ರೂಪ ಪಡೆದುಕೊಂಡಿದೆ.
ಬೆಳಗಾವಿ ವಿಚಾರದಲ್ಲಿ ಉಡಾಳ್ ಪಾವ್ಯಾ ಪವನ್ ಕೃಷ್ಣರಿಂದ ಬೆಂಬಲದ ವಿಡಿಯೋ ಕೇಳಲು ನನ್ ಹರೀಶ್ ಹೋಗಿದ್ದಾರೆ. ಆದರೆ, ಇದನ್ನು ನಿರಾಕರಿಸಿದ ಪವನ್ ಕೃಷ್ಣ ಸುಮ್ಮನಿದ್ದರೆ ಸಾಕಿತ್ತು. ಅದರ ಬದಲು ನನ್ ಮಿನಿ ರೇಡಿಯೋ ಹರೀಶ್ ಅವರ ಬಣ್ಣವನ್ನು ಲೇವಡಿ ಮಾಡಿ ಕಂಟೆಂಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಇನ್ಸ್‌ಟಾ ಸ್ಟೋರಿಯಲ್ಲಿ ಬರೆದುಕೊಂಡಿರುವ ಹರೀಶ್, 'ಕನ್ನಡ ಅಂತ ವಿಷಯ ಬಂದಾಗ ಜೊತೇಲೀರೋ ಸ್ನೇಹಿತರನ್ನ ಕುಟುಂಬದವರನ್ನೇ ದೂರ ಮಾಡಿಕೊಂಡಿರುವವನು ನಾನು. ಹೀಗ್ ಇರೋವಾಗ ನಿನ್ನೆ ಮೊನ್ನೆ ನನಗೆ ಪರಿಚಯ ಆಗಿರೋ ಯೂಟ್ಯೂಬ್ ಕ್ರಿಯೇಟರ್ಸ್ ಕನ್ನಡದ ವಿಚಾರದಲ್ಲಿ ದನಿ ಎತ್ತಿಲ್ಲಾ ಅಂದ್ರೆ ಸುಮ್ನೆ ಇರ್ಬೇಕಾ? ಕನ್ನಡಕ್ಕಿಂತ ಯಾರೂ ದೊಡ್ಡವರಲ್ಲ. ಕನ್ನಡ ಮಣ್ಣಿನ ಋಣ ಎಲ್ಲರ ಮೇಲಿದೆ.ಈ ನೆಲದಲ್ಲಿ ಹುಟ್ಟಿರೋ ಕನ್ನಡಿಗರು ನನ್ನ ಕೈ ಹಿಡಿತಾರೋ ಇಲ್ಲವೋ ಗೊತ್ತಿಲ್ಲ. ಕನ್ನಡ ತಾಯಿ ಕೈ ಹಿಡಿತಾಳೆ ಅನ್ನೋ ನಂಬಿಕೆ ಇದೆ. ಆಕೆ ಕೈ ಹಿಡಿದಿರೋದಕ್ಕೆ ಇಷ್ಟು ದೂರ ಬಂದಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಇನ್ನು ಉಡಾಳ್ ಪಾವ್ಯಾ ಲೇವಡಿ ಮಾಡಿದ ಕಂಟೆಂಟ್‌ಗೂ ತಿರುಗೇಟು ನೀಡಿರುವ ಹರೀಶ್, 'ನನ್ನ ಬಣ್ಣಕ್ಕೆ ಟೀಕೆಗಳು ನನಗೆ ಹೊಸದೇನಲ್ಲ ಸಹೋದರ ಉಡಾಳ್ ಪಾವ್ಯಾ. ನಿನ್ನ ಕೋಪ, ಆವೇಶ, ಲೇವಡಿ ನನ್ನ ಮೇಲೆ ಅಲ್ಲ. ಬೆಳಗಾವಿಯಲ್ಲಿ ಪ್ರತಿವರ್ಷ ಕನ್ನಡಿಗರಿಗೆ ತೊಂದರೆ ಕೊಡುತ್ತಿರೋ ಮರಾಠಿಗರ ಮೇಲೆ ಇರಲಿ. ನೀವೆಲ್ಲಾ ದನಿ ಎತ್ತೋದರಿಂದ ಸರ್ಕಾರಕ್ಕೆ ಇನ್ನೂ ಬಿಸಿ ಮುಟ್ಟುತ್ತೆ. ಅದೆಲ್ಲ ಬಿಟ್ಟು ಈ ತರ ನನ್ ಮಿನಿ, ನನ್ ಮಿನಿ ಅನ್ಕೊಂಡು ಸಮಯ ವ್ಯರ್ಥ ಮಾಡಬೇಡ' ಎಂದು ಬರೆದಿದ್ದಾರೆ.
ಉಡಾಳ್ ಪಾವ್ಯಾ ಮಾಡಿದ್ದೇನು?: ಮುಖಕ್ಕೆ ಕಪ್ಪು ಬಣ್ಣದ ಫೇಸ್‌ಪ್ಯಾಕ್ ಹಾಕಿಕೊಂಡು ಪವನ್ ಕೃಷ್ಣ, ಹರೀಶ್‌ರನ್ನು ಲೇವಡಿ ಮಾಡಿದ್ದು, 'ಮಿನಿ ನಿನ್ನ ವೀಕ್ಷಕರನ್ನು ಇಷ್ಟಪಡ್ತೇನೆ. ನಿನ್ನ ಇಂಪ್ಯಾಕ್ಟ್‌ಅನ್ನು ಇಷ್ಟ ಪಡ್ತೇನೆ. ನಿನ್ನ ಕನಸನ್ನು ಇಷ್ಟಪಡ್ತೇನೆ. ಅಪ್ಪಿ..ಇಲ್ಲಿ ಇದಕ್ಕಿಂತಲೂ ಗಮನ ನೀಡಬೇಕಾದ ಸಾಕಷ್ಟು ಸಮಸ್ಯೆಗಳಿವೆ. ಅದರ ಮೇಲೆ ಗಮನ ನೀಡು' ಎಂದು ಬರೆದುಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಮತ್ತೆ KSRTC ಬಸ್‌ಗೆ ಮಸಿ ಬಳಿದ ಮರಾಠಿ ಪುಂಡರು; ಸಂಧಾನಕ್ಕಿಳಿದ ಸಾರಿಗೆ ಸಚಿವರು!
ಇದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, 'ಉಡಾಳಪಾವ್ಯಾ ಅಂತೆ , ನನ್ ಮಿನಿ ರೆಡಿಯೋ ಹರೀಶ್ ಅವ್ರು ಕನ್ನಡ ಕಂಟೆಂಟ್ ಕ್ರಿಯಟರ್ ಎಲ್ಲಾ ಬೆಳಗಾವಿ ಕಂಡಕ್ಟರ್ ವಿಷಯದಲ್ಲಿ ಜೊತೆ ನಿಲ್ಲಿ ಅಂದಿದ್ದಕ್ಕೆ ಆತನ ಕಲರ್ ಮೇಲೆ ಟ್ರೋಲ್ ಮಾಡೊ ತರ ಪೋಸ್ಟ್ ಮಾಡಿದ್ದಾನೆ' ಎಂದು ಒಬ್ಬರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕನಿಗೆ ಚಾಕು ಇರಿದ ಪಾಪಿ, ಪತ್ನಿ ಎದುರಿಗೆ ಪ್ರಾಣ ಬಿಟ್ಟ ಪತಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ