ಬಿಜೆಪಿಯಿಂದ ಉಚ್ಛಾಟಿತ ಕೆ.ಎಸ್. ಈಶ್ವರಪ್ಪ ಅವರು ಡಿ.ಕೆ.ಶಿವಕುಮಾರ್ ಅವರನ್ನು ಹೊಗಳಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಡಿ.ಕೆ.ಶಿವಕುಮಾರ್ ಸ್ವಾತಂತ್ರ್ಯಪೂರ್ವದ ಕಾಂಗ್ರೆಸ್ ನಾಯಕನಂತೆ ಇದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗ (ಫೆ.27): ಈಗಾಗಲೇ ಬಿಜೆಪಿಯಿಂದ ಉಚ್ಛಾಟನೆಯಾಗಿರುವ ಕೆ.ಎಸ್. ಈಶ್ವರಪ್ಪ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ. ಡಿಕೆಶಿ ಒಬ್ಬ ಸ್ವಾತಂತ್ರ್ಯಪೂರ್ವದ ಕಾಂಗ್ರೆಸ್ ನಾಯಕನಂತೆ ಕಾಣುತ್ತಿದ್ದಾರೆ. ಎಲ್ಲರೂ ಅವರನ್ನು ಅನುಕರಣೆ ಮಾಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೊಗಳಿದ್ದಾರೆ. ಇದರ ಬೆನ್ನಲ್ಲಿಯೇ ರಾಜ್ಯ ರಾಜಕಾರಣದಲ್ಲಿ ಹೊಸದೊಂದು ಅಲೆ ಶುರುವಾಯಿತೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಹೌದು, ಶಿವಮೊಗ್ಗದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು, ಡಿ.ಕೆ.ಶಿವಕುಮಾರ್ ಸ್ವಾತಂತ್ರ್ಯಪೂರ್ವದ ಕಾಂಗ್ರೆಸ್ ನಾಯಕರಂತೆ ಹಿಂದೂ ಆಗಿ ಹುಟ್ಟಿದ್ದು. ಹಿಂದೂ ಆಗಿಯೇ ಸಾಯುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ನಾನು ತುಂಬಾ ಸಂತೋಷ ವ್ಯಕ್ತಪಡಿಸುತ್ತೇನೆ. ಎಲ್ಲ ಕಾಂಗ್ರೆಸ್ ನಾಯಕರು ಡಿ.ಕೆ.ಶಿವಕುಮಾರ್ ಅವರನ್ನು ಅನುಸರಿಸಬೇಕು. ಎಲ್ಲ ಕಾಂಗ್ರೆಸ್ ನಾಯಕರಿಗೆ ಹಿಂದೂತ್ವದ ಬಗ್ಗೆ ಪವಿತ್ರ ಸ್ಥಳಗಳ ಬಗ್ಗೆ ಗೌರವವಿದೆ. ಆದರೆ ಹೇಳಿಕೊಳ್ಳುವ ಧೈರ್ಯ ಇಲ್ಲ. ಹಿಂದೂತ್ವ ಮತ್ತು ರಾಷ್ಟ್ರೀಯತೆ, ರಾಷ್ಟ್ರ ಭಕ್ತಿ ನಮ್ಮ ಸ್ವಂತ ಆಸ್ತಿ ಅಲ್ಲ. ಮುಸ್ಲಿಂ, ಹಿಂದೂ ಎಂದು ಬೇಧ ಭಾವ ಮಾಡಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮ ಆಗಿದೆ. ಡಿ.ಕೆ.ಶಿವಕುಮಾರ್ ಮತ್ತು ನಾನು ಆರ್.ಎಸ್.ಎಸ್ ಶಾಖೆಗೆ ಹೋಗಿದ್ದೆ. ನನಗೂ ನಮಸ್ತೆ ಸದಾ ವಸ್ತಾರೆ ಬರುತ್ತೆ ಎಂದು ಹೇಳಿದ್ದಾರೆ ಎಂಬುದನ್ನು ಇಲ್ಲಿ ಪುನರುಚ್ಛರಿಸಿ ಹೊಗಳಿಕೆಯನ್ನು ಮುಂದುವರೆಸಿದರು.
ಇನ್ನು ಡಿಕೆಶಿ ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಎಐಸಿಸಿ ಕಾರ್ಯದರ್ಶಿ ವಿರೋಧ ವ್ಯಕ್ತಪಡಿಸಿದ ವಿಚಾರದ ಬಗ್ಗೆ ಮಾತನಾಡಿ, ನಮ್ಮ ದೇಶದ, ವಿದೇಶದ 67 ಕೋಟಿ ಜನ ಪ್ರಯಾಗದಲ್ಲಿ ಕುಂಭ ಸ್ನಾನ ಮಾಡಿ ಬಂದರು. ಹಾಗಾದರೆ ಅವರೆಲ್ಲರೂ ಆರ್.ಎಸ್.ಎಸ್.ನವರಾ ಕೇವಲ ಭಕ್ತರಷ್ಟೇ? ಇಶಾ ಫೌಂಡೇಶನ್ ನಿಂದ ಡಿಕೆಶಿ ಗೆ ಕರೆದಿದ್ದು ಹೋಗಿದ್ದಾರೆ ಅದರಲ್ಲಿ ತಪ್ಪೇನೂ ಇಲ್ಲ. ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಆರ್‌ಎಸ್‌ಎಸ್ ದೇಶದಲ್ಲಿ ಬೆಳೆಸುತ್ತಿದ್ದಾರೆ. ಅದೇ ರೀತಿ ಹಿಂದೂ ಸಂಘಟನೆಗಳು ಹಿಂದೂ ಧರ್ಮದ ಸಂಸ್ಕೃತಿ ಬೆಳೆಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಸ್ಪಷ್ಟವಾಗಿ ಬಿಜೆಪಿ ಸೇರೋಲ್ಲ ಅಂದಿದ್ದಾರೆ. ಎಲ್ಲದಕ್ಕೂ ರಾಜಕೀಯ ತರಬಾರದು ಎಂದು ಹೇಳಿದರು.
ಇದನ್ನೂ ಓದಿ: ತುಂಗಭದ್ರಾ ಅಣೆಕಟ್ಟಿಗೆ ನವಲಿ ಸಮಾನಾಂತರ ಅಣೆಕಟ್ಟು ಚರ್ಚೆ: ಡಿ.ಕೆ.ಶಿವಕುಮಾರ್
ಶಿವಮೊಗ್ಗದ ಬಳಿಯ ಗೋವಿಂದಾಪುರ ಆಶ್ರಯ ಮನೆ ಹಂಚಿಕೆ ವಿಚಾರದಲ್ಲಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಕಿಡಿ ಕಾರಿದ ಮಾಜಿ ಸಚಿವ ಈಶ್ವರಪ್ಪ ಅವರು, ಮುಖ್ಯಮಂತ್ರಿಯೇ ಬಂದು ಉಳಿದ ಬಡವರಿಗೆ ಮನೆ ನೀಡಲಿ. ಚೆನ್ನಿ ಭಾಯ್ ಅಂತ ಸಚಿವ ಜಮೀರ್ ಹೊಗಳಿದ್ದೇ ಬಂತು. ಜಮೀರ್ ಬಂದಿದ್ದರಿಂದ ಬಡವರಿಗೇನೂ ಲಾಭವಾಗಿಲ್ಲ. ಆಶ್ರಯ ಯೋಜನೆ ಬಡವರ ಪಾಲಿಗೆ ಮರೀಚಿಕೆ ಆಗಿದೆ. ಲಕ್ಷ ಲಕ್ಷ ಮನೆ, ಸಬ್ಸಿಡಿ, ಉಚಿತ ಅಂತೆಲ್ಲ ಘೋಷಣೆ ಮಾಡ್ತಿದೆ ರಾಜ್ಯ ಸರ್ಕಾರ. ವಸತಿ ಸಚಿವ ಜಮೀರ್ ಅಹಮದ್ ಶಿವಮೊಗ್ಗಕ್ಕೆ ಬಂದು ಏನು ಕೊಟ್ಟಿದ್ದಾರೆ? ಸಚಿವ ಮಧು ಬಂಗಾರಪ್ಪ ಕೂಡ 12 ಕೋಟಿ ರೂ. ಬಿಡುಗಡೆಯ ಮಾತನಾಡಿದ್ದರು. ಆದರೆ, ಜಮೀರ್ ಖಾಲಿ ಕೈಯಲ್ಲಿ ಬಂದು ಹೋಗಿದ್ದಾರೆ. ಕಳೆದ 3 ತಿಂಗಳ ಹಿಂದೆಯೇ ಮನೆಗಳನ್ನು ಶಾಸಕರು ಕೊಡ್ತೀನಿ ಎಂದಿದ್ದರು. ತಮಗೆ ಕ್ರೆಡಿಟ್ ಸಿಗಲಿ ಅಂತ ಕಾಂಗ್ರೆಸ್ ಈ ಕೆಲಸ ಮಾಡಿದೆ. ಪಾಲಿಕೆ ದುಡ್ಡಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕೊಡಿಸಲಾಗಿದೆ ಎಂದು ಹರಿಹಾಯ್ದರು.
ರಾಜ್ಯ ಸರ್ಕಾರದಿಂದ ಬಾಕಿ 1,728 ಮನೆಗಳನ್ನು ಬಡವರಿಗೆ ಯಾವಾಗ ಕೊಡ್ತೀರಿ? 24 ಕೋಟಿ ರೂ. ಗುತ್ತಿಗೆದಾರನ ಹಣ ಮಾಡಿದ ಕೆಲಸದ್ದೇ ಬಾಕಿ ಇದೆ. ಕೇಂದ್ರದ ಹಣ, ಬಡವರ ಹಣ ಬಳಸಿಕೊಂಡಾಗಿದೆ. ರಾಜ್ಯ ಸರ್ಕಾರದ ಹಣ ಬಾಕಿ ಇದೆ. ಗೋವಿಂದಾಪುರದ ಮನೆಗಳಿಗೆ ತಾತ್ಕಾಲಿಕ ವಿದ್ಯುತ್ ಬಿಲ್ ನಾಲ್ಕುಪಟ್ಟು ಹೆಚ್ಚು ಬರಲಿದೆ. ಈ ಕೂಡಲೇ 12 ಕೋಟಿ ರೂ. ಬಿಡುಗಡೆ ಮಾಡಲಿ. ನಮ್ಮ ಶಾಸಕರಿಗೆ 652 ಮನೆ ಕೊಟ್ಟಿದ್ದರೆ ಸಾಕಿತ್ತು. ಚೆನ್ನಿ ಸಾಬ್ ಅಂತ ಜಮೀರ್ ಕರೆದು ಮಾತಾಡಿದ ಕೂಡಲೇ ಶಾಸಕರು ನಕ್ಕು ಸುಮ್ಮನಾಗಿದ್ದಾರೆ. ಇಬ್ಬರೂ ಪರಸ್ಪರ ಹೊಗಳಿಕೊಂಡು ಕಾರ್ಯಕ್ರಮ ಮುಗಿಸಿದ್ದಾರೆ ಎಂದರು.
ಇದನ್ನೂ ಓದಿ: ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂವಾಗಿಯೇ ಸಾಯುತ್ತೇನೆ; ಶಿವಭಕ್ತ ಡಿ.ಕೆ. ಶಿವಕುಮಾರ್!
ಈಗಿರುವ ಮನೆಗಳ ಪತ್ರ ಕೊಡೋಕೆ ಸಚಿವ ಜಮೀರ್ ಅವರೇ ಬರಬೇಕಿತ್ತಾ? ಗುಮಾಸ್ತನೂ ಆ ಕೆಲಸ ಮಾಡುತ್ತಿದ್ದ. ಗೋಪಶೆಟ್ಟಿಕೊಪ್ಪ 1,836 ಮನೆಗಳು ನಾನು ಶಾಸಕನಾಗಿದ್ದಾಗ 500 ಜನ ಮನೆಗಳಿಗೆ ಪೂರ್ಣ ಹಣ ಕಟ್ಟಲಾಗಿದೆ. ಒಂದೂವರೆ ವರ್ಷದಿಂದ ಕೆಲಸ ನಡೀತಿಲ್ಲ. ಗುತ್ತಿಗೆದಾರ ಜಾಗ ಖಾಲಿ ಮಾಡಿದ್ದಾನೆ. ಯೋಗ್ಯತೆ ಇದ್ರೆ ಮನೆ ಕಟ್ಟಿ. ರಾಜೀವ್ ಗಾಂಧಿ ಯೋಜನಾ ಕಚೇರಿಯಲ್ಲಿ ಅಪ್ಪ-ಅಮ್ಮ ಯಾರೂ ಇಲ್ಲ. ಗುಮಾಸ್ತನ ಕೆಲಸ ಮಾಡಿ ಹೋಗೋಕೆ ಜಮೀರ್ ಬರಬೇಕಿತ್ತಾ? ಮುಖ್ಯಮಂತ್ರಿಗಳೇ ನೀವೇ ಬಂದು ಕೆಲಸ ಮಾಡಿಕೊಡಿ. ಜಮೀರ್ ಕೈಯಲ್ಲಿ ಇದೆಲ್ಲ ಆಗೋಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಮನೆ ಖರೀದಿಗೆ ಎಲ್ಲರಿಗೂ ಬ್ಯಾಂಕಿನಿಂದ 4.20 ಲಕ್ಷ ಲೋನ್ ಆಗುತ್ತದೆ. ಆದರೆ, ಜಮೀರ್ ಲೋನ್ ಬೇಡ ಅಂತ ಹೇಳಿ ಗೊಂದಲ ಸೃಷ್ಟಿಸಿದ್ದಾರೆ. ಜಮೀರ್ ಬಂದು ಹೋಗಿದ್ದರಿಂದ ಬಡವರಿಗೇನೂ ಪ್ರಯೋಜನ ಆಗಿಲ್ಲ. ನಾನೇನು ಮಾಡಿದ್ನೋ ಅದನ್ನು ಹೊಗಳಲು ಮಾತ್ರ ಬಂದಿದ್ದಾರೆ. ತಕ್ಷಣ ಮುಖ್ಯಮಂತ್ರಿಗಳು ಗೋವಿಂದಾಪುರ, ಗೋಪಶೆಟ್ಟಿಕೊಪ್ಪದ ಬಡವರ ಮನೆಗಳನ್ನು ಪೂರ್ಣಗೊಳಿಸಬೇಕು. ಮೊದಲೇ ಯೋಜಿಸಲಾದ ಕೆಲಸದ ದುಡ್ಡಿಗೆ ಕ್ಯಾಬಿನೇಟ್ ಒಪ್ಪಿಗೆ ಮತ್ತೇಕೆ? ಆಶ್ರಯ ಮನೆಗಳ ಹಂಚಿಕೆ ವಿಚಾರದಲ್ಲಿ ಬಡವರಿಂದ ಹಣ ವಸೂಲಿ ಬಗ್ಗೆ ನನಗೇನು ಮಾಹಿತಿ ಇಲ್ಲ. ಒಂದು ವೇಳೆ ಬಡವರು ಹಣ ಕೊಟ್ಟಿದ್ದರೆ ಅದು ತಪ್ಪು ತೆಗೆದುಕೊಂಡಿದ್ದು ತಪ್ಪು. ಬಡವರ ಬಳಿ ಹಣ ವಸೂಲಿ ಮಾಡಿದರೆ ಅವರು ಖಂಡಿತ ಉದ್ಧಾರ ಆಗಲ್ಲ ಎಂದು ಕೆ.ಎಸ್. ಈಶ್ವರಪ್ ಹೇಳಿದರು.