
ವಯನಾಡು (ಕೇರಳ) : ಕರ್ನಾಟಕ- ಕೇರಳ ಸಂಪರ್ಕಿಸುವ ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಪ್ರಯಾಣ ನಿಷೇಧ ಸಮಸ್ಯೆ ಪರಿಹರಿಸುವ ಸಂಬಂಧ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ‘ಬಂಡೀಪುರ ಅರಣ್ಯ ಮಾರ್ಗಕ್ಕೆ ಪರ್ಯಾಯವಾಗಿ ಸುರಂಗ ಮಾರ್ಗ ನಿರ್ಮಿಸುವ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನು ನೇಮಿಸಲಾಗಿದೆ’ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ವಯನಾಡು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ತಿಳಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು ನಿತಿನ್ ಗಡ್ಕರಿ ಅವರಿಗೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಲಿಖಿತವಾಗಿ ಈ ಬಗ್ಗೆ ಮನವಿ ಸಲ್ಲಿಸಿದ್ದರು. ಕಳೆದ ತಿಂಗಳು ನಡೆದ ಸಭೆಯಲ್ಲಿಯೂ ಈ ಬಗ್ಗೆ ಪ್ರಸ್ತಾಪಿಸಿದ್ದರು. ಇದೆಲ್ಲ ಬೆಳವಣಿಗೆಗಳ ನಡುವೆ ಗಡ್ಕರಿ ಪ್ರಿಯಾಂಕಾ ಗಾಂಧಿ ಅವರಿಗೆ ಪತ್ರ ಬರೆದಿದ್ದು ಬಂಡೀಪುರದಲ್ಲಿ ಪರ್ಯಾಯ ಸುರಂ ಮಾರ್ಗ ನಿರ್ಮಿಸುವ ಬಗ್ಗೆ ಅಧ್ಯಯನದ ಭರವಸೆ ನೀಡಿದ್ದಾರೆ.
2005 ಮತ್ತು 2007 ರ ನಡುವೆ ಬಂಡೀಪುರ ಮೂಲಕ ಹಾದುಹೋಗುವ ರಸ್ತೆಯಲ್ಲಿ ವೇಗವಾಗಿ ಚಲಿಸುವ ವಾಹನಗಳಿಗೆ 286 ಪ್ರಾಣಿಗಳು ಬಲಿಯಾಗಿದ್ದವು. ಹೀಗಾಗಿ ವಯನಾಡ್-ಮೈಸೂರು ರಸ್ತೆಯ 25 ಕಿ.ಮೀ. ವ್ಯಾಪ್ತಿಯಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ವಾಹನ ಸಂಚಾರಕ್ಕೆ ಕರ್ನಾಟಕ 2009ರಿಂದ ನಿಷೇಧ ಹೇರಿದೆ.
ಆದರೆ ನಿರ್ಬಂಧದಿಂದ ತಮಗೆ ತೊಂದರೆ ಆಗುತ್ತದೆ ಎಂದು ಅದನ್ನು ರದ್ದುಗೊಳಿಸಬೇಕೆಂದು ಕೇರಳ ಒತ್ತಾಯಿಸುತ್ತಿದೆ. ಆದರೆ ಇದಕ್ಕೆ ಕರ್ನಾಟಕದ ವಿರೋಧವಿದ್ದು, ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುವು ಮಾಡಿದರೆ ವನ್ಯಜೀವಿಗಳಿಗೆ ತೊಂದರೆ ಆಗುತ್ತದೆ ಎಂದು ವಾದಿಸುತ್ತಿದೆ. ಪ್ರಿಯಾಂಕಾ ಗಾಂಧಿ ವಯನಾಡು ಸಂಸದೆ ಆಗಿ ಆಯ್ಕೆಯಾದ ಬಳಿಕ ಇದು ಕಾವು ಪಡೆದಿದೆ. ಏಕೆಂದರೆ ಬಂಡೀಪುರ ರಸ್ತೆ ವಯನಾಡು ಕ್ಷೇತ್ರಕ್ಕೆ ಹೊಂದಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ