ಕಾಂಗ್ರೆಸ್‌ ಶಾಸಕ ವೀರೇಂದ್ರಗೆ ಬಿಗ್ ಶಾಕ್‌

Kannadaprabha News   | Kannada Prabha
Published : Jan 30, 2026, 06:49 AM IST
KC Veerendra (Puppy)

ಸಾರಾಂಶ

ಕೆ.ಸಿ.ವೀರೇಂದ್ರ ಪಪ್ಪಿ ಮತ್ತವರ ಸಹಚರರ ವಿರುದ್ಧದ ಅಕ್ರಮ ಬೆಟ್ಟಿಂಗ್‌ ಮತ್ತು ಜೂಜಾಟ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕೃಷಿ ಭೂಮಿ, ನಿವೇಶನಗಳು ಸೇರಿ 177.3 ಕೋಟಿ ರು. ಮೌಲ್ಯದ ಸ್ಥಿರ ಮತ್ತು ಚರಾಸ್ತಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

ಬೆಂಗಳೂರು : ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮತ್ತವರ ಸಹಚರರ ವಿರುದ್ಧದ ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ಜೂಜಾಟ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕೃಷಿ ಭೂಮಿ, ನಿವೇಶನಗಳು ಸೇರಿ ಸುಮಾರು 177.3 ಕೋಟಿ ರು. ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

ಇದರೊಂದಿಗೆ ಈ ಪ್ರಕರಣದಲ್ಲಿ ಈವರೆಗೆ ಇ.ಡಿ. ಸುಮಾರು 320 ಕೋಟಿ ರು.ಗೂ ಅಧಿಕ ಸ್ಥಿರ ಹಾಗೂ ಚರಾಸ್ತಿಗಳನ್ನು ಜಪ್ತಿ ಮಾಡಿದಂತಾಗಿದೆ. ಪ್ರಮುಖ ಆರೋಪಿ ಕೆ.ಸಿ.ವೀರೇಂದ್ರ, ಇತ್ತೀಚೆಗಷ್ಟೇ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದರು. ಇದೀಗ ಇ.ಡಿ. ಮತ್ತಷ್ಟು ಆಸ್ತಿಗಳನ್ನು ಜಪ್ತಿ ಮಾಡಿ ಶಾಕ್‌ ನೀಡಿದೆ.

ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌, ಅಕ್ರಮ ಆಸ್ತಿ ಗಳಿಕೆ, ಅಕ್ರಮ ಹಣ ವರ್ಗಾವಣೆ ಆರೋಪದಡಿ ವಿವಿಧ ರಾಜ್ಯ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಆಧಾರದ ಮೇಲೆ ಇ.ಡಿ. ತನಿಖೆ ಆರಂಭಿಸಿತ್ತು. ಈ ಪ್ರಕರಣದಲ್ಲಿ ಕಿಂಗ್‌ 567 ಸೇರಿ ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ವೆಬ್‌ಸೈಟ್‌ಗಳ ಮುಖಾಂತರ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವುದು ಕಂಡು ಬಂದಿತ್ತು. ವೀರೇಂದ್ರ ಹಾಗೂ ಅವರ ಸಹಚರರು ಇದೇ ವಿಧಾನದ ಮುಖಾಂತರ ದೇಶವ್ಯಾಪಿ ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ಜಾಲ ಹೊಂದಿದ್ದು, ಆ ಜಾಲದ ಹಿಂದಿನ ಮಾಸ್ಟರ್‌ ಮೈಂಡ್‌ಗಳಾಗಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ರೀತಿಯ ವಂಚನೆ ಮೂಲಕ ಆರೋಪಿಗಳು ಭಾರೀ ಪ್ರಮಾಣದ ಅಪರಾಧದ ಆದಾಯ ಗಳಿಸಿರುವುದು ತನಿಖೆಯಿಂದ ತಿಳಿದು ಬಂದಿದೆ.

ಅಮಾಯಕರಿಗೆ ನಂಬಿಸಿ ವಂಚನೆ:

ಆನ್‌ಲೈನ್ ಕ್ಯಾಸಿನೋ ಮಾದರಿಯ ಅಕ್ರಮ ಗೇಮಿಂಗ್‌ ವೆಬ್‌ಸೈಟ್‌ಗಳಲ್ಲಿ ಅಮಾಯಕರನ್ನು ಹಣ ಹೂಡಲು ಪ್ರೇರೇಪಿಸಲಾಗುತ್ತಿತ್ತು. ಆಟಗಾರರ ಕೋಟ್ಯಂತರ ರು. ಮೊತ್ತದ ಠೇವಣಿಗಳನ್ನು ಪಾವತಿ ಗೇಟ್‌ ವೇಗಳ ಮುಖಾಂತರ ನಿಗದಿತ ಖಾತೆಗಳಲ್ಲಿ ಸಂಗ್ರಹಿಸಲಾಗುತ್ತಿತ್ತು. ಆರಂಭದಲ್ಲಿ ಅಮಾಯಕರನ್ನು ಗೆಲ್ಲುವಂತೆ ಮಾಡಿ ಬಳಿಕ ಗೆದ್ದ ಹಣವನ್ನು ವಾಪಸ್‌ ಪಡೆಯಲು ನಿರ್ಬಂಧ ಹೇರಲಾಗುತ್ತಿತ್ತು. ಈ ರೀತಿ ಅಕ್ರಮವಾಗಿ ಗಳಿಸಿದ ಆದಾಯವನ್ನು ವರ್ಗಾಯಿಸಲು ನೂರಾರು ಮೂಲ್‌ ಖಾತೆಗಳು ಮತ್ತು ಹಲವಾರು ಆನ್‌ಲೈನ್‌ ಪಾವತಿ ಗೇಟ್‌ ವೇಗಳನ್ನು ಬಳಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

60ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧಿಸಿತ್ತು

ಇದಕ್ಕೂ ಮೊದಲು ಇ.ಡಿ. ಹಲವು ರಾಜ್ಯಗಳಲ್ಲಿ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧಿಸಿತ್ತು. ಈ ವೇಳೆ ಭಾರೀ ಪ್ರಮಾಣದ ನಗದು, ಚಿನ್ನದ ಗಟ್ಟಿ, ಚಿನ್ನ ಮತ್ತು ಬೆಳ್ಳಿ ಆಭರಣಗಳು, ವಾಹನಗಳು, ಡಿಜಿಟೆಲ್‌ ಸಾಧನಗಳು ಹಾಗೂ ಅಕ್ರಮದ ದಾಖಲೆಗಳನ್ನು ಜಪ್ತಿ ಮಾಡಿತ್ತು. ಬಳಿಕ ವೀರೇಂದ್ರ ಅವರನ್ನು ಬಂಧಿಸಲಾಗಿತ್ತು.

ತನಿಖೆ ಸಮಯದಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ವೀರೇಂದ್ರ ಅವರು ನೇರ ಮತ್ತು ಪರೋಕ್ಷವಾಗಿ ಹೊಂದಿದ್ದ ಹಲವು ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಈವರೆಗೆ ಸುಮಾರು 2,300 ಕೋಟಿ ರು.ಗೂ ಅಧಿಕ ಅಪರಾಧದ ಆದಾಯ ಗುರುತಿಸಲಾಗಿದೆ. ಪ್ರಕರಣದಲ್ಲಿ ಮತ್ತಷ್ಟು ಅಕ್ರಮ ಆದಾಯ ಮತ್ತು ಭಾಗಿಯಾಗಿರುವ ಮತ್ತಷ್ಟು ಆರೋಪಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ ಎಂದು ಇ.ಡಿ.ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಪೆಕ್ಸ್‌ ಬ್ಯಾಂಕ್‌ ಎಲೆಕ್ಷನ್‌ಗೆ ಕೈ ಹೈಕಮಾಂಡ್‌ ಪ್ರವೇಶ!
ಬಾಕಿ ಪಾವತಿಗೆ ಸರ್ಕಾರಕ್ಕೆ ಗುತ್ತಿಗೆದಾರರ ಡೆಡ್‌ಲೈನ್‌