
ದಾವಣಗೆರೆ(ಜ.6): ಭರತ್ ರೆಡ್ಡಿ ರಾಜಕಾರಣದಲ್ಲಿ ಇನ್ನೂ ಎಳಸು, ಒಬ್ಬ ಬಚ್ಚಾ. ನಾನು ಮನಸ್ಸು ಮಾಡಿದರೆ ಜನಾರ್ದನ ರೆಡ್ಡಿ ಸಾಮ್ರಾಜ್ಯ ಹೊತ್ತಿ ಉರಿಯುತ್ತದೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದ. ಇಂತಹ ಉದ್ಧಟತನದ ಹೇಳಿಕೆ ನೀಡಿದಾಗಲೇ ಸರ್ಕಾರ ಸುಮೋಟೋ ಕೇಸ್ ದಾಖಲಿಸಿ ಆತನನ್ನು ಬಂಧಿಸಬೇಕಿತ್ತು ಕಾಂಗ್ರೆಸ್ ಶಾಸಕನ ವಿರುದ್ಧ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು. ಬಳ್ಳಾರಿ ಗಲಾಟೆ ವಿಚಾರವಾಗಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದರು.
ಬಳ್ಳಾರಿ ಗಲಾಟೆಗೆ ಭರತ್ ರೆಡ್ಡಿ ಕಾರಣ ಎಂದು ಆರೋಪಿಸಿದ ಎಂಪಿ ರೇಣುಕಾಚಾರ್ಯ ಅವರು, ಜನಾರ್ದನ ರೆಡ್ಡಿ ಅವರನ್ನು ಹತ್ಯೆ ಮಾಡಲು ಕಾಂಗ್ರೆಸ್ ಸರ್ಕಾರವೇ ಸಂಚು ರೂಪಿಸಿದೆ. ಅಂದು ಶ್ರೀರಾಮುಲು ಅವರು ಸ್ಥಳಕ್ಕೆ ಬರದೇ ಇದ್ದಿದ್ದರೆ ಜನಾರ್ದನ ರೆಡ್ಡಿ ಅವರ ಕಥೆ ಅಂದೇ ಮುಗಿದು ಹೋಗುತ್ತಿತ್ತು. ಎಂಟು ಸುತ್ತು ಗುಂಡು ಹಾರಿಸಿರುವ ಬಗ್ಗೆ ಜನಾರ್ದನ ರೆಡ್ಡಿ ಅವರೇ ಗುಂಡುಗಳನ್ನು ಪ್ರದರ್ಶಿಸಿದ್ದಾರೆ. ಇದು ಕೊಲೆ ಪ್ರಯತ್ನವಲ್ಲದೆ ಮತ್ತೇನು? ಎಂದು ಪ್ರಶ್ನಿಸಿದ್ದಾರೆ.
ಗಲಾಟೆಯಲ್ಲಿ ಮೃತಪಟ್ಟ ರಾಜಶೇಖರ್ ಸಾವಿನ ಕುರಿತು ಮಾತನಾಡಿದ ಅವರು, ರಾಜಶೇಖರ್ ಸಾವಿಗೆ ನೇರವಾಗಿ ಶಾಸಕ ಭರತ್ ರೆಡ್ಡಿ ಅವರೇ ಕಾರಣ. ಗಾಂಜಾ ಮತ್ತು ಡ್ರಗ್ಸ್ ಸೇವನೆ ಮಾಡಿದ ಗುಂಪನ್ನು ಕಟ್ಟಿಕೊಂಡು ಸತೀಶ್ ರೆಡ್ಡಿ ಎಂಬುವವರು ಅಲ್ಲಿಗೆ ಹೋಗಿದ್ದರು. ಒಬ್ಬ ಶಾಸಕನಿಗೇ ರಕ್ಷಣೆ ಇಲ್ಲದ ಮೇಲೆ ಮುಗ್ಧ ಜನರನ್ನು ಈ ಸರ್ಕಾರ ಹೇಗೆ ರಕ್ಷಿಸುತ್ತದೆ? ಕೂಡಲೇ ಭರತ್ ರೆಡ್ಡಿ ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು.
ಮರಣೋತ್ತರ ಪರೀಕ್ಷೆ ಬಗ್ಗೆ ಶಂಕೆ
ರಾಜಶೇಖರ್ ಅವರ ಪೋಸ್ಟ್ ಮಾರ್ಟಂ ಪ್ರಕ್ರಿಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರೇಣುಕಾಚಾರ್ಯ, ಯಾವುದೋ ಹಿತಾಸಕ್ತಿ ಕಾಪಾಡಲು ರಾಜಶೇಖರ್ ಅವರ ಮರಣೋತ್ತರ ಪರೀಕ್ಷೆಯನ್ನು ಎರಡು ಬಾರಿ ಮಾಡಲಾಗಿದೆಯೇ? ಇದರ ಹಿಂದೆ ಏನೋ ಸಂಚಿದೆ ಎಂದು ಸಂಶಯ ವ್ಯಕ್ತಪಡಿಸಿದರು. ಅಲ್ಲದೆ, ಬಳ್ಳಾರಿ ಜನರಿಗೆ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಕೊಡುಗೆ ಏನೆಂಬುದು ಚೆನ್ನಾಗಿ ತಿಳಿದಿದೆ, ನಿನ್ನೆ ಮೊನ್ನೆ ಬಂದ ಬಚ್ಚಾ ಬಳ್ಳಾರಿಗೆ ಕೊಟ್ಟ ಕೊಡುಗೆ ಏನಿದೆ ಎಂದು ವಾಗ್ದಾಳಿ ನಡೆಸಿದರು.
ಹದಗೆಟ್ಟ ಕಾನೂನು ಸುವ್ಯವಸ್ಥೆ: ಸರ್ಕಾರದ ವಿರುದ್ಧ ಕಿಡಿ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಕಿಡಿಕಾರಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ರಂಜಿತಾ ಎಂಬ ಯುವತಿಯ ಹತ್ಯೆಯಾಗಿದೆ, ಬೆಂಗಳೂರಿನಲ್ಲಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ನಡೆದಿದೆ. ರಾಜ್ಯ ಸರ್ಕಾರಕ್ಕೆ ಜನ ಸಾಮಾನ್ಯರ ರಕ್ಷಣೆಗಿಂತ ರಾಜಕೀಯ ದ್ವೇಷವೇ ಮುಖ್ಯವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಿದ್ದರಾಮಯ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ