ತನಿಖೆ ಮುಗಿದಾಕ್ಷಣ ಬೇಲ್‌ ಸರಿಯಲ್ಲ: ಹೈಕೋರ್ಟ್‌ ಆದೇಶ

Published : Apr 28, 2025, 06:59 AM ISTUpdated : Apr 28, 2025, 07:19 AM IST
ತನಿಖೆ ಮುಗಿದಾಕ್ಷಣ ಬೇಲ್‌ ಸರಿಯಲ್ಲ: ಹೈಕೋರ್ಟ್‌ ಆದೇಶ

ಸಾರಾಂಶ

ಆರೋಪಿಗೆ ಜಾಮೀನು ನೀಡುವುದು ಸಂಪೂರ್ಣ ಅಸ್ವಾಭಾವಿಕ, ಕಾನೂನು ಬಾಹಿರ ಮತ್ತು ನ್ಯಾಯಸಮ್ಮತವಲ್ಲದ ಕ್ರಮ ಎಂದು ಹೈಕೋರ್ಟ್‌ ಆದೇಶಿಸಿದೆ. 

ವೆಂಕಟೇಶ್‌ ಕಲಿಪಿ

ಬೆಂಗಳೂರು (ಏ.28): ಕೊಲೆಯಂತಹ ಹೀನಾಯ ಅಪರಾಧ ಪ್ರಕರಣದಲ್ಲಿ ತನಿಖೆ ಪೂರ್ಣಗೊಂಡಿದೆ ಹಾಗೂ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂಬ ಮಾತ್ರಕ್ಕೆ ಆರೋಪಿಗೆ ಜಾಮೀನು ನೀಡುವುದು ಸಂಪೂರ್ಣ ಅಸ್ವಾಭಾವಿಕ, ಕಾನೂನು ಬಾಹಿರ ಮತ್ತು ನ್ಯಾಯಸಮ್ಮತವಲ್ಲದ ಕ್ರಮ ಎಂದು ಹೈಕೋರ್ಟ್‌ ಆದೇಶಿಸಿದೆ. ಜಮೀನು ವ್ಯಾಜ್ಯದ ಜಗಳದಲ್ಲಿ ಸ್ವತಃ ಅಣ್ಣನ ಮಗನನ್ನೇ ಗುಂಡಿಕ್ಕಿ ಹತ್ಯೆಗೈದ ಆರೋಪ ಎದುರಿಸುತ್ತಿರುವ ಮಂಡ್ಯದ ರೌಡಿಶೀಟರ್‌ ಕುಮಾರ ಅಲಿಯಾಸ್‌ ಸೀಮೆಎಣ್ಣೆ ಕುಮಾರನಿಗೆ ಮಂಡ್ಯದ 1ನೇ ಸೆಷನ್ಸ್‌ ನ್ಯಾಯಾಲಯ ನೀಡಿದ್ದ ಜಾಮೀನು ರದ್ದುಪಡಿಸಿದ ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರ ಪೀಠ ಈ ಆದೇಶ ಮಾಡಿದೆ.

ಹೀನಾಯ ಅಪರಾಧದ ಆರೋಪ ಎದುರಿಸುತ್ತಿರುವ ಆರೋಪಿ, ದೋಷಾರೋಪಟ್ಟಿ ಸಲ್ಲಿಕೆಯಾಗಿದ್ದ ಸಂದರ್ಭದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ, ಅದಕ್ಕೆ ಸಂಬಂಧಿಸಿದ ಮಾನದಂಡಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಲ್ಲಿ ಸೆಷನ್ಸ್‌ ನ್ಯಾಯಾಲಯ ವಿಫಲವಾಗಿದೆ. ಪ್ರಕರಣದ ತನಿಖೆ ಪೂರ್ಣಗೊಂಡಿದೆ ಹಾಗೂ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ ಎಂಬ ಕಾರಣಕ್ಕೆ ಸೆಷನ್ಸ್‌ ನ್ಯಾಯಾಲಯ ಆರೋಪಿ ಕುಮಾರನಿಗೆ ಜಾಮೀನು ನೀಡಿದೆ. ಈ ನಡೆ ಸಂಪೂರ್ಣವಾಗಿ ಅಸ್ವಾಭಾವಿಕ, ನ್ಯಾಯಸಮ್ಮತವಲ್ಲ ಮತ್ತು ಕಾನೂನುಬಾಹಿರ ಕ್ರಮವಾಗಿದೆ. ಇದರಿಂದ ಆರೋಪಿಯ ಜಾಮೀನು ಆದೇಶ ಕಾನೂನಡಿ ಸಿಂಧುವಾಗುವುದಿಲ್ಲ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಪಾಕಿಸ್ತಾನ ಪ್ರಜೆಗಳ ವಾಪಸ್‌ ಕಳುಹಿಸಿ: ಗೃಹ ಸಚಿವ ಪರಮೇಶ್ವರ್

ಅಲ್ಲದೆ, ಪ್ರಕರಣದಲ್ಲಿ ಕೋರ್ಟ್‌ನ ಐದನೇ ಸಾಕ್ಷಿಯೇ ಆರೋಪಿಯ ಜಾಮೀನಿಗೆ ಭದ್ರತಾ ಖಾತರಿ ಒದಗಿಸಿದ್ದಾನೆ. ಇದು ಆರೋಪಿಯು ಪ್ರಾಸಿಕ್ಯೂಷನ್‌ ಸಾಕ್ಷಿಗಳನ್ನು ತಿರುಚುವ ಸಾಧ್ಯತೆ ತೋರಿಸುತ್ತದೆ. ಪ್ರಕರಣದ ದೂರುದಾರರೇ ಆರೋಪಿಯ ಸ್ವತಃ ಅಣ್ಣ. ಇತರೆ ಪ್ರತ್ಯಕ್ಷ ಸಾಕ್ಷಿಗಳು ಆರೋಪಿಯ ಸಂಬಂಧಿಕರು. ಜಾಮೀನು ದೊರೆತ ನಂತರ ಪ್ರತ್ಯಕ್ಷ ದರ್ಶಿಗಳಿಗೆ ಆರೋಪಿ ಬೆದರಿಕೆ ಒಡ್ಡಿರುವುದು ನ್ಯಾಯಾಲಯ ಗಮನಕ್ಕೆ ಬಂದಿದೆ ಎಂದು ತಿಳಿಸಿದ ನ್ಯಾಯಪೀಠ, ಕುಮಾರಗೆ ಸೆಷನ್ಸ್‌ ನ್ಯಾಯಾಲಯ ನೀಡಿರುವ ಜಾಮೀನು ರದ್ದುಪಡಿಸಿದೆ.

ಪ್ರಕರಣದ ವಿವರ: ಪ್ರಕರಣ ದೂರುದಾರರಾದ ಮಂಡ್ಯ ಜಿಲ್ಲೆಯ ಹನುಮನಹಳ್ಳಿ ಗ್ರಾಮದ ನಿವಾಸಿ ವಾಸು ಅವರಿಗೆ ಸಿ.ಪಿ. ಮಂಜುನಾಥ್‌ ಮತ್ತು ಸಿ.ವಿ. ಜೈಪಾಲ್‌ ಎಂಬ ಮಕ್ಕಳಿದ್ದರು. ವಾಸು ಅವರ ಸ್ವತಃ ತಮ್ಮನೇ ಆರೋಪಿ ಕುಮಾರ. ಶಿವನಂಜ ಎಂಬುವವರಿಗೆ ಸೇರಿದ ಜಮೀನನ್ನು ಕುಮಾರ ಒತ್ತುವರಿ ಮಾಡಿದ್ದನು ಆ ಕುರಿತು ಶಿವನಂಜ ಅವರ ಪತ್ನಿ ನ್ಯಾಯಾಲಯಕ್ಕೆ ಸಿವಿಲ್‌ ದಾವೆ ದಾಖಲಿಸಿದ್ದರು. ಈ ದಾವೆ ಹೂಡಲು ವಾಸು ಕುಮ್ಮಕ್ಕು ನೀಡಿದ್ದಾರೆ ಎಂದು ಕುಮಾರ, ವಾಸು ಮೇಲೆ ದ್ವೇಷ ಬೆಳೆಸಿಕೊಂಡಿದ್ದನು. ಇದೇ ವಿಚಾರವಾಗಿ ಮಾತುಕತೆ ನಡೆಸಲು 2023ರ ನ.4ರಂದು ಕುಮಾರ ಫಾರ್ಮ್‌ ಹೌಸ್‌ಗೆ ವಾಸು ತನ್ನ ಇಬ್ಬರು ಮಕ್ಕಳ ಜೊತೆಗೆ ಹೋಗಿದ್ದರು. 

ಈ ವೇಳೆ ಮಾತಿಗೆ ಮಾತು ಬೆಳೆದು ವಾಸು ಅವರ ಪತ್ನಿಯನ್ನು ಕುಮಾರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ಕೆರಳಿದ ಜೈಪಾಲ್‌ ಜಗಳ ಮಾಡಿದ್ದರು. ಈ ವೇಳೆ ಕುಮಾರ್‌ ತನ್ನ ಡಬಲ್ ಬ್ಯಾರೆಲ್‌ ಗನ್‌ನಿಂದ ಜೈಪಾಲ್‌ಗೆ ಗುಂಡಿಕ್ಕಿದ್ದರು. ಜೈಪಾಲ್‌ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ವಾಸು ದೂರು ನೀಡಿದ್ದರು. ಬಿಂಡಿಗನವಿಲೆ ಪೊಲೀಸರು ಕುಮಾರನನ್ನು ಬಂಧಿಸಿ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನಂತರ ಜಾಮೀನು ಕೋರಿ ಕುಮಾರ ಸಲ್ಲಿಸಿದ್ದ ಅರ್ಜಿಯನ್ನು ಮಂಡ್ಯ ಜಿಲ್ಲೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಪುರಸ್ಕರಿಸಿ, ಕುಮಾರ್‌ ಬಿಡುಗಡೆಗೆ 2024ರ ಏ.8ರಂದು ಆದೇಶಿಸಿತ್ತು. 

ಕನ್ನಡ ಮಾತಾಡು ಎಂದಿದ್ದಕ್ಕೆ ಹಲ್ಲೆಗೈದ ಟಿಟಿ ವಿರುದ್ಧ ಪ್ರತಿಭಟನೆ

ಈ ಆದೇಶ ರದ್ದುಪಡಿಸಲು ಕೋರಿ ವಾಸು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಾಸು ಪರ ವಕೀಲ ಸಿ.ಎನ್‌. ರಾಜು, ಕುಮಾರ್‌ಗೆ ಜಾಮೀನು ಮಂಜೂರಾತಿ ಮಾಡಲು ಕೋರ್ಟ್‌ ಬಲವಾದ ಕಾರಣ ನೀಡಿಲ್ಲ. ಹೀನಾಯ ಅಪರಾಧ ಕೃತ್ಯ ಸಂಬಂಧ ಆರೋಪಿಯ ಜಾಮೀನು ಅರ್ಜಿ ಕುರಿತ ಮಾನದಂಡ ಪರಿಗಣಿಸಲು ಸೆಷನ್ಸ್‌ ಕೋರ್ಟ್‌ ವಿಫಲವಾಗಿದೆ. ಹಾಗಾಗಿ, ಕುಮಾರ ಅವರ ಜಾಮೀನು ರದ್ದುಪಡಿಸಬೇಕು ಎಂದು ಕೋರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್