
ವೆಂಕಟೇಶ್ ಕಲಿಪಿ
ಬೆಂಗಳೂರು(ಜ.01): ಕೊಲೆ, ದರೋಡೆ ಮತ್ತು ಅಪರಾಧಿಕ ಒಳಸಂಚಿನಂತಹ ಗಂಭೀರ ಸ್ವರೂಪದ ಅಪರಾಧ ಕೃತ್ಯಗಳ ವಿಚಾರಣೆ ವಿಳಂಬವನ್ನು ಪರಿಗಣಿಸಿ ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲವೆಂದು ಆದೇಶಿಸಿರುವ ಹೈಕೋರ್ಟ್, ಜಾಮೀನು ಅರ್ಜಿಯ ತೀರ್ಮಾನದ ವೇಳೆ ಆರೋಪಿಯ ನಡತೆ, ಪಾತ್ರ, ಹಿನ್ನೆಲೆ ಮತ್ತು ಸ್ಥಾನದ ಬಗ್ಗೆ ನ್ಯಾಯಾಲಯ ಗಮನ ಹರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ದಕ್ಷಿಣ ಕನ್ನಡದಲ್ಲಿ ಟಿಪ್ಪರ್ ಲಾರಿಯಿಂದ ಡಿಕ್ಕಿ ಹೊಡೆದು, ಪಿಸ್ತೂಲ್‌ನಿಂದ ಗುಂಡು ಹಾರಿಸಿ ಮತ್ತು ತಲ್ವಾರ್‌ನಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಕೊಲೆಗೈದ ಪ್ರಕರಣದಲ್ಲಿ ಎರಡನೇ ಆರೋಪಿಯಾದ ಕೇರಳದ ಕಾಸರಗೋಡಿನ ನಿವಾಸಿ ಜಿಯಾ ಅಲಿಯಾಸ್ ಇಸುಬ್ ಶಿಯಾದ್ ಜಾಮೀನು ಕೋರಿ ಎರಡನೇ ಬಾರಿಗೆ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ಪೀಠ ಈ ಆದೇಶ ಮಾಡಿದೆ.
ಜಾಮೀನು ಅರ್ಜಿ ತೀರ್ಮಾನಿಸುವಾಗ ಆರೋಪಿ ಎಸಗಿದ ಕೃತ್ಯದ ಸ್ವರೂಪ ಹಾಗೂ ಗಂಭೀರತೆ, ಆತನಿಗೆ ವಿಧಿಸಬಹುದಾದ ಶಿಕ್ಷೆಯ ತೀವ್ರತೆ, ಪರಾರಿಯಾಗುವ ಅಪಾಯವನ್ನು ನ್ಯಾಯಾಲಯ ಪರಿಗಣಿಸಬೇಕಾಗುತ್ತದೆ. ಅಲ್ಲದೆ, ಆರೋಪಿಯ ನಡತೆ, ವರ್ತನೆ, ಪಾತ್ರ, ಹುದ್ದೆ ಮತ್ತು ಆರೋಪಿಯ ಸ್ಥಾನ ಸೇರಿದಂತೆ ಇನ್ನಿತರ ಅಂಶಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಕೊಲೆ, ಅಪಹರಣ, ದರೋಡೆ, ಕ್ರಿಮಿನಲ್ ಪಿತೂರಿಯಂತಹ ಹೀನ ಅಪರಾಧ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯದ ವಿಚಾರಣೆ ವಿಳಂಬ ಅಂಶವನ್ನು ಆರೋಪಿಗೆ ಜಾಮೀನು ನೀಡಲು ಪರಿಗಣಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಹೈಕೋರ್ಟ್ ತಿಳಿಸಿದೆ. ಆ ಮೂಲಕ ಕೊಲೆ, ದರೋಡೆ, ಅಪರಾಧ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳ ಸಂಬಂಧ ಏಳು ಕೇಸುಗಳನ್ನು ಹೊತ್ತಿರುವ ಅರ್ಜಿದಾರನಿಗೆ ಹೈಕೋರ್ಟ್ ಎರಡನೇ ಬಾರಿಯೂ ಜಾಮೀನು ನಿರಾಕರಿಸಿದೆ.
ಅಪ್ರಾಪ್ತರ ಪಾಸ್‌ಪೋರ್ಟ್ ಗೊಂದಲ ಪರಿಹರಿಸಿ: ಹೈಕೋರ್ಟ್
ಪ್ರಕರಣವೇನು?:
ರಾಷ್ಟ್ರೀಯ ಹೆದ್ದಾರಿ ನಂ.66ರಲ್ಲಿ 2017ರ ಫೆ.14ರಂದು ಮಧ್ಯರಾತ್ರಿ 12 ಗಂಟೆಗೆ ವ್ಯಕ್ತಿಯೊಬ್ಬ ಪ್ರಯಾಣಿಸುತ್ತಿದ್ದ ಕಾರಿಗೆ ಅರ್ಜಿದಾರ ಜಿಯಾ ಟಿಪ್ಪರ್ ಲಾರಿಯಿಂದ ಡಿಕ್ಕಿ ಹೊಡೆದು ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದ. ತಪ್ಪಿಕೊಂಡು ಓಡಲು ಪ್ರಯತ್ನಿಸಿದ ವ್ಯಕ್ತಿಯನ್ನು ಬೆನ್ನತ್ತಿದ ಇತರೆ ಆರೋಪಿಗಳು ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಎರಡನೇ ಆರೋಪಿಯಾದ ಅರ್ಜಿದಾರ 2017ರಿಂದಲೂ ತಲೆ ಮರೆಸಿಕೊಂಡಿದ್ದ. ಆತನನ್ನು 2021ರ ನ.12ರಂದು ಬೇರೊಂದು ಪ್ರಕರಣದಲ್ಲಿ ಬಂಧಿಸಲಾಗಿತ್ತು. ಉಳ್ಳಾಲ ಪೊಲೀಸರು ಬಾಡಿ ವಾರೆಂಟ್ ಮೇಲೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಸದ್ಯ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವ ಜಿಯಾ, ಜಾಮೀನು ಕೋರಿ ಮೊದಲಿಗೆ ಸಲ್ಲಿಸಿದ್ದ ಅರ್ಜಿಯನ್ನು 2022ರ ಜೂ.6ರಂದು ಹೈಕೋರ್ಟ್ ವಜಾಗೊಳಿಸಿತ್ತು. ಇದರಿಂದ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ. ಆ ಅರ್ಜಿಯನ್ನೂ ವಜಾಗೊಳಿಸಿದ್ದ ಸುಪ್ರೀಂಕೋರ್ಟ್, ವಿಚಾರಣೆ ತ್ವರತಗತಿಯಲ್ಲಿ ನಡೆಯದಿದ್ದರೆ ಅಥವಾ ಇತರೆ ನ್ಯಾಯಸಮ್ಮತ ಕಾರಣಗಳಿದ್ದರೆ ಜಾಮೀನು ಕೋರಬಹುದು ಎಂದು 2022ರ ಆ.29ರಂದು ಆದೇಶಿಸಿತ್ತು. ಇದರಿಂದ ಆತ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಅದನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದ್ದರಿಂದ ಎರಡನೇ ಬಾರಿಗೆ ಹೈಕೋರ್ಟ್ ಮೆಟ್ಟಿಲೇರಿದ್ದ.
ದುಬೈ ಮಹಿಳೆ ಮೇಲಿನ ಕೇಸ್ ರದ್ದತಿಗೆ ಒಪ್ಪದ ಹೈಕೋರ್ಟ್
ಆರೋಪಿ ಗುರುತು ಪರೇಡ್‌ನಲ್ಲಿ ಸಾಕ್ಷಿಗಳು ನನ್ನ ಗುರುತಿಸಿಲ್ಲ. ನಾನು ಉಪಯೋಗಿಸಿದ್ದೇನೆ ಎನ್ನಲಾದ ಪಿಸ್ತೂಲ್ ಅನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ರವಾನಿಸಲಾಗಿತ್ತು. ಆದರೆ, ಆ ಪಿಸ್ತೂಲ್ ಘಟನೆಗೆ ಬಳಸಿಲ್ಲ ಎಂಬುದಾಗಿ ಎಫ್‌ಎಸ್‌ಎಲ್ ವರದಿ ಸ್ಪಷ್ಟಪಡಿಸಿದೆ. ಎಫ್‌ಐಆರ್‌ನಲ್ಲಿ ನನ್ನ ಹೆಸರಿಲ್ಲ. ಮೇಲ್ನೋಟಕ್ಕೆ ನನ್ನ ವಿರುದ್ಧ ಸಾಕ್ಷ್ಯಧಾರಗಳಿಲ್ಲ. ವಿಚಾರಣಾ ನ್ಯಾಯಾಲಯದ ವಿಚಾರಣೆ ವಿಳಂಬವಾದರೆ ಜಾಮೀನು ಕೋರಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಅದರಂತೆ ಅಧೀನ ನ್ಯಾಯಾಲಯದ ವಿಚಾರಣೆ ವಿಳಂಬವಾಗುತ್ತಿದ್ದು, ಜಾಮೀನು ನೀಡುವಂತೆ ಕೋರಿದ್ದರು.
ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ದೋಷಾರೋಪ ಪಟ್ಟಿದಾಖಲೆಗಳಿದ್ದು, ಘಟನೆ ನಡೆದಾಗಿಂದಲೂ ಅರ್ಜಿದಾರ ತಲೆಮರೆಸಿಕೊಂಡಿದ್ದ. ಆತನ ವಿರುದ್ಧ ಗಂಭೀರ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಏಳು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಸುಪ್ರಿಂಕೋರ್ಟ್ ಆದೇಶ ಹೊರಬಿದ್ದು, ಕೇವಲ ಎರಡು ತಿಂಗಳ ಅವಧಿಯಲ್ಲಿ ಜಾಮೀನು ಕೋರಿ ಮತ್ತೆ ಅರ್ಜಿ ಸಲ್ಲಿಸಿದ್ದು, ಅದನ್ನು ಪರಿಗಣಿಸಲಾಗದು ಎಂದು ತಿಳಿಸಿದ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ