ಪಂಚಾಯ್ತಿಗೊಂದು ಕೃಷಿ ಸಹಕಾರ ಸಂಘ: ಕೇಂದ್ರ ಸಚಿವ ಅಮಿತ್‌ ಶಾ

By Kannadaprabha News  |  First Published Jan 1, 2023, 11:54 AM IST

ರಾಷ್ಟ್ರದಲ್ಲಿ ಸಹಕಾರ ಚಳವಳಿ ಒಂದು ಉತ್ತಮ ದಿಕ್ಕಿನಲ್ಲಿ ಸಾಗುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ಒಂದೇ ಮಾದರಿಯ ಉಪವಿಧಿಗಳು, ಕಾಮನ್‌ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗುತ್ತಿದೆ: ಅಮಿತ್‌ ಶಾ 


ಬೆಂಗಳೂರು(ಜ.01):  ‘ಸಹಕಾರ ಕ್ಷೇತ್ರವನ್ನು ಪರಿಶುದ್ಧತೆಯತ್ತ ಸಾಗಿಸೋಣ, ಪ್ರತಿಯೊಂದು ಪಂಚಾಯಿತಿಗೆ ಒಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅವಶ್ಯಕ, ಅದನ್ನು ಕಾರ್ಯಗತ ಮಾಡೋಣ’ ಎಂದು ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಹೇಳಿದರು. ಶನಿವಾರ ಮಲ್ಲೇಶ್ವರಲ್ಲಿರುವ ‘ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಕೇಂದ್ರ’ದ ಸೌಹಾರ್ದ ಸಹಕಾರಿ ಸೌಧ’ಕ್ಕೆ ಭೇಟಿ ನೀಡಿ ಸೌಹಾರ್ದ ಸಹಕಾರಿ ಕ್ಷೇತ್ರದ ಚಟುವಟಿಕೆಗಳ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು, ‘ರಾಷ್ಟ್ರದಲ್ಲಿ ಸಹಕಾರ ಚಳವಳಿ ಒಂದು ಉತ್ತಮ ದಿಕ್ಕಿನಲ್ಲಿ ಸಾಗುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ಒಂದೇ ಮಾದರಿಯ ಉಪವಿಧಿಗಳು, ಕಾಮನ್‌ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ತಿಳಿಸಿದರು.

Tap to resize

Latest Videos

ಬೆಂಗಳೂರು: ಅದಮ್ಯ ಚೇತನ ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ಶಾ ಮೆಚ್ಚುಗೆ

‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಗ್ಯಾಸ್‌ ಏಜೆನ್ಸಿ ವಿತರಣೆ, ನೀರು ಸರಬರಾಜು ವ್ಯವಸ್ಥೆ ಇತ್ಯಾದಿ ವಿಸ್ತೃತ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸಹಕಾರ ಸಚಿವಾಲಯ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಸಂಯುಕ್ತ ಸಹಕಾರ ಚಳವಳಿಯ ಅಭಿವೃದ್ಧಿ ನೀಲನಕ್ಷೆಯ ಬಗ್ಗೆ ಚಿಂತನೆ ನಡೆಯುತ್ತಿದೆ’ ಎಂದರು.

ಸೌಹಾರ್ದ ಸಹಕಾರಿ ಕ್ಷೇತ್ರದ ಹುಟ್ಟು, ಬೆಳವಣಿಗೆ ಸಂಯುಕ್ತ ಸೌಹಾರ್ದ ಸಹಕಾರಿ ಕ್ಷೆತ್ರದ ಬೆಳವಣಿಗೆಯ ವಿವರಗಳನ್ನು ಪಿಪಿಟಿಯ ಕೇಂದ್ರ ಗೃಹ ಸಚಿವರಿಗೆ ವಿವರಿಸಲಾಯಿತು. ಅದಕ್ಕೂ ಮುನ್ನ ಸಂಯುಕ್ತ ಸಹಕಾರಿ ಅಧ್ಯಕ್ಷರಾದ ಜಿ.ನಂಜನಗೌಡ ಪ್ರಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಸಹಕಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಉನ್ನತ ಶಿಕ್ಷಣ ಸಚಿವ ಸಿ.ಎನ್‌.ಅಶ್ವತ್‌ನಾರಾಯಣ್‌, ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ. ಸದಾನಂದಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

click me!