ನಗರದ ಕೇಂದ್ರ ಕಾರಾಗೃಹದ ಕೈದಿಯೊಬ್ಬ ಹೊರಬಿಟ್ಟ ವಿಡಿಯೋ ಈಗ ಸಂಚಲನ ಮೂಡಿಸಿದೆ. ರಾಮ ಮಂದಿರ ಉದ್ಘಾಟನೆಯ ದಿನ ರಾಮನ ಪೋಟೋ ಪೂಜೆ ಮಾಡಿದ 3 ಜನ ಕೈದಿಗಳಿಗೆ ಜೈಲಿನಲ್ಲಿರುವ ಮುಸ್ಲಿಂ ರೌಡಿಶೀಟರ್ ಹಾಗೂ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಮಾಡಿರುವ ಕೈದಿಯ ವಿಡಿಯೋ ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ.
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜ.27): ನಗರದ ಕೇಂದ್ರ ಕಾರಾಗೃಹದ ಕೈದಿಯೊಬ್ಬ ಹೊರಬಿಟ್ಟ ವಿಡಿಯೋ ಈಗ ಸಂಚಲನ ಮೂಡಿಸಿದೆ. ರಾಮ ಮಂದಿರ ಉದ್ಘಾಟನೆಯ ದಿನ ರಾಮನ ಪೋಟೋ ಪೂಜೆ ಮಾಡಿದ 3 ಜನ ಕೈದಿಗಳಿಗೆ ಜೈಲಿನಲ್ಲಿರುವ ಮುಸ್ಲಿಂ ರೌಡಿಶೀಟರ್ ಹಾಗೂ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಮಾಡಿರುವ ಕೈದಿಯ ವಿಡಿಯೋ ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ.
ರಾಮನ ಪೋಟೋ ಪೂಜೆ ಮಾಡಿದ ಕೈದಿಗಳ ಮೇಲೆ ಹಲ್ಲೆ!
ಅಯೋಧ್ಯೆ ರಾಮ ಮಂದಿರ(Ayodhya RamMandir) ಉದ್ಘಾಟನೆಯ ದಿನ ವಿಜಯಪುರದ ಸೆಂಟ್ರಲ್ ಜೈಲ್ (ದರ್ಗಾ ಜೈಲ್)ನಲ್ಲಿ ರಾಮನ ಪೋಟೊ ಪೂಜೆ ಮಾಡಿದ ಕೈದಿಗಳಿಗೆ ಮುಸ್ಲಿಂ ರೌಡಿ ಶೀಟರ್‌ಗಳು ಥಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಮಹಾರಾಷ್ಟ್ರ ಮೂಲದ ಮೂವರು ಕೈದಿಗಳು ರಾಮನ ಪೋಟೋ ಇಟ್ಟು ಪೂಜೆಗೆ ಅವಕಾಶ ಕೇಳಿದ್ದರು. ಆದ್ರೆ ಇದಕ್ಕೆ ಜೈಲು ಅಧಿಕಾರಿಗಳು ನಿರಾಕರಿಸಿದ್ದರು ಎನ್ನಲಾಗಿದೆ. ಆದ್ರೆ ಇದನ್ನ ಮೀರಿಯೂ ಕೈದಿಗಳು ರಾಮನ ಪೋಟೋ ಇಟ್ಟು ಪೂಜೆ ಮಾಡಿ, ಪ್ರಸಾದವನ್ನ ಉಳಿದ ಕೈದಿಗಳಿಗೆ ಹಂಚಿದ್ದರು ಎನ್ನಲಾಗಿದೆ. ಇದೆ ಕಾರಣಕ್ಕೆ ಜೈಲಿನಲ್ಲಿರೋ ಮುಸ್ಲಿಂ ಕೈದಿಗಳು ಹಲ್ಲೆ ನಡೆಸಿದ್ದಾರೆ ಎಂದು ಮಹಾರಾಷ್ಟ್ರದ ಪರಮೇಶ್ವರ್ ಜಾಧವ್ ಎನ್ನುವ ಕೈದಿ ಗಂಭೀರ ಆರೋಪ ಮಾಡಿದ್ದಾನೆ.
ವಿಡಿಯೋ ಹೇಳಿಕೆಯಲ್ಲೇನಿದೆ?
ಇದು ಬರೀ ಗಾಳಿಸುದ್ದಿಯಲ್ಲ. ಬದಲಿಗೆ ದರ್ಗಾ ಜೈಲಿಂದಲೇ ಪರಮೇಶ್ವರ ಜಾಧವ ಎನ್ನುವ ಕೈದಿಯೊಬ್ಬನ ವಿಡಿಯೋ ಬಿಡುಗಡೆಯಾಗಿದ್ದು, ಸಂಚಲನ ಸೃಷ್ಟಿ ಮಾಡಿದೆ. ಇಡೀ ಘಟನಾವಳಿ ಕುರಿತಂತೆ ಮಹಾರಾಷ್ಟ್ರ ಮೂಲದ ವಿಚಾರಣಾಧೀನ ಕೈದಿಯೊ ಪರಮೇಶ್ವರ ಜಾಧವ ಮೂರು ನಿಮಿಷಗಳ ವಿಡಿಯೋ ತುಣುಕು ಎಲ್ಲೆಡೆ ವೈರಲ್ ಆಗಿದೆ. ವಿಡಿಯೋದಲ್ಲಿ ಜೈಲಿನಲ್ಲಿ ರಾಮನ ಪೂಜೆ ಮಾಡಿದ್ದಕ್ಕೆ ಮುಸ್ಲಿಂ ಕೈದಿಗಳಿಂದ ಹಲ್ಲೆ ಮಾಡಿಸಲಾಗಿದೆ. ಇದರಲ್ಲಿ ಜೈಲಿನಲ್ಲಿರುವ ಇಬ್ಬರು ಮುಸ್ಲಿಂ ಅಧಿಕಾರಿಗಳ ಕುಮ್ಮಕ್ಕಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಈ ವಿಡಿಯೋ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ..
ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥರಿಗೆ ಮನವಿ!
ಜೈಲಿನ ಕಂಬಿ ಹಿಂದೆ ಕುಳಿತು ವಿಡಿಯೋ ಮಾಡಿರುವ ಮಹಾರಾಷ್ಟ್ರ ಕೈದಿ ಪ್ರಧಾನಿ ನರೇಂದ್ರ ಮೋದಿ, ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥಗೆ ಕ್ರಮಕ್ಕಾಗಿ ಮನವಿ ಮಾಡಿದ್ದಾನೆ. ನಾವು ರಾಮನ ಪೂಜೆ ಮಾಡಿದ್ದೇವೆ. ಇದೇ ಕಾರಣಕ್ಕೆ ಜೈಲಿನಲ್ಲಿ ನಮ್ಮ ಮೇಲೆ ಹಲ್ಲೆ ಯಾಗಿದೆ. ನಮಗೆ ಅನ್ಯಾಯವಾಗಿದ್ದು ಇದಕ್ಕೆ ಸ್ಪಂದಿಸುವಂತೆ ಕೈದಿ ಮನವಿ ಮಾಡಿದ್ದಾನೆ..
ಜೈಲಲ್ಲಿ ಎಲ್ಲಿಂದ ಬಂತು ಮೊಬೈಲ್ಕ?
ವಿಜಯಪುರ ದರ್ಗಾ ಜೈಲಿ(Vijayapur dargah jail)ನಲ್ಲಿ ಶ್ರೀರಾಮನ ಪೋಟೋ ವಿಚಾರವಾಗಿ ಕೈದಿಗಳ ಮೇಲೆ ಹಲ್ಲೆ ನಡೆಯಿತೋ ಇಲ್ಲವೋ ಎನ್ನುವುದು ಎರಡನೇ ವಿಚಾರ ಆದ್ರೆ, ಜೈಲಿನ ಕಂಬಿಯ ಒಳಗೆ ವಿಡಿಯೋ ರೆಕಾರ್ಡ್ ಮಾಡಲು ಮೊಬೈಲ್ ಬಂದಿದ್ದು ಎಲ್ಲಿಂದ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಜೈಲುಗಳಲ್ಲಿ ಮೊಬೈಲ್ ಬ್ಯಾನ್ ಇದೆ. ಸಿಬ್ಬಂದಿ ಸಹ ಜೈಲಿನ ಒಳಗೆ ಮೊಬೈಲ್ ಯೂಸ್ ಮಾಡೋ ಹಾಗಿಲ್ಲ. ಅಂತದ್ರಲ್ಲಿ ಕೈದಿಯ ಬಳಿ ಸ್ಮಾರ್ಟ್‌ಫೋನ್ ಬಂದಿದ್ದೆಲ್ಲಿಂದ ಅನ್ನೋದು ಈಗಿರೋ ಪ್ರಶ್ನೆ. ಸಾರ್ವಜನಿಕರಿಗೂ ಕೈದಿಯ ವಿಡಿಯೋ ಹೇಳಿಕೆ ಬಿಡುಗಡೆಯಾಗಿದ್ಹೇಗೆ? ಒಳಗೆ ಮೊಬೈಲ್ ಹೋಗಿದ್ದು ಹೇಗೆ? ಎನ್ನುವ ಪ್ರಶ್ನೆಗಳನ್ನ ಕೇಳ್ತಿದ್ದಾರೆ.
ಸೆಂಟ್ರಲ್ ಜೈಲಿನಲ್ಲಿ ನಡೆದಿದ್ಯಾ ಕೈದಿಗಳಿಂದ ಮೊಬೈಲ್ ಬಳಕೆಕಕ?
ಇನ್ನೂ ಕೈದಿಗಳ ಮೇಲೆ ಹಲ್ಲೆ ವಿಚಾರ ಬದಿಗಿಟ್ಟು ನೋಡಿದಾಗ ಸೆಂಟ್ರಲ್ ಜೈಲಿನಲ್ಲಿ ಮೊಬೈಲ್‌ಗಳು ಬಳಕೆಯಾಗ್ತಿದ್ದಾವಾ ಅನ್ನೋದೆ ದೊಡ್ಡ ಸುದ್ದಿಯಾಗಿ ಕಾಣ್ತಿದೆ. ಅದ್ರಲ್ಲೂ ಕೈದಿಯೊಬ್ಬ ಆಂಡ್ರಾಯ್ಡ್ ಮೊಬೈಲ್ ಉಪಯೋಗಿಸಿ ವಿಡಿಯೋ ಮಾಡಿದ್ದಾನೆ ಎಂದರೆ ಏನರ್ಥ ಇನ್ನೆಷ್ಟು ಕೈದಿಗಳ ಬಳಿ ಮೊಬೈಲ್‌ಗಳಿವೆ? ಕೈದಿಗಳಿಗೆ ಮೊಬೈಲ್, ಬೇಕಾದ ಅನುಕೂಲಗಳು ಜೈಲಾಧಿಕಾರಿಗಳಿಂದಲೇ ಹೊರಗಿನಿಂದ ಪೂರೈಕೆ ಆಗ್ತಿದೆಯಾ ಎನ್ನುವ ಅನುಮಾನಗಳನ್ನು ಈ ಪ್ರಕರಣ ಹುಟ್ಟಿಸುತ್ತಿದೆ.
ಬಿಜೆಪಿ ಸಂಸದರನ್ನ ಮತ್ತೊಮ್ಮೆ ಗೆಲ್ಲಿಸುವಂತೆ ಕಾಂಗ್ರೆಸ್ ಶಾಸಕ ಕರೆ! ಬಿವೈ ರಾಘವೇಂದ್ರ ಪರ ಶಾಮನೂರು ಬ್ಯಾಟಿಂಗ್!
ಈ ಬಗ್ಗೆ ಜೈಲು ಸುಪರಿಡೆಂಟ್ ಹೇಳಿದ್ದೇನು?
ಇನ್ನೂ ಗಂಭೀರ ಪ್ರಕರಣದ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ (asianetsuvarnanews.com) ಜೊತೆಗೆ ಪೋನ್ ಮೂಲಕ ಮಾತನಾಡಿದ ಜೈಲು ಅಧೀಕ್ಷಕ ಮ್ಯಾಗೇರಿ ಇಡೀ ಘಟನೆಯನ್ನ ತಳ್ಳಿ ಹಾಕಿದ್ದಾರೆ. ಸದ್ಯ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಕೈದಿ ಸೇರಿ ಇನ್ನಿಬ್ಬರು ಮಹಾರಾಷ್ಟ್ರದ ಕೈದಿಗಳು ಯರವಾಡ ಜೈಲಿನಲ್ಲೂ ಇದೆ ರೀತಿ ಮಾಡಿದ್ದರು ಎನ್ನುವ ಮಾಹಿತಿಯನ್ನ ಬಹಿರಂಗ ಪಡೆಸಿದ್ದಾರೆ. ಯರವಾಡ ಜೈಲಿನಲ್ಲಿ ಗಲಾಟೆ ಮಾಡಿಕೊಂಡ ಬಳಿಕವೇ ವಿಜಯಪುರ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ ಎಂದಿದ್ದಾರೆ.
ಇದು ಶ್ರೀರಾಮನ ಪೋಟೋ ಪೂಜೆಗಾಗಿ ನಡೆದ ಗಲಾಟೆ ಅಲ್ಲ; ಸುಪರಿಡೆಂಟ್ ಸ್ಪಷ್ಟನೆ!
ಇನ್ನೂ ಶ್ರೀರಾಮನ ಪೋಟೋ ಪೂಜೆಯಿಂದಾಗಿ ಜೈಲಿನಲ್ಲಿ ಕೈದಿಗಳ ಮೇಲೆ ಹಲ್ಲೆ ನಡೆದಿದೆ ಎನ್ನುವುದು ಸುಳ್ಳು. ಆ ರೀತಿಯ ಘಟನೆಯೇ ನಡೆದಿಲ್ಲ. ಬೇಕೆಂದೇ ರಾಮ ಮಂದಿರ ವಿಚಾರಕ್ಕೆ ಇದನ್ನ ತಳಕು ಹಾಕಲಾಗ್ತಿದೆ ಎಂದಿದ್ದಾರೆ. ಇನ್ನೂ ದಿನಾಂಕ23 ರಂದು ಜೈಲಿನ ಒಳಗೆ ಶೇಖ್‌ಮೋದಿ ಗ್ಯಾಂಗ್ ಹಾಗೂ ಈ ಮೂವರು ಕೈದಿಗಳ ನಡುವೆ ವಾಗ್ವಾದ ವಾಗಿತ್ತು. ಅದರ ನಿಯಂತ್ರಣಕ್ಕೆ ಎರಡು ಗುಂಪುಗಳನ್ನ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿತ್ತು. ಇದರ ರಿವೆಂಜ್‌ಗಾಗಿ ಮಹಾರಾಷ್ಟ್ರದ ಕೈದಿಗಳು ವಿಡಿಯೋ ರೆಕಾರ್ಡ್ ಮಾಡಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಸುಪರಿಡೆಂಟ್ ಮ್ಯಾಗೇರಿ ಸ್ಪಷ್ಟನೆ ನೀಡಿದ್ದಾರೆ.
ಮೊಬೈಲ್ ಬಳಕೆ ವಿಚಾರವಾಗಿ ತನಿಖೆ ನಡೆಸುತ್ತಿದ್ದೇವೆ!
ಜೈಲಿನಲ್ಲಿ ಮೊಬೈಲ್ ಬಳಕೆಯಾದ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಕೈದಿಗಳನ್ನ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗ್ತಿದೆ. ಮೊಬೈಲ್ ಹೇಗೆ ಒಳಗೆ ಬಂತು ಅನ್ನೋದು ನಮಗೆ ತಿಳಿದಿಲ್ಲ. ಇದೆ ವಿಚಾರವನ್ನ ತನಿಖೆ ನಡೆಸುತ್ತಿದ್ದೇವೆ. ಕ್ರಮ ಕೈಗೊಳ್ಳಲಾಗುದು ಎಂದಿದ್ದಾರೆ.