ಆವಿಷ್ಕಾರಗಳ ಫಲ ರೈತರಿಗೆ ತಲುಪಿಸಲು ವ್ಯವಸ್ಥೆ: ಸಚಿವ ಚಲುವರಾಯಸ್ವಾಮಿ

By Kannadaprabha News  |  First Published Jan 13, 2024, 12:30 AM IST

ಕೃಷಿ ಕ್ಷೇತ್ರದಲ್ಲಿ ವ್ಯಕ್ತವಾಗುವ ಆವಿಷ್ಕಾರಗಳ ಫಲ ರೈತರಿಗೆ ತಲುಪಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.


ನಾಗಮಂಗಲ (ಜ.13): ಕೃಷಿ ಕ್ಷೇತ್ರದಲ್ಲಿ ವ್ಯಕ್ತವಾಗುವ ಆವಿಷ್ಕಾರಗಳ ಫಲ ರೈತರಿಗೆ ತಲುಪಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಜಯಂತ್ಯುತ್ಸವ ಹಾಗೂ ೧೧ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ರಾಜ್ಯ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ ಮತ್ತು ಜಿಲ್ಲಾ ಪಂಚಾಯಿತಿ ಸಹಭಾಗಿತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಕೃಷಿ ಮೇಳ ಮತ್ತು ರೈತ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಶೇ.೭೦ರಷ್ಟು ಮಂದಿ ಜನರು ಕೃಷಿಯನ್ನೇ ಅವಲಂಬಿಸಿಕೊಂಡಿದ್ದಾರೆ. ಕೃಷಿ ಅವಲಂಬಿಸಿರುವ ಬಹುಸಂಖ್ಯೆಯ ರೈತರು ಸಧೃಡರಾದರೆ ಮಾತ್ರ ಒಂದು ಕುಟುಂಬ, ಜಿಲ್ಲೆ, ರಾಜ್ಯ ಮತ್ತು ದೇಶ ಸದೃಢವಾಗುತ್ತದೆ ಎಂದರು. ರೈತರಿಗೆ ಭೂಮಿ ಉಳುಮೆ ಮಾಡುವ ಜೊತೆಗೆ ವ್ಯವಹಾರ ನಡೆಸುವುದಕ್ಕೂ ಗೊತ್ತು ಎಂಬುದಕ್ಕೆ ಇತ್ತೀಚೆಗೆ ಬೆಂಗಳೂರಿನಲ್ಲಿ ೩ ದಿನಗಳ ಕಾಲ ನಡೆದ ಅಂತರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮೇಳವೇ ಸಾಕ್ಷಿ. ಏಕೆಂದರೆ, ಆ ಮೇಳದಲ್ಲಿ ೧೫೦ ಕೋಟಿ ರು.ಗೂ ಮಿಗಿಲಾದ ಸಿರಿಧಾನ್ಯ ರಫ್ತು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ೫೦ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು, ೩೦೦ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದು ಲಕ್ಷಾಂತರ ಜನತೆಯಲ್ಲಿ ಸಾವಯವ ಆಹಾರ ಧಾನ್ಯಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದರು.

Latest Videos

undefined

ಸಿಎಂ ಬಗ್ಗೆ ಬಾಯಿಗೆ ಬಂದಂತೆ ಮಾತನಾಡೋದನ್ನು ನಿಲ್ಲಿಸಿ: ಶಾಸಕ ಪ್ರದೀಪ್‌ ಈಶ್ವರ್‌ ಎಚ್ಚರಿಕೆ

ಹೆಣ್ಣು ಮಕ್ಕಳು ಕುಟುಂಬದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವ ಬುದ್ದಿವಂತಿಕೆ ಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ಸರ್ಕಾರಗಳು ಹೆಣ್ಣು ಮಕ್ಕಳನ್ನು ಪ್ರಬಲರಾಗಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಹೈನುಗಾರಿಕೆ ಹಾಗೂ ಕೃಷಿ ಕಾಯಕದಲ್ಲಿ ಮಹಿಳೆಯರ ಪಾತ್ರ ಅಧಿಕವಾಗಿದೆ ಎಂದರು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಹೆಚ್ಚು ಲಾಭ ಗಳಿಸಬಹುದು. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯು ಸಹಾಯಧನ ಹಾಗೂ ಪ್ರೋತ್ಸಾಹಧನಕ್ಕೆ ಹೆಚ್ಚು ಅನುದಾನ ಬಳಕೆ ಮಾಡುತ್ತಿದೆ. ಕಳೆದ ಸಾಲಿನಲ್ಲಿ ಸುಮಾರು ೪೭೫ ಕೋಟಿ ರು. ಬೆಳೆ ವಿಮೆ ರೈತರ ಖಾತೆಗೆ ಜಮೆ ಆಗಿದೆ. ಬರಗಾಲದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ೧ ಸಾವಿರ ಕೋಟಿ ರು. ಬೆಳೆ ವಿಮೆ ಹಣ ರೈತರಿಗೆ ಸೇರುವ ನಿರೀಕ್ಷೆ ಇದೆ ಎಂದರು.

ಹಳೆ ಮೈಸೂರು ಭಾಗದ ರೈತರು ತಮ್ಮ ಜಮೀನುಗಳನ್ನು ಇಳುವರಿ ಭರಿತ ಜಮೀನುಗಳನ್ನಾಗಿ ಪರಿವರ್ತಿಸಿ ಅಧಿಕ ಇಳುವರಿಯ ಕಬ್ಬಿನ ಫಸಲು ಬೆಳೆಯುವ ಬೆಳೆ ತಾಂತ್ರಿಕತೆಯ ವಿನಿಮಯಕ್ಕಾಗಿ ಉತ್ತಕ ಕರ್ನಾಟಕ ಭಾಗಕ್ಕೆ ಅಧ್ಯಯನ ಪ್ರವಾಸ ಆಯೋಜಿಸಲಾಗುವುದು. ಪ್ರತಿಯೊಂದು ಕೃಷಿಕರ ಕುಟುಂಬವು ಸಮಗ್ರ ಕೃಷಿಗೆ ಒತ್ತು ನೀಡಬೇಕು. ಇತರೆ ವೃತ್ತಿಯೊಂದಿಗೆ ಕೃಷಿಯನ್ನು ಪೋಷಿಸುವ ಹೊಣೆಗಾರಿಕೆ ಹೊಂದಬೇಕು ಎಂದರು. ಶ್ರೀಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಏನನ್ನು ಕಳೆದುಕೊಂಡರೂ ಪತ್ತೆ ಪಡೆಯಬಹುದು. ಆದರೆ, ಮಣ್ಣನ್ನು ಕಳೆದುಕೊಂಡರೆ ಮತ್ತೆ ಪಡೆಯುವುದು ಬಹಳ ಕಷ್ಟದ ಕೆಲಸ. ರೈತರಿಗೆ ಜ್ಞಾನವನ್ನು ಕೊಟ್ಟು ಅವರ ಬದುಕನ್ನು ಸುಸ್ಥಿರಗೊಳಿಸದಿದ್ದರೆ ಕೇವಲ ಒಬ್ಬ ಇಬ್ಬರು ರೈತರು ಮಾತ್ರವಲ್ಲ ಇಡೀ ದೇಶವೇ ನರಳುತ್ತದೆ. ಜಗತ್ತಿನ ಇತರೆ ದೇಶಗಳ ಮುಂದೆ ನಮ್ಮ ದೇಶ ತಲೆ ಎತ್ತಿ ನಿಲ್ಲಬೇಕೆಂದರೆ ರೈತರ ಬದುಕು ಹಸನಾಗಬೇಕು ಎಂದರು.

೧೯೪೭ರ ಸುಮಾರಿಗೆ ನಮ್ಮ ದೇಶದ ಒಟ್ಟು ಆರ್ಥಿಕತೆಯಲ್ಲಿ ರೈತರ ಕೃಷಿ ಚಟುವಟಿಕೆಯಿಂದ ಬರುತ್ತಿದ್ದ ಆದಾಯ ಶೇ.೫೦ರಷ್ಟಿತ್ತು. ವಿವಿಧ ಕಾರಣಗಳಿಗೋಸ್ಕರ ಅದು ಕಡಿಮೆಯಾಗುತ್ತಾ ಬಂತು. ೧೯೬೦ ನಂತರದಲ್ಲಿ ಬಂದಂತಹ ಕೃಷಿ ವಿಜ್ಞಾನಿಗಳು ಮತ್ತು ಕೃಷಿಕರು ಮಾಡಿದ ಶ್ರಮದಿಂದ ಇಂದು ದೇಶದಲ್ಲಿ ಬಹುದೊಡ್ಡ ಮಟ್ಟದಲ್ಲಿ ಸಾಧನೆಯಾಗುತ್ತಿದೆ ಎಂದರು. ಐಟಿ-ಬಿಟಿ ಮಾಹಿತಿ ತಂತ್ರಜ್ಞಾನಗಳು ಮುಂದುವರೆಯುತ್ತಿರುವ ಇಂದಿನ ದಿನಮಾನದಲ್ಲಿ ನಮ್ಮ ರೈತರ ಕೃಷಿ ಮತ್ತು ವಿಜ್ಞಾನ ಬೆಳೆಯದಿದ್ದರೆ ಮುಂದಿನ ದಿನಗಳಲ್ಲಿ ರೈತರಿಗೆ ಮತ್ತು ದೇಶಕ್ಕೆ ದೊಡ್ಡ ಸಮಸ್ಯೆ ಕಾಡುತ್ತದೆ ಎಂಬ ಕಾರಣಕ್ಕೆ ರೈತರನ್ನು ಉತ್ತೇಜಿಸುವ ಮತ್ತು ಕಡಿಮೆ ಶ್ರಮದಿಂದ ಹೆಚ್ಚು ಆದಾಯಗಳಿಸುವ ಬದುಕನ್ನು ರೂಪಿಸಿಕೊಳ್ಳುವ ರೀತಿಯಲ್ಲಿ ಜ್ಞಾನವನ್ನು ಕೊಡಬೇಕು ಎಂದರು.

ಬಿಜೆಪಿಯಿಂದ ಬಡವರ ಹಸಿವಿಗೆ ನೀಡುವ ಅನ್ನದ ವಿಷಯದಲ್ಲೂ ರಾಜಕೀಯ: ಸಚಿವ ಮಹದೇವಪ್ಪ

ರಾಜ್ಯ ಕೃಷಿ ಆಯುಕ್ತಾಲಯ ಆಯಕ್ತ ವೈ.ಎಸ್.ಪಾಟೀಲ್, ಜಿಕೆವಿಕೆ ಕುಲಪತಿ ಡಾ.ಎಸ್.ಬಿ.ಸುರೇಶ್, ಕೃಷಿ ಇಲಾಖೆಯ ನಿರ್ದೇಶಕ ಜಿ.ವಿ.ಪುತ್ರ, ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳಾದ ಎಂ.ಎಚ್.ಪದ್ಮನಾಭ್, ವೈಭವ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ. ಸಿಇಓ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್, ಉಪ ನಿರ್ದೇಶಕಿಯರಾದ ಡಾ.ಕೆ.ಮಾಲತಿ, ಮಮತ, ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಸೇರಿದಂತೆ ಸಾವಿರಾರು ಮಂದಿ ರೈತರು, ರೈತ ಮಹಿಳೆಯರು ಇದ್ದರು.

click me!